ʼಕಾಂತಾರ ಚಾಪ್ಟರ್ 1ʼ ನನ್ನನ್ನು ತುಂಬ ಬದಲಾಯಿಸಿದೆ; ಚಿತ್ರದ ಪ್ರೆಸ್‌ಮೀಟ್ ವೇಳೆ ರುಕ್ಮಿಣಿ ವಸಂತ್ ಭಾವುಕ
Kantara Chapter 1 Press Meet: ವಿವಿಧ ಭಾಷೆಗಳಲ್ಲಿ ಬಿಡುಗಡೆಗೊಂಡ ʼಕಾಂತಾರ ಚಾಪ್ಟರ್ 1ʼ ಚಿತ್ರದ ಟ್ರೈಲರ್‌ಗೆ ಭರ್ಜರಿ ಪ್ರತಿಕ್ರಿಯೆ ಲಭ್ಯವಾಗುತ್ತಿದೆ. ಇದರ ಬೆನ್ನಲ್ಲೇ ಚಿತ್ರತಂಡ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಸಿನಿಮಾದ ಬಗ್ಗೆ ಹೆಚ್ಚಿನ ಮಾಹಿತಿ ಹಂಚಿಕೊಂಡಿದೆ. ರಿಷಬ್ ಶೆಟ್ಟಿ ಸೇರಿದಂತೆ ಇಡೀ ಚಿತ್ರತಂಡ ಈ ವೇಳೆ ಹಾಜರಿತ್ತು.

-

ಬೆಂಗಳೂರು: ಸಿನಿಪ್ರಿಯರ ಬಹುದಿನಗಳ ಕನಸು ನನಸಾಗಿದ್ದು, ಭಾರಿ ಕುತೂಹಲ ಕೆರಳಿಸಿದ ʼಕಾಂತಾರ ಚಾಪ್ಟರ್ 1ʼ (Kantara Chapter 1) ಚಿತ್ರದ ಟ್ರೈಲರ್ ರಿಲೀಸ್ ಆಗಿದೆ. ವಿವಿಧ ಭಾಷೆಗಳಲ್ಲಿ ಬಿಡುಗಡೆಗೊಂಡ ಟ್ರೈಲರ್‌ಗೆ ಭರ್ಜರಿ ಪ್ರತಿಕ್ರಿಯೆ ಲಭ್ಯವಾಗುತ್ತಿದೆ. ಇದರ ಬೆನ್ನಲ್ಲೇ ಚಿತ್ರತಂಡ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಸಿನಿಮಾದ ಬಗ್ಗೆ ಹೆಚ್ಚಿನ ಮಾಹಿತಿ ಹಂಚಿಕೊಂಡಿದೆ (Kantara Chapter 1 Press Meet). ನಾಯಕಿ ರುಕ್ಮಿಣಿ ವಸಂತ್ (Rukmini Vasanth) ಮಾತನಾಡಿ, ಚಿತ್ರದಲ್ಲಿ ಅವಕಾಶ ನೀಡಿದ್ದಕ್ಕಾಗಿ ರಿಷಬ್ ಶೆಟ್ಟಿ (Rishab Shetty) ಮತ್ತು ಹೊಂಬಾಳೆ ಫಿಲ್ಮ್ಸ್‌ಗೆ (Hombale Films) ಧನ್ಯವಾದ ಅರ್ಪಿಸಿದರು.
ʼʼಕಾಂತಾರ ಚಾಪ್ಟರ್ 1ʼ ನನ್ನ ಮನಸ್ಸಿಗೆ ತುಂಬ ಹತ್ತಿರವಾಗಿರುವ ಸಿನಿಮಾ. ಈ ಚಿತ್ರದ ಮೂಲಕ ಹೊಂಬಾಳೆ ಫಿಲ್ಮ್ಸ್ ಅವರ ಮತ್ತೊಂದು ಪ್ರಾಜೆಕ್ಟ್‌ನಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿತು. ನನ್ನ ವೃತ್ತಿ ಜೀವನದ ಮೊದಲ ಹೆಜ್ಜೆಯಲ್ಲಿ ಬೆಂಬಲ ನೀಡಿದ್ದಕ್ಕೆ ಧನ್ಯವಾದʼʼ ಎಂದು ರುಕ್ಮಿಣಿ ತಿಳಿಸಿದರು.
ʼʼರಿಷಬ್ ಶೆಟ್ಟಿ ಅವರಿಗೆ ಎಷ್ಟು ಬಾರಿ ಥ್ಯಾಂಕ್ಸ್ ಹೇಳಿದರೂ ಸಾಲದು. ಈ ಸಿನಿಮಾವನ್ನು ನಾನು ಕೇವಲ ನಟಿಯಾಗಿ ಮಾಡಿಲ್ಲ. ಅಭಿನಯಿಸುತ್ತ ನಾನೂ ಬೆಳೆದಿದ್ದೇನೆ. ಚಿತ್ರ ನನ್ನನ್ನು ತುಂಬ ಬದಲಾಯಿಸಿದೆ. ಇದೆಲ್ಲ ಸಾಧ್ಯವಾಗಿದ್ದ ರಿಷಬ್ ಅವರ ನಂಬಿಕೆ ಮತ್ತು ಪ್ರೋತ್ಸಾಹದಿಂದ. ಡಬ್ಬಿಂಗ್ ಮಾಡುವಾಗ, ಟ್ರೈಲರ್ ನೋಡುವಾಗ ಆ ಬೆಳವಣಿಗೆ ಗಮನಕ್ಕೆ ಬಂತುʼʼ ಎಂದು ಅವರು ಭಾವುಕರಾದರು.
