ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ʻನಾದಬ್ರಹ್ಮʼ ಹಂಸಲೇಖಗೆ 'ಜೀವಮಾನ ಶ್ರೇಷ್ಠ ಸಾಧನೆ' ಪ್ರಶಸ್ತಿ: 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಗೌರವ

Hamsalekha lifetime achievement Award: 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದ (BIFFES) ವತಿಯಿಂದ ಹಂಸಲೇಖಗೆ 'ಜೀವಮಾನ ಶ್ರೇಷ್ಠ ಸಾಧನೆ' ಪ್ರಶಸ್ತಿ ಘೋಷಿಸಲಾಗಿದೆ. ಕನ್ನಡ ಚಿತ್ರಸಂಗೀತಕ್ಕೆ ಹೊಸ ಆಯಾಮ ನೀಡಿದ ನಾದಬ್ರಹ್ಮ ಡಾ. ಹಂಸಲೇಖ ಅವರಿಗೆ ಫೆಬ್ರವರಿ 6ರಂದು ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಈ ಗೌರವ ಸಮರ್ಪಿಸಲಾಗುವುದು.

17th BIFFes: ʻನಾದಬ್ರಹ್ಮʼ ಹಂಸಲೇಖಗೆ ಜೀವಮಾನ ಸಾಧನೆ ಪ್ರಶಸ್ತಿ

-

Avinash GR
Avinash GR Feb 6, 2026 12:26 AM

ಕನ್ನಡ ಚಿತ್ರರಂಗದ ಖ್ಯಾತ ಗೀತರಚನೆಕಾರ ಮತ್ತು ಸಂಗೀತ ನಿರ್ದೇಶಕ ಹಂಸಲೇಖ ಅವರಿಗೆ 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದ ವತಿಯಿಂದ ಜೀವಮಾನ ಶ್ರೇಷ್ಠ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.

ಚಿತ್ರೋತ್ಸವಕ್ಕೆ ಶುಕ್ರವಾರ (ಫೆಬ್ರವರಿ 6) ಸಮಾರೋಪ ಸಮಾರಂಭ ನೆರವೇರಲಿದ್ದು, ನಾದಬ್ರಹ್ಮ ಡಾ. ಹಂಸಲೇಖ ಅವರು ಕನ್ನಡ ಚಿತ್ರರಂಗಕ್ಕೆ ಸಲ್ಲಿಸಿರುವ ಸೇವೆಯನ್ನು ಗುರುತಿಸಿ ಅವರಿಗೆ ಜೀವಮಾನದ ಶ್ರೇಷ್ಠ ಸಾಧನೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ.

21ನೇ ಬಾರಿಗೆ ಒಂದಾದ ಹಂಸಲೇಖ - ಎಸ್‌. ಮಹೇಂದರ್;‌ ಶ್ರೀಗುರುರಾಯರು ಬ್ಯಾನರ್‌ನಲ್ಲಿ ಹೊಸ ಘೋಷಣೆ

ಹಂಸಲೇಖ ಅವರಿಗೆ ಆಹ್ವಾನ

ಕರ್ನಾಟಕ ಚಲನಚಿತ್ರ ಅಕಾಡೆಮಿಯ ರಿಜಿಸ್ಟ್ರಾರ್‌ ವಿನೋದ್‌ ಚಂದ್ರ ಮತ್ತು ಚಿತ್ರೋತ್ಸವದ ಕಲಾತ್ಮಕ ನಿರ್ದೇಶಕರಾದ ಮುರಳಿ ಅವರು ಸಂಗೀತ ನಿರ್ದೇಶಕ ಹಂಸಲೇಖ ಅವರನ್ನು ಭೇಟಿ ಮಾಡಿ, ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಆಹ್ವಾನಿಸಿದ್ದಾರೆ. ಕಳೆದ ಒಂದು ವಾರದಿಂದ ಸಿನಿಮಾಸಕ್ತರ ಮನಸ್ಸು ಗೆದ್ದ 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದ ಸಮಾರೋಪ ಸಮಾರಂಭ ಶುಕ್ರವಾರ (ಫೆ.6) ಸಂಜೆ ಲುಲು ಮಾಲ್‌ನಲ್ಲಿ ನಡೆಯಲಿದೆ. ಈ ಸಂದರ್ಭದಲ್ಲಿ ಹಂಸಲೇಖ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

