ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kichcha Sudeepa: ʼಮುಸ್ಸಂಜೆ ಮಾತುʼ ಚಿತ್ರ ರಿಲೀಸ್‌ ಆಗಿ 17 ವರ್ಷ; ಅಮ್ಮನನ್ನು ಸುದೀಪ್‌ ನೆನೆದು ಭಾವುಕ

Mussanjemaatu: ಕಿಚ್ಚ ಸುದೀಪ್‌ ಮತ್ತು ಮೋಹಕ ತಾರೆ ರಮ್ಯಾ ಜತೆಯಾಗಿ ನಟಿಸಿದ ಹಿಟ್‌ ಚಿತ್ರ ʼಮುಸ್ಸಂಜೆ ಮಾತುʼ ರಿಲೀಸ್‌ ಆಗಿ 17 ವರ್ಷ ಕಳೆದಿದೆ. ಈ ಹಿನ್ನೆಲೆಯಲ್ಲಿ ಸುದೀಪ್‌ ವಿಶೇಷ ವಿಡಿಯೊವಂದನ್ನು ಶೇರ್‌ ಮಾಡಿ ಚಿತ್ರತಂಡಕ್ಕೆ ಮತ್ತು ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ. ಜತೆಗೆ ತಾಯಿಯನ್ನು ನೆನೆದು ಭಾವಿಕರಾಗಿದ್ದಾರೆ.

ʼಮುಸ್ಸಂಜೆ ಮಾತುʼ ರಿಲೀಸ್‌ ಆಗಿ 17 ವರ್ಷ; ಕಿಚ್ಚನಿಂದ ಸ್ಪೆಷಲ್‌ ವಿಡಿಯೊ

ʼಮುಸ್ಸಂಜೆ ಮಾತುʼ ಚಿತ್ರದ ಪೋಸ್ಟರ್‌.

Profile Ramesh B May 16, 2025 3:46 PM

ಬೆಂಗಳೂರು: ಸ್ಯಾಂಡಲ್‌ವುಡ್‌ ಹಿಟ್‌ ಜೋಡಿಗಳಲ್ಲಿ ಒಂದಾದ ಕಿಚ್ಚ ಸುದೀಪ್‌ (Kichcha Sudeepa) ಮತ್ತು ಮೋಹಕ ತಾರೆ ರಮ್ಯಾ (Ramya) ಜತೆಯಾಗಿ ನಟಿಸಿದ ಹಿಟ್‌ ಚಿತ್ರ ʼಮುಸ್ಸಂಜೆ ಮಾತುʼ (Mussanjemaatu). 2008ರ ಮೇ 16ರಂದು ತೆರೆಕಂಡ ಈ ಸಿನಿಮಾಕ್ಕೆ ಈಗ 17ರ ಸಂಭ್ರಮ. ಮುಸ್ಸಂಜೆ ಮಹೇಶ್‌ ನಿರ್ದೇಶನದ ಈ ಚಿತ್ರದಲ್ಲಿ ಸುದೀಪ್‌ ಮೊದಲ ಬಾರಿಗೆ ಆರ್‌ಜೆ ಪಾತ್ರದಲ್ಲಿ ಕಾಣಿಸಿಕೊಂಡು ಗಮನ ಸೆಳೆದಿದ್ದರು. ಚಿತ್ರ 17 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸುದೀಪ್‌ ವಿಡಿಯೊವೊಂದನ್ನು ಶೇರ್‌ ಮಾಡಿ, ಈ ಚಿತ್ರ ತಮ್ಮ ಪಾಲಿಗೆ ಹೇಗೆ ವಿಶೇಷ ಎನ್ನುವುದನ್ನು ತಿಳಿಸಿದ್ದಾರೆ. ಜತೆಗೆ ತಮ್ಮ ಅಮ್ಮನನ್ನು ನೆನೆದು ಭಾವುಕರಾಗಿದ್ದಾರೆ.

ʼಮುಸ್ಸಂಜೆ ಮಾತುʼ ಚಿತ್ರದ ಗೆಲುವಿನಲ್ಲಿ ಅದರ ಸಂಗೀತವೂ ಪ್ರಧಾನ ಪಾತ್ರ ವಹಿಸಿತ್ತು. ಈ ಸಿನಿಮಾಕ್ಕೆ ವಿ.ಶ್ರೀಧರ್‌ ಸಂಗೀತ ನೀಡಿದ್ದು, ಹಾಡುಗಳೆಲ್ಲ ಸೂಪರ್‌ ಹಿಟ್‌ ಆಗಿದ್ದವು. ಅದರಲ್ಲಿಯೂ ಸೋನು ನಿಗಂ ಧ್ವನಿ ನೀಡಿರುವ ʼಏನಾಗಲೀ ಮುಂದೆ ಸಾಗು ನೀʼ ಹಾಡಂತೂ ಇಂದಿಗೂ ಹಲವರ ಫೆವರೇಟ್‌ ಎನಿಸಿಕೊಂಡಿದೆ. ವಿಶೇಷ ಎಂದರೆ ಈ ಹಾಡು ಸುದೀಪ್‌ ಅವರ ತಾಯಿಗೂ ಬಹಳಷ್ಟು ಇಷ್ಟವಾಗಿತ್ತಂತೆ.

ಕಿಚ್ಚ ಸುದೀಪ್‌ ಹಂಚಿಕೊಂಡ ವಿಡಿಯೊ:



ಈ ಸುದ್ದಿಯನ್ನೂ ಓದಿ: Ajay Gogavale: 'ಪೀಟರ್'ಗಾಗಿ ಸ್ಯಾಂಡಲ್‌ವುಡ್‌ಗೆ ಬಂದ ಬಾಲಿವುಡ್ ಗಾಯಕ ಅಜಯ್ ಗೋಗವಾಲೆ; ಸೋನು ನಿಗಮ್‌ಗೆ ಸ್ಥಾನ ತುಂಬ್ತಾರಾ?

