ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ರಜನಿಕಾಂತ್‌ ನಟನೆಯ ʻಧರ್ಮನ್‌ʼ ಸಿನಿಮಾಗೆ ಅಚ್ಚರಿಯ ಎಂಟ್ರಿ ಕೊಟ್ಟ ನಯನತಾರಾ; ಫ್ಯಾನ್ಸ್‌ ಅಂತೂ ಫುಲ್‌ ಖುಷ್

Rajinikanth Dharman Movie: ‘ಸೂಪರ್‌ ಸ್ಟಾರ್’ ರಜನಿಕಾಂತ್ ಅಭಿನಯದ ‘ಧರ್ಮನ್’ ಚಿತ್ರಕ್ಕೆ ನಯನತಾರಾ ಅಚ್ಚರಿಯ ಎಂಟ್ರಿ ನೀಡಿದ್ದು, ಅಭಿಮಾನಿಗಳಿಗೆ ಖುಷಿ ನೀಡಿದೆ. ಬರೋಬ್ಬರಿ 5 ವರ್ಷಗಳ ಬಳಿಕ ತೆರೆ ಹಂಚಿಕೊಳ್ಳುತ್ತಿರುವ ಈ ಜೋಡಿಯ ಮುಖಾಮುಖಿ ಪೋಸ್ಟರ್ ಸಂಚಲನ ಸೃಷ್ಟಿಸಿದೆ.

‘ಸೂಪರ್‌ ಸ್ಟಾರ್’ ರಜನಿಕಾಂತ್ ಅಭಿನಯದ ‘ಧರ್ಮನ್’ ಚಿತ್ರಕ್ಕೆ ಇದೀಗ ಮತ್ತಷ್ಟು ಸ್ಟಾರ್ ಕಳೆ ಬಂದಿದೆ. ಚಿತ್ರದಲ್ಲಿ ‘ಲೇಡಿ ಸೂಪರ್‌ಸ್ಟಾರ್’ ನಯನತಾರಾ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿರುವುದಾಗಿ ಚಿತ್ರತಂಡ ಅಧಿಕೃತವಾಗಿ ಪ್ರಕಟಿಸಿದೆ. ಕತ್ತಲೆಯ ಕಾರಿಡಾರ್‌ನಲ್ಲಿ ರಜನಿಕಾಂತ್ ಹಾಗೂ ನಯನತಾರಾ ಮುಖಾಮುಖಿಯಾಗಿ ಗಂಭೀರವಾಗಿ ನಿಂತಿರುವ ಆಕರ್ಷಕ ಪೋಸ್ಟರ್‌ ಅನ್ನು ಚಿತ್ರತಂಡ ಹಂಚಿಕೊಂಡಿದ್ದು, "ದಿ ಔರಾ ಈಸ್ ಡಬಲ್" ಎಂಬ ಅಡಿಬರಹದೊಂದಿಗೆ ನಯನತಾರಾ ಅವರನ್ನು ಚಿತ್ರತಂಡಕ್ಕೆ ಸ್ವಾಗತಿಸಿದೆ.

ಐದು ವರ್ಷಗಳ ನಂತರ ಒಟ್ಟಿಗೆ ನಟನೆ

ಈ ಬಗ್ಗೆ ಟ್ವಿಟರ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ನಯನತಾರಾ, "ಒನ್ ಆ್ಯಂಡ್ ಓನ್ಲಿ ಸೂಪರ್‌ಸ್ಟಾರ್ ಜೊತೆಗೆ ಮುಂದಿನ ಹಾದಿ" ಎಂದು ಬರೆದುಕೊಳ್ಳುವ ಮೂಲಕ ತಮ್ಮ ಸಂತಸವನ್ನು ವ್ಯಕ್ತಪಡಿಸಿದ್ದು, ಅಭಿಮಾನಿಗಳ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದೆ. ‘ಧರ್ಮನ್’ ಮೂಲಕ ರಜನಿಕಾಂತ್ ಮತ್ತು ನಯನತಾರಾ ಬರೋಬ್ಬರಿ 5 ವರ್ಷಗಳ ನಂತರ ಮತ್ತೆ ಬೆಳ್ಳಿಪರದೆಯ ಮೇಲೆ ಒಟ್ಟಿಗೆ ಕಾಣಿಸಿಕೊಳ್ಳುತ್ತಿದೆ.

