ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಟ್ರಾಕ್ಟರ್ ಡ್ರೈವರ್ ಈಗ ಹೀರೋ; 'ದೇವಸಸ್ಯ' ಚಿತ್ರದಲ್ಲಿ ಸಿದ್ದಿ ಸಂಸ್ಕೃತಿ ಅನಾವರಣ, ಐದು ಭಾಷೆಗಳಲ್ಲಿ ಸಿನಿಮಾ ರಿಲೀಸ್‌!

Devasasya Movie: ಶಿರಸಿ ಸುತ್ತಮುತ್ತಲಿನ ಸಿದ್ದಿ ಜನಾಂಗದ ಸಂಸ್ಕೃತಿ, ಆಚಾರ-ವಿಚಾರಗಳನ್ನು ಮತ್ತು ಅಪರೂಪದ ಸಂಜೀವಿನಿ ಗಿಡದ ಸುತ್ತಲಿನ ಕಥೆಯನ್ನು ಹೇಳುವ ಚಿತ್ರವೇ ʻದೇವಸಸ್ಯʼ. ಕಾರ್ತಿಕ್ ಭಟ್ ನಿರ್ದೇಶನದ ಈ ಚಿತ್ರವನ್ನು ಕನ್ನಡ ಸೇರಿದಂತೆ 5 ಭಾಷೆಗಳಲ್ಲಿ ಬಿಡುಗಡೆ ಮಾಡಲು ಸಿದ್ಧತೆ ನಡೆದಿದೆ. ಟ್ರಾಕ್ಟರ್ ಡ್ರೈವರ್ ಆಗಿದ್ದ ಸಿದ್ದಿ ಸಮುದಾಯದ ಸೆಲ್ವಿನ್ ದೇಸಾಯಿ ಪ್ರಮುಖ ಪಾತ್ರದಲ್ಲಿ ನಟಿಸಿರುವುದು ವಿಶೇಷ.

ಶಿರಸಿ ಸುತ್ತಾಮುತ್ತ ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿರುವ ಸಿದ್ದಿ ಜನಾಂಗದ ಸಂಸ್ಕೃತಿ, ಆಚಾರ, ವಿಚಾರಗಳ ಕುರಿತು‌ ನಿರ್ದೇಶಕ ಕಾರ್ತಿಕ್ ಭಟ್ ಒಂದು ಸಿನಿಮಾ ಮಾಡುತ್ತಿದ್ದಾರೆ. ಅದೇ, ʻದೇವಸಸ್ಯʼ. ಅಪರೂಪದ ಗಿಡವೊಂದರ ಸುತ್ತ ಈ ಚಿತ್ರಕಥೆ ಸಾಗಲಿರುವುದು ವಿಶೇಷ. ಈ ಚಿತ್ರವನ್ನು ಕನ್ನಡ, ತೆಲುಗು, ಹಿಂದಿ ಸೇರಿದಂತೆ 5 ಭಾಷೆಗಳಲ್ಲಿ ರಿಲೀಸ್‌ ಮಾಡಲು ಚಿತ್ರತಂಡ ಪ್ಲ್ಯಾನ್‌ ಮಾಡಿಕೊಂಡಿದೆ. ಈ ಸಿನಿಮಾದ ಕೊನೆಯ ದಿನದ ಚಿತ್ರೀಕರಣ ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ಪುಟ್ಟಣ್ಣ ಕಣಗಾಲ್ ಸ್ಟುಡಿಯೋದಲ್ಲಿ ಈಚೆಗೆ ನಡೆದಿದೆ.

