ಬೆಂಗಳೂರಿನಲ್ಲಿ ಜಗತ್ತು ಎಂಬ ಪರಿಕಲ್ಪನೆಯಲ್ಲಿ ಸಿದ್ಧಗೊಂಡಿರುವ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ 17ನೇ ಅವತರಣಿಕೆಗೆ ವೇದಿಕೆ ಸಜ್ಜಾಗಿದ್ದು, ಗುರುವಾರ (ಜ.29) ಸಂಜೆ 5ಕ್ಕೆ ವಿಧಾನಸೌಧದ ಮುಂಭಾಗದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚಿತ್ರೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಉಪ ಮುಖ್ಯಮಂತ್ರಿ ಶ್ರೀ ಡಿ. ಕೆ. ಶಿವಕುಮಾರ್, ವಿಧಾನ ಪರಿಷತ್‍ನ ಸಭಾಪತಿ ಬಸವರಾಜ ಹೊರಟ್ಟಿ, ವಿಧಾನ ಸಭೆಯ ಸಭಾಧ್ಯಕ್ಷ ಯು. ಟಿ. ಖಾದರ್ ಉಪಸ್ಥಿತರಿರಲಿದ್ದಾರೆ.
‘ಪೋರ್ಟ್ ಬ್ಯಾಗೇಜ್’ ಉದ್ಘಾಟನಾ ಸಿನಿಮಾ
ಈ ಬಾರಿಯ ಚಿತ್ರೋತ್ಸವದ ರಾಯಭಾರಿ ಬಹುಭಾಷಾ ನಟ ಪ್ರಕಾಶ್ ರಾಜ್ ಮತ್ತು ʻಕಾಂತಾರ: ಚಾಪ್ಟರ್ 1ʼ ನಟಿ ರುಕ್ಮಿಣಿ ವಸಂತ್ ಅವರು ಅತಿಥಿಗಳಾಗಿ ಭಾಗವಹಿಸಲಿರುವುದು ವಿಶೇಷ. ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ಸಾಧು ಕೋಕಿಲ ಅವರು ಕೂಡ ಸಮಾರಂಭದಲ್ಲಿ ಉಪಸ್ಥಿತರಿರಲಿದ್ದಾರೆ. ಆರಂಭದಲ್ಲಿ ಡಾ. ಜ್ಯೋತ್ಸ್ನಾ ಶ್ರೀಕಾಂತ್ ಅವರ ನೇತೃತ್ವದಲ್ಲಿ 35 ಕಲಾವಿದರಿಂದ ‘ವಿಶ್ವ ಸಂಗೀತ ಸಂಭ್ರಮ’ ಕಾರ್ಯಕ್ರಮ ನಡೆಯಲಿದ್ದು, ರಾತ್ರಿ 8ಕ್ಕೆ ಚಿತ್ರೋತ್ಸವದ ಉದ್ಘಾಟನಾ ವೇದಿಕೆಯಲ್ಲಿ ನೆದರ್‍ಲ್ಯಾಂಡ್ ದೇಶದ ‘ಪೋರ್ಟ್ ಬ್ಯಾಗೇಜ್’ ಸಿನಿಮಾವು ಉದ್ಘಾಟನಾ ಚಿತ್ರವಾಗಿ ಪ್ರದರ್ಶನವಾಗಲಿದೆ.
