Santosh Lad: ಬಣ್ಣದ ಲೋಕದತ್ತ ಮುಖ ಮಾಡಿದ ಸಚಿವ ಸಂತೋಷ್ ಲಾಡ್; ʼಭಾರತಿ ಟೀಚರ್ʼ ಚಿತ್ರದ ಪೋಸ್ಟರ್ ಔಟ್
Santosh Lad: ಕಾರ್ಮಿಕ ಸಚಿವ ಸಂತೋಷ್ ಲಾಡ್ ಇದೀಗ ಸಿನಿಮಾವೊಂದಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಎಂ.ಎಲ್.ಪ್ರಸನ್ನ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ʼಭಾರತಿ ಟೀಚರ್: ಏಳನೇ ತರಗತಿʼ ಕನ್ನಡ ಚಿತ್ರದಲ್ಲಿ ಸಂತೋಷ್ ಲಾಡ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ರಾಘವೇಂದ್ರ ರೆಡ್ಡಿ ನಿರ್ಮಾಣದ ಈ ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದ್ದು, ಇದೀಗ ಹೊರ ಬಂದಿರುವ ಪೋಸ್ಟರ್ ಗಮನ ಸೆಳೆಯುತ್ತಿದೆ.

ʼಭಾರತಿ ಟೀಚರ್ʼ ಚಿತ್ರದ ಪೋಸ್ಟರ್ ಮತ್ತು ಸಚಿವ ಸಂತೋಷ್ ಲಾಡ್.

ಬೆಂಗಳೂರು: ಸಿನಿಮಾ ಮತ್ತು ಚಿತ್ರರಂಗ ಬಹುಹಿಂದಿನಿಂದಲೇ ಪರಸ್ಪರ ಬೆಸೆದುಕೊಂಡ ಕ್ಷೇತ್ರಗಳು. ಎರಡೂ ಕ್ಷೇತ್ರಗಳ ಮಧ್ಯೆ ಕೊಡು-ಕೊಳ್ಳುವಿಕೆ ನಡೆಯುತ್ತಿದೆ. ಚಿತ್ರರಂಗದಲ್ಲಿ ಮಿಂಚಿದವರು ರಾಜಕೀಯದಲ್ಲಿ ಯಶಸ್ವಿಯಾಗಿದ್ದಾರೆ. ಇತ್ತ ರಾಜಕೀಯದಿಂದ ಚಿತ್ರರಂಗಕ್ಕೆ ಬಂದವರ ಉದಾಹರಣೆಯೂ ಇದೆ. ಈ ಹಿಂದೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ (B. S. Yediyurappa) ಅವರು ಚಿತ್ರವೊಂದರಲ್ಲಿ ಕಾಣಿಸಿಕೊಂಡಿದ್ದರು. 2023ರಲ್ಲಿ ತೆರೆಕಂಡ ʼತನುಜಾʼ (Tanuja) ಸಿನಿಮಾದಲ್ಲಿ ಅವರು ನಟಿಸಿದ್ದರು. ಇದೀಗ ಸಚಿವ ಸಂತೋಷ್ ಎಸ್. ಲಾಡ್ (Santosh Lad) ಸರದಿ. ಹೌದು, ಕಾರ್ಮಿಕ ಸಚಿವ ಸಂತೋಷ್ ಲಾಡ್ ಇದೀಗ ಸಿನಿಮಾವೊಂದಕ್ಕೆ ಬಣ್ಣ ಹಚ್ಚುತ್ತಿದ್ದಾರೆ.
ಎಂ.ಎಲ್.ಪ್ರಸನ್ನ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ʼಭಾರತಿ ಟೀಚರ್: ಏಳನೇ ತರಗತಿʼ ಕನ್ನಡ ಚಿತ್ರದಲ್ಲಿ ಸಂತೋಷ್ ಲಾಡ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ರಾಘವೇಂದ್ರ ರೆಡ್ಡಿ ನಿರ್ಮಾಣದ ಈ ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ. ವಿಶೇಷ ಪಾತ್ರದಲ್ಲಿ ಸಂತೋಷ್ ಲಾಡ್ ನಟಿಸುತ್ತಿದ್ದು, ಚಿತ್ರತಂಡ ಪೋಸ್ಟರ್ ಮೂಲಕ ಅವರನ್ನು ಸ್ವಾಗತಿಸಿದೆ. ಸದ್ಯ ಈ ಪೋಸ್ಟರ್ ಗಮನ ಸೆಳೆದಿದ್ದು, ಸಂತೋಷ್ ರಾಜಕಾರಣಿ ಪಾತ್ರದಲ್ಲಿಯೇ ನಟಿಸುತ್ತಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಹೆಚ್ಚಿನ ಗುಟ್ಟನ್ನು ಚಿತ್ರತಂಡ ಬಿಟ್ಟುಕೊಟ್ಟಿಲ್ಲ.
