MGR ಬಗ್ಗೆ ಕೀಳುಮಟ್ಟದ ಹೇಳಿಕೆ ನೀಡಿದ ತೆಲುಗು ನಟ ರಾಜೇಂದ್ರ ಪ್ರಸಾದ್; ಕ್ಲಾಸ್ ತೆಗೆದುಕೊಂಡ ತಮಿಳು ನಟ ವಿಶಾಲ್
ತೆಲುಗಿನ ಹಿರಿಯ ನಟ ರಾಜೇಂದ್ರ ಪ್ರಸಾದ್ ಅವರು ದಿಗ್ಗಜ ನಟ, ತಮಿಳುನಾಡಿನ ಮಾಜಿ ಸಿಎಂ ಎಂ.ಜಿ. ರಾಮಚಂದ್ರನ್ (MGR) ಬಗ್ಗೆ ನೀಡಿದ ಕೀಳುಮಟ್ಟದ ಹೇಳಿಕೆ ಭಾರಿ ವಿವಾದ ಸೃಷ್ಟಿಸಿದೆ. ತಮ್ಮ ಮಾತಿನ ಮೂಲಕ ಎಂಜಿಆರ್ ವ್ಯಕ್ತಿತ್ವಕ್ಕೆ ಧಕ್ಕೆ ತಂದಿರುವುದನ್ನು ತಮಿಳು ನಟ ವಿಶಾಲ್ ತೀವ್ರವಾಗಿ ಖಂಡಿಸಿದ್ದಾರೆ.
-
ತೆಲುಗಿನ ಹಿರಿಯ ನಟ ರಾಜೇಂದ್ರ ಪ್ರಸಾದ್ ಅವರು ಹೊಸದೊಂದು ವಿವಾದಕ್ಕೆ ಸಿಲುಕಿಕೊಂಡಿದ್ದಾರೆ. ಈಚಗೆ ಒಂದು ಸಮಾರಂಭದಲ್ಲಿ ತಮಿಳುನಾಡಿನ ಮಾಜಿ ಸಿಎಂ, ದಿಗ್ಗಜ ಕಲಾವಿದ ಎಂ ಜಿ ರಾಮಚಂದ್ರನ್ (MGR) ಬಗ್ಗೆ ಕೀಳುಮಟ್ಟದ ಹೇಳಿಕೆ ನೀಡಿ ವಿವಾದದ ಕಿಡಿ ಹೊತ್ತಿಸಿದ್ದಾರೆ. ಈ ಬಗ್ಗೆ ಈಗ ತಮಿಳು ನಟ ವಿಶಾಲ್ ಅವರು ಪ್ರತಿಕ್ರಿಯೆ ನೀಡಿದ್ದು, "ರಾಜೇಂದ್ರ ಪ್ರಸಾದ್ ಹೇಳಿದ ಮಾತುಗಳನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ" ಎಂದಿದ್ದಾರೆ.
ವಿಶಾಲ್ ಮಾಡಿದ ಟ್ವೀಟ್‌ನಲ್ಲಿ ಏನಿದೆ?
"ಇತ್ತೀಚಿನ ಸಮಾರಂಭವೊಂದರಲ್ಲಿ ನಮ್ಮ ತೆಲುಗು ಚಿತ್ರರಂಗದ ಹಿರಿಯ ನಟರಾದ ಶ್ರೀ ರಾಜೇಂದ್ರ ಪ್ರಸಾದ್ ಅವರು ನೀಡಿರುವ ಹೇಳಿಕೆಗಳನ್ನು ಕೇಳಿ ನನಗೆ ತೀವ್ರ ಆಘಾತ ಹಾಗೂ ಬೇಸರವಾಗಿದೆ. ಗೌರವಾನ್ವಿತ ಸರ್, ನಿಮ್ಮ ಮೇಲೆ ಅಪಾರ ಗೌರವವನ್ನಿಟ್ಟುಕೊಂಡೇ, ಬಹಳ ಭಾರವಾದ ಹೃದಯದಿಂದ ನಾನು ಈ ಟ್ವೀಟ್ ಬರೆಯುತ್ತಿದ್ದೇನೆ. ತಮಿಳುನಾಡಿನ ಅಪ್ರತಿಮ ನಟ ಮಾತ್ರವಲ್ಲದೆ, ಮಹಾನ್ ನಾಯಕರಾಗಿದ್ದ ದಿವಂಗತ ಎಂ. ಜಿ. ಆರ್ ಅವರ ಬಗ್ಗೆ ನೀವು ಆಡಿದ ಮಾತುಗಳನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ" ಎಂದು ಬರೆದುಕೊಂಡಿದ್ದಾರೆ ವಿಶಾಲ್.
