ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Chowkidar Review: ನಿನ್ನಂಥ ಅಪ್ಪ ಇಲ್ಲಾ, ನಿನ್ನಂಥ ಮಗನೂ ಇಲ್ಲಾ; ಚೌಕಿದಾರ್‌ನಲ್ಲಿ ಫ್ಯಾಮಿಲಿ ಡ್ರಾಮಾವೇ ಎಲ್ಲಾ!

Chowkidar Movie Review: ಚಂದ್ರಶೇಖರ್‌ ಬಂಡಿಯಪ್ಪ ಅವರ ಚೌಕಿದಾರ್‌ ಒಂದು ತಂದೆ-ಮಗನ ಭಾವನಾತ್ಮಕ ಸಂಬಂಧದ ಕಥೆ ಇರುವ ಸಿನಿಮಾ. ಮಗನ ಮೇಲೆ ಅತಿಯಾದ ಪ್ರೀತಿ ಹೊಂದಿರುವ ತಂದೆಯೊಬ್ಬನ ಕಥೆ ಇದು. ಈ ಸಿನಿಮಾವು ಪ್ರೇಕ್ಷಕರ ನಿರೀಕ್ಷೆಗೆ ತಕ್ಕಂತೆ ಇದೆಯಾ? ರೇಟಿಂಗ್‌ ಎಷ್ಟು? ಇಲ್ಲಿದೆ ನೋಡಿ ವಿಮರ್ಶೆ.

ಚೌಕಿದಾರ್‌ ಎಂಬ ಹೆಸರು ಕೇಳಿದಾಕ್ಷಣ ಎಲ್ಲರಿಗೂ ನೆನಪಾಗುವುದು, ಇದು ರಾಜಕೀಯ ಕುರಿತ ಸಿನಿಮಾ ಇರಬೇಕಾ ಅಂತ. ಆದರೆ ಇದು ರಾಜಕೀಯ ಸಿನಿಮಾ ಅಲ್ಲ. ಬದಲಿಗೆ, ತಂದೆ ಮಗನ ಒಡನಾಟದ ಸಿನಿಮಾ. ಚೌಕಿದಾರ್‌ ಎಂದರೆ, ಇಲ್ಲಿ ತಂದೆ. ರಥಾವರದಂತಹ ಮಾಸ್‌ ಸಿನಿಮಾ ಮಾಡಿ ಫೇಮಸ್‌ ಆಗಿದ್ದ ನಿರ್ದೇಶಕ ಚಂದ್ರಶೇಖರ್‌ ಬಂಡಿಯಪ್ಪ ಈ ಬಾರಿ ಚೌಕಿದಾರ್‌ ಎಂಬ ಎಮೋಷನಲ್‌ ಸಿನಿಮಾದೊಂದಿಗೆ ಅಖಾಡಕ್ಕಿಳಿದಿದ್ದಾರೆ. ಹಾಗಾದರೆ, ಈ ಸಿನಿಮಾ ಹೇಗಿದೆ? ಮುಂದೆ ಓದಿ.

ಚೌಕಿದಾರನ ಕಥೆ ಏನು?

ಪ್ರಕಾಶ್‌ ಗೌಡ್ರಿಗೆ (ಸಾಯಿಕುಮಾರ್) ಮತ್ತು ಸುಧಾ (ಶ್ವೇತಾ) ದಂಪತಿಗೆ ಒಬ್ಬ ಮಗ ಹುಟ್ಟಿದ್ದಾನೆ. ಆತನ ಹೆಸರು ಸಿದ್ದಾರ್ಥ್‌ (ಪೃಥ್ವಿ ಅಂಬಾರ್)‌. ಆಗತಾನೇ ನಡೆಯುವುದನ್ನ ಕಲಿಯುತ್ತಿರುವ ಮಗ ಎಡವಿ ಬಿದ್ದರೂ, ಅದಕ್ಕೆ ಪತ್ನಿಯನ್ನೇ ಹೊಣೆ, ಆಕೆಗೆ ಹೊಡೆಯುತ್ತಾನೆ ಪ್ರಕಾಶ್.‌ ಅಷ್ಟರಮಟ್ಟಿಗೆ ಮಗನೆಂದರೆ, ಮಮಕಾರ. ಸಾಲಸೋಲ ಮಾಡಿಯಾದರೂ, ಸರಿ ಮಗ ಕೇಳಿದ್ದನ್ನೆಲ್ಲಾ ತಂದುಕೊಡುವ ಪ್ರಕಾಶ್‌, ಬದುಕಿನಲ್ಲಿ ಮಗನಿಂದಲೇ ಹಲವು ಏರಿಳಿತಗಳು ಬರುತ್ತವೆ. ಸರ್ಕಾರಿ ಉದ್ಯೋಗಿಯಾಗಿದ್ದರೂ, ಹಣಕ್ಕಾಗಿ ಪರದಾಡುವ ಪರಿಸ್ಥಿತಿ ಬರುತ್ತದೆ.