ಹಳ್ಳಿ ಸೆಟ್‌ನಲ್ಲಿ 93 ದಿನ ಶೂಟಿಂಗ್‌

ಅನಂತ ಫಿಲಂಸ್ ಅಡಿ ಅನಂತಮೂರ್ತಿ ಎಂ ಹೆಗಡೆ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಕಾರ್ತಿಕ್ ಭಟ್ ಅವರೇ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. 1995ರ ಕಾಲಘಟ್ಟದಲ್ಲಿ ನಡೆಯುವ ಮಣ್ಣಿನ ಕಥೆಯನ್ನು ಈ ಚಿತ್ರದಲ್ಲಿ ಹೇಳಲಾಗುತ್ತಿದೆಯಂತೆ. ಸಿದ್ಧಿ ಸಮುದಾಯದ ಯುವಕ ಸೆಲ್ವಿನ್ ದೇಸಾಯಿ ಈ ಚಿತ್ರದ ಪ್ರಮುಖ ಪಾತ್ರಧಾರಿ ಎಂಬುದು ವಿಶೇಷ. ಸಿನಿಮಾಕ್ಕೆ ಬರುವುದಕ್ಕೂ ಮುನ್ನ ಅವರು ಹುಟ್ಟೂರಿನಲ್ಲಿ ಅವರು ಟ್ರ್ಯಾಕ್ಟರ್‌ ಡ್ರೈವರ್‌ ಆಗಿ ಕೆಲಸ ಮಾಡುತ್ತಿದ್ದರಂತೆ.

ಶಿರಸಿಯ ಎಂ.ಎಂ ಮಹಾವಿದ್ಯಾಲಯದಲ್ಲಿ ʼಕ್ರಿಮಿನಲ್‌ʼ ಶೂಟಿಂಗ್‌; ಧ್ರುವ, ರಚ್ಚುಗೆ ಸನ್ಮಾನ

ಸೆಲ್ವಿನ್‌ಗೆ 2 ವರ್ಷ ತರಬೇತಿ ನೀಡಿ, ನಂತರ ನಟನೆಗೆ ಕರೆದುಕೊಂಡು ಬಂದಿದ್ದಾರೆ. ರಂಗಪ್ರತಿಭೆ ಆಹಾನ್‌ಗೌಡ ಮತ್ತು ಬಿಂಬಿಕಾ ಜೆ ರಾವ್ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಜೊತೆಗೆ 150ಕ್ಕೂ ಹೆಚ್ಚು ಸಿದ್ಧಿ ಕಲಾವಿದರು ದೇವಸಸ್ಯ ಸಿನಿಮಾದಲ್ಲಿ ನಟಿಸಿರುವುದು ವಿಶೇಷ. ಈ ಚಿತ್ರಕ್ಕಾಗಿಯೇ 1995ರ ಕಾಲಘಟ್ಟಕ್ಕೆ ಹೊಂದಿಕೆಯಾಗುವಂತಹ ಹಳ್ಳಿಯ ಸೆಟ್ ಹಾಕಿ, ಅದರಲ್ಲಿ ಸುಮಾರು 93 ದಿನಗಳ ಕಾಲ ಶೂಟಿಂಗ್‌ ಮಾಡಲಾಗಿದೆ.

ಉತ್ತರ ಕನ್ನಡದಲ್ಲೇ ಬಹುತೇಕ ಚಿತ್ರೀಕರಣ

"ನನಗೆ ಆರಂಭದಿಂದಲೂ ಸಿನಿಮಾ ಬಗ್ಗೆ ತುಂಬಾ ಆಸಕ್ತಿ ಇತ್ತು. ಅದೇ ಕಾರಣಕ್ಕೆ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದೇನೆ. ಕಳೆದ ಮಾರ್ಚ್‌ನಲ್ಲಿ ಶೂಟಿಂಗ್ ಆರಂಭಿಸಿ, ಉತ್ತರ ಕನ್ನಡದಲ್ಲೇ ಬಹುತೇಕ ಚಿತ್ರೀಕರಣ ನಡೆಸಿದ್ದೇವೆ, ಸುಮಾರು 150ರಂದ 200 ಜನ ಈ ಚಿತ್ರದಲ್ಲಿ ಕೆಲಸ ಮಾಡಿದ್ದಾರೆ. ಅದ್ಭುತವಾದ, ವಿಶೇಷವಾದ ಸಂಜೀವಿನಿ ಗಿಡವೇ ದೇವಸಸ್ಯ. ಇಂತಹ ವಿಶಿಷ್ಟವಾದ ಸ್ಕ್ರಿಪ್ಟ್ ಸಿಕ್ಕಿರೋದು ನಮ್ಮ ಅದೃಷ್ಟ. ನಿರ್ದೇಶಕರು ಈ ಚಿತ್ರಕ್ಕಾಗಿ 3 ವರ್ಷ ಹಗಲಿರುಳು ಕಷ್ಟಪಟ್ಟಿದ್ದಾರೆ. ಚಿತ್ರಕ್ಕಾಗಿಯೇ 30 ವರ್ಷಗಳ ಹಿಂದಿದ್ದ ಊರನ್ನು ಮರುಸೃಷ್ಠಿ ಮಾಡಿದ್ದೇವೆ" ಎನ್ನುತ್ತಾರೆ ನಿರ್ಮಾಪಕ ಅನಂತಮೂರ್ತಿ ಹೆಗಡೆ.

