ನಟಿ ನಿತ್ಯಾ ಮೆನನ್ (Nithya Menonon) ಇತ್ತೀಚೆಗೆ ಪಾಡ್ಕಾಸ್ಟ್ವೊಂದರಲ್ಲಿ ತಮ್ಮ ವೈಯಕ್ತಿಕ ಜೀವನ ಹಾಗೂ ಸಂಬಂಧಗಳ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ. ತಮ್ಮ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ಮತ್ತು ವ್ಯಕ್ತಿತ್ವದ ಬೆಳವಣಿಗೆಯನ್ನು ಕುಂಠಿತಗೊಳಿಸುವ ಸಂಬಂಧಗಳಿಂದ ತಾವು ಹೊರಬಂದಿರುವುದಾಗಿ ಅವರು ಹೇಳಿದ್ದಾರೆ. ಈ ಹಿಂದೆ ತಮ್ಮ ಹೇಳಿಕೆಗಳಿಂದಾಗಿ ತಮಗೆ ಮದುವೆಯಾಗಲು(Marriage)ಇಷ್ಟವಿಲ್ಲ ಎಂಬ ಅಭಿಪ್ರಾಯ ಮೂಡುತ್ತದೆ. ಆದರೆ ತಾನು ಮದುವೆಗೆ ವಿರೋಧಿಯಲ್ಲ, ಬದಲಿಗೆ ಸೂಕ್ತ ವ್ಯಕ್ತಿಗಾಗಿ ಕಾಯುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.
ಸಂಬಂಧಗಳ ಅನುಭವ
ಗೋಬಿನಾಥ್ ಅವರ ಪಾಡ್ಕಾಸ್ಟ್ನಲ್ಲಿ ಮಾತನಾಡಿದ ನಿತ್ಯಾ ಮೆನನ್, ತಮ್ಮ ಹಿಂದಿನ ಸಂಬಂಧಗಳ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಕೆಲವು ಸಂಬಂಧಗಳು ವ್ಯಕ್ತಿಯ ಸ್ವಾತಂತ್ರ್ಯವನ್ನೇ ಕಸಿದುಕೊಳ್ಳುತ್ತವೆ. ಅಂತಹ ಸಂಬಂಧಗಳಲ್ಲಿ ಮುಂದುವರಿಯುವುದು ಕಷ್ಟವಾಗಿದ್ದರೂ, ತಾನು ಅವುಗಳಿಂದ ಹೊರಬರುವ ನಿರ್ಧಾರ ಕೈಗೊಂಡಿದ್ದೇನೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Bigg Boss Kannada 13: ಬಿಗ್ ಬಾಸ್ ಮನೆಯಲ್ಲಿ ಈ ಗುಳ್ಳೆನರಿಯ ಆಟ ಶುರು! ಸ್ಪರ್ಧಿಗಳಿಗೆ ಢವ ಢವ
"ಸಂಬಂಧಗಳಲ್ಲಿ ವ್ಯಕ್ತಿಯ ಆತ್ಮಸ್ವಾತಂತ್ರ್ಯಕ್ಕೆ ಧಕ್ಕೆ ಉಂಟಾದಾಗ, ಅದನ್ನು ಸಹಿಸಿಕೊಳ್ಳುವುದು ಕಷ್ಟ. ಆದರೆ ಅಂತಹ ಸಂದರ್ಭಗಳಲ್ಲಿ ನಾನು ಸಂಬಂಧದಿಂದ ಹೊರಬರುವುದನ್ನೇ ಆಯ್ಕೆ ಮಾಡಿಕೊಂಡಿದ್ದೇನೆ. ಕೆಲವರ ಪ್ರಭಾವ ಎಷ್ಟಿರುತ್ತದೆ ಎಂದರೆ, ನಮ್ಮಿಂದ ಬೆಳೆಯಲು ಸಾಧ್ಯವಾಗುವುದಿಲ್ಲ, ಸ್ವತಂತ್ರವಾಗಿ ಉಸಿರಾಡಲೂ ಸಾಧ್ಯವಾಗುವುದಿಲ್ಲ. ಕೆಲವರು ತಮ್ಮ ಸಂಗಾತಿಗೆ ಯಾವುದೇ ಸ್ವಾತಂತ್ರ್ಯ ನೀಡುವುದಿಲ್ಲ. ಇದು ಭಯದಿಂದ ತೆಗೆದುಕೊಂಡ ನಿರ್ಧಾರವಲ್ಲ, ಬದಲಾಗಿ ಜೀವನದ ಅನುಭವದಿಂದ ಬಂದ ಅರಿವು" ಎಂದು ನಿತ್ಯಾ ಹೇಳಿದ್ದಾರೆ.