ಏನಾದರಾಗಲಿ, ಮಗನನ್ನು ಎಂಜಿನಿಯರ್‌ ಮಾಡುತ್ತೇನೆ ಎಂಬುದು ಪ್ರಕಾಶ್‌ ಕನಸು. ಆದರೆ ಮಗ ಸಿದ್ದಾರ್ಥ್‌ ಇದನ್ನೆಲ್ಲಾ ಪೂರೈಸುತ್ತಾನಾ? ತಂದೆಯ ಕಷ್ಟಗಳನ್ನು ಬಗೆಹರಿಸಿ, ಅವರ ಕಷ್ಟಗಳನ್ನು ಈಡೇರಿಸುತ್ತಾನಾ ಎಂಬುದೇ ಚೌಕಿದಾರ್‌ ಸಿನಿಮಾದ ಕಥಾವಸ್ತು. ಈ ಜರ್ನಿಯಲ್ಲಿ ಹಲವು ಟ್ವಿಸ್ಟ್‌ & ಟರ್ನ್‌ಗಳನ್ನಿಟ್ಟು ನಿರೂಪಣೆ ಮಾಡಿಕೊಂಡು ಹೋಗಿದ್ದಾರೆ ನಿರ್ದೇಶಕ ಚಂದ್ರಶೇಖರ್‌ ಬಂಡಿಯಪ್ಪ.

Chowkidar Movie: ಪೃಥ್ವಿ-ಧನ್ಯಾ ನಟನೆಯ 'ಚೌಕಿದಾರ್' ಸಿನಿಮಾದ ಚಿತ್ರೀಕರಣ ಮುಕ್ತಾಯ

ತಂದೆಯಾಗಿ ಕಣ್ಣೀರಾಕಿಸುವ ಸಾಯಿಕುಮಾರ್‌

ಸಿನಿಮಾದ ಹೀರೋ ಪೃಥ್ವಿ ಅಂಬಾರ್‌ ಆಗಿದ್ದರೂ, ಇಡೀ ಸಿನಿಮಾವನ್ನು ಹೆಗಲಮೇಲೆ ಹೊತ್ತು ಸಾಗಿರುವುದು ನಟ ಸಾಯಿಕುಮಾರ್.‌ ಎಮೋಷನಲ್‌ ತಂದೆಯಾಗಿ, ಒಮ್ಮೊಮ್ಮೆ ಬೇಜವಾಬ್ದಾರಿ ಗಂಡನಾಗಿ, ಸಾಲದ ಸುಳಿಗೆ ಸಿಲುಕಿ ಒದ್ದಾಡುವ ಮಧ್ಯಮ ವರ್ಗದ ಪ್ರಜೆಯಾಗಿ ತಮ್ಮ ಪಾತ್ರವನ್ನು ಸಾಯಿಕುಮಾರ್‌ ಕಣ್ಣಿಗೆ ಕಟ್ಟುವಂತೆ ಜೀವಿಸಿದ್ದಾರೆ. ಆದರೆ ಕೆಲ ಕಾಮಿಡಿ ಸೀನ್‌ಗಳಲ್ಲಿನ ಅವರ ಮಗುವಿನಂತಹ ನಟನೆ ಚೂರು ಓವರ್‌ ಎನಿಸುತ್ತದೆ.

