ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Mango Pachcha Review: ಮೈಸೂರಿನ ಹಸ್ರವ್ವನ ಕಥೆಗೆ ಉಸಿರು ತುಂಬಿದ ಸಂಚಿತ್ ಸಂಜೀವ್

Mango Pachcha Kannada Movie Review: ಕಿಚ್ಚ ಸುದೀಪ್ ಅವರ ಅಕ್ಕನ ಮಗ ಸಂಚಿತ್ ಸಂಜೀವ್ ನಾಯಕನಾಗಿ ನಟಿಸಿರುವ ಚೊಚ್ಚಲ ಸಿನಿಮಾ 'ಮ್ಯಾಂಗೋ ಪಚ್ಚ' ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ನಿರ್ದೇಶಕ ವಿವೇಕ್ ಸಾರಥ್ಯದ ಈ ಚಿತ್ರವು 2002ರ ಮೈಸೂರಿನ ಮಾದಕ ವಸ್ತುಗಳ ಭೂಗತ ಜಾಲದ ಹಿನ್ನೆಲೆಯಲ್ಲಿ ಸಾಗುವ ಕಥೆಯನ್ನು ಹೊಂದಿದೆ.

Mango Pachcha Review: ಸುದೀಪ್‌ ಸೋದರಳಿಯ ಸಂಚಿತ್‌ ಮೊದಲ ಸಿನಿಮಾ ಹೇಗಿದೆ?

-

Avinash GR
Avinash GR Jun 5, 2026 2:39 PM

ಕಿಚ್ಚ ಸುದೀಪ್‌ ಅಕ್ಕನ ಮಗ ಸಂಚಿತ್‌ ಅವರು ಸ್ಯಾಂಡಲ್‌ವುಡ್‌ಗೆ ಎಂಟ್ರಿ ನೀಡುತ್ತಾರೆ ಎಂದಾಗ ಸಹಜವಾಗಿಯೇ ಕುತೂಹಲ ಇತ್ತು. ಅದರಲ್ಲೂ ಸುದೀಪ್‌ ಫ್ಯಾನ್ಸ್‌ ಜಾಸ್ತಿಯೇ ಎಕ್ಸೈಟ್‌ ಆಗಿದ್ದರು. ಸಂಚಿತ್‌ ನಾಯಕತ್ವದಲ್ಲಿ ʻಮ್ಯಾಂಗೋ ಪಚ್ಚʼ ಸಿನಿಮಾವನ್ನು ಘೋಷಣೆ ಮಾಡಿದ್ಮೇಲಂತೂ ನಿರೀಕ್ಷೆ ಡಬಲ್‌ ಆಗಿತ್ತು. ಇದೀಗ ಮ್ಯಾಂಗೋ ಪಚ್ಚ ಸಿನಿಮಾ ತೆರೆಕಂಡಿದೆ. ಸಿನಿಪ್ರಿಯರು ಇಟ್ಟಿದ್ದ ನಿರೀಕ್ಷೆಗೆ ತಕ್ಕಂತೆ ಈ ಸಿನಿಮಾ ಇದೆಯಾ? ಮುಂದೆ ಓದಿ,

ಮ್ಯಾಂಗೋ ಪಚ್ಚನ ಕಥೆ ಏನು?

