ನಟ ʻಕಿಚ್ಚʼ ಸುದೀಪ್ ಹಾಗೂ ಪ್ರಿಯಾ ಸುದೀಪ್ ಅವರ ಮದುವೆಯ ಹಿಂದೆ ಕಿಚ್ಚನ ಸೋದರಳಿಯ, ನಟ ಸಂಚಿತ್ ಸಂಜೀವ್ ಅವರ ಬಾಲ್ಯದ ಒಂದು ತಮಾಷೆಯ ಪ್ರಸಂಗವಿದೆ. ಅದೇನಪ್ಪ ಅಂದ್ರೆ, ಸುದೀಪ್ ಅವರು ʻಪ್ರಿಯಾ ಅವರನ್ನು ಮದುವೆಯಾಗ್ಲಾʼ ಎಂದು ಸಂಚಿತ್‌ಗೆ ಕೇಳಿದ್ರಂತೆ. ಆದರೆ, ಆಗ ಸಂಚಿತ್ ಮಾತ್ರ ಮದುವೆ ಆಗೋದು ಬೇಡ ಅಂತ ಹೇಳಿದ್ರಂತೆ. ಅದನ್ನು ಈಚೆಗೆ ಅವರೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಈ ಫನ್ನಿ ಘಟನೆ ಬಗ್ಗೆ ಇಲ್ಲಿದೆ ಪೂರ್ಣ ಮಾಹಿತಿ.
ದೀಪು ಮಾಮನನ್ನು ನನ್ನಿಂದ ಕಿತ್ಕೊಂಡು ಹೋಗ್ತಾರೆ..
ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡ ಸಂಚಿತ್ ಸಂಜೀವ್, ಸುದೀಪ್ ಅವರು ಪ್ರಿಯಾ ಅವರನ್ನು ಮದುವೆಯಾಗುವ ನಿರ್ಧಾರದ ಬಗ್ಗೆ ಮೊದಲು ತಮಗೆ ಹೇಳಿದಾಗ ಉಂಟಾದ ಮುಗ್ಧ ಭಯದ ಬಗ್ಗೆ ಮಾತನಾಡಿದ್ದಾರೆ.
"ಆಗ ಪ್ರಿಯಾ ಅತ್ತೆ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದರು. ದೀಪು ಮಾಮ ನಮ್ಮನ್ನು ಮೀಟ್ ಮಾಡಿಸಲು ಕರೆದುಕೊಂಡು ಹೋಗಿದ್ದರು. ಆಗ ನಾನಿನ್ನೂ ತುಂಬಾ ಚಿಕ್ಕ ಹುಡುಗ. ಪ್ರಿಯಾ ಅತ್ತೆಯನ್ನು ತೋರಿಸಿ ‘ನಾನು ಇವರನ್ನು ಮದುವೆ ಆಗ್ಲಾ?’ ಅಂತ ಮಾಮ ಕೇಳಿದಾಗ ನನಗೆ ಫುಲ್ ಟೆನ್ಷನ್ ಆಗಿತ್ತು. ಮೊದಮೊದಲು ಯಾರಿವರು ಬಂದು ನಮ್ಮ ದೀಪು ಮಾಮನನ್ನು ನನ್ನಿಂದ ಕಿತ್ಕೊಂಡು ಹೋಗ್ತಾರೆ ಅನ್ನೋ ಭಯ ನನ್ನನ್ನು ಕಾಡಿತ್ತು. ಮಾಮ ಅವರ ಜೊತೆ ಹೊರಟುಹೋದರೆ ನಾನೇನು ಮಾಡಲಿ ಎಂಬ ಮುಗ್ಧ ಯೋಚನೆಯಿಂದ, ಆವತ್ತು ಮದುವೆಗೆ ‘ಬೇಡ’ ಎಂದುಬಿಟ್ಟಿದ್ದೆ" ಎಂದು ಸಂಚಿತ್ ನಗುತ್ತಾ ಹೇಳಿದ್ದಾರೆ.
Mango Pachcha Review: ಮೈಸೂರಿನ ಹಸ್ರವ್ವನ ಕಥೆಗೆ ಉಸಿರು ತುಂಬಿದ ಸಂಚಿತ್ ಸಂಜೀವ್
ಸಂಚಿತ್ ತುಂಬಾ ಸೈಲೆಂಟ್ ಹುಡುಗನಾಗಿದ್ದ..