Cannes 2025: ಕಾನ್ಸ್ ಚಿತ್ರೋತ್ಸವದಲ್ಲಿ ಸೀರೆಯಲ್ಲಿ ಮಿಂಚಿದ ಚಾಂದಿನಿ
ಈ ಬಾರಿಯ ಫಿಲ್ಮ್‌ಫೆಸ್ಟ್ ವಿಶೇಷತೆ
ಜನವರಿ 30ರಿಂದ ಫೆಬ್ರವರಿ 6ರವರೆಗೂ ನಡೆಯಲಿರುವ ಈ ಚಿತ್ರೋತ್ಸವದಲ್ಲಿ 65 ದೇಶಗಳ ಸುಮಾರು 225 ಅತ್ಯುತ್ತಮ ಸಿನಿಮಾಗಳು ಪ್ರದರ್ಶನಗೊಳ್ಳಲಿದ್ದು, ಆಯಾ ದೇಶದ ಸ್ಥಿತಿ-ಗತಿ, ಜನ ಜೀವನ ಮತ್ತು ಸಂಸ್ಕೃತಿಯನ್ನು ಬಿಂಬಿಸಲಿವೆ. ಈ ಚಿತ್ರೋತ್ಸವವನ್ನು ಪ್ರತೀ ವರ್ಷವೂ ಅರ್ಥಪೂರ್ಣವಾದ ಧ್ಯೇಯವಾಕ್ಯದ ಮೂಲಕ ನಡೆಸಲಾಗುತ್ತಿದ್ದು, ಈ ಬಾರಿ ರಾಷ್ಟ್ರಕವಿ ಡಾ. ಜಿ. ಎಸ್. ಶಿವರುದ್ರಪ್ಪ ಅವರ ಪ್ರಸಿದ್ಧ ಗೀತೆಯಾಗಿರುವ ‘ಸ್ತ್ರೀ ಎಂದರೆ ಅಷ್ಟೇ ಸಾಕೆ’ ಎಂಬ ಸಾಲಿನೊಂದಿಗೆ ʻಸ್ತ್ರೀ ಸಂವೇದನೆ, ಸಮಾನತೆಯ ದನಿʼ ಎಂಬ ಟ್ಯಾಗ್ ಲೈನ್ ಹೊಂದಿರುವ ಧ್ಯೇಯವಾಕ್ಯದೊಂದಿಗೆ ನಡೆಸಲಾಗುತ್ತಿದೆ.
ಈ ಬಾರಿಯ ಪ್ರಮುಖ ವಿಭಾಗಗಳು ಮತ್ತು ವಿಶೇಷ ಪ್ರದರ್ಶನಗಳ ಮಾಹಿತಿ:
- ಪ್ರಮುಖ ಸ್ಪರ್ಧಾತ್ಮಕ ಮತ್ತು ಸಾಮಾನ್ಯ ವಿಭಾಗಗಳು
ಏಷಿಯನ್ ಸಿನಿಮಾ ಸ್ಪರ್ಧಾ ವಿಭಾಗ
ಚಿತ್ರ ಭಾರತಿ (ಭಾರತೀಯ ಸಿನಿಮಾ ಸ್ಪರ್ಧಾ ವಿಭಾಗ)
ಕನ್ನಡ ಸಿನಿಮಾ ಸ್ಪರ್ಧಾ ವಿಭಾಗ
ಸಮಕಾಲೀನ ವಿಶ್ವ ಸಿನಿಮಾ (Contemporary World Cinema)
ಕನ್ನಡ ಜನಪ್ರಿಯ ಸಿನಿಮಾ (Kannada Popular Cinema)
ಜೀವನ ಕಥನ ಆಧಾರಿತ ಚಿತ್ರಗಳು (Biopics)
