ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ʻಅಮೃತವರ್ಷಿಣಿʼ, ʻಬಾಷಾ' ಸೇರಿದಂತೆ ಹಲವು ಸೂಪರ್‌ ಹಿಟ್‌ ಸಿನಿಮಾಗಳಿಗೆ ಸಂಗೀತ ನೀಡಿದ್ದ ಮ್ಯೂಸಿಕ್‌ ಡೈರೆಕ್ಟರ್‌ ದೇವ ನಿಧನ!

ಸಂಗೀತ ನಿರ್ದೇಶಕ ದೇವ ಅವರು 75ನೇ ವಯಸ್ಸಿನಲ್ಲಿ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದು, ಅವರ ಅಭಿಮಾನಿಗಳಿಗೆ ಆಘಾತ ನೀಡಿದೆ. ನವೆಂಬರ್‌ನಲ್ಲಿ ಜನ್ಮದಿನ ಆಚರಿಸಿಕೊಳ್ಳಬೇಕಿದ್ದ ಇವರು ಅಕಾಲಿಕವಾಗಿ ವಿಧಿವಶರಾಗಿದ್ದಾರೆ. ಕನ್ನಡದ ಎವರ್‌ಗ್ರೀನ್ ‘ಅಮೃತವರ್ಷಿಣಿ’ ಸೇರಿದಂತೆ 400ಕ್ಕೂ ಹೆಚ್ಚು ಚಿತ್ರಗಳಿಗೆ ಸುಮಧುರ ರಾಗಗಳನ್ನು ಸಂಯೋಜಿಸಿದ್ದ ದೇವ ಅವರು ನಿಧನವು ಸಂಗೀತ ಲೋಕಕ್ಕೆ ತುಂಬಲಾರದ ದೊಡ್ಡ ನಷ್ಟವನ್ನುಂಟುಮಾಡಿದೆ.

‘ಅಮೃತವರ್ಷಿಣಿ’ ಖ್ಯಾತಿಯ ಸಂಗೀತ ನಿರ್ದೇಶಕ ದೇವ ಹೃದಯಾಘಾತದಿಂದ ನಿಧನ

-

Avinash GR
Avinash GR Oct 17, 2026 12:54 PM

ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ, ‘ತೇನಿಸೈ ತೆಂಡ್ರಲ್’ ಎಂದೇ ಜನಪ್ರಿಯರಾಗಿದ್ದ ದೇವ (75) ಅವರು ಶನಿವಾರ (ಅಕ್ಟೋಬರ್ 17) ಮುಂಜಾನೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ತಮಿಳು, ಕನ್ನಡ, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ಸಾವಿರಾರು ಸುಮಧುರ ಗೀತೆಗಳನ್ನು ನೀಡಿದ್ದ ದೇವ ಅವರ ಅಗಲಿಕೆಗೆ ಚಿತ್ರರಂಗ ಹಾಗೂ ಅಪಾರ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.

ನವೆಂಬರ್‌ನಲ್ಲಿ ಹುಟ್ಟುಹಬ್ಬವಿತ್ತು

ಶನಿವಾರ ಮುಂಜಾನೆ ತೀವ್ರ ಹೃದಯಾಘಾತಕ್ಕೊಳಗಾದ ದೇವ ಅವರನ್ನು ಬೆಳಿಗ್ಗೆ ಸುಮಾರು 8.30ರ ವೇಳೆಗೆ ಚೆನ್ನೈನ ಕೋಡಂಬಾಕ್ಕಂನಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಮೂಲಗಳು ತಿಳಿಸಿವೆ. 1950ರ ನವೆಂಬರ್ 20ರಂದು ಜನಿಸಿದ ದೇವನೇಶನ್ ಚೊಕ್ಕಲಿಂಗಂ (ದೇವ), ತಮ್ಮ 76ನೇ ಜನ್ಮದಿನ ಆಚರಿಸಿಕೊಳ್ಳಲು ಕೆಲವೇ ದಿನಗಳು ಇರುವಾಗ ಇಹಲೋಕ ತ್ಯಜಿಸಿದ್ದಾರೆ.

