ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ರೋಡ್ ಥ್ರಿಲ್ಲರ್‌ ಸಿನಿಮಾಕ್ಕಾಗಿ ಜೊತೆಯಾದ ಪ್ರಮೋದ್‌ ಶೆಟ್ಟಿ - ಶ್ರುತಿ ಹರಿಹರನ್‌; ಸಾಥ್‌ ನೀಡಿದ ʻಬಿಗ್‌ ಬಾಸ್‌ʼ ಮಂಜು

ಎನ್‌ಎಚ್‌ 66 ಚಿತ್ರದ ಮೂಲಕ ನಟಿ ಶ್ರುತಿ ಹರಿಹರನ್ ಮತ್ತು ಪ್ರಮೋದ್ ಶೆಟ್ಟಿ ಮೊದಲ ಬಾರಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಮಂಜುನಾಥ್ ಟಿ.ಆರ್. ನಿರ್ದೇಶನದ ಈ ಚಿತ್ರವು ಮಂಗಳೂರಿನಿಂದ ಗೋವಾಗೆ ಸಾಗುವ ಎರಡು ರಾತ್ರಿಗಳ ರೋಚಕ ರೋಡ್ ಜರ್ನಿ ಕಥೆಯನ್ನು ಹೊಂದಿದೆ.

ನಟಿ ಶ್ರುತಿ ಹರಿಹರನ್‌ ಸದ್ದಿಲ್ಲದೇ ಹೊಸ ಸಿನಿಮಾವೊಂದನ್ನು ಒಪ್ಪಿಕೊಂಡಿದ್ದಾರೆ. ‌ʻಎನ್‌ಎಚ್ 66ʼ ಹೆಸರಿನ ಈ ಸಿನಮಾವು ಈಚೆಗೆ ಮುಹೂರ್ತ ಆಚರಿಸಿಕೊಂಡಿದ್ದು, ಪ್ರಮೋದ್‌ ಶೆಟ್ಟಿ ಈ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡುತ್ತಿರುವುದು ವಿಶೇಷ. ಹಾಗೆಯೇ, ಬಿಗ್‌ ಬಾಸ್‌ ಖ್ಯಾತಿಯ ಉಗ್ರಂ ಮಂಜು, ರಾಜೇಶ್‌ ನಟರಂಗ ಕೂಡ ಈ ಚಿತ್ರದಲ್ಲಿದ್ದಾರೆ. ರಾಯ ಫಿಲಂಸ್ ಲಾಂಛನದಲ್ಲಿ ಮಂಜುನಾಥ್ ಟಿ ಆರ್ ಅವರು ಈ ಸಿನಿಮಾವನ್ನು ನಿರ್ಮಿಸಿ, ನಿರ್ದೇಶಿಸುತ್ತಿದ್ಧಾರೆ.

ಪ್ರಮೋದ್ ಶೆಟ್ಟಿ ಜೊತೆ ನಟಿಸಲು ಖುಷಿ ಇದೆ

"ನಿರ್ದೇಶಕ ಮಂಜುನಾಥ್ ಅವರಿಗೆ ಸಿನಿಮಾ ಮೇಲೆ ಇರುವ ಪ್ರೀತಿ ಹಾಗೂ ಅವರು ಕಥೆ ಹೇಳಿದ ರೀತಿ ನನಗೆ ಬಹಳ ಇಷ್ಟವಾಯಿತು. ನಾನು ಈವರೆಗೂ ಸಾಕಷ್ಟು ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ಆದರೆ ಈವರೆಗೂ ಮಾಡಿರದಂತಹ ಪಾತ್ರವೊಂದನ್ನು ಈ ಚಿತ್ರದಲ್ಲಿ ಮಾಡುತ್ತಿದ್ದೇನೆ. ಎನ್‌ಎಚ್‌ 66 ಚಿತ್ರದಲ್ಲಿ ಪ್ರಮೋದ್ ಶೆಟ್ಟಿ ಅವರ ಜೊತೆಗೆ ಅಭಿನಯಿಸುತ್ತಿರುವುದು ನನಗೆ ಖುಷಿ ನೀಡಿದೆ" ಎಂದು ಹೇಳುತ್ತಾರೆ ಶ್ರುತಿ ಹರಿಹರನ್.

ʻಯಾಕೆ ಅನ್‌ಫಾಲೋ ಮಾಡಿದೆ ಅಂತ ರಿಷಬ್‌ನ ನಾನು ಕೇಳಿಲ್ಲʼ; ನಟ ಪ್ರಮೋದ್‌ ಶೆಟ್ಟಿ ಹೇಳಿದ್ರು ಅಸಲಿ ವಿಷ್ಯ!