ಕನ್ನಡ ಚಿತ್ರರಂಗಕ್ಕೆ ಹಂಸಲೇಖ ಕೊಡುಗೆ

ಸ್ಯಾಂಡಲ್‌ವುಡ್‌ನ ‘ನಾದಬ್ರಹ್ಮ’ ಎಂದೇ ಖ್ಯಾತರಾಗಿರುವ ಹಂಸಲೇಖ ಅವರು 80 ಮತ್ತು 90ರ ದಶಕದಲ್ಲಿ ಕನ್ನಡ ಚಿತ್ರಸಂಗೀತದ ದಿಕ್ಕನ್ನೇ ಬದಲಿಸಿದ ಮೇರು ಪ್ರತಿಭೆ. 1987ರಲ್ಲಿ ರವಿಚಂದ್ರನ್ ಅವರ ‘ಪ್ರೇಮಲೋಕ’ ಚಿತ್ರದ ಮೂಲಕ ಪೂರ್ಣ ಪ್ರಮಾಣದ ಸಂಗೀತ ನಿರ್ದೇಶಕರಾಗಿ ಹೊರಹೊಮ್ಮಿದ ಅವರು, ಪಾಶ್ಚಾತ್ಯ ಸಂಗೀತದ ಶೈಲಿಗೆ ಕನ್ನಡದ ದೇಸಿ ಸೊಗಡನ್ನು ಬೆರೆಸಿ ಹೊಸ ಅಲೆಯನ್ನೇ ಎಬ್ಬಿಸಿದರು. ಸ್ವತಃ ಸಾಹಿತ್ಯ ಬರೆದು ಅದಕ್ಕೆ ರಾಗ ಸಂಯೋಜಿಸುವ ಅವರ ವಿಶಿಷ್ಟ ಶೈಲಿಯಿಂದಾಗಿ ‘ರಣಧೀರ’, ‘ಅಂಜದ ಗಂಡು’, ‘ರಾಮಾಚಾರಿ’, ‘ಓಂ’, ‘ಮುತ್ತಿನ ಹಾರ’ದಂತಹ ನೂರಾರು ಚಿತ್ರಗಳ ಹಾಡುಗಳು ಇಂದಿಗೂ ಜನಪ್ರಿಯವಾಗಿವೆ. ರವಿಚಂದ್ರನ್ ಮತ್ತು ಹಂಸಲೇಖ ಅವರ ಜೋಡಿ ಕನ್ನಡದ ಅತ್ಯಂತ ಯಶಸ್ವಿ ಜೋಡಿಗಳಲ್ಲಿ ಒಂದಾಗಿದೆ.

Hamsalekha: ಓಂ ಪ್ರಕಾಶ್ ರಾವ್ ನಿರ್ದೇಶನದ ʼಫೀನಿಕ್ಸ್ʼ, ʼಗೆರಿಲ್ಲಾ ವಾರ್ʼ ಚಿತ್ರಗಳಿಗೆ ಹಂಸಲೇಖ ಸಂಗೀತ ಸಂಯೋಜನೆ

ಕೇವಲ ಕಮರ್ಷಿಯಲ್ ಸಿನಿಮಾಗಳಲ್ಲದೆ, ಶಾಸ್ತ್ರೀಯ ಸಂಗೀತ ಆಧಾರಿತ ‘ಗಾನಯೋಗಿ ಪಂಚಾಕ್ಷರಿ ಗವಾಯಿ’ ಚಿತ್ರಕ್ಕೆ ಸಂಗೀತ ನೀಡುವ ಮೂಲಕ ಅತ್ಯುತ್ತಮ ಸಂಗೀತ ನಿರ್ದೇಶಕ ರಾಷ್ಟ್ರ ಪ್ರಶಸ್ತಿಯನ್ನೂ ಮುಡಿಗೇರಿಸಿಕೊಂಡ ಹೆಗ್ಗಳಿಕೆ ಇವರದ್ದು. ಹಂಸಲೇಖ ಅವರು ಕೇವಲ ಸಿನಿಮಾಕ್ಕೆ ಸೀಮಿತವಾಗದೆ, ಸಮಾಜಮುಖಿ ಕೆಲಸಗಳಲ್ಲೂ ತೊಡಗಿಸಿಕೊಂಡಿದ್ದಾರೆ. ‘ಹಂಸಲೇಖ ದೇಶಿ ವಿದ್ಯಾ ಸಂಸ್ಥೆ’ಯನ್ನು ಸ್ಥಾಪಿಸಿ, ಬಡ ಮತ್ತು ಪ್ರತಿಭಾವಂತ ಮಕ್ಕಳಿಗೆ ಉಚಿತವಾಗಿ ಸಂಗೀತ ತರಬೇತಿ ನೀಡುತ್ತಿದ್ದಾರೆ. ಆರು ಬಾರಿ ರಾಜ್ಯ ಪ್ರಶಸ್ತಿ ಸೇರಿದಂತೆ ಹಲವಾರು ಗೌರವಗಳಿಗೆ ಭಾಜನರಾಗಿರುವ ಹಂಸಲೇಖ, ಕನ್ನಡ ಸಂಸ್ಕೃತಿ ಮತ್ತು ಜಾನಪದವನ್ನು ತಮ್ಮ ಹಾಡುಗಳ ಮೂಲಕ ಶ್ರೀಮಂತಗೊಳಿಸಿದ ಅಪ್ರತಿಮ ಸಾಧಕ ಹಂಸಲೇಖ.

ವಿಜೇತರಿಗೆ ಬಹುಮಾನ ವಿತರಣೆ

ಈ ಚಿತ್ರೋತ್ಸವದಲ್ಲಿ ಏಷ್ಯನ್‌ ಸಿನಿಮಾ, ಭಾರತೀಯ ಸಿನಿಮಾ ಮತ್ತು ಕನ್ನಡ ಸಿನಿಮಾ ಎಂಬ ಮೂರು ಸ್ಪರ್ಧಾ ವಿಭಾಗಗಳಿದ್ದು, ಈ ವಿಭಾಗಗಳಲ್ಲಿ ಸ್ಪರ್ಧಿಸಿ, ಪ್ರಶಸ್ತಿ ಗೆದ್ದವರಿಗೆ ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್‌ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಈ ಕಾರ್ಯಕಮದ ಅಧ್ಯಕ್ಷತೆಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್‌ ಗೂಂಡೂರಾವ್‌ ವಹಿಸಲಿದ್ದಾರೆ. ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷರಾದ ಡಾ. ಸಾಧು ಕೋಕಿಲ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷೆ ಡಾ. ಜಯಮಾಲಾ ಹಾಗೂ ಚಿತ್ರೋತ್ಸವದ ರಾಯಭಾರಿ ಪ್ರಕಾಶ್‌ ರಾಜ್‌ ಮುಂತಾದವರು ಭಾಗವಹಿಸಲಿದ್ದಾರೆ.