ಹೈದರಾಬಾದ್: ಅಪ್ಪಟ ಕನ್ನಡದ ಪ್ರತಿಭೆ ರುಕ್ಮಿಣಿ ವಸಂತ್ (Rukmini Vasanth) ಸದ್ಯ ದಕ್ಷಿಣ ಭಾರತದ ಬಹುಬೇಡಿಕೆಯ ನಟಿ ಎನಿಸಿಕೊಂಡಿದ್ದಾರೆ. ಸ್ಯಾಂಡಲ್‌ವುಡ್ ಮೂಲಕ ಚಿತ್ರರಂಗಕ್ಕೆ ಪ್ರವೇಶಿಸಿದ ಅವರು ಇದೀಗ ತಮಿಳು ಮತ್ತು ತೆಲುಗಿನಲ್ಲಿ ಉತ್ತಮ ಅವಕಾಶ ಬಾಚಿಕೊಳ್ಳುತ್ತಿದ್ದಾರೆ. ರಿಷಬ್ ಶೆಟ್ಟಿ (Rishab Shetty) ನಟಿಸಿ ನಿರ್ದೇಶಿಸಿರುವ, ಬಹು ನಿರೀಕ್ಷಿತ ʼಕಾಂತಾರ: ಚಾಪ್ಟರ್ 1ʼ (Kantara Chapter 1) ಸಿನಿಮಾದ ನಾಯಕಿಯಾಗಿರುವ ಅವರು ಸದ್ಯ ಇದರ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಮಧ್ಯೆ ಅವರು ನಟಿಸಲಿರುವ ಜೂ. ಎನ್‌ಟಿಆರ್-ಪ್ರಶಾಂತ್ ನೀಲ್ ಕಾಂಬಿನೇಷನ್ ಚಿತ್ರದ ನಿರ್ಮಾಪಕರು ಅವರಿಗೆ ಅವಮಾನ ಎಸಗಿದ್ದಾರೆ ಎನ್ನುವ ಗುಲ್ಲೆಬ್ಬಿದ್ದು, ಫ್ಯಾನ್ಸ್ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಜೂ. ಎನ್‌ಟಿಆರ್‌ಗೆ ಹೋಲಿಸಿ ರುಕ್ಮಿಣಿ ಅವರ ಸಾಮರ್ಥ್ಯವನ್ನು ಕಡೆಗಣಿಸಲಾಗಿದೆ ಎನುವ ಆರೋಪ ಕೇಳಿ ಬಂದಿದೆ. ಅಷ್ಟಕ್ಕೂ ಆಗಿದ್ದೇನು?
ಸೆಪ್ಟೆಂಬರ್ 28ರಂದು ಹೈದರಾಬಾದ್‌ನಲ್ಲಿ ʼಕಾಂತಾರ: ಚಾಪ್ಟರ್ 1' ಚಿತ್ರದ ಪ್ರೀ-ರಿಲೀಸ್ ಇವೆಂಟ್ ಆಯೋಜಿಸಲಾಗಿತ್ತು. ಈ ವೇಳೆ ಇಡೀ ಚಿತ್ರತಂಡ ಹಾಜರಿತ್ತು. ಜೂ. ಎನ್‌ಟಿಆರ್ ಮುಖ್ಯ ಅತಿಥಿಯಾಗಿದ್ದರು. ಇದೇ ಕಾರ್ಯಕ್ರಮದಲ್ಲಿ ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣ ಸಂಸ್ಥೆಯ ನಿರ್ಮಾಪಕ ರವಿ ಶಂಕರ್ ಪಾಲ್ಗೊಂಡಿದ್ದರು. ಪ್ರಶಾಂತ್ ನೀಲ್-ಜೂ. ಎನ್‌ಟಿಆರ್ ಕಾಂಬಿನೇಷನ್‌ನ ಮುಂದಿನ ಚಿತ್ರವನ್ನು ಮೈತ್ರಿ ಮೂವಿ ಮೇಕರ್ಸ್ ಮತ್ತು ಎನ್‌ಟಿಆರ್ ಆರ್ಟ್ಸ್ ಜಂಟಿಯಾಗಿ ನಿರ್ಮಿಸುತ್ತಿದೆ. ಜೂ. ಎನ್‌ಟಿಆರ್ ಅವರನ್ನು ಹೊಗಳುವ ಭರದಲ್ಲಿ ನಿರ್ಮಾಪಕ ರವಿ ಶಂಕರ್ ಎಡವಟ್ಟು ಮಾಡಿದ್ದಾರೆ.