ದೇಶ ಕೇಂದ್ರಿತ ವಿಶೇಷ (Country Focus)
ಭಾರತೀಯ ಉಪಭಾಷಾ ಚಲನಚಿತ್ರಗಳು
ಪುನರಾವಲೋಕನ
Beli Hoo Movie: 16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ: 2 ವಿಭಾಗಗಳಲ್ಲಿ ʼಬೇಲಿ ಹೂʼ ಚಿತ್ರ ಆಯ್ಕೆ
2. ವಿಶೇಷ ಪ್ರದರ್ಶನಗಳು:
ವರನಟ ಪದ್ಮಭೂಷಣ ಡಾ. ರಾಜಕುಮಾರ್ ಅಭಿನಯದ 5 ಮಹತ್ವದ ಕನ್ನಡ ಚಲನಚಿತ್ರಗಳು
ಪ್ರಖ್ಯಾತ ನಿರ್ದೇಶಕ ಆಂದ್ರೆ ವಾಜ್ದಾ ಅವರ ನಿರ್ದೇಶನದ 7 ಪೋಲಿಷ್ ಭಾಷೆಯ ಚಲನಚಿತ್ರಗಳು
ಖ್ಯಾತ ನಟಿ ಸ್ಮಿತಾ ಪಾಟೀಲ್ ಅವರ ಹೆಸರಾಂತ ಸಿನಿಮಾಗಳು
ಪ್ರಸಿದ್ಧ ನಿರ್ದೇಶಕ ಅಚಿತಪಾಂಗ್ ಅವರ 4 ಪ್ರಮುಖ ಸಿನಿಮಾಗಳು
ಪ್ರತಿಷ್ಠಿತ ಚಲನಚಿತ್ರೋತ್ಸವಗಳಲ್ಲಿ ಜನಮನ್ನಣೆ ಪಡೆದ ಸಿನಿಮಾಗಳ ಪ್ರದರ್ಶನ
ಸಂರಕ್ಷಿಸಲ್ಪಟ್ಟ (Restored) ಮಹತ್ವದ ಭಾರತೀಯ ಶ್ರೇಷ್ಠ ಚಲನಚಿತ್ರಗಳ ಪ್ರದರ್ಶನ
ಪ್ರಕಾಶ್ ರಾಜ್ ಅವರಿಂದ ಉಪನ್ಯಾಸ
8 ದಿನಗಳ ಕಾಲ ನಡೆಯುವ ಚಿತ್ರೋತ್ಸವದಲ್ಲಿ ಪ್ರತಿ ದಿನ ಚಿತ್ರ ನಿರ್ಮಾಣ, ನಿರ್ದೇಶನ, ಚಿತ್ರಕತೆ, ತಂತ್ರಜ್ಞಾನ ಮತ್ತು ಉದ್ಯಮಕ್ಕೆ ಸಂಬಂಧಪಟ್ಟಂತೆ ತಜ್ಞರೊಂದಿಗೆ ಸಂವಾದ, ಉಪನ್ಯಾಸ, ಮಾಸ್ಟರ್ ಕ್ಲಾಸ್, ವಿಚಾರ ಸಂಕಿರಣ ಮೊದಲಾದ ಕಾರ್ಯಕ್ರಮಗಳಿರುತ್ತವೆ. ಚಿತ್ರೋತ್ಸವದ ರಾಯಭಾರಿ ಪ್ರಕಾಶ್ ರಾಜ್ ಅವರಿಂದ ‘ನಾವು ಮತ್ತು ನಮ್ಮ ಸಿನಿಮಾ’ ಎಂಬ ವಿಷಯದ ಕುರಿತು ಉಪನ್ಯಾಸ ನಡೆಯಲಿದೆ.
