ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ನಟನೆಯ 'ದಿ ರಾಜಾ ಸಾಬ್' ಸಿನಿಮಾವು ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದೆ. ಆದರೂ ಬಾಕ್ಸ್ ಆಫೀಸ್‌ನಲ್ಲಿ ತನ್ನ ಅಧಿಪತ್ಯವನ್ನು ಮುಂದುವರಿಸಿದೆ. ಬಿಡುಗಡೆಯಾದ ದಿನದಿಂದಲೇ ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿರುವ ನಿರ್ದೇಶಕ ಮಾರುತಿ ಅವರ ಈ ಹಾರರ್-ಕಾಮಿಡಿ ಫ್ಯಾಂಟಸಿ ಸಿನಿಮಾ, ಮಿಶ್ರ ಪ್ರತಿಕ್ರಿಯೆಗಳ ನಡುವೆಯೂ ಗಳಿಕೆಯಲ್ಲಿ ಸಮಾಧಾನಕರ ಫಲಿತಾಂಶ ನೀಡಿದೆ.
ಮೂರು ದಿನದ ಒಟ್ಟು ಗಳಿಕೆ
ಸಿನಿಮಾ ಬಿಡುಗಡೆಯಾದ ಮೂರು ದಿನಗಳಲ್ಲಿ ಜಾಗತಿಕವಾಗಿ ಅಂದಾಜು 183 ಕೋಟಿ ರೂಪಾಯಿ ಗಳಿಸಿದೆ ಎಂದು ಚಿತ್ರತಂಡ ತಿಳಿಸಿದೆ. "ಹಬ್ಬದ ಉಡುಗೊರೆಯಾಗಿ ಬಂದ ಸಿನಿಮಾ ಈಗ ಬಾಕ್ಸ್ ಆಫೀಸ್‌ನಲ್ಲಿ ಹಂಗಾಮಾ ಸೃಷ್ಟಿಸಿದೆ" ಎಂದು ತಂಡ ಟ್ವೀಟ್ ಮಾಡಿದ್ದು, ಸಂಕ್ರಾಂತಿ ರಜೆಗಳು ಈಗಷ್ಟೇ ಆರಂಭವಾಗುತ್ತಿರುವುದರಿಂದ ಪ್ರೇಕ್ಷಕರ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ. ಆದರೆ 3ನೇ ದಿನದ ಭಾನುವಾರದ ಗಳಿಕೆಯು ತೀರಾ ಡಲ್ ಆಗಿತ್ತು ಎಂಬುದು ಇಂಡಸ್ಟ್ರೀ ವಲಯದ ಮಾತು. ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ಮೊದಲ ದಿನ 63 ಕೋಟಿ ರೂ. ಗಳಿಸಿದ್ದ ಈ ಸಿನಿಮಾ ಮೂರನೇ ದಿನ 14 ಕೋಟಿ ರೂ. ಗಳಿಸಿರುವ ಬಗ್ಗೆ ಮಾಹಿತಿ ಇದೆ.
ʻದಿ ರಾಜಾ ಸಾಬ್ʼ ಕಲೆಕ್ಷನ್‌ನಲ್ಲಿ ಕುಸಿತ; ಪ್ರಭಾಸ್ ಸಿನಿಮಾಗೆ 2ನೇ ದಿನ ಸಿಕ್ಕ ರೆಸ್ಪಾನ್ಸ್ ಹೇಗಿದೆ ನೋಡಿ?
ಅಭಿಮಾನಿಗಳ ಪಾಲಿನ ಹಬ್ಬ
ಪ್ರಭಾಸ್ ಸಿನಿಮಾ ಬಿಡುಗಡೆಯಾಗುತ್ತಿದೆ ಎಂದರೆ ಅದು ಕೇವಲ ಅಭಿಮಾನಿಗಳಿಗೆ ಮಾತ್ರವಲ್ಲ, ಇಡೀ ಚಿತ್ರರಂಗಕ್ಕೆ ದೊಡ್ಡ ಹಬ್ಬ. ಅದರಲ್ಲೂ 'ಕಲ್ಕಿ 2898 AD' ನಂತಹ ಬೃಹತ್ ಯಶಸ್ಸಿನ ನಂತರ ಬಂದ ಸಿನಿಮಾವಾದ್ದರಿಂದ 'ದಿ ರಾಜಾ ಸಾಬ್' ಮೇಲಿನ ನಿರೀಕ್ಷೆಗಳು ಜೋರಾಗಿದ್ದವು. ಮಾರುತಿ ಅವರು ಪ್ರಭಾಸ್ ಅವರನ್ನು ಎಷ್ಟು ಸ್ಟೈಲಿಶ್ ಆಗಿ ಮತ್ತು ಕಾಮಿಡಿ ಟೈಮಿಂಗ್‌ನೊಂದಿಗೆ ತೋರಿಸುತ್ತಾರೆ ಎಂಬ ಕುತೂಹಲ ಹೈಪ್ ಹೆಚ್ಚಿಸಿತ್ತು. ಆದರೆ ಅಂದುಕೊಂಡಮಟ್ಟಕ್ಕೆ ಪ್ರಭಾಸ್ ಅವರ ಈ ಸಿನಿಮಾ ಮೂಡಿಬಂದಿಲ್ಲ ಎಂಬುದು ಕೂಡ ಅಷ್ಟೇ ನಿಜ!