ವೈರಲ್ ವಿಡಿಯೊ:
ಈ ಸುದ್ದಿಯನ್ನೂ ಓದಿ: ʼಕಾಂತಾರ ಚಾಪ್ಟರ್ 1ʼ ನನ್ನನ್ನು ತುಂಬ ಬದಲಾಯಿಸಿದೆ; ಚಿತ್ರದ ಪ್ರೆಸ್‌ಮೀಟ್ ವೇಳೆ ರುಕ್ಮಿಣಿ ವಸಂತ್ ಭಾವುಕ
ರವಿ ಶಂಕರ್ ಹೇಳಿದ್ದೇನು?
ರವಿ ಶಂಕರ್ ಆರಂಭದಲ್ಲಿ ರುಕ್ಮಿಣಿ ವಸಂತ್ ಅವರಿಗೆ ಮೆಚ್ಚುಗೆ ಸೂಚಿಸಿದ್ದಾರೆ. ಅವರೊಬ್ಬ ಅದ್ಭುತ ಕಲಾವಿದೆಯಾದ ಕಾರಣ ತಮ್ಮ ಮುಂದಿನ ಜೂ. ಎನ್‌ಟಿಆರ್-ಪ್ರಶಾಂತ್ ನೀಲ್ ಸಿನಿಮಾಕ್ಕೆ ಆಯ್ಕೆ ಮಾಡಿಕೊಂಡಿದ್ದಾಗಿ ಹೇಳಿದರು. ʼʼರುಕ್ಮಿಣಿ ವಸಂತ್ ಅವರ ಪ್ರತಿಭೆಯನ್ನು ನಾನು ಹತ್ತಿರದಿಂದ ನೋಡಿದ್ದೇನೆ. ಅವರು ಅದ್ಭುತ ಕಲಾವಿದೆ. ಇದೇ ಕಾರಣಕ್ಕೆ ಪ್ರಶಾಂತ್ ನೀಲ್-ಜೂ. ಎನ್‌ಟಿಆರ್ ಚಿತ್ರಕ್ಕೆ ಅವರನ್ನು ನಾಯಕಿಯಾಗಿ ಆಯ್ಕೆ ಮಾಡಿಕೊಂಡಿದ್ದೇವೆʼʼ ಎಂದು ಹೇಳಿದ್ದಾರೆ. ಅದಾದ ಬಳಿಕ ಅವರು ನೀಡಿದ ಹೇಳಿಕೆ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ.
ʼʼಜೂ. ಎನ್‌ಟಿಆರ್ ಅವರ ಪ್ರತಿಭೆಗೆ ಸರಿ ಹೊಂದುವ ಕನಿಷ್ಠ ಪಕ್ಷ ಅದರ ಸಮೀಪಕ್ಕೆ ಬರುವ ನಾಯಕಿಗಾಗಿ ಹಲವು ತಿಂಗಳ ಕಾಲ ಹುಡುಕಾಟ ನಡೆಸಿದೆವು. ಕೊನೆಗೆ ರುಕ್ಮಿಣಿ ಅವರಲ್ಲಿ ಮಾತ್ರ ಈ ಸಾಮರ್ಥ್ಯ ಗುರುತಿಸಿದೆವು. ಅವರು ಅದ್ಭುತ ಕಲಾವಿದೆ. ಆದರೆ ಜೂ. ಎನ್‌ಟಿಆರ್‌ನಷ್ಟಲ್ಲ. ಅವರಿಗಿಂತ ಶೇ. 80ರಷ್ಟಾದರೂ ಅಭಿನಯಿಸುತ್ತಾರೆ ಎನ್ನುವ ವಿಶ್ವಾಸವಿದೆʼʼ ಎಂದು ಹೇಳಿದ್ದಾರೆ.