2002ರ ಕಾಲಘಟ್ಟದಲ್ಲಿ ಮೈಸೂರಿನ ಹಿನ್ನೆಲೆಯಲ್ಲಿ ಮ್ಯಾಂಗೋ ಪಚ್ಚನ ಕಥೆ ಸಾಗುತ್ತದೆ. ಅಮ್ಮ, ತಮ್ಮನೊಂದಿಗೆ ತನ್ನದೇ ಆದ ಒಂದು ಬದುಕು ಕಟ್ಟಿಕೊಂಡಿರುತ್ತಾರೆ ಪಚ್ಚ ಅಲಿಯಾಸ್‌ ಪ್ರಶಾಂತ್‌ (ಸಂಚಿತ್‌). ಜೀವನೋಪಾಯಕ್ಕೆ ಅಂತ ಒಂದು ಡಿವಿಡಿ ಅಂಗಡಿ ಇಟ್ಟುಕೊಂಡು, ಜೊತೆಗೆ ಸಿನಿಮಾ ಪೈರಸಿಯನ್ನೂ ಮಾಡುತ್ತಿರುತ್ತಾನೆ. ಜೊತೆಗೆ ಸುಜಿ (ಕಾಜಲ್‌ ಕುಂದರ್) ಎಂಬ ಗೆಳತಿಯು ಪಚ್ಚನ ಬೆನ್ನಿಗಿದ್ದಾಳೆ. ಸುಜಿ ಜೊತೆ ಮದುವೆ ಆಗಿ ಕುಟುಂಬದೊಂದಿಗೆ ಒಂದೊಳ್ಳೆಯ ಬದುಕು ರೂಪಿಸಿಕೊಳ್ಳಬೇಕು ಎಂದುಕೊಳ್ಳುವ ಹೊತ್ತಿಗೆ ಮಾದಕ ವಸ್ತುಗಳ ಜಾಲ ಪಚ್ಚನನ್ನ ಆರತಿ ಎತ್ತಿ ಸ್ವಾಗತ ಮಾಡುತ್ತದೆ. ಅದುವರೆಗೂ ಪಚ್ಚ ಆಗಿದ್ದ ಪ್ರಶಾಂತ್‌ ನಂತರ ಮ್ಯಾಂಗೋ ಪಚ್ಚನಾಗಿ ಬದಲಾಗ್ತಾನೆ. ಅಷ್ಟಕ್ಕೂ ಮ್ಯಾಂಗೋ ಪಚ್ಚ ಅಂತ ಎಲ್ರೂ ಕರೆಯೋದ್ಯಾಕೆ? ಆ ಜಾಲದಲ್ಲಿ ಪಚ್ಚ ಸಿಲುಕಿಕೊಳ್ಳೋದೇಕೆ? ಪ್ರೀತಿಸಿದ ಹುಡುಗಿಯನ್ನು ಮದುವೆ ಆಗ್ತಾನಾ? ಮಾದಕ ವಸ್ತುಗಳ ಲೋಕದಲ್ಲಿ ಯಾರೆಲ್ಲಾ ಇರ್ತಾರೆ ಮತ್ತು ಪಚ್ಚನಿಗೂ ಅವರಿಗೂ ಏನೆಲ್ಲಾ ಸಂಬಂಧ ಅನ್ನೋದನ್ನ ನಿರ್ದೇಶಕ ವಿವೇಕ ಅವರು ಶತಾಬ್ದಿ ಎಕ್ಸ್‌ಪ್ರೆಸ್ ವೇಗದಲ್ಲಿ ಪರದೆಯ ಮೇಲೆ ಕಟ್ಟಿ ಕೊಟ್ಟಿದ್ದಾರೆ.

Mango Pachcha: ಸಂಕ್ರಾಂತಿ ಸಂಭ್ರಮಕ್ಕೆ ʻಅರಗಿಣಿಯೇʼ ಎನ್ನುತ್ತಾ ಬಂದ ಸಂಚಿತ್‌ ಸಂಜೀವ್‌; ʻಕಿಚ್ಚʼ ಸುದೀಪ್‌ ಪುತ್ರಿ ಹಾಡಿದ 2ನೇ ಸಾಂಗ್‌ ರಿಲೀಸ್‌

ಗಮನ ಸೆಳೆಯುವ ಸಂಚಿತ್ ಸಂಜೀವ್

ನಟ ಸಂಚಿತ್‌ಗೆ ಇದು ಮೊದಲ ಸಿನಿಮಾ. ಸಾಮಾನ್ಯವಾಗಿ ಚೊಚ್ಚಲ ಪ್ರಯತ್ನದಲ್ಲಿ ಕಮರ್ಷಿಯಲ್‌ ಎಲಿಮೆಂಟ್‌ ಇರುವ ಸ್ಕ್ರಿಪ್ಟ್‌ಗೆ ಮನ್ನಣೆ ನೀಡುತ್ತಾರೆ, ಸುಲಭವಾಗಿ ಗೆಲುವು ದಕ್ಕಿಸುವ ಕಡೆಗೆ ಯೋಚನೆ ಮಾಡುತ್ತಾರೆ. ಆದರೆ, ಆ ವಿಚಾರದಲ್ಲಿ ಭಿನ್ನ ಹೆಜ್ಜೆ ತುಳಿದಿದ್ದಾರೆ. ಇದೊಂದು ಭೂಗತ ಲೋಕದ ಕಥೆಯಾದರೂ, ವಿಭಿನ್ನವಾಗಿ ಗುರುತಿಸಿಕೊಳ್ಳುವುದು ಅದರ ಕಥೆಯಿಂದ. ತುಂಬಾ ಸೆಟಲ್ಡ್ ಆಗಿ ಆಕ್ಟ್‌ ಮಾಡಿರುವ ಸಂಚಿತ್‌ ಪಚ್ಚನ ಪಾತ್ರಕ್ಕೆ ನ್ಯಾಯ ಒದಗಿಸಿದ್ಧಾರೆ. ಕೆಲ ಸೀನ್‌ಗಳಲ್ಲಿ ಸುದೀಪ್‌ ಅವರ ತದ್ರೂಪು ಎನಿಸುತ್ತಾರೆ. ಹೈಟ್‌, ಖಡಕ್‌ ಧ್ವನಿ ಎಲ್ಲವೂ ಸುದೀಪ್‌ ಅವರನ್ನು ನೆನಪಿಸುತ್ತವೆ. ನಟನೆಯಲ್ಲೂ ಸಂಚಿತ್‌ ಹಿಂದೆ ಬಿದ್ದಿಲ್ಲ. ಮೊದಲ ಪ್ರಯತ್ನದಲ್ಲೇ ಭರವಸೆ ಮೂಡಿಸುತ್ತಾರೆ. ಹೆಚ್ಚು ಡೈಲಾಗ್ಸ್ ಇಲ್ಲದಿದ್ದರೂ ಮೌನ ಹಾಗೂ ಕಣ್ಣುಗಳ ಮೂಲಕವೇ ಗಮನ ಸೆಳೆಯುವ ಅವರ ಎನರ್ಜಿ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ. ಭವಿಷ್ಯದಲ್ಲಿ ಇನ್ನಷ್ಟು ಉತ್ತಮ ಸ್ಕ್ರಿಪ್ಟ್‌ಗಳನ್ನು ಆಯ್ಕೆ ಮಾಡಿಕೊಂಡರೆ, ಸ್ಯಾಂಡಲ್‌ವುಡ್‌ನಲ್ಲಿ ಸಂಚಿತ್‌ ಭದ್ರವಾಗಿ ನೆಲೆಯೂರಬಹುದು.