Actor Vishal: ನನಗೆ ಪ್ರಶಸ್ತಿ ಬಂದರೆ ಕಸದ ಬುಟ್ಟಿಗೆ ಎಸೆಯುತ್ತೇನೆ: ನಟ ವಿಶಾಲ್ ಶಾಕಿಂಗ್ ಹೇಳಿಕೆ
ನಮ್ಮ ಜನರ ಭಾವನೆಗಳಿಗೆ ಧಕ್ಕೆ
"ಇನ್ನೊಬ್ಬ ಪೌರಾಣಿಕ ನಟರಾದ ಶ್ರೀ ಕಾಂತಾರಾವ್ ಅವರನ್ನು ಹೊಗಳುವ ನಿಮ್ಮ ನಡೆ ಶ್ಲಾಘನೀಯ. ಆದರೆ ಅದೇ ಸಮಯದಲ್ಲಿ ಇಂದಿಗೂ ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿರುವ ಎಂ. ಜಿ. ಆರ್ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿ ಅವರ ವ್ಯಕ್ತಿತ್ವವನ್ನು ಕುಗ್ಗಿಸಿರುವುದು ನಮ್ಮ ಜನರ ಭಾವನೆಗಳಿಗೆ ಧಕ್ಕೆ ತಂದಿದೆ" ಎಂದು ವಿಶಾಲ್ ಹೇಳಿದ್ದಾರೆ.
Actor Vishal: ಸಾಯಿ ಧನ್ಶಿಕಾ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ನಟ ವಿಶಾಲ್; ಫೋಟೋಸ್ ನೋಡಿ
ನೀವು ಕ್ಷಮೆಯಾಚಿಸಬೇಕು...
"ದಯವಿಟ್ಟು ಈ ವಿವಾದಕ್ಕೆ ನೀವೇ ಸೂಕ್ತ ರೀತಿಯಲ್ಲಿ ಅಂತ್ಯ ಹಾಡಬೇಕೆಂದು ನಾನು ವಿನಂತಿಸುತ್ತೇನೆ. ಈ ಸಮಯದಲ್ಲಿ ಇದು ಅತ್ಯಂತ ಅವಶ್ಯಕವಾಗಿದೆ. ಭವಿಷ್ಯದಲ್ಲಿ ಯಾರಾದರೂ ನಿಮ್ಮಂತಹ ಹಿರಿಯ ನಟರ ಬಗ್ಗೆ ಕೀಳಾಗಿ ಮಾತನಾಡಿದರೆ ಒಬ್ಬ ನಟನಾಗಿ ನಾನು ಹೇಗೆ ಕ್ಷಮೆಯಾಚಿಸುತ್ತೇನೆಯೋ, ಹಾಗೆಯೇ ನೀವು ಕೂಡ ಈ ವಿಷಯದ ಬಗ್ಗೆ ಕ್ಷಮೆಯಾಚಿಸಬೇಕೆಂದು ಕೇಳಿಕೊಳ್ಳುತ್ತಿರುವುದಕ್ಕೆ ಕ್ಷಮೆಯಿರಲಿ. ಸದುದ್ದೇಶದಿಂದ ಈ ವಿನಂತಿ ಮಾಡುತ್ತಿದ್ದೇನೆ, ದೇವರು ಒಳ್ಳೆಯದು ಮಾಡಲಿ" ಎಂದು ವಿಶಾಲ್ ತಿಳಿಸಿದ್ದಾರೆ.
ವಿಶಾಲ್ ಮಾಡಿರುವ ಟ್ವೀಟ್
Shocking and repelling to see and hear the recent comments of senior actor Shri Rajendra Prasad, senior actor of our Telugu film industry at a recent function.
— Vishal (@VishalKOfficial) March 12, 2026
Dear Sir, with utmost regards and at the same time with a heavy heart, I pen down this tweet condemning your speech…
ಏನಿದು ವಿವಾದ?
ಈಚೆಗೆ ಸಮಾರಂಭವೊಂದರಲ್ಲಿ ತೆಲುಗಿನ ದಿವಂಗತ ನಟ ಕಾಂತರಾವ್ ಅವರ ಅಭಿನಯವನ್ನು ಹೊಗಳುವ ಭರದಲ್ಲಿ ರಾಜೇಂದ್ರ ಪ್ರಸಾದ್, ಎಂಜಿಆರ್ ಬಗ್ಗೆ ತುಚ್ಛವಾಗಿ ಹೇಳಿಕೆ ನೀಡಿದ್ದರು. "ಕಾಂತಾರಾವ್ ಅವರ ಅಭಿನಯವನ್ನು ಕಂಡು ಎಂಜಿಆರ್ ಭಯದಿಂದ ಮೂತ್ರ ವಿಸರ್ಜನೆ ಮಾಡಿಕೊಳ್ಳುತ್ತಿದ್ದರು. ʻಈ ಕಾಂತಾರಾವ್ ಯಾರು? ಭಾರತೀಯ ಸಿನಿಮಾವನ್ನು ಎಲ್ಲಿಗೋ ತೆಗೆದುಕೊಂಡು ಹೋಗುತ್ತಿದ್ದಾನಲ್ಲ’ ಎಂದು ಎಂಜಿಆರ್ ನಡುಗುತ್ತಿದ್ದರು" ಅಂತ ಕೇವಲವಾಗಿ ರಾಜೇಂದ್ರ ಪ್ರಸಾದ್ ಮಾತನಾಡಿದ್ದರು. ಅದೇ ಈಗ ವಿವಾದಕ್ಕೆ ಕಾರಣವಾಗಿದೆ.