ಪ್ರಮುಖ ಉಪನ್ಯಾಸಗಳು:
ಶ್ರೀಕರ್ ಪ್ರಸಾದ್ (ಖ್ಯಾತ ಸಂಕಲನಕಾರ): 'ಚಲನಚಿತ್ರದ ಸಂಕಲನದ ಮಹತ್ವ' ಕುರಿತು ಉಪನ್ಯಾಸ
ಮಹೇಶ್ ನಾರಾಯಣನ್ (ನಿರ್ದೇಶಕ ಮತ್ತು ಸಂಕಲನಕಾರ): 'ಸಮಕಾಲೀನ ಚಲನಚಿತ್ರ ಕಥನ ನಿರೂಪಣೆ ಮತ್ತು ಶೈಲಿ' ಕುರಿತು ಮಾತುಕತೆ
ಬಿಶ್ವದೀಪ್ ಚಟರ್ಜಿ (ಹೆಸರಾಂತ ಧ್ವನಿ ವಿನ್ಯಾಸಕ): 'ದೃಶ್ಯಾತೀತ ಧ್ವನಿ – ಆಡಿಯೋಗ್ರಫಿಯ ಕಲೆ' ಕುರಿತು ಮಾಹಿತಿ
ಅನುರಾಗ್ ಕಶ್ಯಪ್: 'ಸಾಂಪ್ರದಾಯಿಕ ಕಲ್ಪನೆಗಳಾಚೆಗಿನ ಚಲನಚಿತ್ರ ಕಥನಗಾರಿಕೆ' ಕುರಿತು ಉಪನ್ಯಾಸ
ಡಾ. ಗಿರೀಶ್ ಕಾಸರವಳ್ಳಿ: 'ಚಲನಚಿತ್ರ ಕಥನಗಳಲ್ಲಿ ನಮ್ಮತನ ಮತ್ತು ನೈಜತೆ' ಕುರಿತು ವಿಶೇಷ ಉಪನ್ಯಾಸ
ಕರ್ನಾಟಕ ಲೇಖಕಿಯರ ಸಂಘ: ಚಿತ್ರೋತ್ಸವದ ಧ್ಯೇಯವಾಕ್ಯ ಕೇಂದ್ರಿತ ವಿಶೇಷ ಸಂವಾದ ಕಾರ್ಯಕ್ರಮ
ವಿಶೇಷ ಸ್ಮಾರಕ ಉಪನ್ಯಾಸ:
ವಿ.ಕೆ. ಮೂರ್ತಿ ಸ್ಮಾರಕ ಉಪನ್ಯಾಸ: 'ಲೆನ್ಸ್‌ಗಳ ಆಯ್ಕೆ, ಬೆಳಕಿನ ವಿನ್ಯಾಸ ಮತ್ತು ಛಾಯಾಗ್ರಹಣ ಕಲೆ' ಎಂಬ ವಿಷಯದ ಕುರಿತು ನಡೆಯಲಿರುವ ಈ ಕಾರ್ಯಕ್ರಮವನ್ನು ಹಿರಿಯ ಛಾಯಾಗ್ರಾಹಕರಾದ ಜಿ.ಎಸ್. ಭಾಸ್ಕರ್ ಅವರು ನಿರ್ವಹಿಸಲಿದ್ದಾರೆ.
ಸಂವಾದ ಕಾರ್ಯಕ್ರಮಗಳು:
ವಿಷಯ: ಕಳೆದ ನಾಲ್ಕು ದಶಕಗಳ ಕನ್ನಡ ಸಿನಿಮಾ.
ಭಾಗವಹಿಸುವವರು: ಡಾ. ಗಿರೀಶ್ ಕಾಸರವಳ್ಳಿ, ಡಾ. ಸಾಧು ಕೋಕಿಲ, ಡಾ. ಜಯಮಾಲ ಮತ್ತು ಇತರರು.
ಈ ಪ್ರತಿಷ್ಠಿತ ಚಿತ್ರೋತ್ಸವವು ಜನವರಿ 29ರಿಂದ ಫೆಬ್ರವರಿ 06ರವರೆಗೂ ನಡೆಯಲಿದ್ದು, ಬೆಂಗಳೂರಿನ ಲುಲು ಮಾಲ್‍ನ ಸಿನಿಪೊಲಿಸ್ ಮಲ್ಟಿಪ್ಲೆಕ್ಸ್ ಅಲ್ಲದೆ, ಬನಶಂಕರಿ 2ನೇ ಹಂತದಲ್ಲಿರುವ ಸುಚಿತ್ರಾ ಫಿಲಂ ಸೊಸೈಟಿ ಮತ್ತು ಕರ್ನಾಟಕ ಚಲನಚಿತ್ರ ಕಲಾವಿದರ ಸಂಘದಲ್ಲಿಯೂ ಚಲನಚಿತ್ರಗಳು ಪ್ರದರ್ಶನವಾಗಲಿವೆ.