ಇಂತಹ ಸಂಬಂಧಗಳಿಂದ ಹೊರಬರುವುದು ಸುಲಭದ ನಿರ್ಧಾರವಾಗಿರಲಿಲ್ಲ. ಆದರೆ ಸಂಬಂಧದಿಂದ ಹೊರಬಂದ ಬಳಿಕ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಹೊಸ ಜಗತ್ತಿಗೆ ಕಾಲಿಟ್ಟ ಅನುಭವವಾಗುತ್ತದೆ. ನಮ್ಮಿಷ್ಟದಂತೆ ಬದುಕಬಹುದು ಎಂಬ ಸ್ವಾತಂತ್ರ್ಯದ ಭಾವನೆ ಮೂಡುತ್ತದೆ ಎಂದು ಅವರು ವಿವರಿಸಿದ್ದಾರೆ.
ಮದುವೆಯ ವಿಚಾರವಾಗಿ ಮಾತನಾಡಿದ ನಿತ್ಯಾ, "ನಾನು ಮದುವೆಯಾಗಲು ಇಷ್ಟಪಡುವುದಿಲ್ಲ ಎಂದು ಎಲ್ಲಿಯೂ ಹೇಳಿಲ್ಲ. ನನಗೂ ಮದುವೆಯಾಗುವ ಆಸೆಯಿದೆ. ಆದರೆ ನನಗೆ ಯಾವ ರೀತಿಯ ಸಂಬಂಧ ಬೇಕು ಎಂಬುದು ಸ್ಪಷ್ಟವಾಗಿ ತಿಳಿದಿದೆ. ನನ್ನ ಗುರಿ ಕೇವಲ ಮದುವೆಯಾಗುವುದಲ್ಲ, ಬದಲಾಗಿ ಸರಿಯಾದ ವ್ಯಕ್ತಿಯೊಂದಿಗೆ ಉತ್ತಮ ಸಂಬಂಧ ಹೊಂದುವುದಾಗಿದೆ. ನನಗೆ ಸ್ವಾತಂತ್ರ್ಯ ನೀಡುವ, ನನ್ನ ವ್ಯಕ್ತಿತ್ವವನ್ನು ಗೌರವಿಸುವ ವ್ಯಕ್ತಿ ಸಿಕ್ಕರೆ ಮಾತ್ರ ಮದುವೆಯಾಗುತ್ತೇನೆ. ಅಂತಹ ವ್ಯಕ್ತಿ ಸಿಗದಿದ್ದರೆ ಮದುವೆಯಾಗುವುದಿಲ್ಲ" ಎಂದು ಹೇಳಿದ್ದಾರೆ.