ಮುಂದುವರಿದು, ʼʼಸಪ್ತ ಸಾಗರದಾಚೆ ಎಲ್ಲೋʼ ಸೈಡ್ ಎ ಪ್ರೀಮಿಯರ್‌ನಿಂದ ಹಿಡಿದು ಇಲ್ಲಿ ತನಕ ಪ್ರೋತ್ಸಾಹ ನೀಡಿದ್ದೀರಿ. ನಿಮ್ಮ ತಂಡದಲ್ಲಿ ಅವಕಾಶ ನೀಡಿದ್ದಕ್ಕೆ ಎಷ್ಟು ಥ್ಯಾಂಕ್ಸ್ ಹೇಳಿದರೂ ಕಡಿಮೆಯೇ. ಪ್ರಗತಿ ಶೆಟ್ಟಿ ಕೂಡ ಅಷ್ಟೇ ಸಹಕಾರ ನೀಡಿದ್ದಾರೆ. ವಸ್ತ್ರ ವಿನ್ಯಾಸಕಿಯಾಗಿ ಮಾತ್ರವಲ್ಲ ಶೂಟಿಂಗ್‌ನಲ್ಲೂ ನೆರವಾಗಿದ್ದಾರೆ. ಒಟ್ಟಿನಲ್ಲಿ ಈ ಚಿತ್ರದ ಭಾಗವಾಗಿದ್ದಕ್ಕೆ ಹೆಮ್ಮೆಯಾಗುತ್ತಿದೆ. ಎಷ್ಟೇ ಒತ್ತಡ ಇದ್ದರೂ ರಿಷಬ್ ಅದನ್ನು ನಮ್ಮ ಮೇಲೆ ಹೇರುತ್ತಿರಲಿಲ್ಲʼʼ ಎಂದರು.
ಈ ಸುದ್ದಿಯನ್ನೂ ಓದಿ: Kantara Chapter 1 Trailer: ಯೂಟ್ಯೂಬ್‌ನಲ್ಲಿ ಧೂಳೆಬ್ಬಿಸಿದ ʼಕಾಂತಾರ ಚಾಪ್ಟರ್ 1ʼ ಟ್ರೈಲರ್; ರಿಲೀಸ್ ಕೆಲ ಹೊತ್ತಲ್ಲೇ 4 ಕೋಟಿ ವ್ಯೂವ್ಸ್
ಪ್ರಗತಿ ಶೆಟ್ಟಿ ಹೇಳಿದ್ದೇನು?
ʼಕಾಂತಾರʼ, ʼಕಾಂತಾರ ಚಾಪ್ಟರ್ 1ʼ ಚಿತ್ರಗಳಿಗೆ ಸುಮಾರು 5 ವರ್ಷಗಳ ಕಾಲ ಕೆಲಸ ಮಾಡಿದ ಅನುಭವವನ್ನು ರಿಷಬ್ ಪತ್ನಿ ಪ್ರಗತಿ ಶೆಟ್ಟಿ ತೆರೆದಿಟ್ಟರು. ಎಲ್ಲ ದೇವರು, ದೈವದ ಆಶೀರ್ವಾದದಿಂದ ಟ್ರೈಲರ್ ಹೊರಬಂದಿದೆ ಎಂದು ಹೇಳಿ ಮಾತು ಆರಂಭಿಸಿದ ಪ್ರಗತಿ, ʼʼಚಿತ್ರಕ್ಕಾಗಿ ಬೆಂಗಳೂರು ಬಿಟ್ಟು ಕುಂದಾಪುರಕ್ಕೆ ಹೋಗಿ ನೆಲೆಸಿದ್ದೇವೆ. ಮಕ್ಕಳನ್ನು ಅಲ್ಲಿನ ಶಾಲೆಗೆ ಸೇರಿಸಿದ್ದೇವೆʼʼ ಎಂದು ತಿಳಿಸಿದರು.
ʼʼಒಬ್ಬ ವ್ಯಕ್ತಿ ಒಂದು ಕನಸು ಕಾಣಲು ಹೊರಟಾಗ ಹಲವರ ಸಹಾಯ ಬೇಕಾಗುತ್ತದೆ. ಚಿತ್ರದಲ್ಲಿ ಕೆಲಸ ಮಾಡಿದ ಪ್ರತಿಯೊಬ್ಬರು ನಾವು ಕಂಡ ಈ ಕನಸು ನನಸು ಮಾಡಲು ನೆರವಾಗಿದ್ದಾರೆ. ಎಲ್ಲರೂ ಸಿನಿಮಾ ಉತ್ತಮವಾಗಿ ಬರಬೇಕು ಎಂದು ಕೆಲಸ ಮಾಡಿದ್ದಾರೆ. ರಿಷಬ್ ಡ್ಯೂಪ್ ಇಲ್ಲದೆ ಫೈಟ್ ಮಾಡಿದ್ದಾರೆ. ಇದಕ್ಕೆ ಸ್ಟಂಟ್ ಮಾಸ್ಟರ್ ಸಹಕಾರ ಮರೆಯುವಂತಿಲ್ಲʼʼ ಎಂದರು.
ʼʼರಿಷಬ್‌ಗೆ ರಿಷಬೇ ಸಾಟಿ. ಕನ್ನಡ ಜನತೆ ʼಕಾಂತಾರʼವನ್ನು ನಮ್ಮ ಸಿನಿಮಾ ಎಂದು ಒಪ್ಪಿಕೊಂಡಿದ್ದೀರ. ಈ ಚಿತ್ರಕ್ಕೂ ಅದೇ ರೀತಿ ಆಶೀರ್ವಾದ ಮಾಡಬೇಕುʼʼ ಎಂದು ಮನವಿ ಮಾಡಿ ಪ್ರತಿಯೊಬ್ಬರಿಗೂ ಧನ್ಯವಾದ ಹೇಳಿದರು.