ಶ್ರೀಲೀಲಾ ಕೂಡ ನಟಿಸುತ್ತಿದ್ದಾರಾ?

ಇವರಿಬ್ಬರು 2021ರಲ್ಲಿ ಬಿಡುಗಡೆಯಾಗಿದ್ದ ‘ಅಣ್ಣಾತ್ತೆ’ ಚಿತ್ರದಲ್ಲಿ ತೆರೆ ಹಂಚಿಕೊಂಡಿದ್ದರು. ‘ಚಂದ್ರಮುಖಿ’, ‘ದರ್ಬಾರ್’ ಹಾಗೂ ‘ಅಣ್ಣಾತ್ತೆ’ ಚಿತ್ರಗಳ ಬಳಿಕ ಈ ಜೋಡಿ ಮತ್ತೊಮ್ಮೆ ಒಂದಾಗುತ್ತಿರುವುದು ಚಿತ್ರದ ಮೇಲಿನ ನಿರೀಕ್ಷೆಯನ್ನು ಇಮ್ಮಡಿಗೊಳಿಸಿದೆ. ಈ ಚಿತ್ರದಲ್ಲಿ ನಯನತಾರಾ ಅವರೊಂದಿಗೆ ಸಿಮ್ರಾನ್ ಹಾಗೂ ರಾಶಿ ಖನ್ನಾ ಕೂಡ ಪ್ರಮುಖ ಪೋಷಕ ಪಾತ್ರಗಳಲ್ಲಿ ಬಣ್ಣಹಚ್ಚುತ್ತಿದ್ದು, ನಟಿ ಶ್ರೀಲೀಲಾ ಕೂಡ ಚಿತ್ರತಂಡವನ್ನು ಸೇರಿಕೊಂಡಿದ್ದಾರೆ ಎಂಬ ಸುದ್ದಿಗಳು ದಟ್ಟವಾಗಿವೆ.

ಮೂವರು ನಿರ್ದೇಶಕರ ಬದಲಾವಣೆ

ಅಂದಹಾಗೆ, ಅಶ್ವತ್ ಮಾರಿಮುತ್ತು ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ಧರ್ಮನ್’ ಚಿತ್ರವು ಸೆಟ್ಟೇರುವ ಮುನ್ನವೇ ನಿರ್ದೇಶಕರ ಬದಲಾವಣೆಯ ಕಾರಣಕ್ಕೆ ಸಾಕಷ್ಟು ಸದ್ದು ಮಾಡಿತ್ತು. ಈ ಹಿಂದೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಸ್ವತಃ ರಜನಿಕಾಂತ್ ಅವರೇ ಈ ವಿಷಯವನ್ನು ಬಹಿರಂಗಪಡಿಸಿದ್ದರು. ಮೊದಲು ಕೆ.ಎಸ್. ರವಿಕುಮಾರ್ ಅವರೊಂದಿಗೆ ಸಿನಿಮಾ ಮಾಡಲು ಯೋಜಿಸಲಾಗಿತ್ತು. ಅದು ಸಾಧ್ಯವಾಗದಿದ್ದಾಗ ಸುಂದರ್ ಸಿ ಅವರನ್ನು ಸಂಪರ್ಕಿಸಲಾಯಿತಾದರೂ, ಅವರ ಇತರೆ ಪ್ರಾಜೆಕ್ಟ್‌ಗಳ ವಿಳಂಬದಿಂದಾಗಿ ಅವರು ಹೊರಗುಳಿದರು. ನಂತರ ಸಿಬಿ ಚಕ್ರವರ್ತಿ ಅವರ ನಿರ್ದೇಶನದಲ್ಲಿ ಚಿತ್ರ ಮಾಡಲು ನಿರ್ಧರಿಸಲಾಗಿತ್ತು.