ಸದ್ಯ ಅವರ ಈ ಮಾತು ರುಕ್ಮಿಣಿ ಅಭಿಮಾನಿಗಳನ್ನು ಕೆರಳಿಸಿದೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ರವಿ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ರುಕ್ಮಿಣಿ ಅವರನ್ನು ರವಿ ಶಂಕರ್ ಅವಮಾನಿಸಿದ್ದಾರೆ ಎಂದು ಹೇಳಿದ್ದಾರೆ. ʼʼನಿಮ್ಮ ನಾಯಕನನ್ನು ಹೊಗಳಲು ನಮ್ಮ ರುಕ್ಮಿಣಿಯನ್ನು ಅವಮಾನಿಸುವ ಅಗತ್ಯವಿಲ್ಲʼʼ ಎಂದು ಒಬ್ಬರು ಬರೆದುಕೊಂಡಿದ್ದಾರೆ. ʼʼಯಾಕೆ ನೀವು ನಟಿಯನ್ನು ಅವಮಾನಿಸುತ್ತೀರಿ?ʼʼ ಎಂದು ಇನ್ನೊಬ್ಬರು ಪ್ರಶ್ನಿಸಿದ್ದಾರೆ. ಒಟ್ಟಿನಲ್ಲಿ ರವಿ ಶಂಕರ್ ಹೇಳಿಕೆ ವ್ಯಾಪಕ ಚರ್ಚೆಯನ್ನೇ ಹುಟ್ಟುಹಾಕಿದ್ದು, ಸದ್ಯ ಅವರು ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ.
ಜೂ. ಎನ್‌ಟಿಆರ್-ಪ್ರಶಾಂತ್ ನೀಲ್ ಚಿತ್ರದ ಅಪ್‌ಡೇಟ್
ಮೊದಲ ಬಾರಿಗೆ ಜೂ. ಎನ್‌ಟಿಆರ್-ಪ್ರಶಾಂತ್ ನೀಲ್ ಒಂದಾಗುತ್ತಿರುವ ಚಿತ್ರಕ್ಕೆ ಇನ್ನೂ ಟೈಟಲ್ ಅಂತಿಮಗೊಂಡಿಲ್ಲ. ʼಡ್ರ್ಯಾಗನ್ʼ ಎನ್ನುವ ಟೈಟಲ್ ಇಡಲಾಗಿದೆ ಎನ್ನಲಾಗುತ್ತಿದೆಯಾದರೂ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ. ಈಗಾಗಲೇ ಚಿತ್ರದ ಶೂಟಿಂಗ್ ಆರಂಭವಾಗಿದ್ದು, ಮುಂದಿನ ಹಂತದ ಚಿತ್ರೀಕರಣ ಅಕ್ಟೋಬರ್‌ನಲ್ಲಿ ನಡೆಯಲಿದೆ. ಈ ಬಗ್ಗೆ ರವಿ ಶಂಕರ್ ಮಾಹಿತಿ ನೀಡಿ, ʼʼಮುಂದಿನ ತಿಂಗಳು ಶೂಟಿಂಗ್ ಪುನರಾರಂಭಗೊಳ್ಳಲಿದ್ದು, ಬ್ರೇಕ್ ಇಲ್ಲದೆ ಸಾಗಲಿದೆ. ನಿಮ್ಮ ಊಹೆಗೂ ಮೀರಿದ ಸಿನಿಮಾ ಇದಾಗಲಿದೆʼʼ ಎಂದಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮುಂದಿನ ವರ್ಷ ಇದು ತೆರೆಗೆ ಬರಲಿದೆ.