ಈ ವಿಚಾರವನ್ನು ಹಂಚಿಕೊಂಡ ಸುದೀಪ್‌ ಭಾವುಕರಾಗಿದ್ದಾರೆ. ಇತ್ತೀಚೆಗಷ್ಟೇ ಸುದೀಪ್‌ ಅವರ ತಾಯಿ ಸರೋಜಾ ಮೃತಪಟ್ಟಿದ್ದರು.

ʼʼಮುಸ್ಸಂಜೆ ಮಾತುʼ ಚಿತ್ರತಂಡಕ್ಕೆ ಮತ್ತು ಈಗಲೂ ಅದನ್ನು ನೆನಪಿಸಿಕೊಳ್ಳುತ್ತಿರುವುದಕ್ಕೆ ಎಲ್ಲರಿಗೂ ಧನ್ಯವಾದಗಳು. ಅದರಲ್ಲಿಯೂ ಈಗಲೂ ʼಏನಾಗಲಿ ಮುಂದೆ ಸಾಗು ನೀʼ ಹಾಡು ಜೀವಂತವಾಗಿದೆ. ಇದಕ್ಕಾಗಿ ನಾನು ನಿರ್ದೇಶಕರು, ನಿರ್ಮಾಪಕರು, ಸಂಗೀತ ನಿರ್ದೇಶಕರಿಗೆ ಧನ್ಯವಾದ ಹೇಳುತ್ತೇನೆ. ಈ ಹಾಡು ನನ್ನ ಅಮ್ಮನ ನೆಚ್ಚಿನ ಗೀತೆಯಾಗಿತ್ತು. ಚಿತ್ರ ರಿಲೀಸ್‌ ಆದಾಗಿನಿಂದ ಆ ಹಾಡು ಅವರ ಮೊಬೈಲ್‌ನ ಹಲೋಟ್ಯೂನ್‌ ಆಗಿತ್ತು. ಈಗಲೂ ಅಮ್ಮನ ಮೊಬೈಲ್ ಅಪ್ಪನ ಬಳಿ ಇದ್ದು ಅದೇ ಹಲೋಟ್ಯೂನ್‌ ಇದೆʼʼ ಎಂದು ತಿಳಿಸಿದ್ದಾರೆ.

ʼʼಸಿನಿಮಾದಲ್ಲಿ ನಟಿಸಿರುವ ರಮ್ಯಾ, ಅನು ಪ್ರಭಾಕರ್‌ ಸೇರಿದಂತೆ ಎಲ್ಲರಿಗೂ ಧನ್ಯವಾದಗಳು. ಸಿನಿಮಾದ ಆರ್‌ಜೆ ಪಾತ್ರಕ್ಕಾಗಿ ನಾನು ಬ್ಯಾಂಕಾಕ್‌ಗೆ ಹೋಗಿ ಕ್ಯಾಸ್ಟೂಮ್‌ ಖರೀದಿಸಿದ್ದೆ. ಕ್ಯಾಸ್ಟೂಮ್‌ ಟೈಟ್‌ ಇದ್ದುದರಿಂದ ಅದಕ್ಕೆ ಹೊಂದಿಕೊಳ್ಳಲು ಡಯಟ್‌, ವ್ಯಾಯಾಮ ಮಾಡಿ ಫಿಟ್‌ ಆದೆ. ಈ ಪಾತ್ರ ನಿರ್ವಹಿಸಲು ನೆರವಾದ, ಟಿಪ್ಸ್‌ ನೀಡಿದ ಆರ್‌ಜೆಗಳನ್ನು ನಾನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಲೇಬೇಕು. ಒಟ್ಟಿನಲ್ಲಿ ನನಗೆ ಮತ್ತು ನನ್ನ ಮನೆಯವರಿಗೆ ಇದು ವಿಶೇಷ ಸಿನಿಮಾʼʼ ಎಂದು ಸುದೀಪ್‌ ತಿಳಿಸಿದ್ದಾರೆ.

ʼಮುಸ್ಸಂಜೆ ಮಾತುʼ ಚಿತ್ರದಲ್ಲಿ ಸುದೀಪ್‌ ಆರ್‌ಜೆ ಪ್ರದೀಪ್‌ ಪಾತ್ರದಲ್ಲಿ ಕಾಣಿಸಿಕೊಂಡರೆ ತನುವಾಗಿ ರಮ್ಯಾ ಮಿಂಚಿದ್ದರು. ಇನ್ನು ಅನು ಪ್ರಭಾಕರ್‌, ರಮೇಶ್‌ ಭಟ್‌, ಸುಮಿತ್ರಾ, ಪದ್ಮಾ ವಾಸಂತಿ, ಮಂಡ್ಯ ರಮೇಶ್‌ ಮತ್ತಿತರರು ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿದ್ದರು. ಬಾಕ್ಸ್‌ ಆಫೀಸ್‌ನಲ್ಲಿ ಹಿಟ್‌ ಎನಿಸಿಕೊಂಡಿದ್ದ ಈ ಚಿತ್ರ ʼಅಚೇನ ಪ್ರೇಮ್‌ʼ ಹೆಸರಿನಲ್ಲಿ ಬೆಂಗಾಳಿಗೆ ರಿಮೇಕ್‌ ಆಗಿದೆ.