ಸುದೀಪ್‌ ಅಕ್ಕನ ಮಗನ ಚಿತ್ರಕ್ಕೆ ಭಾರಿ ಡಿಮ್ಯಾಂಡ್! ಸಂಚಿತ್‌ ʻಮ್ಯಾಂಗೋ ಪಚ್ಚʼ ಆಡಿಯೋ ರೈಟ್ಸ್‌ ಸೇಲ್

ಪಚ್ಚನ ಮೇಕಿಂಗ್‌ ಹೇಗಿದೆ?

ಮ್ಯಾಂಗೋ ಪಚ್ಚ ಚಿತ್ರದ ರನ್ನಿಂಗ್ ಟೈಮ್ ಕೇವಲ 1 ಗಂಟೆ 35 ನಿಮಿಷ ಇರುವುದರಿಂದ ಚಿತ್ರಕಥೆ ಅತ್ಯಂತ ವೇಗವಾಗಿ ಸಾಗುತ್ತದೆ. ನಿರ್ದೇಶಕರು 2002 ರಿಂದ 2006ರವರೆಗಿನ ಮೈಸೂರನ್ನು ಉತ್ತಮವಾಗಿ ಕಟ್ಟಿಕೊಡುವಲ್ಲಿ ಸಫಲರಾಗಿದ್ದಾರೆ. ನಿರ್ದೇಶಕರು ಆಯ್ದುಕೊಂಡಿರುವ ಕಥೆ ಮತ್ತು ಪಾತ್ರಗಳ ಹಿನ್ನೆಲೆ ಕೂಡ ಹೊಸತನದಿಂದ ಕೂಡಿದೆ. ಶೇಖರ್‌ ಚಂದ್ರ ಅವರ ಛಾಯಾಗ್ರಹಣಕ್ಕೂ ಹೆಚ್ಚಿನ ಅಂಕ ನೀಡಲೇಬೇಕು. ಚರಣ್‌ ರಾಜ್‌ ಅವರ ಸಂಗೀತ ಸಂಯೋಜನೆಯಲ್ಲಿ ಹಸ್ರವ್ವ ಸಾಂಗ್‌ ಕಿಕ್‌ ನೀಡುವಂತಿದೆ. ಹಿನ್ನೆಲೆ ಸಂಗೀತದಲ್ಲಿ ಇನ್ನೊಂದಿಷ್ಟು ಕಿಕ್‌ ಬೇಕಿತ್ತು ಎಂದೆನಿಸುತ್ತದೆ.