ಈ ಹಿಂದೆ ಪ್ರಿಯಾ ಸುದೀಪ್ ಕೂಡ ಇದೇ ವಿಷಯದ ಬಗ್ಗೆ ಮಾತನಾಡುತ್ತಾ ಸಂಚಿತ್ ಅವರೊಂದಿಗಿನ ಅಪರೂಪದ ಬಾಂಡಿಂಗ್ ಬಗ್ಗೆ ಹೇಳಿಕೊಂಡಿದ್ದರು. "ಮನೆಗೆ ಮದುವೆಯಾಗಿ ಬಂದಾಗ ಸಂಚಿತ್ ತುಂಬಾ ಸೈಲೆಂಟ್ ಹುಡುಗನಾಗಿದ್ದ, ಜಾಸ್ತಿ ಮಾತನಾಡುತ್ತಿರಲಿಲ್ಲ. ಸುದೀಪ್ ಅವರು ಮೊದಲು ಸಂಚಿತ್‌ಗೆ ನನ್ನನ್ನು ಭೇಟಿ ಮಾಡಿಸಿ ಮದುವೆಯಾಗುವ ವಿಷಯ ಹೇಳಿದಾಗ, ಅವನು ‘ಬೇಡ ಬೇಡ, ಅವರು ಚೆನ್ನಾಗಿಲ್ಲ’ ಎಂದು ನಿರಾಕರಿಸಿದ್ದ. ನನ್ನನ್ನು ಹಚ್ಚಿಕೊಳ್ಳಲು ಅವನು ಸಾಕಷ್ಟು ಸಮಯ ತಗೊಂಡರೂ, ಕಾಲ ಕಳೆಯುತ್ತಾ ನಾವಿಬ್ಬರೂ ಬೆಸ್ಟ್ ಫ್ರೆಂಡ್ಸ್ ಆದೆವು" ಎಂದಿದ್ದಾರೆ.
ಸಂಚಿತ್ ನನ್ನ ಬಳಿ ಎಲ್ಲವನ್ನೂ ಹೇಳುತ್ತಾನೆ
"ನಮ್ಮಿಬ್ಬರ ಆಲೋಚನಾ ಕ್ರಮ ಒಂದೇ ರೀತಿ ಇತ್ತು. ಅವನು ತುಂಬಾ ವಿಭಿನ್ನವಾಗಿ ಯೋಚನೆ ಮಾಡುವ ಹುಡುಗ. ಸಣ್ಣ ವಯಸ್ಸಿನಲ್ಲೇ ಏನೇ ಹೇಳಿದರೂ ಅರ್ಥ ಮಾಡಿಕೊಳ್ಳುವ ಮನಸ್ಥಿತಿ ಅವನಿಗಿತ್ತು. ಕೊನೆಗೆ ತನ್ನ ಪೋಷಕರ ಬಳಿಯೂ ಹೇಳಲು ಆಗದ ವಿಷಯಗಳನ್ನೆಲ್ಲಾ ನನ್ನ ಬಳಿ ಬಂದು ಚರ್ಚೆ ಮಾಡುತ್ತಿದ್ದ. ಅವನು ಶಾರ್ಟ್ ಮೂವಿಗಳನ್ನು ಮಾಡಿದ್ದಾನೆ ಮತ್ತು ಅವನು ಅತ್ಯುತ್ತಮ ಫೋಟೋಗ್ರಾಫರ್ ಕೂಡ ಹೌದು. ಅವನ ಆ ಕ್ರಿಯೇಟಿವಿಟಿ ನೋಡಿಯೇ ಅವನು ಭವಿಷ್ಯದಲ್ಲಿ ಸಿನಿಮಾ ಡೈರೆಕ್ಟರ್ ಅಥವಾ ಚಿತ್ರರಂಗಕ್ಕೆ ಇಳಿಯುತ್ತಾನೆ ಎಂದು ನಾವೆಲ್ಲಾ ಅಂದುಕೊಂಡಿದ್ದೆವು" ಎಂದು ಪ್ರಿಯಾ ಸುದೀಪ್ ಮಾಧ್ಯಮಗಳ ಮುಂದೆ ತಮ್ಮ ನೆನಪಿನ ಬುತ್ತಿ ಹಂಚಿಕೊಂಡಿದ್ದರು.