ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಸಂಗೀತ ನಿರ್ದೇಶಕ ದೇವ‌ ನಿಧನದ ಬಳಿಕ ಕಾಲಿವುಡ್‌ಗೆ ಮತ್ತೊಂದು ಆಘಾತ; 37ನೇ ವಯಸ್ಸಿಗೆ ಸಾವನ್ನಪ್ಪಿದ ನಟ ಕಾರ್ತಿಕ್‌ ಸಬೇಶ್

Actor Karthik Sabesh: ಸಂಗೀತ ನಿರ್ದೇಶಕ ದೇವ ಅವರು ಮೃತಪಟ್ಟ ಕೇವಲ ಮೂರೇ ದಿನಗಳಲ್ಲಿ ಅವರ ಸೋದರಳಿಯ, ನಟ ಕಾರ್ತಿಕ್ ಸಬೇಶ್ ತೀವ್ರ ಅನಾರೋಗ್ಯದಿಂದ ವಿಧಿವಶರಾಗಿದ್ದಾರೆ. ಅವರಿಗೆ 37 ವರ್ಷ ವಯಸ್ಸಾಗಿತ್ತು. ಚೆನ್ನೈನ ವಲಸರವಕ್ಕಂ ರುದ್ರಭೂಮಿಯಲ್ಲಿ ಅಂತಿಮ ಸಂಸ್ಕಾರ ನೆರವೇರಿದೆ.

ತಮಿಳು ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ ದೇವ ಅವರ ಅಗಲಿಕೆಯ ನೋವು ಮಾಸುವ ಮುನ್ನವೇ, ಅವರ ಕುಟುಂಬಕ್ಕೆ ಮತ್ತೊಂದು ಬರಸಿಡಿಲು ಬಡಿದಿದೆ. ದೇವ ಅವರ ಸೋದರಳಿಯ ಹಾಗೂ ತಮಿಳು ನಟ ಕಾರ್ತಿಕ್ ಸಬೇಶ್ (37) ಮಂಗಳವಾರ (ಅಕ್ಟೋಬರ್ 20) ಅನಾರೋಗ್ಯದಿಂದ ನಿಧನರಾಗಿದ್ದಾರೆ. ಕೇವಲ ಮೂರು ದಿನಗಳ ಅಂತರದಲ್ಲಿ ಕುಟುಂಬದ ಇಬ್ಬರು ಪ್ರಮುಖ ಸದಸ್ಯರು ವಿಧಿವಶರಾಗಿರುವುದು ಅವರ ಆಪ್ತರು, ಕುಟುಂಬಸ್ಥರಿಗೆ ತೀವ್ರ ನೋವುಂಟು ಮಾಡಿದೆ.

ಅನಾರೋಗ್ಯದಿಂದ ಬಳಲುತ್ತಿದ್ದ ಕಾರ್ತಿಕ್‌ ಸಬೇಶ್‌

ಖ್ಯಾತ ಸಂಗೀತ ನಿರ್ದೇಶಕರ ಜೋಡಿ ಸಬೇಶ್–ಮುರಳಿ ಖ್ಯಾತಿಯ ದಿವಂಗತ ಸಬೇಶ್ ಅವರ ಪುತ್ರರಾಗಿದ್ದ ಕಾರ್ತಿಕ್ ಸಬೇಶ್, ಕಳೆದ ಕೆಲ ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ (ಅ.20) ಕೊನೆಯುಸಿರೆಳೆದಿದ್ದಾರೆ. ಚೆನ್ನೈನ ವಲಸರವಕ್ಕಂನಲ್ಲಿರುವ ರುದ್ರಭೂಮಿಯಲ್ಲಿ ಕುಟುಂಬಸ್ಥರು ಮತ್ತು ಆಪ್ತರ ಸಮ್ಮುಖದಲ್ಲಿ ಕಾರ್ತಿಕ್ ಅವರ ಅಂತ್ಯಕ್ರಿಯೆ ನೆರವೇರಿದೆ. ನಟರಾದ ರಮೇಶ್ ತಿಲಕ್, ಜೈ ಸೇರಿದಂತೆ ಚಿತ್ರರಂಗದ ಅನೇಕ ಕಲಾವಿದರು-ತಂತ್ರಜ್ಞರು ಅವರ ನಿವಾಸಕ್ಕೆ ತೆರಳಿ ಅಂತಿಮ ನಮನ ಸಲ್ಲಿಸಿದರು.