40 ವರ್ಷಗಳ ಹಿಂದೆ ಸಂಗೀತ ನಿರ್ದೇಶಕರಾದ ದೇವ

1986ರಲ್ಲಿ 'ಮುಟ್ಟುಕಾರ ಮನ್ನಾರು' ತಮಿಳು ಚಿತ್ರದ ಮೂಲಕ ಸಂಗೀತ ನಿರ್ದೇಶಕರಾಗಿ ಪಯಣ ಆರಂಭಿಸಿದ ದೇವ, 4 ದಶಕಗಳ ಸುದೀರ್ಘ ವೃತ್ತಿಜೀವನದಲ್ಲಿ 400ಕ್ಕೂ ಅಧಿಕ ಸಿನಿಮಾಗಳಿಗೆ ಸಂಗೀತ ನೀಡಿದ್ದಾರೆ. ಅದರಲ್ಲೂ ಸೂಪರ್‌ಸ್ಟಾರ್ ರಜನಿಕಾಂತ್ ಅವರ ಸಿನಿಮಾಗಳಿಗೆ ಅವರು ನೀಡಿದ ಸಂಗೀತ ಇಂದಿಗೂ ಇತಿಹಾಸ. 1992ರ 'ಅಣ್ಣಾಮಲೈ' ಚಿತ್ರಕ್ಕಾಗಿ ಅವರು ಸಂಯೋಜಿಸಿದ ರಜನಿಕಾಂತ್ ಅವರ ಇಂಟ್ರೊಡಕ್ಷನ್ ಬಿಜಿಎಂ, ಇಂದಿಗೂ ರಜನಿ ಚಿತ್ರಗಳ ಟೈಟಲ್ ಕಾರ್ಡ್ ಬಂದಾಗ ಥಿಯೇಟರ್‌ಗಳಲ್ಲಿ ಮೊಳಗುತ್ತದೆ. 'ಬಾಷಾ', 'ಮುತ್ತು' ಸೇರಿದಂತೆ ಹಲವು ಹಿಟ್‌ ಸಿನಿಮಾಗಳಿಗೆ ದೇವ ಸಂಗೀತ ನೀಡಿದ್ದಾರೆ. ಜೊತೆಗೆ ಕಮಲ್ ಹಾಸನ್, ವಿಜಯ್, ಅಜಿತ್ ಕುಮಾರ್, ಪವನ್ ಕಲ್ಯಾಣ್ ಅವರಂತಹ ದಕ್ಷಿಣದ ಸ್ಟಾರ್ ನಟರ ಚಿತ್ರಗಳಿಗೆ ಅವರು ಸಾರ್ವಕಾಲಿಕ ಹಿಟ್ ಆಲ್ಬಂಗಳನ್ನು ನೀಡಿದ್ದಾರೆ.

ಕನ್ನಡದೊಂದಿಗೆ ದೇವ ನಂಟು

ಕನ್ನಡ ಚಿತ್ರರಂಗದಲ್ಲೂ ದೇವ ಅವರ ಹೆಜ್ಜೆಗುರುತು ಅಚ್ಚಳಿಯದೆ ಉಳಿದಿದೆ. 1997ರಲ್ಲಿ ತೆರೆಕಂಡ 'ಅಮೃತವರ್ಷಿಣಿ' ಚಿತ್ರಕ್ಕೆ ನೀಡಿದ ಅಮೋಘ ಸಂಗೀತಕ್ಕಾಗಿ ಅವರು 'ಅತ್ಯುತ್ತಮ ಸಂಗೀತ ನಿರ್ದೇಶಕ (ಕನ್ನಡ)' ಫಿಲ್ಮ್‌ಫೇರ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರು. ಆ ಚಿತ್ರದ "ತುಂತುರು ಅಲ್ಲಿ ನೀರ ಹಾಡು...", "ಈ ಸುಂದರ ಬೆಳದಿಂಗಳ..." ಹಾಡುಗಳು ಇಂದಿಗೂ ಕನ್ನಡಿಗರ ಮೆಚ್ಚಿನ ಎವರ್‌ಗ್ರೀನ್ ಮೆಲೋಡಿಗಳಾಗಿವೆ. ಇದಲ್ಲದೆ ಸಾಹಸಸಿಂಹ ವಿಷ್ಣುವರ್ಧನ್ ಅಭಿನಯದ 'ಸಿಂಹಾದ್ರಿಯ ಸಿಂಹ', 'ಕದಂಬ', ಸಿ.ಪಿ. ಯೋಗೇಶ್ವರ್ ನಟನೆಯ 'ಸೈನಿಕ' ಹಾಗೂ 'ರಾಜ ನರಸಿಂಹ' ಸೇರಿದಂತೆ ಹಲವು ಸ್ಯಾಂಡಲ್‌ವುಡ್ ಸಿನಿಮಾಗಳಿಗೆ ಅದ್ಭುತ ಸಂಗೀತ ನೀಡಿ ಕನ್ನಡಿಗರ ಮನಗೆದ್ದಿದ್ದರು ದೇವ.