ತಮ್ಮ ಹಿಂದಿನ ಸಂಬಂಧಗಳಲ್ಲಿ ತಾವು ಅನುಭವಿಸಿದ ಪರಿಸ್ಥಿತಿಯನ್ನು ವಿವರಿಸಿದ ಅವರು, ತಮ್ಮನ್ನು ಯಾರೋ ನಿಯಂತ್ರಿಸುತ್ತಿದ್ದಾರೆ, ಹಿಡಿದಿಟ್ಟುಕೊಂಡಿದ್ದಾರೆ ಮತ್ತು ತಮ್ಮ ಸ್ವಾತಂತ್ರ್ಯವನ್ನು ನಿರ್ಬಂಧಿಸುತ್ತಿದ್ದಾರೆ ಎಂಬ ಭಾವನೆ ಮೂಡುತ್ತಿತ್ತು ಎಂದಿದ್ದಾರೆ. ಇಂತಹ ಸಂಬಂಧಗಳು ತಮ್ಮನ್ನು ಮಾನಸಿಕವಾಗಿ ಕುಗ್ಗಿಸಿ, ದುರ್ಬಲರನ್ನಾಗಿ ಮಾಡುತ್ತಿದ್ದವು ಎಂದು ನಿತ್ಯಾ ತಿಳಿಸಿದ್ದಾರೆ.
ನಿತ್ಯಾ ಮೆನನ್ ಕೈಯಲ್ಲಿರುವ ಹೊಸ ಸಿನಿಮಾ
ಕಳೆದ ವರ್ಷ ನಿತ್ಯಾ ಮೆನನ್ ಅವರು ನಿರ್ದೇಶಕಿ ಕೃತಿಕಾ ಉದಯನಿಧಿ ಅವರ 'ಕಾದಲಿಕ್ಕ ನೆರೆಮಿಲ್ಲೈ' ಚಿತ್ರದಲ್ಲಿ ರವಿ ಮೋಹನ್ ಜೊತೆ ನಟಿಸಿದ್ದರು. ಇದಲ್ಲದೆ ಪಾಂಡಿರಾಜ್ ನಿರ್ದೇಶನದ 'ತಲೈವನ್ ತಲೈವಿ' ಚಿತ್ರದಲ್ಲಿ ವಿಜಯ್ ಸೇತುಪತಿ ಜೊತೆ ಕಾಣಿಸಿಕೊಂಡಿದ್ದರು. ಧನುಷ್ ನಿರ್ದೇಶನದ 'ಇಡ್ಲಿ ಕಡೈ' ಚಿತ್ರದಲ್ಲಿಯೂ ನಟಿಸಿದ್ದರು.
ಇದೀಗ ನಿತ್ಯಾ ಮೆನನ್ ಅವರ ಮುಂದಿನ ಹಿಂದಿ ಸಿನಿಮಾ 'ಮಿಸ್ಟರ್ & ಮಿಸೆಸ್ ಗ್ರೇ' ಬಿಡುಗಡೆಗೆ ಸಿದ್ಧವಾಗುತ್ತಿದೆ. ಅಂಕುರ್ ಪಜ್ನಿ ಮತ್ತು ವಿಶಾಲ್ ರಂಜನ್ ಮಿಶ್ರಾ ನಿರ್ದೇಶನದ ಈ ಚಿತ್ರದಲ್ಲಿ ವಿವೇಕ್ ಒಬೆರಾಯ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ಇದನ್ನೂ ಓದಿ: Oscars 2027: ಆಸ್ಕರ್ ಅಂಗಳದಲ್ಲಿ ಭಾರತದ ಮರಾಠಿ ಸಿನಿಮಾ! 104 ಚಿತ್ರಗಳ ನಡುವೆ ಪೈಪೋಟಿ
ವಿವಾಹೇತರ ಸಂಬಂಧ ಮತ್ತು ಆರ್ಥಿಕ ವಂಚನೆಯ ನಡುವೆ ಸಿಲುಕಿಕೊಳ್ಳುವ ವ್ಯಕ್ತಿಯ ಕಥೆಯನ್ನು ಈ ಸಿನಿಮಾ ಒಳಗೊಂಡಿದೆ. ಚಿತ್ರವು ಡಿಸೆಂಬರ್ 11ರಂದು ತೆರೆಗೆ ಬರುವ ನಿರೀಕ್ಷೆಯಿದೆ.