'ಕಿಚ್ಚ' ಸುದೀಪ್ ಸೋದರಳಿಯ ಸಂಚಿತ್ ಸಂಜೀವ್ ಅಭಿನಯದ 'ಮ್ಯಾಂಗೋ ಪಚ್ಚ' ಸಿನಿಮಾದ ರಿಲೀಸ್ ಡೇಟ್ ಘೋಷಣೆಯಾಗಿದೆ. ಈಗಾಗಲೇ ಟೀಸರ್ ಮತ್ತು ರೆಟ್ರೋ ಲುಕ್ ಮೂಲಕ ಸಿನಿ ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿರುವ ʻಮ್ಯಾಂಗೋ ಪಚ್ಚʼ ಸಿನಿಮಾವು ಇದೀಗ 2026ರ ಸಂಕ್ರಾಂತಿ ಹಬ್ಬಕ್ಕೆ, ಅಂದರೆ ಜನವರಿ 15ಕ್ಕೆ ಅದ್ದೂರಿಯಾಗಿ ತೆರೆಗೆ ಬರಲು ಸಜ್ಜಾಗಿದೆ. ಮುಂದಿನ ವರ್ಷಾರಂಭದಲ್ಲೇ ಸಂಚಿತ್ ಮೊದಲ ಬಾರಿಗೆ ದೊಡ್ಡ ಪರದೆ ಮೇಲೆ ಮಿಂಚಲಿದ್ದಾರೆ.
ಸಂಕ್ರಾಂತಿಗೊಂದು ಕನ್ನಡ ಸಿನಿಮಾ
ಕಳೆದ ಕೆಲ ವರ್ಷಗಳಿಂದ ಸಂಕ್ರಾಂತಿ ಹಬ್ಬದಂದು ಕನ್ನಡದ ಯಾವ ಸಿನಿಮಾಗಳು ರಿಲೀಸ್ ಆಗುತ್ತಿರಲಿಲ್ಲ. ಒಂದು ಕಾಲದಲ್ಲಿ ರವಿಚಂದ್ರನ್ ಅವರ ಸಿನಿಮಾಗಳು ಸಂಕ್ರಾಂತಿ ಹಬ್ಬಕ್ಕೆ ಮಿಸ್ಸಿಲ್ಲದೇ ರಿಲೀಸ್ ಆಗುತ್ತಿದ್ದವು. ಆದರೆ ಈಗಹ ಸಂಕ್ರಾಂತಿಗೆ ಪರಭಾಷೆಯ ಸ್ಟಾರ್ ನಟರ ಸಿನಿಮಾಗಳೇ ಜಾಸ್ತಿ ತೆರೆಕಾಣುತ್ತಿವೆ. ಹಾಗಾಗಿ ಕನ್ನಡದ ಸಿನಿಮಾಗಳನ್ನು ರಿಲೀಸ್ ಮಾಡಲು ಇಲ್ಯಾರು ಮುಂದಾಗುತ್ತಿರಲಿಲ್ಲ. ಇಂತಹ ಹೊತ್ತಿನಲ್ಲಿ ʻಮ್ಯಾಂಗೋ ಪಚ್ಚʼ ಸಿನಿಮಾವನ್ನು ಸಂಕ್ರಾಂತಿ ಹಬ್ಬದ ಪ್ರಯುಕ್ತ ತೆರೆಕಾಣಿಸಲು ಚಿತ್ರತಂಡ ರೆಡಿಯಾಗಿದೆ.
Mango Pachcha Movie: ಸುದೀಪ್ ಸೋದರಳಿಯ ಸಂಚಿತ್ ಸಂಜೀವ್ ನಟನೆಯ 'ಮ್ಯಾಂಗೋ ಪಚ್ಚ' ಚಿತ್ರದ ಪ್ರೋಮೋ ರಿಲೀಸ್
ಈಗಾಗಲೇ ಆಡಿಯೋ ಮಾರಾಟದ ವಿಚಾರದಲ್ಲಿ ʻಮ್ಯಾಂಗೋ ಪಚ್ಚʼ ದಾಖಲೆ ಬರೆದಿದೆ. ಬರೋಬ್ಬರಿ 1.20 ಕೋಟಿ ರೂಪಾಯಿಗೆ ಆಡಿಯೋ ಹಕ್ಕುಗಳು ಮಾರಾಟವಾಗಿವೆ. ಚೊಚ್ಚಲ ಹೀರೋ ಒಬ್ಬರ ಸಿನಿಮಾದ ಆಡಿಯೋ ಈ ಮಟ್ಟಕ್ಕೆ ಮಾರಾಟವಾಗಿರುವುದು ನಿಜಕ್ಕೂ ಖುಷಿಯ ವಿಚಾರ ಎನ್ನಬಹುದು. ರಿಲೀಸ್‌ಗೂ ಮೊದಲೇ ದಾಖಲೆ ಬರೆಯುತ್ತಿರುವ ʻಮ್ಯಾಂಗೋ ಪಚ್ಚʼ ಸಿನಿಮಾ ಬಿಡುಗಡೆ ನಂತರ ಯಾವೆಲ್ಲ ದಾಖಲೆಗಳನ್ನು ಧೂಳಿಪಟ ಮಾಡಲಿದೆ ಎಂಬುದನ್ನು ಕಾದುನೋಡಬೇಕಿದೆ.
