ʻಸೂಪರ್ ಸ್ಟಾರ್ʼ ರಜನಿಕಾಂತ್ ಅಭಿನಯದ 'ಪಡಯಪ್ಪ' ಸಿನಿಮಾವನ್ನು ಇಂದು (ಡಿ.12) ರೀ- ರಿಲೀಸ್ ಮಾಡಲಾಗಿದೆ. ಇಂದು ಹುಟ್ಟುಹಬ್ಬ ಇರುವ ಕಾರಣ, ಈ ಚಿತ್ರವನ್ನು ರಿಲೀಸ್ ಮಾಡಲಾಗಿದ್ದು, ಅಲ್ಲದೆ ಅವರ ವೃತ್ತಿ ಬದುಕಿಗೆ 50 ವರ್ಷ ತುಂಬಿರುವ ಕಾರಣ, ಈ ಚಿತ್ರವನ್ನು ಅದ್ದೂರಿಯಾಗಿ ಮರು ಬಿಡುಗಡೆ ಮಾಡಲಾಗಿದೆ. ತಮಿಳುನಾಡಿನಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ.
ಬೆಂಗಳೂರಿನಲ್ಲಿ ಹೇಗಿದೆ ಹವಾ?
'ಪಡಯಪ್ಪ' ಸಿನಿಮಾವು ಬೆಂಗಳೂರಿನಲ್ಲೂ ಮರುಬಿಡುಗಡೆ ಆಗಿದ್ದು, 100+ ಶೋಗಳು ಸಿಕ್ಕಿವೆ. ಮೊದಲು ದಿನವೇ 50ಕ್ಕೂ ಅಧಿಕ ಶೋಗಳು ಹೌಸ್‌ಫುಲ್ ಆಗಿವೆ. ಶನಿವಾರಕ್ಕೂ ಇದೇ ರೀತಿಯ ಬುಕ್ಕಿಂಗ್ ಇದೆ. ಮರುಬಿಡುಗಡೆಯಾದ ತಮಿಳು ಸಿನಿಮಾವೊಂದಕ್ಕೆ ಈ ರೀತಿಯ ರೆಸ್ಪಾನ್ಸ್ ಸಿಕ್ಕಿರುವುದು ಅಚ್ಚರಿ ಉಂಟು ಮಾಡಿದೆ. ಈ ಹಿಂದೆ ದಳಪತಿ ವಿಜಯ್ ಅವರ ಗಿಲ್ಲಿ ಸಿನಿಮಾಕ್ಕೆ ಈ ಪ್ರಮಾಣದ ರೆಸ್ಪಾನ್ಸ್ ಸಿಕ್ಕಿತ್ತು. ಇದೀಗ ಅದನ್ನು ಪಡಯಪ್ಪ ಬೀಟ್ ಮಾಡಿದೆ.
ಒಟಿಟಿ ಹಕ್ಕುಗಳನ್ನು ಸೇಲ್ ಮಾಡಿಲ್ಲ ರಜನಿಕಾಂತ್
ಪಡಯಪ್ಪ ಸಿನಿಮಾ ಆಗುವುದಕ್ಕೆ ಮುಖ್ಯ ಕಾರಣ, ರಜನಿಕಾಂತ್. ಈ ಚಿತ್ರಕ್ಕೆ ಕಥೆ ಬರೆದು, ಸ್ನೇಹಿತರ ಹೆಸರಿನಲ್ಲಿ ಹಣ ಹಾಕಿದ್ದು ಸ್ವತಃ ರಜನಿಕಾಂತ್. ಇದನ್ನು ನಿರ್ದೇಶನ ಮಾಡಿರುವುದು ಕೆ ಎಸ್ ರವಿಕುಮಾರ್. ಈ ಚಿತ್ರವನ್ನು ಯಾವುದೇ ಒಟಿಟಿ ಅಥವಾ ಯೂಟ್ಯೂಬ್‌ನಲ್ಲಿ ನೋಡಲು ಸಾಧ್ಯವಿಲ್ಲ. ಯಾಕೆಂದರೆ, ರಜನಿಕಾಂತ್ ಅವರು ಈ ಚಿತ್ರದ ಡಿಜಿಟಲ್ ಹಕ್ಕುಗಳನ್ನು ಮಾರಾಟ ಮಾಡಿಲ್ಲ.
