Ranveer Singh: ರಣವೀರ್ ಸಿಂಗ್ ಚಿತ್ರದಲ್ಲಿ ಪಾಕ್ ಧ್ವಜ; ʼಧುರಂಧರ್ʼ ವಿರುದ್ಧ ನೆಟ್ಟಿಗರ ಆಕ್ರೋಶ
Dhurandhar Movie: ಸದ್ಯ ಬಾಲಿವುಡ್‌ನ ಗಮನ ಸೆಳೆದ ರಣವೀರ್ ಸಿಂಗ್ ನಟನೆಯ-ಆದಿತ್ಯ ಧರ್ ನಿರ್ದೇಶನದ ʼಧುರಂಧರ್ʼ ಚಿತ್ರ ವಿವಾದ ಹುಟ್ಟು ಹಾಕಿದೆ. ಚಿತ್ರದ ಸೆಟ್‌ನ ಫೋಟೊ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಅದರಲ್ಲಿ ಪಾಕಿಸ್ತಾನದ ಧ್ವಜ ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಪರ ವಿರೋಧ ಚರ್ಚೆ ನಡೆಯುತ್ತಿದೆ.


ಮುಂಬೈ: ರಣವೀರ್ ಸಿಂಗ್ (Ranveer Singh)-ಬಾಲಿವುಡ್‌ನ ಬಹು ಬೇಡಿಕೆಯ ನಟ. ಯಾವುದೇ ಪಾತ್ರವಾದರೂ ಲೀಲಾಜಾಲವಾಗಿ ಅಭಿನಯಿಸುವ ಮೂಲಕ ತಮ್ಮದೇ ಆದ ಛಾಪು ಮೂಡಿಸಿರುವ ಅವರು ಸದ್ಯ ಬಿಟೌನ್‌ನಲ್ಲಿ ಭಾರಿ ನಿರೀಕ್ಷೆ ಹುಟ್ಟು ಹಾಕಿರುವ ʼಧುರಂಧರ್ʼ (Dhurandhar) ಚಿತ್ರದಲ್ಲಿ ನಟಿಸುತ್ತಿದ್ದಾರೆ. ರಣವೀರ್ ಸಿಂಗ್ ಅವರ ಜನ್ಮದಿನದ ಪ್ರಯುಕ್ತ ಜು. 6ರಂದು ʼಧುರಂಧರ್ʼ ಸಿನಿಮಾದ ಫಸ್ಟ್ ಲುಕ್ ಬಿಡುಗಡೆಗೊಂಡಿದ್ದು, ಅವರ ರಗಡ್ ಅವತಾರಕ್ಕೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಹಿಂದೆಂದೂ ಕಾಣಿಸಿಕೊಳ್ಳದ ಗೆಟಪ್‌ನಲ್ಲಿ ಅವರು ಅಬ್ಬರಿಸಿದ್ದಾರೆ. ಹೀಗೆ ಸಾಕಷ್ಟು ಕುತೂಹಲ, ನಿರೀಕ್ಷೆ ಹುಟ್ಟು ಹಾಕಿರುವ ಈ ಸಿನಿಮಾ ಇದೀಗ ವಿವಾದದ ಕೇಂದ್ರಬಿಂದು ಎನಿಸಿಕೊಂಡಿದೆ. ಇದುವರೆಗೆ ಚಿತ್ರದ ಮೇಕಿಂಗ್, ಪೋಸ್ಟರ್, ರಣವೀರ್ ಸಿಂಗ್ ಬಗ್ಗೆ ಮೆಚ್ಚುಗೆ ಸೂಚಿಸಿದವರೆಲ್ಲ ಕಿಡಿ ಕಾರಲು ಆರಂಭಿಸಿದ್ದಾರೆ. ಅದಕ್ಕೆ ಕಾರಣವಾಗಿದ್ದು ಪಾಕಿಸ್ತಾನದ ಧ್ವಜ.
