ಮೆಗಾ ಪವರ್ ಸ್ಟಾರ್ ರಾಮ್ ಚರಣ್ ನಟನೆಯ ಬಹುನಿರೀಕ್ಷಿತ ಚಿತ್ರ 'ಪೆದ್ದಿ'. ಬುಚ್ಚಿಬಾಬು ಸನಾ ನಿರ್ದೇಶನದ ಈ ವಿಲೇಜ್ ಸ್ಪೋರ್ಟ್ಸ್ ಡ್ರಾಮಾ ಸಿನಿಮಾ ಜೂನ್ 4 ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿದೆ. ಈ ಹಿನ್ನೆಲೆಯಲ್ಲಿ ಚಿತ್ರದ ಪ್ರಚಾರ ಕಾರ್ಯಕ್ರಮಗಳು ಭರ್ಜರಿಯಾಗಿ ನಡೆಯುತ್ತಿವೆ. ಈಗಾಗಲೇ ಮುಂಬೈನಲ್ಲಿ ಟ್ರೇಲರ್ ಲಾಂಚ್ ಈವೆಂಟ್ ಅದ್ಧೂರಿಯಾಗಿ ನಡೆದಿದ್ದು, ಆ ಬಳಿಕ ಭೋಪಾಲ್‌ನಲ್ಲಿ ಅದ್ದೂರಿ ಕಾನ್ಸರ್ಟ್ ಮಾಡಲಾಗದೆ. ಈ ಮಧ್ಯೆ ಬೆಂಗಳೂರಿಗೆ ಆಗಮಿಸಿದ್ದ ನಟ ರಾಮ್ ಚರಣ್, ಸಿಲಿಕಾನ್ ಸಿಟಿಯಲ್ಲಿ ಪ್ರಚಾರ ಮಾಡಲಾಗಿದೆ.
ಎಲ್ಲರ ಕಣ್ಣು ಕುಕ್ಕಿದ ಬಾಡಿಗಾರ್ಡ್
ಸದ್ಯ ಬೆಂಗಳೂರಿಗೆ ಬಂದಿದ್ದ ರಾಮ್ ಚರಣ್ ಅವರ ಜೊತೆ ಕಾಣಿಸಿಕೊಂಡಿದ್ದ ಬಾಡಿಗಾರ್ಡ್ ಎಲ್ಲರ ಕಣ್ಣು ಕುಕ್ಕಿದ್ದಾರೆ. ರಾಮ್ ಚರಣ್ ಬೆನ್ನಿಗೇ ರಕ್ಷಣಾ ಕವಚದಂತೆ ನಿಲ್ಲುತ್ತಿರುವ ಈ ಬೀಸ್ಟ್ ಯಾರಪ್ಪ ಅಂತ ಹುಡುಕಾಡುತ್ತಿದ್ದಾರೆ. ಅಂದಹಾಗೆ, ಈ ಬಾಡಿಗಾರ್ಡ್ ಹೆಸರು ಕೆವಿನ್ ಕುಂಟ. ಸದ್ಯ 'ಪೆದ್ದಿ' ಈವೆಂಟ್‌ಗಳ ಫೋಟೋ ಮತ್ತು ವಿಡಿಯೋಗಳಲ್ಲಿ ರಾಮ್ ಚರಣ್ ಜೊತೆಗೆ ಈ ಬಾಡಿಗಾರ್ಡ್ ಕೆವಿನ್ ಕುಂಟ ಕೂಡ ಸಖತ್ ವೈರಲ್ ಆಗುತ್ತಿದ್ದಾರೆ.
ಯಾರು ಈ ಕೆವಿನ್ ಕುಂಟ?
