Toxic Movie: ಭರದಿಂದ ಸಾಗುತ್ತಿದೆ ಯಶ್ ʼಟಾಕ್ಸಿಕ್ʼ ಶೂಟಿಂಗ್; ಮಕ್ಕಳೊಂದಿಗೆ ಮುಂಬೈಗೆ ಬಂದಿಳಿದ ನಯನತಾರಾ
Yash: ಜಾಗತಿಕ ಸಿನಿಪ್ರಿಯರು ಸ್ಯಾಂಡಲ್‌ವುಡ್‌ನತ್ತ ತಿರುಗಿ ನೋಡುವಂತೆ ಮಾಡುತ್ತಿರುವ ಚಿತ್ರ ʼಟಾಕ್ಸಿಕ್ʼ ಸದ್ಯ ಮುಂಬೈಯಲ್ಲಿ ಬೀಡು ಬಿಟ್ಟಿದ್ದು, ಶೂಟಿಂಗ್‌ನಲ್ಲಿ ನಿತರವಾಗಿದೆ. ರಾಕಿಂಗ್ ಸ್ಟಾರ್ ಯಶ್ ನಟಿಸುತ್ತಿರಿವ ಈ ಚಿತ್ರದಲ್ಲಿ ದಕ್ಷಿಣ ಭಾರತದ ಜನಪ್ರಿಯ ನಟಿ ನಯನತಾರಾ ಬಹುಮುಖ್ಯ ಪಾತ್ರದಲ್ಲಿ ಅಬಿನಯಿಸುತ್ತಿದ್ದು, ಅವರು ಮುಂಬೈಗೆ ಬಂದಿಳಿದಿರುವ ವಿಡಿಯೊ ವೈರಲ್ ಆಗಿದೆ.

ನಯನತಾರಾ.

ಮುಂಬೈ: ಜಾಗತಿಕ ಸಿನಿಪ್ರಿಯರು ಸ್ಯಾಂಡಲ್‌ವುಡ್‌ನತ್ತ ತಿರುಗಿ ನೋಡುವಂತೆ ಮಾಡುತ್ತಿರುವ ಚಿತ್ರ ʼಟಾಕ್ಸಿಕ್ʼ (toxic Movie). 'ಕೆಜಿಎಫ್' (KGF) ಸರಣಿ ಸಿನಿಮಾಗಳ ಮೂಲಕ ಗ್ಲೋಬಲ್ ಸ್ಟಾರ್ ಆಗಿ ಬದಲಾದ ಯಶ್ (Yash) ನಟಿಸುತ್ತಿರುವ, ಮಾಲಿವುಡ್ ನಟಿ, ನಿರ್ದೇಶಕಿ ಗೀತು ಮೋಹನ್‌ದಾಸ್ (Geetu Mohandas) ಆ್ಯಕ್ಷನ್ ಕಟ್ ಹೇಳುತ್ತಿರುವ ಇದು ಕನ್ನಡ ಜತೆಗೆ ಇಂಗ್ಲಿಷ್‌ನಲ್ಲೂ ತಯಾರಾಗುತ್ತಿದ್ದು, ಸದ್ಯ ಚಿತ್ರತಂಡ ಮುಂಬೈಯಲ್ಲಿ ಬೀಡುಬಿಟ್ಟಿದೆ. ಈ ಹಿಂದೆ ಮುಂಬೈಯಲ್ಲಿ ಮುಖ್ಯ ಭಾಗದ ಶೂಟಿಂಗ್ ನಡೆಸಿದ್ದ ಸಿನಿಮಾತಂಡ ಮತ್ತೊಂದು ಹಂತದ ಚಿತ್ರೀಕರಣಕ್ಕಾಗಿ ಇಲ್ಲಿಗೆ ಆಗಮಿಸಿದೆ. ಕೆಲವು ದಿನಗಳ ಹಿಂದೆ ಶೂಟಿಂಗ್‌ಗಾಗಿ ಮುಂಬೈಗೆ ತೆರಳಿದ್ದ ಯಶ್ ಅವರ ವಿಡಿಯೊ ವೈರಲ್ ಆಗಿತ್ತು. ಇದೀಗ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವ ಕಾಲಿವುಡ್ ಸೂಪರ್ ಸ್ಟಾರ್, ಬಹುಭಾಷಾ ನಟಿ ನಯನತಾರಾ (Nayanthara) ಕೂಡ ಮುಂಬೈಗೆ ಬಂದಿಳಿದಿದ್ದಾರೆ.
ಯಶ್‌ಗೆ ನಾಯಕಿಯಾಗಿ ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ನಟಿಸುತ್ತಿದ್ದು, ಆ ಮೂಲಕ ಮೊದಲ ಬಾರಿಗೆ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟಿದ್ದಾರೆ. ಇವರ ಜತೆಗೆ ನಯನತಾರಾ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಆರಂಭದಲ್ಲಿ ಈ ಪಾತ್ರಕ್ಕೆ ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ಅವರನ್ನು ಆಯ್ಕೆ ಮಾಡಲಾಗಿತ್ತು. ಡೇಟ್ ಕ್ಲ್ಯಾಶ್ ಹಿನ್ನೆಲೆಯಲ್ಲಿ ಅವರ ಜಾಗಕ್ಕೆ ನಯನತಾರಾ ಆಗಮಿಸಿದ್ದಾರೆ.