ಈ ಚಿತ್ರತಂಡವೇ ಮೊದಲ ದಿನವೇ ಜಾಗತಿಕವಾಗಿ 112 ಕೋಟಿ ರೂ. ಗಳಿಕೆ ಆಗಿದೆ ಎಂದು ಹೇಳಿಕೊಂಡಿತ್ತು. ಈಗ ಮೂರು ದಿನಕ್ಕೆ 183 ಕೋಟಿ ರೂ. ಗಳಿಕೆ ಆಗಿದೆ ಎಂದು ಹೇಳಿಕೊಂಡಿದೆ. ಅಂದರೆ, ಜಾಗತಿಕವಾಗಿ 2 ಮತ್ತು 3ನೇ ದಿನಗಳ ಒಟ್ಟು ಗಳಿಕೆ 70 ಕೋಟಿ ರೂ. ಎಂದಾಯ್ತು. 3ನೇ ದಿನಕ್ಕೆ 183 ಕೋಟಿ ರೂ. ಗಳಿಸಿರುವ 'ದಿ ರಾಜಾ ಸಾಬ್', 4ನೇ ದಿನಕ್ಕೆ 200 ಕೋಟಿ ಕ್ಲಬ್‌ಗೆ ಲಗ್ಗೆ ಇಡಲಿದೆಯಾ ಎಂಬ ಕುತೂಹಲ ಹೆಚ್ಚಾಗಿದೆ.
ಭಾನುವಾರವೇ ಕೊಂಚ ಇಳಿಕೆ ಕಂಡಿರುವ ರಾಜಾ ಸಾಬ್ ಗಳಿಕೆ ಸೋಮವಾರಕ್ಕೆ (4ನೇ ದಿನ) ಇನ್ನೂ ಕುಸಿತ ಕಂಡಿದೆಯಾ ಎಂಬ ಲೆಕ್ಕಾಚಾರದ ಮಾತುಗಳು ಕೇಳಿಬಂದಿವೆ. ಕಾರಣ, ಇಂದು (ಜ.12) ಚಿರಂಜೀವಿ ಅವರ ಮನ ಶಂಕರ ವರಪ್ರಸಾದ್ ಗಾರು ಸಿನಿಮಾ ತೆರೆಕಂಡಿದೆ. ನಂತರ ಇನ್ನೂ ಮೂರು ತೆಲುಗು ಸಿನಿಮಾಗಳು ಸಾಲಾಗಿ ತೆರೆಗೆ ಬರಲಿದೆ. ಹೀಗಿರುವಾಗ ರಾಜಾ ಸಾಬ್ ಹೆಚ್ಚು ಗಳಿಕೆ ಮಾಡುವುದು ಅನುಮಾನ ಎನ್ನಲಾಗಿದೆ. ಸುಮಾರು 400 ಕೋಟಿ ರೂ. ಬಜೆಟ್‌ನಲ್ಲಿ ತಯಾರಾಗಿರುವ ಈ ಸಿನಿಮಾವು ಸುಮಾರು 700 ಕೋಟಿ ರೂ. ಗಳಿಕೆಯನ್ನಾದರೂ ಮಾಡಬೇಕಿತ್ತು. ಅಷ್ಟೊಂದು ದೊಡ್ಡ ಬಾಚಿಕೊಳ್ಳುವುದು ಕಷ್ಟ ಎಂಬ ಮಾತುಗಳು ಕೇಳಿಬಂದಿವೆ. ನಿರ್ಮಾಪಕರಿಗೆ ಈ ಸಿನಿಮಾದಿಂದ ದೊಡ್ಡಮಟ್ಟದ ಲಾಭವಂತೂ ಸಿಗುವುದು ಡೌಟು ಎನ್ನಲಾಗುತ್ತಿದೆ.