ʼಭಾರತಿ ಟೀಚರ್: ಏಳನೇ ತರಗತಿʼ ಸಿನಿಮಾದಲ್ಲಿ ಸಿಹಿಕಹಿ ಚಂದ್ರು, ಯಶಿಕಾ, ಗೋವಿಂದೇಗೌಡ, ಅಶ್ವಿನ್ ಹಾಸನ್, ದಿವ್ಯಾ, ಬೆನಕ ನಂಜಪ್ಪಣ್ಣ, ರೋಹಿತ್ ರಾಘವೇಂದ್ರ, ಸೌಜನ್ಯ ಸುನಿಲ್, ರಂಗಸ್ವಾಮಿ ಮತ್ತಿತರರು ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಪ್ರಸನ್ನ ಅವರು ನಿರ್ದೇಶನದ ಜತೆಗೆ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ, ಸಂಗೀತದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ.
ಈ ಸುದ್ದಿಯನ್ನೂ ಓದಿ: Mylapura Movie: ʼಮೈಲಾಪುರʼ ಚಿತ್ರತಂಡದಿಂದ ಶಂಕರ್ ನಾಗ್, ಪುನೀತ್ ರಾಜಕುಮಾರ್ ಅವರ ವಿಶೇಷ ಪೋಸ್ಟರ್ ರಿಲೀಸ್
ಇದೊಂದು ಶಿಕ್ಷಣಾಧಾರಿತ ಸಿನಿಮಾ ಎನ್ನುವ ಸೂಚನೆ ಈಗಾಗಲೇ ಸಿಕ್ಕಿದೆ. ಈ ಚಿತ್ರದ ಮೂಲಕ ಪ್ರಸನ್ನ ವಿಭಿನ್ನ ಕಥೆಯೊಂದನ್ನು ಪ್ರೇಕ್ಷಕರ ಮುಂದಿಡಲಿದ್ದು, ಸಮಾಜಕ್ಕೆ ಬಹುಮುಖ್ಯ ಸಂದೇಶವನ್ನು ಸಾರಲು ಸಜ್ಜಾಗಿದ್ದಾರೆ.
ಪ್ರಭಾವಿ ನಾಯಕ ಸಂತೋಷ್ ಲಾಡ್
ಕಲಘಟಗಿ ವಿಧಾನಸಭಾ ಕ್ಷೇತ್ರದ ಶಾಸಕ ಸಂತೋಷ್ ಲಾಡ್ ಕಾಂಗ್ರೆಸ್‌ನ ಪ್ರಭಾವಿ ನಾಯಕರಲ್ಲಿ ಒಬ್ಬರು. ಅವರು ಈವರೆಗೆ 3 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಸಿದ್ದರಾಮಯ್ಯ ಅವರ ಸಂಪುಟದಲ್ಲಿ 2ನೇ ಬಾರಿ ಸಚಿವರಾಗಿ ಆಯ್ಕೆಯಾಗಿದ್ದಾರೆ. ಅವರಿಗೆ ಈ ಹಿಂದೆಯೂ ಸಚಿವ ಸ್ಥಾನ ನಿರ್ವಹಿಸಿದ ಅನುಭವ ಇದೆ. 2013ರ ಸಿದ್ದರಾಮಯ್ಯ ಅವರ ಅಧಿಕಾರವಧಿಯಲ್ಲಿ ಮಾಹಿತಿ ಮತ್ತು ಮೂಲಸೌಕರ್ಯ ಖಾತೆ ಸಚಿವರಾಗಿ ಜವಾಬ್ದಾರಿ ನಿಭಾಯಿಸಿದ್ದರು.
ಬಳ್ಳಾರಿ ಜಿಲ್ಲೆಯ ಸೊಂಡೂರು ತಾಲೂಕಿನ ಶಿವಾಜಿ ಲಾಡ್ ಮತ್ತು ಶೈಲಜಾ ಲಾಡ್ ದಂಪತಿಯ ಪುತ್ರನಾಗಿ 1975ರ ಫೆ. 27ರಂದು ಜನಿಸಿದ ಅವರು ಹಿಂದಿನಿಂದಲೂ ಕಲೆಯಲ್ಲಿ ಆಸಕ್ತಿ ಹೊಂದಿದ್ದರು. ಜತೆಗೆ ಕ್ರೀಡೆಯಲ್ಲಿಯೂ ತೊಡಗಿಸಿಕೊಂಡಿದ್ದರು. ಗಣಿಗಾರಿಕೆ ಜತೆಗೆ ರಾಜಕೀಯದಲ್ಲಿ ಆಸಕ್ತಿ ಬೆಳೆಸಿಕೊಂಡ ಅವರು ಸಂಡೂರಿನಿಂದಲೇ ರಾಜಕೀಯವನ್ನು ಪ್ರಾರಂಭಿಸಿದ್ದರು. ಸದ್ಯ ಕಾರ್ಮಿಕ ಸಚಿವರಾಗಿದ್ದಾರೆ. ಇದೀಗ ಚಿತ್ರದಲ್ಲಿ ಬಣ್ಣ ಹಚ್ಚುವ ಮೂಲಕ ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸಿದ್ದಾರೆ. ತಮ್ಮ ನೆಚ್ಚಿನ ನಾಯಕನನ್ನು ತೆರೆ ಮೇಲೆ ಕಣ್ತುಂಬಿಕೊಳ್ಳಲು ಫ್ಯಾನ್ಸ್ ಕಾತುರದಿಂದ ಕಾಯುತ್ತಿದ್ದಾರೆ.