ʻಕುಂಭಮೇಳದ ಹುಡುಗಿʼ ಮೊನಾಲಿಸಾ ಭೋಂಸ್ಲೆ ದಿಢೀರ್ ಅಂತ ಮದುವೆ ಆಗಿ ಸುದ್ದಿಯಾಗಿದ್ದಾರೆ. ಮುಸ್ಲಿಂ ಸಮುದಾಯದ ಫರ್ಮಾನ್ ಖಾನ್ ಜೊತೆಗೆ ದಾಂಪತ್ಯ ಬದುಕಿಗೆ ಕಾಲಿಟ್ಟಿದ್ದಾರೆ ಮೊನಾಲಿಸಾ. ಉತ್ತರ ಭಾರತದ ಈ ಜೋಡಿ ಕೇರಳದಲ್ಲಿ ಮದುವೆ ಆಗಿರುವುದು ವಿಶೇಷ. ಈಗಾಗಲೇ ಗೊತ್ತಿರುವಂತೆ ಈ ಮದುವೆಗೆ ಮೊನಾಲಿಸಾ ತಂದೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಅದು ಪೊಲಿಸ್ ಠಾಣೆವರೆಗೂ ಹೋಗಿದೆ. ಈ ನಡುವೆ ಫರ್ಮಾನ್ ಖಾನ್ ತಂದೆಯಿಂದಲೂ ಈ ಅಂತಧರ್ಮೀಯ ಮದುವೆಗೆ ವಿರೋಧ ವ್ಯಕ್ತವಾಗಿದೆ.
ಫರ್ಮಾನ್ ಖಾನ್ ತಂದೆ ವಿರೋಧ
ಫರ್ಮಾನ್ ಖಾನ್ ಮೂಲತಃ ಉತ್ತರ ಪ್ರದೇಶದ ಬಾಗ್‌ಪತ್ ನಿವಾಸಿ. ಇದೀಗ ಈ ಅಂತರ್ಧರ್ಮೀಯ ವಿವಾಹಕ್ಕೆ ವರನ ಕುಟುಂಬವು ಬಹಿರಂಗವಾಗಿ ವಿರೋಧ ವ್ಯಕ್ತಪಡಿಸಿದ್ದು, "ಈ ಮದುವೆಯ ಬಗ್ಗೆ ನಮಗೆ ತಿಳಿದಿರಲಿಲ್ಲ, ಈ ಮದುವೆಗೆ ನಮ್ಮ ಒಪ್ಪಿಗೆಯಿಲ್ಲ" ಎಂದು ಹೇಳಿದೆ. ಈ ಕುರಿತು ಮಾತನಾಡಿರುವ ಫರ್ಮಾನ್ ತಂದೆ ಜಫರ್ ಅಲಿ, "ಮೊನಾಲಿಸಾ ಬೇರೆ ಧರ್ಮಕ್ಕೆ ಸೇರಿದವರು. ಆದ್ದರಿಂದ ತಮಗೆ ಈ ಮದುವೆ ಇಷ್ಟವಿಲ್ಲ" ಎಂದು ಕಡ್ಡಿತುಂಡು ಮಾಡಿದಂತೆ ಹೇಳಿದ್ದಾರೆ.
"ಫರ್ಮಾನ್ ಅಪರೂಪಕ್ಕೊಮ್ಮೆ ಹಳ್ಳಿಗೆ ಬರುತ್ತಿದ್ದ. ಆದರೆ ಅವರು ಮದುವೆ ಆಗುತ್ತಿರುವ ಬಗ್ಗೆ ನಮಗೆ ಎಂದಿಗೂ ತಿಳಿಸಿರಲಿಲ್ಲ. ಇದು ಅವನ ಮೊದಲ ತಪ್ಪು, ನಾವು ಈ ಮದುವೆಯನ್ನು ಒಪ್ಪುವುದಿಲ್ಲ" ಎಂದು ಜಫರ್ ಅಲಿ ಬೇಸರ ವ್ಯಕ್ತಪಡಿಸಿದ್ದಾರೆ. "ಈ ಮದುವೆ ಕುರಿತು ಮಾಧ್ಯಮಗಳ ಮೂಲಕವೇ ನಮಗೆ ತಿಳಿಯಿತು. ಮೊನಾಲಿಸಾ ಅವರು ಫರ್ಮಾನ್ ಜೊತೆ ಕೆಲವು ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ ಅಂತ ನಮಗೆ ತಿಳಿದಿತ್ತು. ಆದರೆ ಅವರು ಮದುವೆಯಾಗುತ್ತಾರೆಂದು ತಿಳಿದಿರಲಿಲ್ಲ. ಅವರು ಮಾಡಿದ್ದು ಸರಿಯಲ್ಲ" ಎಂದು ಫರ್ಮಾನ್ ಅವರ ಸಹೋದರ ಶಮದ್ ಹೇಳಿದ್ದಾರೆ.
ಕೇರಳದಲ್ಲಿ ನಡೆದ ಮದುವೆ
ಮೊನಾಲಿಸಾ ಅವರು ತಮ್ಮ ಮುಸ್ಲಿಂ ಪ್ರಿಯಕರ ಫರ್ಮಾನ್ ಖಾನ್ ಅವರನ್ನು ಮಾರ್ಚ್ 11 ರಂದು ಕೇರಳದ ಅರುಮಾನೂರಿನ ನಯನಾರ್ ದೇವಸ್ಥಾನದಲ್ಲಿ ವಿವಾಹವಾದರು. ಈ ವಿವಾಹದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿವೆ. ಮದುವೆಗೂ ಮುನ್ನ ಮೊನಾಲಿಸಾ ಮತ್ತು ಫರ್ಮಾನ್ ತಮ್ಮ ಚಿತ್ರತಂಡದ ಸದಸ್ಯರೊಂದಿಗೆ ಕೇರಳದ ಸ್ಥಳೀಯ ಪೊಲೀಸ್ ಠಾಣೆಗೆ ತೆರಳಿದ್ದರು.
"ತಾನು ತಂದೆಯ ಜೊತೆ ಹೋಗುವುದಿಲ್ಲ ಮತ್ತು ಪ್ರಿಯಕರನನ್ನೇ ಮದುವೆಯಾಗುತ್ತೇನೆ" ಎಂದು ಪೊಲೀಸರ ಮುಂದೆ ಮೊನಾಲಿಸಾ ಹೇಳಿಕೆ ನೀಡಿದ್ದರು. "ಮೊನಾಲಿಸಾ ಪ್ರಾಪ್ತವಯಸ್ಕಳಾಗಿರುವುದರಿಂದ ತನ್ನ ಇಚ್ಛೆಯಂತೆ ಮದುವೆ ಆಗಲು ಕಾನೂನಿನಲ್ಲಿ ಅವಕಾಶವಿದೆ" ಎಂದು ಪೊಲೀಸರು ಕೂಡ ತಿಳಿಸಿದ್ದರು.