‘ಪವಿತ್ರ ಬಂಧನ’ ಧಾರಾವಾಹಿ ಖ್ಯಾತಿಯ ನಟಿ ಅಮೂಲ್ಯ ಭಾರದ್ವಾಜ್ ಅವರು ಸದ್ದಿಲ್ಲದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ದಿಢೀರನೇ ತಮ್ಮ ಮದುವೆ ಸುದ್ದಿ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಅಚ್ಚರಿಯ ಸಿಹಿ ಸುದ್ದಿ ನೀಡಿದ್ದಾರೆ. ತಮ್ಮ ಸಹಜ ನಟನೆ ಮತ್ತು ಮುಗ್ಧ ಕಣ್ಣೋಟದ ಮೂಲಕವೇ ಕಿರುತೆರೆ ವೀಕ್ಷಕರ ಮನಗೆದ್ದಿರುವ ಮೈಸೂರು ಮೂಲದ ಬೆಡಗಿ ಅಮೂಲ್ಯ, ಹರ್ಷಿತ್ ಪೋರೆಚಾ ಎಂಬುವವರ ಜೊತೆ ಸಪ್ತಪದಿ ತುಳಿದು ಹೊಸ ಜೀವನ ಆರಂಭಿಸಿದ್ದಾರೆ.
ಪ್ರೀತಿಯ ಹೆಂಡತಿಯಾಗಿಯೇ ಇರುತ್ತೇನೆ
ಕುಟುಂಬಸ್ಥರು ಮತ್ತು ಆಪ್ತ ಬಂಧು-ಮಿತ್ರರ ಸಮ್ಮುಖದಲ್ಲಿ ಸಂಪ್ರದಾಯಬದ್ಧವಾಗಿ, ಅದ್ಧೂರಿಯಾಗಿ ಈ ಶುಭ ವಿವಾಹ ನೆರವೇರಿದೆ. ಮದುವೆಯ ಸುಂದರ ಕ್ಷಣಗಳ ಫೋಟೊಗಳನ್ನು ಅಮೂಲ್ಯ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಮಾಂಗಲ್ಯ ಧಾರಣೆಯ ಸಂಭ್ರಮ ಹಾಗೂ ಪತಿಯೊಂದಿಗಿನ ಮುದ್ದಾದ ಫೋಟೋಗಳನ್ನು ಪೋಸ್ಟ್ ಮಾಡಿರುವ ಅಮೂಲ್ಯ, "ನನ್ನ ಪತಿಯಿಂದಾಗಿಯೇ ನನ್ನ ಜೀವನ ನಾನು ಕಲ್ಪಿಸಿಕೊಂಡಿದ್ದಕ್ಕಿಂತಲೂ ಅತ್ಯಂತ ಸುಂದರ ಹಾಗೂ ಅರ್ಥಪೂರ್ಣವಾಗಿದೆ. ಅವರೊಂದಿಗೆ ಈ ಹೊಸ ಪಯಣವನ್ನು ಸಾಗಿಸುತ್ತಿರುವುದಕ್ಕೆ ನಾನು ಸದಾ ಚಿರಋಣಿ. ನಾನು ಎಂದಿಗೂ ಅವರ ಪ್ರೀತಿಯ ಹೆಂಡತಿಯಾಗಿಯೇ ಇರುತ್ತೇನೆ" ಎಂದು ಭಾವನಾತ್ಮಕ ಸಾಲುಗಳ ಮೂಲಕ ತಮ್ಮ ಸಂತಸವನ್ನು ವ್ಯಕ್ತಪಡಿಸಿದ್ದಾರೆ.
ಪವಿತ್ರಾ ಪಾತ್ರದ ಮೂಲಕದ ಫೇಮಸ್
ಮೂಲತಃ ಮೈಸೂರಿನವರಾದ ಅಮೂಲ್ಯ ಭಾರದ್ವಾಜ್ ಬಿಕಾಂ ಪದವೀಧರೆಯಾಗಿದ್ದು, ಕಿರುತೆರೆಗೆ ಕಾಲಿಟ್ಟಿದ್ದು 'ಪುರಂದರದಾಸ' ಧಾರಾವಾಹಿಯ ಮೂಲಕ. ಈ ಧಾರಾವಾಹಿಯಲ್ಲಿ ಪುರಂದರ ದಾಸರ ಪತ್ನಿಯಾಗಿ ನಟಿಸಿ ವೀಕ್ಷಕರ ಗಮನ ಸೆಳೆದಿದ್ದ ಅವರು, ನಂತರ ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ 'ಬೃಂದಾವನ' ಧಾರಾವಾಹಿಯಲ್ಲಿ ನಾಯಕಿಯಾಗಿ ಕಾಣಿಸಿಕೊಂಡು ಮನೆಮಾತಾಗಿದ್ದರು. ಪ್ರಸ್ತುತ ಕಲರ್ಸ್ ಕನ್ನಡದಲ್ಲೇ ಪ್ರಸಾರವಾಗುತ್ತಿರುವ 'ಪವಿತ್ರ ಬಂಧನ' ಧಾರಾವಾಹಿಯಲ್ಲಿ ಪ್ರಮುಖ ಪಾತ್ರವಾದ 'ಪವಿತ್ರಾ' ಆಗಿ ಅಭಿನಯಿಸುತ್ತಿದ್ದು, ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಅಮೂಲ್ಯ ಹಂಚಿಕೊಂಡ ಪೋಸ್ಟ್
ಅಮೂಲ್ಯ ಪತಿ ಹರ್ಷಿತ್ ಯಾರು?
ಸದ್ಯ ಅಮೂಲ್ಯ ಅವರ ಮದುವೆಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿವೆ. ತಮ್ಮ ಪತಿ ಹರ್ಷಿತ್ ಅವರ ಹಿನ್ನೆಲೆ ಹಾಗೂ ವೃತ್ತಿ ಬದುಕಿನ ಕುರಿತು ಅಮೂಲ್ಯ ಯಾವುದೇ ಹೆಚ್ಚಿನ ವಿವರಗಳನ್ನು ಸಾರ್ವಜನಿಕವಾಗಿ ಬಿಟ್ಟುಕೊಟ್ಟಿಲ್ಲವಾದರೂ, ಈ ಸಡನ್ ಶುಭ ಸುದ್ದಿಯನ್ನು ನೋಡಿ ಅಭಿಮಾನಿಗಳು ಮತ್ತು ಕಿರುತೆರೆಯ ಸಹ ಕಲಾವಿದರು ಸಂತಸಗೊಂಡಿದ್ದಾರೆ. ನೆಚ್ಚಿನ ನಟಿಯ ಹೊಸ ಬಾಳಿಗೆ ಸೋಷಿಯಲ್ ಮೀಡಿಯಾದಲ್ಲಿ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.