ಹೌದು, ಇತ್ತೀಚೆಗೆ ಚಿತ್ರದ ಶೂಟಿಂಗ್ ಸೆಟ್‌ನ ಚಿತ್ರವೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡತೊಡಗಿದೆ. ಉದ್ದ ಕೂದಲು ಬಿಟ್ಟುಕೊಂಡಿರುವ ರಣವೀರ್ ಸಿಂಗ್ ನಡೆದುಕೊಂಡು ಬರುವ ದೃಶ್ಯ ಇದಾಗಿದ್ದು, ಹಿನ್ನೆಲೆಯಲ್ಲಿ ಪಾಕಿಸ್ತಾನದ ಧ್ವಜ ಹಾರಾಡುತ್ತಿರುವುದು ಕಂಡು ಬಂದಿದೆ.
'Shameful': Pakistan Flag On Sets Of Ranveer Singh's #Dhurandhar pic.twitter.com/xUiw5NaQMc
— ✌️ (@Apna_Tollywood) July 16, 2025
ಈ ಸುದ್ದಿಯನ್ನೂ ಓದಿ: Dhurandhar: ಧುರಂಧರ್ ಚಿತ್ರದ ಫಸ್ಟ್ ಲುಕ್ ಔಟ್- ರಣವೀರ್ ಸಿಂಗ್ ಉಗ್ರಾವತಾರಕ್ಕೆ ಫ್ಯಾನ್ಸ್ ಫುಲ್ ಫಿದಾ!
ಪರ-ವಿರೋಧ ಚರ್ಚೆ
ಸದ್ಯ ಈ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಬಿಸಿ ಬಿಸಿ ಚರ್ಚೆಗೆ ಗ್ರಾಸವಾಗಿದೆ. ಪರ-ವಿರೋಧ ಅಭಿಪ್ರಾಯ ವ್ಯಕ್ತವಾಗುತ್ತಿದೆ. ʼಧುರಂಧರ್ʼ ಚಿತ್ರದ ಸೆಟ್‌ನಲ್ಲಿ ಪಾಕ್ ಧ್ವಜ ಏಕೆ ಬಂತು? ಇದು ನಾಚಿಕೆಗೇಡು ಎಂದು ಕೆಲವರು ಹೇಳಿದರೆ, ಇನ್ನು ಕೆಲವರು ಇದು ಪಾಕಿಸ್ತಾನ ಕುರಿತಾದ ಕಥೆ. ಹೀಗಾಗಿ ಸಾಂದರ್ಭಿಕವಾಗಿ ಆ ದೇಶದ ಧ್ವಜ ಬಳಸಿದರೆ ತಪ್ಪೇನು? ಎಂದಿದ್ದಾರೆ.
ನೆಟ್ಟಿಗರಿಂದ ಆಕ್ರೋಶ
ʼʼಪಾಕಿಸ್ತಾನದ ಧ್ವಜ ಯಾಕೆ ಬಳಸುತ್ತಿದ್ದೀರಿ? ಇದಕ್ಕೆ ಯಾರು ಅನುಮತಿ ಕೊಟ್ಟರು? ನಾಚಿಕೆಗೇಡುʼʼ ಎಂದು ಒಬ್ಬರು ತಿಳಿಸಿದ್ದಾರೆ. ಇನ್ನೊಬ್ಬರು, ʼʼಬಾಲಿವುಡ್ ಸಂಪೂರ್ಣವಾಗಿ ಹಾಳಾಗಿದೆʼʼ ಎಂದು ಬರೆದುಕೊಂಡಿದ್ದಾರೆ. ಇದನ್ನು ಕೂಡಲೇ ತೆಗೆದು ಹಾಕುವಂತೆ ಕೆಲವರು ಆಗ್ರಹಿಸಿದ್ದಾರೆ.