ದರ್ಶನ್‌ ಅಭಿನಯದ ‘ಸುಂಟರಗಾಳಿ’ ಖ್ಯಾತಿಯ ಪೋಷಕ ನಟಿ ಲಲಿತಮ್ಮ ನಿಧನ; ವೃದ್ಧಾಶ್ರಮದಲ್ಲಿ ಕಣ್ಮುಚ್ಚಿದ ಹಿರಿಯ ಕಲಾವಿದೆ!

ಕಂಬನಿ ಮಿಡಿದ ಖುಷ್ಬೂ

ದೇವ ಅವರ ನಿಧನಕ್ಕೆ ಚಿತ್ರರಂಗದ ಗಣ್ಯರು ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ನಟಿ ಹಾಗೂ ರಾಜಕಾರಣಿ ಖುಷ್ಬು ಸುಂದರ್ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದು, "ಕೇವಲ 10 ದಿನಗಳ ಹಿಂದಷ್ಟೇ ನಮ್ಮೊಂದಿಗೆ ನಗುತ್ತಾ, ಪ್ರೀತಿಯಿಂದ ಹರಸುತ್ತಿದ್ದ ವ್ಯಕ್ತಿ ಇಂದು ನಮ್ಮ ನಡುವೆ ಇಲ್ಲ ಎನ್ನುವುದನ್ನು ನಂಬಲು ಸಾಧ್ಯವಾಗುತ್ತಿಲ್ಲ. 'ತೇನಿಸೈ ತೆಂಡ್ರಲ್' ಎಂದು ಕರೆಯಲ್ಪಡುತ್ತಿದ್ದ ಅವರು ಜೇನಿನಷ್ಟೇ ಮಧುರ ಹಾಗೂ ಗಾಳಿಯಷ್ಟೇ ಸರಳ ಮನಸ್ಸಿನ ವ್ಯಕ್ತಿ. ಭಾರತೀಯ ಚಿತ್ರರಂಗಕ್ಕೆ ಅವರ ಕೊಡುಗೆ ಅಪಾರ. ನೀವು ಇಷ್ಟು ಬೇಗ ನಮ್ಮನ್ನು ಅಗಲಬಾರದಿತ್ತು" ಎಂದು ಬರೆದುಕೊಂಡಿದ್ದಾರೆ.

ದೇವ ಪುತ್ರ ಶ್ರೀಕಾಂತ್‌ ದೇವ ಕೂಡ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ. ಮೆಲೋಡಿ ಮಾತ್ರವಲ್ಲದೆ ಮಾಸ್ ಮತ್ತು ಗಾನಾ ಹಾಡುಗಳಲ್ಲೂ ತಮ್ಮದೇ ಆದ ಛಾಪು ಮೂಡಿಸಿದ್ದ ದೇವ ಅವರ ಅಗಲಿಕೆ ದಕ್ಷಿಣ ಭಾರತೀಯ ಸಂಗೀತ ಲೋಕಕ್ಕೆ ತುಂಬಲಾರದ ನಷ್ಟವನ್ನುಂಟುಮಾಡಿದೆ. ಅವರ ಅಂತ್ಯಕ್ರಿಯೆಯ ವಿವರಗಳನ್ನು ಕುಟುಂಬಸ್ಥರು ಇನ್ನೂ ಹಂಚಿಕೊಂಡಿಲ್ಲ.