ʻಅಮೃತವರ್ಷಿಣಿʼ, ʻಬಾಷಾ' ಸೇರಿದಂತೆ ಹಲವು ಸೂಪರ್‌ ಹಿಟ್‌ ಸಿನಿಮಾಗಳಿಗೆ ಸಂಗೀತ ನೀಡಿದ್ದ ಮ್ಯೂಸಿಕ್‌ ಡೈರೆಕ್ಟರ್‌ ದೇವ ನಿಧನ!

ಪೋಷಕ ಕಲಾವಿದರಾಗಿ ಗಮನಸೆಳೆದಿದ್ದ ಕಾರ್ತಿಕ್‌

ತಮಿಳು ಚಿತ್ರರಂಗದಲ್ಲಿ ಪೋಷಕ ಪಾತ್ರಗಳ ಮೂಲಕ ತಮ್ಮದೇ ಛಾಪು ಮೂಡಿಸಿದ್ದ ಕಾರ್ತಿಕ್ ಸಬೇಶ್, ಸಿಂಬು ಅಭಿನಯದ ‘ವಲ್ಲವನ್’, ‘ಧಮ್’, ‘ಪಟ್ಟತ್ತು ಯಾನೈ’, ‘ಉದಯಂ ಎನ್‌ಎಚ್4’, ‘ಬರ್ಮಾ’, ‘ಕಾದಲ್ ಸೊಲ್ಲ ವಂದೇನ್’ ಹಾಗೂ ‘ಕುಳಿರ್ 100°’ ಸೇರಿದಂತೆ ಹಲವು ಚಿತ್ರಗಳಲ್ಲಿ ಅಭಿನಯಿಸಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದರು. ಸಕ್ರಿಯವಾಗಿ ನಟನೆಯಲ್ಲಿ ತೊಡಗಿದ್ದ ಕಾರ್ತಿಕ್ ಅವರ ಅಗಲಿಕೆಗೆ ಕಾಲಿವುಡ್ ಕಂಬನಿ ಮಿಡಿದಿದೆ.

ಮೂರು ದಿನಗಳ ಹಿಂದೆ ದೇವ ನಿಧನ

ಕಾರ್ತಿಕ್ ಅವರ ಸೋದರಮಾವ ದಕ್ಷಿಣ ಭಾರತದ ಖ್ಯಾತ ಸಂಗೀತ ಮಾಂತ್ರಿಕ ದೇವ ಅವರು ತೀವ್ರ ಹೃದಯಾಘಾತದಿಂದ ಅಕ್ಟೋಬರ್ 17ರಂದು ತಮ್ಮ 75ನೇ ವಯಸ್ಸಿನಲ್ಲಿ ನಿಧನರಾಗಿದ್ದರು. ತಮಿಳು, ಕನ್ನಡ, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ 400ಕ್ಕೂ ಅಧಿಕ ಸಿನಿಮಾಗಳಿಗೆ ಸಂಗೀತ ಸಂಯೋಜಿಸಿದ್ದ ದೇವ, ರಜನಿಕಾಂತ್ ಅವರ ಖ್ಯಾತ 'ಇಂಟ್ರೋ ಥೀಮ್ ಮ್ಯೂಸಿಕ್' ನೀಡಿದ ಹೆಗ್ಗಳಿಕೆ ಹೊಂದಿದ್ದರು. ದೇವ ಅವರ ಅಂತಿಮ ದರ್ಶನ ಪಡೆದು ನಟ ರಜನಿಕಾಂತ್, ಕಮಲ್ ಹಾಸನ್ ಹಾಗೂ ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದರು. ಇದೀಗ ದೇವ ಅವರ ನಿಧನದ ಬೆನ್ನಲ್ಲೇ ಕಾರ್ತಿಕ್ ಅವರೂ ಇಹಲೋಕ ತ್ಯಜಿಸಿದ್ದಾರೆ.