ಅತ್ತ ಪೃಥ್ವಿ ಅಂಬಾರ್‌ ಕೂಡ ಸಿದ್ದಾರ್ಥ್‌ ಪಾತ್ರವನ್ನು ಜೀವಿಸಿದ್ದಾರೆ. ಕಾಲೇಜು ಯುವಕನಾಗಿ, ಪ್ರೇಮಿಯಾಗಿ ಇಷ್ಟವಾಗುತ್ತಾರೆ. ಎಂದಿನಂತೆ ಡ್ಯಾನ್ಸ್‌ನಲ್ಲಿ ಸಖತ್‌ ಆಗಿ ಮಿಂಚಿದ್ದಾರೆ. ಚಿತ್ರದಲ್ಲಿನ ಅವರ ಲವ್‌ ಟ್ರ್ಯಾಕ್‌ಗೆ ಇನ್ನಷ್ಟು ಸ್ಕೋಪ್‌ ನೀಡಬಹುದಿತ್ತು. ಬಹಳ ದಿನಗಳ ನಂತರ ತೆರೆಮೇಲೆ ಕಾಣಿಸಿಕೊಂಡಿರುವ ನಟಿ ಶ್ವೇತಾ ಅವರದ್ದು ತೂಕದ ಅಭಿನಯ.

ಧನ್ಯಾ ರಾಮ್‌ಕುಮಾರ್‌ಗೆ ಜಾಸ್ತಿ ಸ್ಕ್ರೀನ್‌ ಸ್ಪೇಸ್‌ ಸಿಕ್ಕಿಲ್ಲ. ಆದರೂ, ಸಿಕ್ಕ ದೃಶ್ಯಗಳಲ್ಲೇ ಮಿಂಚಿದ್ದಾರೆ. ಒಂದೇ ಸೀನ್‌ನಲ್ಲಿ ಕಾಣಿಸಿಕೊಂಡರೂ, ಗಿಲ್ಲಿ ನಟ ನಗಿಸುತ್ತಾರೆ. ಉಳಿದಂತೆ, ಖಳನಾಗಿ ಧರ್ಮ ಖಡಕ್‌ ನಟನೆ ನೀಡಿದ್ದಾರೆ. ಪೊಲೀಸ್‌ ಅಧಿಕಾರಿ ಸುಧಾರಾಣಿ ಪಾತ್ರದಿಂದ ಸಿನಿಮಾಕ್ಕೆ ಹೆಚ್ಚಿನ ಲಾಭವೇನೂ ಆಗಿಲ್ಲ.

ಅಣ್ಣಾವ್ರ ಮೊಮ್ಮಗಳು ಧನ್ಯಾ ರಾಮ್‌ಕುಮಾರ್‌ಗೆ ಜೋಡಿಯಾದ ನಟ ಪೃಥ್ವಿ ಅಂಬಾರ್‌; ʻಚೌಕಿದಾರ್‌ ʼ ಸಿನಿಮಾ ಟ್ರೇಲರ್‌ ಹೇಗಿದೆ?

ಡೈರೆಕ್ಷನ್‌, ಮೇಕಿಂಗ್‌ ಹೇಗಿದೆ?

ನಿರ್ದೇಶಕ ಚಂದ್ರಶೇಖರ್‌ ಬಂಡಿಯಪ್ಪ ತಮ್ಮ ಜಾನರ್‌ ಅನ್ನ ಬದಲಾಯಿಸಿದ್ದಾರೆ. ಈ ಬಾರಿ ಎಮೋಷನಲ್‌ ಕಥೆಗೆ ಶಿಫ್ಟ್‌ ಆಗಿದ್ದಾರೆ. ಮಕ್ಕಳನ್ನು ತಂದೆ ಎಷ್ಟು ಜವಾಬ್ದಾರಿಯಿಂದ ಬೆಳೆಸಬೇಕು, ಮಕ್ಕಳ ಬೆಳವಣಿಗೆಯಲ್ಲಿ ಪೋಷಕರ ಪಾತ್ರವೇನು? ಮಕ್ಕಳು ಕೂಡ ತಂದೆ - ತಾಯಿಗೆ ಯಾವ ರೀತಿ ಕಾಳಜಿ ವಹಿಸಬೇಕು ಎಂಬೆಲ್ಲಾ ವಿಚಾರಗಳನ್ನು ಬಹಳ ಸೂಕ್ಷ್ಮವಾಗಿ ಹೇಳುವ ಪ್ರಯತ್ನ ಮಾಡಿದ್ದಾರೆ. ಮಕ್ಕಳ ಮೇಲೆ ಪ್ರೀತಿ-ಕಾಳಜಿ ಅತಿಯಾದರೆ, ಆಗಬಹುದಾದ ಅನಾಹುತಗಳ ದರ್ಶನವೂ ಆಗಿದೆ. ಮೊದಲರ್ಧ ಕಥೆ ತೆರೆದುಕೊಳ್ಳಲು ಸಮಯ ತೆಗೆದುಕೊಳ್ಳುತ್ತದೆ.