ಚಿತ್ರದ ಅವಧಿ ಕಡಿಮೆ ಇರುವುದರಿಂದಲೋ ಏನೋ ಕೆಲವು ಸಣ್ಣಪುಟ್ಟ ಡೀಟೇಲಿಂಗ್ಸ್ ಹಾಗೂ ಪಾತ್ರಗಳ ಹಿನ್ನೆಲೆ ಮಿಸ್ಸಿಂಗ್ ಅನ್ನಿಸುತ್ತದೆ. ತಾಯಿ-ಮಗನ ಎಮೋಷನ್, ಸಹೋದರ ಬಾಂಧವ್ಯ ಮತ್ತು ಲವ್ ಸ್ಟೋರಿಯನ್ನು ಪರಿಣಾಮಕಾರಿಯಾಗಿ ತೋರಿಸುವ ದೃಶ್ಯಗಳು ಇನ್ನಷ್ಟು ಹೆಚ್ಚಿರಬೇಕಿತ್ತು. ಮೊದಲ ಪ್ರಯತ್ನದಲ್ಲೇ ನಿರ್ದೇಶಕರು ಭರವಸೆ ಮೂಡಿಸಿದರೂ, ಭವಿಷ್ಯದಲ್ಲಿ ಅವರು ಇನ್ನಷ್ಟು ಹೋಮ್‌ವರ್ಕ್‌ ಮಾಡಿಕೊಳ್ಳಬೇಕು. ಸಾಹಸ ದೃಶ್ಯಗಳು ನೈಜವಾಗಿದ್ದು, 23 ವರ್ಷಗಳ ಹಿಂದಿನ ಮೈಸೂರನ್ನು ಮರುಸೃಷ್ಟಿಸಿದ ಕಲಾ ನಿರ್ದೇಶಕರಿಗೆ ಪೂರ್ಣ ಅಂಕಗಳು ಸಲ್ಲುತ್ತವೆ. ಕ್ಲೈಮ್ಯಾಕ್ಸ್‌ನಲ್ಲಿ ಬರುವ ಆ ಒಂದು ಟ್ವಿಸ್ಟ್‌ ಸಿನಿಪ್ರಿಯರಿಗೆ ಥ್ರಿಲ್‌ ನೀಡುವುದ ಖಚಿತ!

ಕಲಾವಿದರ ನಟನೆ ಹೇಗಿದೆ?

ನಾಯಕಿಯಾಗಿ ಕಾಜಲ್‌ ಕುಂದರ್‌ ಸ್ವಾವಲಂಬಿ & ಸ್ವಾಭಿಮಾನವುಳ್ಳ ಹುಡುಗಿಯಾಗಿ ಇಷ್ಟವಾಗುತ್ತಾರೆ. ತಮ್ಮ ಶ್ಯಾಮನ ಪಾತ್ರದಲ್ಲಿ ಮಿಂಚಿರುವ ಜೈ‌, ಭವಿಷ್ಯದಲ್ಲಿ ತಾನೊಬ್ಬ ಉತ್ತಮ ನಟನಾಗಬಲ್ಲೆ ಎಂಬುದಕ್ಕೆ ಸಾಕ್ಷಿ ನೀಡಿದ್ದಾರೆ. ಮೇಯರ್ ಮಹೇಂದ್ರ ಪಾತ್ರದಲ್ಲಿ ಪ್ರಶಾಂತ್ ಹಿರೇಮಠ ಅವರ ನಟನೆ ಸರ್ಪ್ರೈಸ್ ಪ್ಯಾಕೇಜ್. ಉಳಿದಂತೆ ಉಗ್ರಂ ಮಂಜು, ಮಯೂರ್ ಪಟೇಲ್, ಸಿದ್ದಾರ್ಥ್ ಮಾಧ್ಯಮಿಕ ಹಾಗೂ ಹರಿಣಿ ಶ್ರೀಕಾಂತ್ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಒಟ್ಟಾರೆಯಾಗಿ, ಸುದೀಪ್‌ ಫ್ಯಾನ್ಸ್‌ಗೆ, ಫಾಸ್ಟ್‌ ಪೇಸಿಂಗ್‌ ಥ್ರಿಲ್ಲರ್‌ ಸಿನಿಮಾಗಳನ್ನು ಇಷ್ಟಪಡುವವರಿಗೆ ಪಚ್ಚ ಪಕ್ಕಾ ಇಷ್ಟವಾಗುತ್ತಾನೆ.

Movie: ಮ್ಯಾಂಗೋ ಪಚ್ಚ
Release Date: ಜೂನ್ 5 2026
Language: ಕನ್ನಡ,
Genre: ಆಕ್ಷನ್, ಡ್ರಾಮಾ,
Director: ವಿವೇಕ
Cast: ಸಂಚಿತ್‌, ಕಾಜಲ್‌ ಕುಂದರ್‌, ಉಗ್ರಂ ಮಂಜು, ಜೈ ಗೋಪಿನಾಥ್‌, ಹರಿಣಿ ಶ್ರೀಕಾಂತ್‌, ಮಯೂರ್‌ ಪಟೇಲ್‌, ಹಂಸ, ಸಿದ್ದಾರ್ಥ್‌ ಮಾಧ್ಯಮಿಕ
Duration: 95 ನಿಮಿಷ
Rating: 3/5