ಸಮರ್ಥಿಸಿಕೊಂಡ ರಣವೀರ್ ಸಿಂಗ್ ಫ್ಯಾನ್ಸ್
ಇತ್ತ ರಣವೀರ್ ಸಿಂಗ್ ಫ್ಯಾನ್ಸ್ ಇದನ್ನು ಸಮರ್ಥಿಸಿಕೊಂಡಿದ್ದಾರೆ. ಭಾರತೀಯ ಯೋಧರ ಪರಾಕ್ರಮವನ್ನು ಎತ್ತಿ ತೋರಿಸುವ ಚಿತ್ರ ಇದಾಗಿದ್ದು, ಪಾಕಿಸ್ತಾನದ ಹಿನ್ನೆಲೆಯಲ್ಲಿ ಕಥೆ ಸಾಗುವುದರಿಂದ ಧ್ವಜ ಸಾಂದರ್ಭಿಕವಾಗಿ ಬಳಸಲಾಗಿದೆ ಎಂದಿದ್ದಾರೆ. ʼʼಇದು ಪಾಕಿಸ್ತಾನದಲ್ಲಿ ನಡೆಯುವ ಕಥೆಯನ್ನು ವಿವರಿಸುವ ದೃಶ್ಯ. ಇದರಲ್ಲೇನು ತಪ್ಪಿದೆ?ʼʼ ಎಂದು ಒಬ್ಬರು ಪ್ರಶ್ನಿಸಿದ್ದಾರೆ. ʼʼಪಾಕಿಸ್ತಾನದ ಧ್ವಜ ಇರಿಸುವ ಮೂಲಕ ಕಥೆ ನಡೆಯುತ್ತಿರುವುದು ಪಾಕ್ ನೆಲದಲ್ಲಿ ಎನ್ನುವುದನ್ನು ಪ್ರೇಕ್ಷಕರಿಗೆ ಮನದಟ್ಟು ಮಾಡಲಾಗುತ್ತದೆ. ಹೇಗೂ ಪಾಕ್‌ನಲ್ಲಿ ಶೂಟಿಂಗ್ ನಡೆಸಲು ಸಾಧ್ಯವಾಗುವುದಿಲ್ಲವಲ್ಲʼʼ ಎಂದು ಮತ್ತೊಬ್ಬರು ತಿಳಿಸಿದ್ದಾರೆ. ಒಟ್ಟಿನಲ್ಲಿ ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ.
ಮೂಲಗಳ ಪ್ರಕಾರ ʼಧುರಂಧರ್ʼ ಚಿತ್ರ ನೈಜ ಘಟನೆಯನ್ನು ಆಧರಿಸಿದೆ. ರಣವೀರ್ ಸಿಂಗ್ ಈ ಚಿತ್ರದಲ್ಲಿ ಭಾರತದ ಅಂಡರ್ ಕವರ್ ಸ್ಪೈ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಪಾಕಿಸ್ತಾನದಲ್ಲಿ ಕಾರ್ಯಾಚರಿಸುತ್ತಿರುವ ಭಾರತದ ವಿಶೇಷ ಏಜೆಂಟ್ ಪಾತ್ರ ಇದಾಗಿದ್ದು, ಈ ಕಾರಣಕ್ಕೆ ಅಲ್ಲಿನ ಧ್ವಜ ಬಳಸಲಾಗಿದೆ ಎನ್ನಲಾಗುತ್ತಿದೆ. ಈ ಬಗ್ಗೆ ಚಿತ್ರತಂಡ ಅಧಿಕೃತವಾಗಿ ಯಾವುದೇ ಹೇಳಿಕೆ ನೀಡಿಲ್ಲ.
ಆದಿತ್ಯ ಧರ್ ನಿರ್ದೇಶನದ ಈ ಸಿನಿಮಾದಲ್ಲಿ ಆರ್.ಮಾಧವನ್, ಸಂಜಯ್ ದತ್, ಅಕ್ಷಯ್ ಖನ್ನ, ಅರ್ಜುನ್ ರಾಂಪಾಲ್ ಮತ್ತಿತರರು ನಟಿಸುತ್ತಿದ್ದಾರೆ. ಡಿ. 5ರಂದು ʼಧುರಂಧರ್ʼ ತೆರೆಗೆ ಬರಲಿದೆ.