ಆಫ್ರಿಕಾ ಖಂಡದ ಗ್ಯಾಂಬಿಯಾ ದೇಶದವರಾದ ಕೆವಿನ್, ಪ್ರಸ್ತುತ ಇಟಲಿಯಲ್ಲಿ ಪ್ರೊಫೆಷನಲ್ ಮಿಕ್ಸ್‌ಡ್ ಮಾರ್ಷಲ್ ಆರ್ಟ್ಸ್ (MMA) ಫೈಟರ್ ಆಗಿ ಗುರುತಿಸಿಕೊಂಡಿದ್ದಾರೆ. ಅಲ್ಲಿ ನ್ಯಾಷನಲ್ ಮಿಡಲ್‌ವೇಯ್ಟ್ MMA ಚಾಂಪಿಯನ್ ಆಗಿ ದಾಖಲೆ ಬರೆದಿರುವ ಕೆವಿನ್‌ಗೆ ಬಾಡಿಗಾರ್ಡ್ ಆಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರಿ ಡಿಮಾಂಡ್ ಇದೆ. ಮುಖ್ಯವಾಗಿ ಇಂಟರ್ನ್ಯಾಷನಲ್ ಸೆಲೆಬ್ರಿಟಿಗಳು ಮತ್ತು ವಿವಿಐಪಿ (VVIP) ಗಳಿಗೆ ಅತ್ಯುನ್ನತ ಮಟ್ಟದ ಭದ್ರತೆ ನೀಡಲು ಇವರನ್ನು ನೇಮಿಸಿಕೊಳ್ಳಲಾಗುತ್ತದೆ.
ಕೆವಿನ್‌ಗೆ ಸಿಗ್ತಿದೆ ಕೈತುಂಬಾ ಸಂಬಳ
ಅಂದಹಾಗೆ, ಕೆವಿನ್ ಕುಂಟ ಅವರಿಗೆ ರಾಮ್ ಚರಣ್ ಕಡೆಯಿಂದ ದಿನಕ್ಕೆ 2 ಲಕ್ಷ ರೂ. ಸಂಬಳ ಸಿಕ್ತಿದೆ ಎಂಬ ಮಾಹಿತಿ ಇದೆ. ಈಚೆಗೆ ಮುಂಬೈ ನಡೆದ ಈವೆಂಟ್‌ನಲ್ಲಿ ಸಾವಿರಾರು ಅಭಿಮಾನಿಗಳು ಮತ್ತು ಮಾಧ್ಯಮ ಪ್ರತಿನಿಧಿಗಳು ರಾಮ್ ಚರಣ್ ಮೇಲೆ ಒಟ್ಟಿಗೆ ಮುಗಿಬಿದ್ದಾಗ ಕೆವಿನ್ ಪರಿಸ್ಥಿತಿಯನ್ನು ನಿಯಂತ್ರಿಸಿದ ರೀತಿ ಹೈಲೈಟ್ ಆಗಿತ್ತು.
ಇವ್ರೇ ನೋಡಿ ರಾಮ್ ಚರಣ್ ಬಾಡಿಗಾರ್ಡ್ ಕೆವಿನ್ ಕುಂಟ
ಇನ್ನು, ಬುಚ್ಚಿ ಬಾಬು ಸನಾ ನಿರ್ದೇಶನ ಮಾಡಿರುವ ಪೆದ್ದಿ ಸಿನಿಮಾವು ತೆಲುಗು, ಕನ್ನಡ ಸೇರಿದಂತೆ ಬಹುಭಾಷೆಯಲ್ಲಿ ಜೂನ್ 4ರಂದು ತೆರೆಗೆ ಬರಲಿದೆ. ರಾಮ್ ಚರಣ್ ಜೊತೆಗೆ ಜಾನ್ವಿ ಕಪೂರ್, ಶಿವರಾಜ್‌ಕುಮಾರ್, ಜಗಪತಿ ಬಾಬು, ದ್ಯುವೆಂದು ಶರ್ಮಾ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಐಟಂ ಸಾಂಗ್‌ನಲ್ಲಿ ನಟಿ ಶ್ರುತಿ ಹಾಸನ್ ಹೆಜ್ಜೆ ಹಾಕಿರುವುದು ವಿಶೇಷ.