ವೈರಲ್ ವಿಡಿಯೊ ಇಲ್ಲಿದೆ:
#Nayanthara To Join Rocking Star #Yash For Toxic Mumbai Schedule 💥✨ pic.twitter.com/eE7rJTLpxU
— Nayanthara Fans Kerala STATE (NFKWA) (@NFKWA_OFFICIAL) April 2, 2025
ಈ ಸುದ್ದಿಯನ್ನೂ ಓದಿ: Actor Yash: ಮತ್ತೆ ಮುಂಬೈಗೆ ಬಂದಿಳಿದ ಯಶ್; ರಾಕಿ ಭಾಯ್ ನ್ಯೂ ಲುಕ್‌ಗೆ ಫ್ಯಾನ್ಸ್ ಫಿದಾ
ನಯನತಾರಾ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲು ತಮ್ಮ ಮಕ್ಕಳೊಂದಿಗೆ ಮುಂಬೈಗೆ ಬಂದಿಳಿದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ತಮ್ಮ ಅವಳಿ ಮಕ್ಕಳಾದ ಉಯಿರ್ ಮತ್ತು ಉಳಗ್ ಅವರೊಂದಿಗೆ ನಯನತಾರಾ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ. ನಯನತಾರಾ ಯಶ್ ಸಹೋದರಿ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎನ್ನಲಾಗಿದೆ. ಆ ಮೂಲಕ ನಯನತಾರಾ ಸುಮಾರು 15 ವರ್ಷಗಳ ಬಳಿಕ ಸ್ಯಾಂಡಲ್‌ವುಡ್‌ಗೆ ಮರಳಿದ್ದಾರೆ. ಈ ಹಿಂದೆ 2010ರಲ್ಲಿ ತೆರೆಕಂಡ ಉಪೇಂದ್ರ ಅಭಿನಯದ ʼಸೂಪರ್ʼ ಸಿನಿಮಾದಲ್ಲಿ ನಯನತಾರಾ ನಟಿಸಿದ್ದರು. ಅದಾಗ್ಯೂ ʼಟಾಕ್ಸಿಕ್ʼ ಚಿತ್ರದಲ್ಲಿ ನಯನತಾರಾ ನಟಿಸುತ್ತಿರುವ ಬಗ್ಗೆ ಅಧಿಕೃತ ಪ್ರಕಟಣೆ ಇನ್ನಷ್ಟೇ ಹೊರಬರಬೇಕಿದೆ.
ಇನ್ನು ಈ ಆ್ಯಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ಬಾಲಿವುಡ್‌ನ ಹುಮಾ ಖುರೇಷಿ, ತಾರಾ ಸುತಾರಿಯಾ ಮತ್ತು ಅಕ್ಷಯ್ ಓಬೆರಾಯ್ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಗೋವಾದಲ್ಲಿ ನಡೆಯುವ ಡ್ರಗ್ಸ್ ಮಾಫಿಯಾದ ಕಥೆ ಒಳಗೊಂಡಿರುವ ಈ ಸಿನಿನಮಾದ ಟೀಸರ್ ಜನವರಿಯಲ್ಲಿ ತೆರೆಕಂಡು ದಾಖಲೆಯ ವ್ಯೂವ್ಸ್ ಪಡೆದುಕೊಂಡಿದೆ. ಈ ಚಿತ್ರಕ್ಕಾಗಿ ಮೊದಲ ಬಾರಿಗೆ ಹಾಲಿವುಡ್ ಸ್ಟಂಟ್ ಮಾಸ್ಟರ್ ಜೆ.ಜೆ.ಪೆರ‍್ರಿ (J.J.Perry) ಸ್ಯಾಂಡಲ್‌ವುಡ್‌ಗೆ ಕಾಲಿಟ್ಟಿದ್ದಾರೆ. ಹಿಂದೆಂದೂ ಭಾರತೀಯ ಚಿತ್ರರಂಗದಲ್ಲೇ ಕಂಡುಬರದ ರೀತಿಯಲ್ಲಿ, ಮೈ ನವಿರೇಳಿಸುವ ಹಾಗೆ ಅವರು ಸಾಹಸ ದೃಶ್ಯಗಳನ್ನು ಸಂಯೋಜಿಸಿದ್ದಾರೆ ಎನ್ನಲಾಗಿದೆ.
ರಿಲೀಸ್ ಡೇಟ್ ಘೋಷಣೆ
ಕೆಲವು ದಿನಗಳ ಹಿಂದೆಯಷ್ಟೇ ಚಿತ್ರತಂಡ ರಿಲೀಸ್ ಡೇಟ್ ಅನೌನ್ಸ್ ಮಾಡಿದೆ. ಯುಗಾದಿ ಪ್ರಯುಕ್ತ 2026ರ ಮಾ. 19ರಂದು ವಿಶ್ವಾದ್ಯಂತ ಇದು ತೆರೆಗೆ ಬರಲಿದೆ. ಇದು ಕನ್ನಡ, ಇಂಗ್ಲಿಷ್ ಜತೆಗೆ ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂನಲ್ಲೂ ಬಿಡುಗಡೆಯಾಗಲಿದೆ.