Rajinikanth-Kamal Haasan: ಬರೋಬ್ಬರಿ 4 ದಶಕಗಳ ಬಳಿಕ ತೆರೆಮೇಲೆ ಒಂದಾಗಲಿದ್ದಾರೆ ರಜನಿಕಾಂತ್‌-ಕಮಲ್‌ ಹಾಸನ್‌

ಅಶ್ವತ್ ಮಾರಿಮುತ್ತುಗೆ ಚಾನ್ಸ್

ಈ ಪ್ರಾಜೆಕ್ಟ್ ಕುರಿತು ಮಾತನಾಡಿದ್ದ ರಜನಿಕಾಂತ್, "ಸಿಬಿ ಚಕ್ರವರ್ತಿ ಅವರ ಕಥೆ ತುಂಬಾ ಚೆನ್ನಾಗಿತ್ತು. ಆದರೆ ಅದು ಪರಮಾಣು ವಿಜ್ಞಾನಿ ಹಾಗೂ ಪರಮಾಣು ಶಸ್ತ್ರಾಸ್ತ್ರಗಳ ಸುತ್ತ ಸಾಗುವ ಅತ್ಯಂತ ಸೂಕ್ಷ್ಮ ವಿಷಯವಾಗಿತ್ತು. ಅಷ್ಟೇ ಅಲ್ಲದೆ ಚಿತ್ರೀಕರಣವನ್ನು ಅಫ್ಘಾನಿಸ್ತಾನ ಮತ್ತು ರಷ್ಯಾದಲ್ಲಿ ನಡೆಸಬೇಕಿತ್ತು. ಈ ಯೋಜನೆಗೆ ಹೆಚ್ಚು ಸಮಯ ಹಿಡಿಯುವ ಸಾಧ್ಯತೆ ಇದ್ದಿದ್ದರಿಂದ ಅದನ್ನು ಮುಂದೂಡಿ, ಅಂತಿಮವಾಗಿ ಯುವ ಪ್ರತಿಭೆ ಅಶ್ವತ್ ಮಾರಿಮುತ್ತು ಅವರಿಗೆ ನಿರ್ದೇಶನದ ಜವಾಬ್ದಾರಿ ವಹಿಸಲಾಯಿತು" ಎಂದು ವಿವರಿಸಿದ್ದರು.

ಕಮಲ್ ಹಾಸನ್ ಅವರ ಪ್ರತಿಷ್ಠಿತ ‘ರಾಜ್ ಕಮಲ್ ಫಿಲ್ಮ್ಸ್ ಇಂಟರ್‌ನ್ಯಾಷನಲ್’ ಬ್ಯಾನರ್ ಅಡಿಯಲ್ಲಿ ಅತ್ಯಂತ ಅದ್ಧೂರಿಯಾಗಿ ‘ಧರ್ಮನ್’ ನಿರ್ಮಾಣವಾಗುತ್ತಿದ್ದು, ಈಗಾಗಲೇ ಹಲವು ಹಂತಗಳ ಚಿತ್ರೀಕರಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಈ ಚಿತ್ರವು 2027ರ ಆರಂಭದಲ್ಲಿ ವಿಶ್ವದಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಈ ನಡುವೆ ನಯನತಾರಾ ಅವರ ಮತ್ತೊಂದು ನಿರೀಕ್ಷಿತ ಚಿತ್ರ ‘ಮೂಕುತಿ ಅಮ್ಮನ್ 2’ ನವೆಂಬರ್ 6 ರಂದು ತೆರೆಕಾಣಲು ಸಜ್ಜಾಗಿದ್ದು, ಈ ಚಿತ್ರದಲ್ಲೂ ನಯನ್‌ ಮತ್ತೆ ದೇವತೆಯ ಪಾತ್ರದಲ್ಲೇ ಪ್ರೇಕ್ಷಕರನ್ನು ರಂಜಿಸಲಿದ್ದಾರೆ.