ಕ್ಯಾಬ್‌ ಡ್ರೈವರ್‌ ಪಾತ್ರದಲ್ಲಿ ಪ್ರಮೋದ್‌ ಶೆಟ್ಟಿ

"ಇದೊಂದು ರೋಡ್ ಜರ್ನಿ ಜೊತೆಗೆ ಥ್ರಿಲ್ಲರ್ ಕಥಾಹಂದರ ಹೊಂದಿರುವಂತಹ ಚಿತ್ರ. ನಾನು ಇಲ್ಲಿ ಕ್ಯಾಬ್ ಡ್ರೈವರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಶ್ರುತಿ ಹರಿಹರನ್ ಮತ್ತು ರಾಜೇಶ್ ನಟರಂಗ ಅವರ ಜೊತೆಗೆ ನಟಿಸುತ್ತಿರುವುದಕ್ಕೆ ನನಗೆ ಬಹಳ ಸಂತೋಷವಾಗಿದೆ. ರಾಯರ ಭಕ್ತರಾದ ಮಂಜುನಾಥ್ ಅವರು ತಮ್ಮ ಮೊದಲ ನಿರ್ದೇಶನದ ಚಿತ್ರವನ್ನು ರಾಯರ ಸನ್ನಿಧಿಯಲ್ಲೇ ಆರಂಭಿಸಿದ್ದಾರೆ. ರಾಯರು ಅವರಿಗೆ ಒಳ್ಳೆಯದು ಮಾಡಲಿ" ಎಂದಿದ್ದಾರೆ ಪ್ರಮೋದ್‌ ಶೆಟ್ಟಿ.

ನಿರ್ದೇಶಕರು ಹೇಳುವುದೇನು?

"ನಾನು ಹಿರಿಯ ನಿರ್ದೇಶಕ ಭಾರ್ಗವ ಅವರ ಬಳಿ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿದ್ದೆ. ನಂತರ ಕಾರಣಾಂತರದಿಂದ ವಿದೇಶಕ್ಕೆ ತೆರಳಿದೆ. ಅಲ್ಲಿಯೇ ಸ್ಕ್ರಿಪ್ಟ್ ರಚನೆ, ಚಿತ್ರಕಥೆ ಬಗ್ಗೆ ವಿಶೇಷ ಅಧ್ಯಯನ ನಡಿಸಿದೆ. ಈಗ ಇಲ್ಲಿಗೆ ಬಂದು ನನ್ನ ಮೊದಲ ನಿರ್ದೇಶನದ ಚಿತ್ರವನ್ನು ಆರಂಭಿಸಿದ್ದೇನೆ. ರಾಯರ ಪರಮಭಕ್ತನಾದ ನಾನು ಅವರ ಹೆಸರಿನಲ್ಲಿಯೇ ರಾಯ ಫಿಲಂಸ್ ಎಂಬ ಸಂಸ್ಥೆಯ ಮೂಲಕ ಈ ಚಿತ್ರವನ್ನು ನಿರ್ಮಾಣ ಕೂಡ ಮಾಡುತ್ತಿದ್ದೇನೆ" ಎನ್ನುತ್ತಾರೆ ಮಂಜುನಾಥ್‌.

ಪ್ರಮೋದ್‌ ಶೆಟ್ಟಿ ಸಂದರ್ಶನ



"ಹೆಸರೆ ಹೇಳುವಂತೆ ಒಂದು ರೋಡ್ ಸ್ಟೋರಿ. ಥ್ರಿಲ್ಲರ್ ಡ್ರಾಮಾ ಜಾನರ್‌ನ ಚಿತ್ರವೂ ಹೌದು. ಪ್ರಮೋದ್ ಶೆಟ್ಟಿ ಹಾಗೂ ಶ್ರುತಿ ಹರಿಹರನ್‌ಗೆ ಈ ಚಿತ್ರದ ಕಥೆ ಹೇಳಿದಾಗ, ಇಷ್ಟಪಟ್ಟು ಈ ಚಿತ್ರದಲ್ಲಿ ನಟಿಸಲು ಒಪ್ಪಿದರು. ಇದು ಎರಡು ರಾತ್ರಿಗಳಲ್ಲಿ ಮಂಗಳೂರಿನಿಂದ ಗೋವಾಗೆ ಹೋಗುವ ಮಧ್ಯದಲ್ಲಿ ನಡೆಯುವ ಕಥೆಯಾಗಿದ್ದು, ಮೂರು ಅಥವಾ ನಾಲ್ಕು ಪಾತ್ರಗಳ ಸುತ್ತ ಕಥೆ ಸುತ್ತುತ್ತದೆ" ಎಂದು ಮಾಹಿತಿ ಹಂಚಿಕೊಳ್ಳುತ್ತಾರೆ ಮಂಜುನಾಥ್.‌

ಈ ಚಿತ್ರಕ್ಕೆ "ಒನ್ ಹೈವೇ, ಮೆನಿ ಸೀಕ್ರೆಟ್ಸ್" ಎಂಬ ಅಡಿಬರಹವಿದೆ. ಏಪ್ರಿಲ್ 6 ರಿಂದ ಮಂಗಳೂರಿನಲ್ಲಿ ಚಿತ್ರೀಕರಣ ಆರಂಭವಾಗಲಿದೆ. ಸುನೀತ್ ಹಲಗೇರಿ ಛಾಯಾಗ್ರಹಣ ಹಾಗೂ ಸ್ವಾಮಿನಾಥನ್ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ.