NTRNeel Movie: ಶೀಘ್ರದಲ್ಲೇ ವಿದೇಶಕ್ಕೆ ಹಾರಲಿದ್ದಾರೆ ಪ್ರಶಾಂತ್ ನೀಲ್; ಮತ್ತಷ್ಟು ಹಿರಿದಾಗುತ್ತಿದೆ ಜೂ. ಎನ್‌ಟಿಆರ್ ಚಿತ್ರ
Prashant Neel: ಯಶ್ ನಟನೆಯ ʼಕೆಜಿಎಫ್ʼ ಸರಣಿ ಚಿತ್ರಗಳ ಮೂಲಕ ಜಾಗತಿಕ ಮಟ್ಟದಲ್ಲಿ ಸ್ಯಾಂಡಲ್‌ವುಡ್‌ನ ಘಮ ಬೀರಿದ ನಿರ್ದೇಶಕ ಪ್ರಶಾಂತ್ ನೀಲ್ ಸದ್ಯ ಜೂ. ಎನ್‌ಟಿಆರ್ ನಟನೆಯ ತೆಲುಗು ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ಈ ಚಿತ್ರದ ಶೂಟಿಂಗ್‌ಗಾಗಿ ಅವರು ವಿದೇಶಕ್ಕೆ ತೆರಳಲಿದ್ದಾರೆ.

-

ಹೈದರಾಬಾದ್: 2014ರಲ್ಲಿ ತೆರೆಕಂಡ ʼಉಗ್ರಂʼ (Ugramm) ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ನಿರ್ದೇಶಕ ಪ್ರಶಾಂತ್ ನೀಲ್ (Prashanth Neel) ಅದಾದ ಬಳಿಕ ಭಾರತೀಯ ಚಿತ್ರರಂಗದ ಗಮನ ಸೆಳೆದರು. ಆ್ಯಕ್ಷನ್ ಚಿತ್ರಗಳಿಗೆ ತಮ್ಮದೇ ಆದ ಭಾಷ್ಯ ಬರೆದ ಅವರು 'ಕೆಜಿಎಫ್' (KGF) ಸರಣಿ ಚಿತ್ರಗಳ ಮೂಲಕ ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿದರು. ಜತೆಗೆ ಸ್ಯಾಂಡಲ್‌ವುಡ್ ಘಮವನ್ನು ವಿದೇಶದಲ್ಲಿಯೂ ಹರಡಿದರು. 2023ರಲ್ಲಿ 'ಸಲಾರ್: ಪಾರ್ಟ್ 1-ಸೀಸ್‌ಫೈರ್' ಸಿನಿಮಾದೊಂದಿಗೆ ಟಾಲಿವುಡ್‌ಗೂ ಕಾಲಿಟ್ಟರು. ಸದ್ಯ ದೇಶದ ಬಹು ಬೇಡಿಕೆಯ, ಅತೀ ಹೆಚ್ಚು ಸಂಭಾವನೆ ಪಡೆಯುವ ನಿರ್ದೇಶಕರಲ್ಲಿ ಒಬ್ಬರೆನಿಸಿಕೊಂಡಿರುವ ಅವರು ಇದೀಗ ಟಾಲಿವುಡ್ ಸೂಪರ್ ಸ್ಟಾರ್ ಜೂ. ಎನ್‌ಟಿಆರ್ ಸಿನಿಮಾವನ್ನು ಕೈಗೆತ್ತಿಕೊಂಡಿದ್ದಾರೆ. ಶೀರ್ಷಿಕೆ ಇನ್ನೂ ಅಂತಿಮಗೊಳ್ಳದ ಈ ಸಿನಿಮಾದ ಶೂಟಿಂಗ್ ಆರಂಭವಾಗಿದ್ದು, ಶೀಘ್ರದಲ್ಲೇ ಚಿತ್ರತಂಡ ವಿದೇಶಕ್ಕೆ ತೆರಳಲಿದೆ. ಆ ಮೂಲಕ ಪ್ರಶಾಂತ್ ನೀಲ್ ತಮ್ಮ ವೃತ್ತಿ ಜೀವನದಲ್ಲೇ ಹೊಸ ಸಾಹಸಕ್ಕೆ ಮುಂದಾಗಿದ್ದಾರೆ.
ಇದುವರೆಗೆ 4 ಸಿನಿಮಾಗಳನ್ನು ನಿರ್ದೇಶಿಸಿರುವ ಪ್ರಶಾಂತ್ ನೀಲ್ ವಿದೇಶದಲ್ಲಿ ಶೂಟಿಂಗ್ ನಡೆಸಿಲ್ಲ. ಬಹುತೇಕ ಅದ್ಧೂರಿ ಸೆಟ್ ನಿರ್ಮಿಸಿ ಅದರಲ್ಲೇ ಚಿತ್ರೀಕರಣ ನಡೆಸುತ್ತಿದ್ದ ಅವರು ಈಗ ವಿದೇಶಕ್ಕೆ ತೆರಳಲು ಸಜ್ಜಾಗಿದ್ದಾರೆ.
𝟮𝟱 𝗝𝗨𝗡𝗘 𝟮𝟬𝟮𝟲…
— #NTRNeel (@NTRNeelFilm) April 29, 2025
The Most striking tale ever to erupt from the Soil of Indian Cinema 💥💥
A special glimpse for the Man of Masses @tarak9999’s birthday.#NTRNeel pic.twitter.com/xg6AjsEUbS
ಈ ಸುದ್ದಿಯನ್ನೂ ಓದಿ: NTRNeel: ಜೂ.ಎನ್‌ಟಿಆರ್-ಪ್ರಶಾಂತ್ ನೀಲ್ ಚಿತ್ರಕ್ಕಾಗಿ ಸಿದ್ಧವಾಗುತ್ತಿದೆ ಕಾರ್ಖಾನೆಯ ಬೃಹತ್ ಸೆಟ್
ಪಿಂಕ್‌ವಿಲ್ಲಾ ವೆಬ್‌ಸೈಟ್ ವರದಿಯ ಪ್ರಕಾರ ʼಎನ್‌ಟಿಆರ್‌ನೀಲ್ʼ (NTRNeel) ಎನ್ನುವ ತಾತ್ಕಾಲಿಕ ಟೈಟಲ್‌ನ ಈ ಚಿತ್ರದ ಅಂತಾರಾಷ್ಟ್ರೀಯ ಶೂಟಿಂಗ್ ಶೆಡ್ಯೂಲ್ ಅಕ್ಟೋಬರ್‌ನಲ್ಲಿ ಆರಂಭವಾಗಲಿದೆ. ದೀರ್ಘ ದಿನಗಳ ಕಾಲ ವಿದೇಶದಲ್ಲಿ ಚಿತ್ರೀಕರಣ ನಡೆಯಲಿದೆ ಎನ್ನಲಾಗಿದೆ. ʼʼಜೂ. ಎನ್‌ಟಿಆರ್ ಚಿತ್ರದ ಶೂಟಿಂಗ್‌ಗಾಗಿ ಪ್ರಶಾಂತ್ ನೀಲ್ ವಿದೇಶಕ್ಕೆ ತೆರಳಲಿದ್ದಾರೆ. ವಿದೇಶದಲ್ಲಿ ಚಿತ್ರೀಕರಣವಾಗುತ್ತಿರುವ ಪ್ರಶಾಂತ್ ನೀಲ್ ಅವರ ಮೊದಲ ಸಿನಿಮಾ ಇದಾಗಲಿದೆ. ಚಿತ್ರದ ಹೆಚ್ಚಿನ ಭಾಗದ ಶೂಟಿಂಗ್ ವಿದೇಶದಲ್ಲಿ ನಡೆಯಲಿದೆʼʼ ಎಂದು ಮೂಲಗಳು ತಿಳಿಸಿವೆ.
ʼʼಈ ಚಿತ್ರದ ಕಥೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಯಲಿದೆ. ಪ್ರಶಾಂತ್ ನೀಲ್ ಸೆಟ್ ಹಾಕಿ ʼಕೆಜಿಎಫ್ʼನಲ್ಲಿ ಕೋಲಾರ ಚಿನ್ನದ ಗಣಿ, ʼಸಲಾರ್ʼನಲ್ಲಿ ಖಾನ್ಸಾರ್‌ನಂತಹ ಸಾಮ್ರಾಜ್ಯವನ್ನೇ ನಿರ್ಮಿಸಿದ್ದಾರೆ. ಆದರೆ ಈ ಬಾರಿ ಕಥೆ ಜಾಗತಿಕ ಮಟ್ಟದಲ್ಲಿ ನಡೆಯುವುದರಿಂದ ವಿದೇಶಕ್ಕೆ ತೆರಳಲಿದ್ದಾರೆ. ಆ ಮೂಲಕ ಮತ್ತೊಮ್ಮೆ ಅವರು ಭಾರತೀಯ ಸಿನಿಮಾದವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಲಿದ್ದಾರೆʼʼ ಎಂದು ಚಿತ್ರತಂಡದ ಮೂಲಗಳು ವರದಿ ಮಾಡಿವೆ.
ಆ್ಯಕ್ಷನ್ ಪ್ಯಾಕ್ಡ್ ಚಿತ್ರವಾಗಿರುವ ಇದರ ಮೊದಲ ಹಂತದ ಶೂಟಿಂಗ್ ಉತ್ತರ ಕನ್ನಡದ ಕುಮಟಾ, ಹೈದರಾಬಾದ್‌ನ ರಾಮೋಜಿ ಫಿಲ್ಮ್ ಸಿಟಿ ಮುಂತಾದ ಕಡೆ ನಡೆದಿದೆ. ಅರಮನೆ, ಕಾರ್ಖಾನೆಯಂತಹ ಬೃಹತ್ ಸೆಟ್ ಹಾಕಿ ಕೆಲವೊಂದು ಭಾಗಗಳನ್ನು ಸೆರೆ ಹಿಡಿಯಲಾಗಿದೆ. ಮೂಲಗಳ ಪ್ರಕಾರ ಇದು ʼಕೆಜಿಎಫ್ʼ, ʼಸಲಾರ್ʼ ಚಿತ್ರಗಳಿಗಿಂತಲೂ ಹೆಚ್ಚಿನ ಬಜೆಟ್‌ನಲ್ಲಿ ತಯಾರಾಗುತ್ತಿದೆ.
ರುಕ್ಮಿಣಿ ವಸಂತ್ ನಾಯಕಿ?
ಸದ್ಯ ಪರಭಾಷೆಗಳಲ್ಲಿಯೂ ಬೇಡಿಕೆ ಕುದುರಿಸಿಕೊಂಡಿರುವ ಕನ್ನಡತಿ ರುಕ್ಮಿಣಿ ವಸಂತ್ ಈ ಚಿತ್ರದ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರ ಬರುವುದೊಂದೇ ಬಾಕಿ. ರಿಷಬ್ ಶೆಟ್ಟಿ ಜತೆ ರುಕ್ಮಿಣಿ ಮೊದಲ ಬಾರಿ ತೆರೆ ಹಂಚಿಕೊಂಡಿರುವ ʼಕಾಂತಾರ: ಚಾಪ್ಟರ್ 1ʼ ಸಿನಿಮಾ ಅಕ್ಟೋಬರ್ 2ರಂದು ತೆರೆಗೆ ಬರಲಿದೆ. ಸದ್ಯದಲ್ಲೇ ಈ ಚಿತ್ರದ ಪ್ರಚಾರ ಕಾರ್ಯ ಆರಂಭವಾಗಲಿದ್ದು, ಅದಾದ ಬಳಿಕ ರುಕ್ಮಿಣಿ ʼಎನ್‌ಟಿಆರ್‌ನೀಲ್ʼ ಚಿತ್ರದ ಶೂಟಿಂಗ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ.
ಇತ್ತೀಚೆಗೆ ತೆರೆಕಂಡ ಜೂ. ಎನ್‌ಟಿಆರ್ ನಟನೆಯ ಮೊದ ಹಿಂದಿ ಚಿತ್ರ ʼವಾರ್ 2ʼ ಬಾಕ್ಸ್ ಆಫೀಸ್‌ನಲ್ಲಿ ಮುಗ್ಗರಿಸಿದೆ. ಅದಕ್ಕೂ ಮೊದಲು ತೆರೆಕಂಡ ತೆಲುಗಿನ ʼದೇವರʼ ಕೂಡ ಅಂದುಕೊಂಡಷ್ಟು ಕಲೆಕ್ಷನ್ ಮಾಡಿರಲಿಲ್ಲ. ಹೀಗಾಗಿ ಜೂ. ಎನ್‌ಟಿಆರ್ ʼಎನ್‌ಟಿಆರ್‌ನೀಲ್ʼ ಮೂಲಕ ಗೆಲುವಿನ ಹಳಿಗೆ ಮರಳುವ ನಿರೀಕ್ಷೆಯಲ್ಲಿದ್ದಾರೆ.