ʻಮ್ಯಾಂಗೋ ಪಚ್ಚʼ ಸಿನಿಮಾಗೆ ವಿವೇಕ ನಿರ್ದೇಶನ ಮಾಡಿದ್ದು, ಮೈಸೂರು ಮೂಲದ ಕ್ರೈಂ ಥ್ರಿಲ್ಲರ್ ಸಿನಿಮಾ ಇದಾಗಿದ್ದು, 2001 ರಿಂದ 2011ರ ಅವಧಿಯಲ್ಲಿ ಮೈಸೂರಿನಲ್ಲಿ ನಡೆದ ಪ್ರಮುಖ ಘಟನೆಗಳು ಈ ಸಿನಿಮಾದಲ್ಲಿದೆ. ಬಹುತೇಕ ಚಿತ್ರೀಕರಣ ಮೈಸೂರಿನಲ್ಲೇ ಮಾಡಲಾಗಿದೆ. ಈ ಚಿತ್ರಕ್ಕೆ ಕೆಆರ್‌ಜಿ ಮತ್ತು ಕಿಚ್ಚ ಸುದೀಪ್ ಅವರ ಸುಪ್ರಿಯಾನ್ವಿ ಪ್ರೊಡಕ್ಷನ್ಸ್ ಜಂಟಿಯಾಗಿ ಹಣ ಹಾಕಿರುವುದು ವಿಶೇಷ. ಸಂಚಿತ್ ಅವರ ಮೊದಲ ಸಿನಿಮಾಗೆ ನಾಯಕಿಯಾಗಿ ಕಾಜಲ್ ಕುಂದರ್ ನಟಿ ಸಿದ್ದಾರೆ.
ಉಳಿದಂತೆ, ಮಯೂರ್ ಪಟೇಲ್, ಭಾವನಾ, ಹಂಸ, ಹರಿಣಿ ಶ್ರೀಕಾಂತ್, ವಿಜಯ ರಾಘವೇಂದ್ರ ಅವರ ಅಳಿಯ ಜೈ ಗೋಪಿನಾಥ್, ಪ್ರಶಾಂತ್ ಹಿರೇಮಠ್, ಉಗ್ರಂ ಮಂಜು ಮುಂತಾದವರು ಅಭಿನಯಿಸಿದ್ದಾರೆ. ಶೇಖರ್ ಚಂದ್ರ ಛಾಯಾಗ್ರಹಣ ಮಾಡಿದ್ದು, ಚರಣ್ ರಾಜ್ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ.
ಕಿಚ್ಚ ಸುದೀಪ್ ಮಾಡಿದ ಟ್ವೀಟ್ ಇಲ್ಲಿದೆ
ಸುದೀಪ್ ಏನಂದ್ರು?
"ಈ ಸಂಕ್ರಾಂತಿಯಂದು 'ಮ್ಯಾಂಗೋ ಪಚ್ಚ' ಮೂಲಕ ಸಿನಿಮಾರಂಗಕ್ಕೆ ಕಾಲಿಡುತ್ತಿರುವ ಸಂಚಿತ್ ಸಂಜೀವ್ ಅವರನ್ನು ಪರಿಚಯಿಸಲು ಸಂತೋಷ ಮತ್ತು ಹೆಮ್ಮೆ ಆಗುತ್ತಿದೆ. ಹೊಸ ಪ್ರಯಾಣ ಪ್ರಾರಂಭವಾಗುತ್ತದೆ. ಅವರಿಗೆ ಶಕ್ತಿ, ಗಮನ ಮತ್ತು ಅವರ ಛಾಪು ಮೂಡಿಸಲು ಹಾರೈಕೆ ಸಿಗಲಿ ಎಂದು ಹಾರೈಸುತ್ತೇನೆ. ವರ್ಷದ ಮೊದಲ ಹಬ್ಬವಾದ ಸಂಕ್ರಾಂತಿಯಂಂದು (ಜನವರಿ 15) 'ಮ್ಯಾಂಗೋ ಪಚ್ಚ' ತೆರೆಕಾಣುತ್ತಿದೆ, ಇಡೀ ತಂಡಕ್ಕೆ ಶುಭಾಶಯಗಳು" ಎಂದಿದ್ದಾರೆ ಸುದೀಪ್.