ಈ ಬಗ್ಗೆ ರಜನಿಕಾಂತ್ ಅವರು ಮಾತನಾಡಿದ್ದರು. "ಅನೇಕ ಮನವಿಗಳ ಹೊರತಾಗಿಯೂ ನಾನು ಯಾವುದೇ ಟೆಲಿಕಾಸ್ಟ್ ಪ್ಲೇಯರ್‌ಗೆ ಪಡಯಪ್ಪ ಚಿತ್ರದ ಹಕ್ಕುಗಳನ್ನು ನೀಡಿಲ್ಲ. ಜನರು ಅದನ್ನು ದೊಡ್ಡ ಪರದೆಯ ಮೇಲೆ ಮಾತ್ರ ನೋಡಬೇಕೆಂದು ನಾನು ಬಯಸಿದ್ದೆ. ಚಿತ್ರದ ನಿರ್ಮಾಪಕ ಮತ್ತು ಲೇಖಕನಾಗಿ, ನನ್ನ ಸಿನಿಮಾ ಜೀವನದ 50ನೇ ವರ್ಷದಲ್ಲಿ, ಇದು ಅಭಿಮಾನಿಗಳಿಗೆ ಭಾರತದಲ್ಲಿಯೇ ಅತಿ ದೊಡ್ಡ ಉತ್ಸವ ಆಗಿರಬೇಕು" ಎಂದು ರಜನಿಕಾಂತ್ ಹೇಳಿದ್ದಾರೆ. ಅಂದಹಾಗೆ, 1999ರ ಏಪ್ರಿಲ್ 10ರಂದು ಈ ಸಿನಿಮಾವು ತೆರೆಗೆ ಬಂದಿತ್ತು.
ಅಂದು ಪಡಯಪ್ಪ ಅತ್ಯಧಿಕ ಗಳಿಕೆ ಮಾಡಿದ ತಮಿಳು ಚಿತ್ರವಾಗಿತ್ತು. ಈ ಸಿನಿಮಾವು 86 ಚಿತ್ರಮಂದಿರಗಳಲ್ಲಿ 100 ದಿನಗಳ ಕಾಲ ಪ್ರದರ್ಶನಗೊಂಡಿತ್ತು. ತೆಲುಗಿನಲ್ಲಿ ʻನರಸಿಂಹʼ ಎಂಬ ಶೀರ್ಷಿಕೆಯಡಿಯಲ್ಲಿ ಡಬ್ ಆಗಿ, ಅಲ್ಲಿಯೂ 49 ಚಿತ್ರಮಂದಿರಗಳಲ್ಲಿ 50 ದಿನಗಳ ಕಾಲ ಪ್ರದರ್ಶನಗೊಂಡಿತ್ತು.
26 ವರ್ಷಗಳ ಹಿಂದೆ ಈ ಸಿನಿಮಾವು 55+ ಕೋಟಿ ರೂ. ಕಮಾಯಿ ಮಾಡಿತ್ತಂತೆ. ಅದರಲ್ಲಿ ತಮಿಳುನಾಡಿನಲ್ಲೇ 28+ ಕೋಟಿ ರೂ. ಹಣ ಹರಿದುಬಂದಿತ್ತು. ಆಂಧ್ರ ಪ್ರದೇಶದಿಂದ 12+ ಕೋಟಿ ರೂ. ಸಿಕ್ಕರೆ, ಕೇರಳ ಮತ್ತು ಕರ್ನಾಟಕದಿಂದ ತಲಾ 2+ ಕೋಟಿ ರೂ. ಸಿಕ್ಕಿತ್ತು. ವಿದೇಶದಿಂದಲೇ 10+ ಕೋಟಿ ರೂ. ಹಣ ಗಳಿಕೆ ಆಗಿತ್ತು ಎಂಬ ಮಾಹಿತಿ ಇದೆ. ಅಂದಿನ 55 ಕೋಟಿ ರೂ.ಗಳ ಇಂದಿನ ಅಂದಾಜು ಮೌಲ್ಯ 250 ಕೋಟಿ ರೂ. ಎನ್ನಬಹುದು.