ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

29 ವರ್ಷಗಳ ನಂತರ ʻಅಮೆರಿಕಾ ಅಮೆರಿಕಾʼ ಚಿತ್ರಕ್ಕೆ ಸಿಕ್ವೇಲ್;‌ ರಿಲೀಸ್‌ ಡೇಟ್‌ ಘೋಷಣೆ ಮಾಡಿದ ನಾಗತಿಹಳ್ಳಿ ಚಂದ್ರಶೇಖರ್‌

ಕನ್ನಡ ಚಿತ್ರರಂಗದ ಸರ್ವಕಾಲಿಕ ಹಿಟ್‌ ಸಿನಿಮಾ 'ಅಮೆರಿಕಾ ಅಮೆರಿಕಾ' ಬಿಡುಗಡೆಯಾಗಿ 29 ವರ್ಷಗಳ ನಂತರ ಸೀಕ್ವೆಲ್ ‘ಅಮೆರಿಕಾ ಅಮೆರಿಕಾ 2’ ತೆರೆಗೆ ಬರಲು ಸಜ್ಜಾಗಿದೆ. ನಾಗತಿಹಳ್ಳಿ ಚಂದ್ರಶೇಖರ್ ಹಾಗೂ ಮನೋಮೂರ್ತಿ ಕಾಂಬಿನೇಷನ್‌ನ ಈ 7ನೇ ಚಿತ್ರದ 'ರನ್ ರನ್' ಗೀತೆ ಬಿಡುಗಡೆಯಾಗಿದ್ದು, ಪೃಥ್ವಿ ಅಂಬರ್, ನಿರೂಪ್ ಭಂಡಾರಿ ಹಾಗೂ ಶಾನ್ವಿ ಶ್ರೀವಾಸ್ತವ್ ನಟಿಸಿರುವ ಈ ಸಿನಿಮಾವನ್ನುಕೆವಿಎನ್ ಪ್ರೊಡಕ್ಷನ್ಸ್ ಬಿಡುಗಡೆ ಮಾಡಲಿದೆ.

ಕನ್ನಡ ಚಿತ್ರರಂಗದ ಶ್ರೇಷ್ಠ ಸಿನಿಮಾಗಳಲ್ಲೊಂದಾದ, 90ರ ದಶಕದ ಸೂಪರ್ ಹಿಟ್ ಚಿತ್ರ 'ಅಮೆರಿಕಾ ಅಮೆರಿಕಾ' ಬಿಡುಗಡೆಯಾಗಿ ಬರೋಬ್ಬರಿ 29 ವರ್ಷಗಳಾಗಿವೆ. ಇದೀಗ ಅದರ ಸೀಕ್ವೆಲ್ ‘ಅಮೆರಿಕಾ ಅಮೆರಿಕಾ 2’ ತೆರೆಗೆ ಬರಲು ಸಜ್ಜಾಗಿದೆ. ಹಿರಿಯ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಹಾಗೂ ಖ್ಯಾತ ಸಂಗೀತ ನಿರ್ದೇಶಕ ಮನೋಮೂರ್ತಿ ಜೋಡಿಯ ಈ ಬಹುನಿರೀಕ್ಷಿತ ಚಿತ್ರದ ಮೊದಲ ಗೀತೆ ರಿಲೀಸ್‌ ಆಗಿದ್ದು, ಜೊತೆಗೆ ಈ ಚಿತ್ರದ ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ಘೋಷಿಸಲಾಗಿದೆ.

ನಾಗತಿಹಳ್ಳಿ - ಮನೋಮೂರ್ತಿ ಜೋಡಿಯ 7ನೇ ಸಿನಿಮಾ

'ಅಮೆರಿಕಾ ಅಮೆರಿಕಾ' ಚಿತ್ರದ ಮೂಲಕವೇ ಅನಿವಾಸಿ ಭಾರತೀಯ ಮನೋಮೂರ್ತಿ ಅವರು ಸಂಗೀತ ನಿರ್ದೇಶಕರಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಅಂದು "ನೂರು ಜನ್ಮಕೂ", "ಯಾವ ಮೋಹನ ಮುರಳಿ ಕರೆಯಿತು", "ಹೇಗಿದೆ ನಮ್ಮ ದೇಶ" ಮುಂತಾದ ಎವರ್‌ಗ್ರೀನ್ ಹಾಡುಗಳನ್ನು ನೀಡಿದ್ದ ಈ ಜೋಡಿ, ಆನಂತರ 'ಅಮೃತಧಾರೆ' ("ನೀ ಅಮೃತಧಾರೆ"), 'ನನ್ನ ಪ್ರೀತಿಯ ಹುಡುಗಿ' ("ಕಾರ್ ಕಾರ್ ಎಲ್ನೋಡಿ ಕಾರ್"), 'ಮಾತಾಡ್ ಮಾತಾಡ್ ಮಲ್ಲಿಗೆ' ("ಝಣ ಝಣ") ಸೇರಿದಂತೆ 'ಒಲವೇ ಜೀವನ ಲೆಕ್ಕಾಚಾರ' ಚಿತ್ರದವರೆಗೆ ಒಟ್ಟು ಆರು ಸಿನಿಮಾಗಳಿಗೆ ಜೊತೆಯಾಗಿ ಕೆಲಸ ಮಾಡಿದೆ. ಇದೀಗ ‘ಅಮೆರಿಕಾ ಅಮೆರಿಕಾ 2’ ಈ ಹಿಟ್ ಜೋಡಿಯ ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ 7ನೇ ಸಿನಿಮಾವಾಗಿದೆ.

