ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿ ‘ನಂದಗೋಕುಲ’ ಇದೀಗ ರೋಚಕ ತಿರುವು ಪಡೆದುಕೊಂಡಿದೆ. ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9ಕ್ಕೆ ಪ್ರಸಾರವಾಗುತ್ತಿರುವ ಈ ಕೌಟುಂಬಿಕ ಕಥೆಯು ವೀಕ್ಷಕರಲ್ಲಿ ಭಾರಿ ಕುತೂಹಲ ಮೂಡಿಸುತ್ತಿದ್ದು, ಇದೀಗ ಕಥೆಯ ಹಾದಿಯೇ ಬದಲಾಗುವ ಮುನ್ಸೂಚನೆ ಸಿಕ್ಕಿದೆ. ಈ ಸಂಚಲನಕ್ಕೆ ಪ್ರಮುಖ ಕಾರಣವಾಗಿರುವುದು ನಂದಕುಮಾರ್ ಅವರ ಮುದ್ದಿನ ಹಿರಿ ಸೊಸೆ ಪ್ರಿಯಾಳ ಆಗಮನ.
ಹಿರಿ ಸೊಸೆ ಮೇಲೆ ನಂದನಿಗೆ ಹೆಮ್ಮೆ
ತಾನು ತೋರಿಸಿದ ಹುಡುಗಿಯನ್ನೇ ತನ್ನ ಮೂವರು ಮಕ್ಕಳು ಮದುವೆಯಾಗಬೇಕೆಂಬುದು ತಂದೆ ನಂದಕುಮಾರ್‌ನ ನಿರ್ಧಾರವಾಗಿತ್ತು. ಆದರೆ, ಕೇಶವ-ಮೀನಾ ಲವ್ ಮ್ಯಾರೇಜ್ ಮಾಡಿಕೊಂಡರೆ, ಅತ್ತ ನಂದಕುಮಾರನಿಗೆ ತಿಳಿಯದಂತೆ ಅಮೂಲ್ಯ ಜೊತೆ ವಲ್ಲಭ ಮದುವೆಯಾಗಿದ್ದಾನೆ. ಆದರೆ ತಂದೆಯ ಮಾತಿಗೆ ಬೆಲೆ ನೀಡಿ ಆತ ತೋರಿಸಿದ ಹುಡುಗಿಯನ್ನೇ ಮದುವೆಯಾಗಿ ನಂದಕುಮಾರನ ಕನಸನ್ನು ನನಸು ಮಾಡಿದವನು ಹಿರಿಯ ಮಗ ಮಾಧವ. ಹೀಗಾಗಿಯೇ ನಂದಕುಮಾರ್‌ಗೆ ಮಾಧವ ಮತ್ತು ಆತನ ಪತ್ನಿ ಪ್ರಿಯಾ ಮೇಲೆ ಅತೀವವಾದ ಪ್ರೀತಿ ಮತ್ತು ಹೆಮ್ಮೆ ಇದೆ.
Nandagokula Serial: ಕಿರುತೆರೆಯಲ್ಲಿ ಮತ್ತೆ ಬರುತ್ತಿದೆ ನಂದಗೋಕುಲ ಧಾರಾವಾಹಿ: ಯಾವಾಗಿನಿಂದ ಪ್ರಾರಂಭ?
ಮೇಲುಗೈ ಸಾಧಿಸುತ್ತಿರುವ ಪ್ರಿಯಾ
ಸದ್ಯ ಈ ಧಾರಾವಾಹಿಯಲ್ಲಿ ನಂದಕುಮಾರನ ಅತ್ಯಂತ ನೆಚ್ಚಿನ ಸೊಸೆಯಾಗಿ ಪ್ರಿಯಾ ಮನೆಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾಳೆ. ಪ್ರಿಯಾ ಏನೇ ಹೇಳಿದ್ರು ಅದು ಸರಿಯಾಗಿಯೇ ಇರುತ್ತದೆ ಎಂಬ ಕುರುಡು ನಂಬಿಕೆ ನಂದಕುಮಾರನಿಗೆ. ಆದರೆ ಮಾವನ ಈ ಅತಿಯಾದ ಪ್ರೀತಿಯನ್ನೇ ಬಂಡವಾಳ ಮಾಡಿಕೊಳ್ಳುತ್ತಿರುವ ಪ್ರಿಯಾ, ಪ್ರತಿಯೊಂದು ವಿಚಾರದಲ್ಲೂ ತನ್ನದೇ ಮೇಲುಗೈ ಇರಬೇಕೆಂದು ಯೋಚಿಸುತ್ತಿದ್ದಾಳೆ. ಇದು ಇಡೀ ನಂದಗೋಕುಲದ ಮನೆಯ ಸ್ಥಿತಿಯನ್ನೇ ಸಂಪೂರ್ಣವಾಗಿ ಬದಲು ಮಾಡುತ್ತಿದೆ.
ವಾರಗಿತ್ತಿಯರ ನಡುವೆ ವಾರ್ ಶುರುವಾಗಲಿದೆಯಾ?