ಎರಡು ಊರುಗಳ ಮಧ್ಯೆ ನಡೆಯುವ ಕಥೆ

"ನನಗೆ ಮೊದಲಿಂದಲೂ ಸಿನಿಮಾ ಎಂದರೆ ಹುಚ್ಚು. ಕೆಲ ಸಿನಿಮಾ ಹಾಗೂ ಸೀರಿಯಲ್‌ಗಳಿಗೆ ಬರಹಗಾರನಾಗಿ ಕೆಲಸ ಮಾಡಿ, ಈಗ ಮೊದಲ ಬಾರಿಗೆ ನಿರ್ದೇಶನಕ್ಕೆ ಕೈ ಹಾಕಿದ್ದೇನೆ. ಶಿರಸಿ ಸುತ್ತಮುತ್ತಲಿನ ಕಾಡು ಪ್ರದೇಶಗಳಲ್ಲಿ ವಾಸಿಸುವ ಸಿದ್ದಿ ಸಮುದಾಯದ ಬಗ್ಗೆ ಈ ಚಿತ್ರದಲ್ಲಿ ಹೇಳಿದ್ದೇವೆ. ಇದು ಬರೀ ಕಥೆಯಲ್ಲ, ಹೊಸ ಜಗತ್ತು, ಉತ್ತರ ಕನ್ನಡದಲ್ಲಿ ಮಲೆನಾಡು, ಬಯಲುಸೀಮೆ ಎರಡೂ ಇದೆ. ಇಲ್ಲಿ ಎರಡು ಊರುಗಳ ಮಧ್ಯೆ ನಡೆಯುವ ಕಥೆ ಇದೆ" ಎನ್ನುತ್ತಾರೆ ನಿರ್ದೇಶಕ ಕಾರ್ತಿಕ್ ಭಟ್.

ನಟ ಅಹಾನ್ ಇದರಲ್ಲಿ ಕುರ್ಮುಷ್ಠ ಎಂಬ ಪಾತ್ರವನ್ನು ಮಾಡಿದರೆ, ಬಿಂಬಿಕಾ ಈ ಚಿತ್ರದಲ್ಲಿ ಮಾತಂಗಿ ಎಂಬ ಸಿದ್ದಿ ಜನಾಂಗದ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ಯಶವಂತ್ ಅವರ ಛಾಯಾಗ್ರಹಣ, ಹರಿ ಅಜಯ್ ಅವರ ಸಂಗೀತ ಸಂಯೋಜನೆ, ಕೆಜಿಎಫ್. ಶ್ರೀಕಾಂತ್ ಅವರ ಸಂಕಲನ ಈ ಚಿತ್ರಕ್ಕಿದೆ. ʻಕಾಂತಾರʼ ಖ್ಯಾತಿಯ ಮಿಥುನ್‌ಸಿಂಗ್ ಅವರ ಸಾಹಸ ನಿರ್ದೇಶನ, ಈ ಚಿತ್ರದಲ್ಲಿ ಪ್ರಕಾಶ್ ಬೆಳವಾಡಿ, ಪ್ರಮೋದ್ ಶೆಟ್ಟಿ, ಅಯ್ಯಪ್ಪ ಶರ್ಮ, ರವಿ ಮೂರೂರು, ಮಂಜುನಾಥ ಹೆಗಡೆ, ಸಲಗ ಖ್ಯಾತಿಯ ಗೀತಾ ಸಿದ್ಧಿ ಇತರರು ನಟಿಸಿದ್ದಾರೆ.