ಸಾಂಗ್‌ ರಿಲೀಸ್‌ ವೇಳೆ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಹಾಗೂ ಮನೋಮೂರ್ತಿ ಅವರು ತಮ್ಮ ಸುದೀರ್ಘ ಸ್ನೇಹ ಮತ್ತು ಸಂಗೀತ ಪಯಣವನ್ನು ಮೆಲಕು ಹಾಕಿದರಲ್ಲದೆ, ತಾವಿಬ್ಬರೂ ಜೊತೆಯಾಗಿ ನೀಡಿದ 7 ಚಿತ್ರಗಳ ಹಿಟ್ ಹಾಡುಗಳ ವಿಶೇಷತೆಗಳನ್ನು ಹಂಚಿಕೊಂಡರು.

Kamal Haasan: ಕಮಲ್‌ ಹಾಸನ್‌ಗೆ ಕನ್ನಡದ ಬಗ್ಗೆ ಅರಿವಿಲ್ಲ: ನಟ ಶ್ರೀನಾಥ್, ನಾಗತಿಹಳ್ಳಿ ಚಂದ್ರಶೇಖರ್ ತಿರುಗೇಟು

'ರನ್ ರನ್' ಮೊದಲ ಗೀತೆ ರಿಲೀಸ್‌

ʻಅಮೆರಿಕಾ ಅಮೆರಿಕಾ 2ʼ ಚಿತ್ರದ ಮೊದಲ ಹಾಡಾದ ‘ರನ್ ರನ್’ ಅನ್ನು ಹೆಸರಾಂತ ಲೇಖಕ ಹಾಗೂ ಸಂಪಾದಕ ಜೋಗಿ ಅವರು ಅನಾವರಣಗೊಳಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಸ್ವತಃ ನಾಗತಿಹಳ್ಳಿ ಚಂದ್ರಶೇಖರ್ ಅವರೇ ಬರೆದಿರುವ ಈ ಗೀತೆಗೆ ಖ್ಯಾತ ಗಾಯಕರಾದ ಶಂಕರ್ ಮಹದೇವನ್ ಮತ್ತು ಶ್ರೇಯಾ ಘೋಷಾಲ್ ಧ್ವನಿಯಾಗಿದ್ದಾರೆ.

ಸೆಪ್ಟೆಂಬರ್ 11ಕ್ಕೆ ಈ ಸಿನಿಮಾ ಬಿಡುಗಡೆ

ಮೈಸೂರು ಸ್ಯಾಂಡಲ್ ಸೋಪ್ ಸಂಸ್ಥೆಯ ಮುಖ್ಯಸ್ಥರಾದ ಪ್ರಶಾಂತ್ ಅವರು ಚಿತ್ರದ ಬಿಡುಗಡೆ ದಿನಾಂಕವನ್ನು ಅನಾವರಣಗೊಳಿಸಿದರು. ಸಿನಿಮಾವು ಸೆಪ್ಟೆಂಬರ್ 11 ರಂದು ತೆರೆಕಾಣಲಿದೆ. ಚಿತ್ರದಲ್ಲಿ ಪೃಥ್ವಿ ಅಂಬರ್, ನಿರೂಪ್ ಭಂಡಾರಿ ನಾಯಕರಾಗಿ ಹಾಗೂ ಶಾನ್ವಿ ಶ್ರೀವಾಸ್ತವ್ ನಾಯಕಿಯಾಗಿ ನಟಿಸಿದ್ದಾರೆ. 'ನಾಗತಿಹಳ್ಳಿ ಸಿನಿ ಕ್ರಿಯೇಷನ್ಸ್' ಬ್ಯಾನರ್ ಅಡಿಯಲ್ಲಿ ಈ ಸಿನಿಮಾ ನಿರ್ಮಾಣವಾಗಿದ್ದು, ಹೆಸರಾಂತ 'ಕೆವಿಎನ್‌ ಪ್ರೊಡಕ್ಷನ್ಸ್‌ ಸಂಸ್ಥೆಯು ವಿತರಣೆಯ ಜವಾಬ್ದಾರಿ ವಹಿಸಿಕೊಂಡಿದೆ. ಕನ್ನಡಿಗರಿರುವ ವಿಶ್ವದ ಬಹುತೇಕ ದೇಶಗಳಲ್ಲಿ ಚಿತ್ರ ಪ್ರದರ್ಶನಗೊಳ್ಳಲಿದೆಯಂತೆ.