ಅತ್ತೆ ಗಿರಿಜಾ, ಸೊಸೆಯರಾದ ಮೀನಾ ಮತ್ತು ಅಮೂಲ್ಯ ಒಂದು ಕಡೆಯಾದರೆ, ತನ್ನ ಚಾಣಾಕ್ಷ ನಡೆಯಿಂದ ಪ್ರಿಯಾ ಮತ್ತೊಂದು ಕಡೆ ನಿಂತಿದ್ದಾಳೆ. ಮೇಲ್ನೋಟಕ್ಕೆ ಸಮರದಂತೆ ಕಾಣದಿದ್ದರೂ, ಒಳಗೊಳಗೆ ವಾರಗಿತ್ತಿಯರ ನಡುವೆ ಕಿಡಿ ಹೊತ್ತಿಕೊಂಡಿದೆ. ಆ ಜಟಾಪಟಿಯಲ್ಲಿ ಕೆಲವೊಮ್ಮೆ ಮೀನಾ ಗೆದ್ದರೆ, ಮಗದೊಮ್ಮೆ ಪ್ರಿಯಾ ತನ್ನ ಪಟ್ಟು ಸಡಿಲಿಸದೆ ಗೆಲುವಿನ ನಗು ಬೀರುತ್ತಿದ್ದಾಳೆ. ಈ ಎಲ್ಲಾ ಬೆಳವಣಿಗೆಗಳಿಂದ ನಂದಕುಮಾರನ ಮನೆಯಲ್ಲಿ ಭಿನ್ನಾಭಿಪ್ರಾಯಗಳು ಕಾಣಿಸಿಕೊಳ್ಳಲು ಶುರುವಾಗಿವೆ. ಇದು ಮುಂದೆ ಯಾವ ರೀತಿಯ ತಿರುವು ಪಡೆದುಕೊಳ್ಳಲಿದೆ ಎಂಬುದು ಸದ್ಯದ ಕುತೂಹಲ.
ಅಮೂಲ್ಯಳನ್ನು ತವರಿಗೆ ಕಳಿಸಲು ವಲ್ಲಭನ ಮಾಸ್ಟರ್ ಪ್ಲಾನ್
ಅಲ್ಲದೆ, ಪ್ರಿಯಾಳ ಈ ವರ್ತನೆ ನಿಜಕ್ಕೂ ಕುಟುಂಬದ ಹಿತಕ್ಕಾಗಿಯೋ ಅಥವಾ ಆಕೆಯ ಅಸಲಿ ಮುಖವಾಡ ಬೇರೆ ಇದೆಯೋ ಎಂಬ ಪ್ರಶ್ನೆ ಮೂಡಿದೆ. ನಂದಕುಮಾರ್ ಅವರ ಕಣ್ಣಿಗೆ ಮಣ್ಣೆರಚಿ ಆಕೆ ಮನೆ ಮುರಿಯುವ ಕೆಲಸಕ್ಕೆ ಕೈ ಹಾಕಿದ್ದಾಳಾ ಎಂಬ ಆತಂಕವೂ ಮನೆ ಮಾಡಿದೆ. ಇದರ ಜೊತೆಗೆ ಕಥೆಯಲ್ಲಿ ಮತ್ತೊಂದು ಭಾವನಾತ್ಮಕ ಎಳೆ ಕೂಡ ತೆರೆದುಕೊಳ್ಳುತ್ತಿದೆ. ಮದುವೆಯಾದ ಮೇಲೆ ಅಮೂಲ್ಯ ಈವರೆಗೂ ತನ್ನ ತವರಿಗೆ ಹೋಗಿಲ್ಲ. ಪತ್ನಿಯನ್ನು ಒಮ್ಮೆಯಾದರೂ ಅವಳ ತವರು ಮನೆಗೆ ಕಳಿಸಬೇಕು ಎನ್ನುವ ವಲ್ಲಭನ ಆಸೆ ಇನ್ನು ಈಡೇರಿಲ್ಲ. ಈ ನಡುವೆ ಹೋಳಿ ಹಬ್ಬದ ಸಂಭ್ರಮವನ್ನು ಬಳಸಿಕೊಂಡು ಅಮೂಲ್ಯಳನ್ನು ತವರಿಗೆ ಕಳಿಸಲು ವಲ್ಲಭ ಒಂದು ಮಾಸ್ಟರ್ ಪ್ಲಾನ್ ಮಾಡಿದ್ದಾನೆ.
ಮುಂದಿವೆ ರೋಚಕ ಸಂಚಿಕೆಗಳು
ಸದ್ಯ ಅಮೂಲ್ಯಳ ತವರಿನ ಆಸೆ ಈಡೇರುತ್ತಾ? ವಲ್ಲಭನ ಆ ಉಪಾಯವಾದರೂ ಏನು? ಹಿರಿ ಸೊಸೆ ಪ್ರಿಯಾಳ ಅಸಲಿ ಮುಖ ನಂದಕುಮಾರ್ ಮುಂದೆ ಬಯಲಾಗುತ್ತಾ? ನಂದಗೋಕುಲದ ಒಗ್ಗಟ್ಟು ಉಳಿಯುತ್ತದೆಯೇ ಅಥವಾ ಸೊಸೆಯಂದಿರ ಶೀತಲ ಸಮರ ಕುಟುಂಬವನ್ನು ಹಾದಿ ತಪ್ಪಿಸುತ್ತದೆಯೇ ಎಂಬ ಕುತೂಹಲಕಾರಿ ಅಂಶಗಳ ಜೊತೆಗೆ ಮುಂದಿನ ಸಂಚಿಕೆಗಳು ಇರಲಿವೆ.