ಆನಂತರ ಸಾಕಷ್ಟು ಟ್ವಿಸ್ಟ್‌ಗಳ ಮೂಲಕ ಕಥೆಯನ್ನು ಹೇಳಿಕೊಂಡು ಹೋಗಿದ್ದಾರೆ. ಜೊತೆಗೆ ರೇಷ್ಮೆ ಬೆಳೆಯನ್ನು ಕೂಡ ಕಥೆಯೊಳಗೆ ತಂದಿದ್ದಾರೆ. ಧನ್ಯಾ ರಾಮ್‌ಕುಮಾರ್‌ ಪಾತ್ರಕ್ಕೆ ಇನ್ನಷ್ಟು ಹೆಚ್ಚಿನ ಸ್ಕ್ರೀನ್‌ ಸ್ಪೇಸ್‌ ನೀಡಬಹುದಾಗಿತ್ತು. ಸಚಿನ್‌ ಬಸ್ರೂರು ಸಂಗೀತದಲ್ಲಿನ ಹಾಡುಗಳು ಕೇಳುವುದಕ್ಕೆ ಇಂಪೆನಿಸುತ್ತವೆ. ಛಾಯಾಗ್ರಹಣದಲ್ಲಿ ಅಷ್ಟೇನೂ ಹೊಸತಿಲ್ಲ. ಕಥೆಯಲ್ಲಿ ಎಮೋಷನಲ್‌ ಅಂಶಗಳು ಹೆಚ್ಚಿಗೇ ಇದ್ದರೂ, ಆಕ್ಷನ್‌ ಅನ್ನು ಮರೆತಿಲ್ಲ. ಎರಡ್ಮೂರು ಮಾಸ್ ಫೈಟ್‌ಗಳಲ್ಲಿ ಪೃಥ್ವಿ ಅಂಬಾರ್‌ ಮಿಂಚಿದ್ದಾರೆ. ಒಟ್ಟಾರೆಯಾಗಿ, ಫ್ಯಾಮಿಲಿ ಎಮೋಷನ್ಸ್‌ ಜೊತೆಗೆ ಒಂದು ಮಾಸ್‌ ಕಮರ್ಷಿಯಲ್‌ ಸಿನಿಮಾಗಳನ್ನು ಎಂಜಾಯ್‌ ಮಾಡುವವರಿಗೆ ಚೌಕಿದಾರ್‌ ಹಿಡಿಸಬಹುದು.

Movie: ಚೌಕಿದಾರ್

Release Date: ಜನವರಿ 30, 2026

Language: ಕನ್ನಡ

Genre: ಡ್ರಾಮಾ

Director: ಚಂದ್ರಶೇಖರ್‌ ಬಂಡಿಯಪ್ಪ

Cast: ಪೃಥ್ವಿ ಅಂಬಾರ್‌, ಸಾಯಿಕುಮಾರ್‌, ಶ್ವೇತಾ, ಧನ್ಯಾ ರಾಮ್‌ಕುಮಾರ್‌, ಸುಧಾರಾಣಿ, ಗಿಲ್ಲಿ ನಟ, ಧರ್ಮ, ಮುನಿ,

Duration: 145 ನಿಮಿಷಗಳು

Rating: 3/5