ಕಲರ್ಸ್ ಕನ್ನಡ ವಾಹಿನಿಯಲ್ಲಿ (Colors Kannada) ಪ್ರಸಾರವಾಗುತ್ತಿರುವ 'ರಾಣಿ' (Raani Serial) ಧಾರಾವಾಹಿ ಬಗ್ಗೆ ವೀಕ್ಷಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ತನ್ನ ಮುಗ್ಧ ನಟನೆಯಿಂದ ಎಲ್ಲರ ಮನಗೆದ್ದಿರುವ ಪುಟಾಣಿ ರಾಣಿ, ಈಗ ಮನೆ ಮನೆಯಲ್ಲೂ ಸದ್ದು ಮಾಡುತ್ತಿದ್ದಾಳೆ. ಪುಟಾಣಿ ರಾಣಿಯ ಪ್ರತಿಯೊಂದು ಹೆಜ್ಜೆಯೂ ಭಾವುಕ ಕ್ಷಣಗಳಿಗೆ ಸಾಕ್ಷಿಯಾಗುತ್ತಿದೆ. ಕೃಷ್ಣ ಜನ್ಮಾಷ್ಟಮಿಯ ದಿನವೇ ಹುಟ್ಟಿದ ರಾಣಿ (Raani), ತನ್ನ ಭವಿಷ್ಯದ ಬಗ್ಗೆ ದೊಡ್ಡ ಕನಸನ್ನೇ ಕಟ್ಟಿಕೊಂಡಿದ್ದಾಳೆ. ಈಗ ಮಾವನಅಂಗಡಿಯಲ್ಲಿ ತನ್ನ ಬುದ್ದಿವಂತಿಕೆ ತೋರಿದ್ದಾಳೆ.
ತಾಯಿಯ ಬಗ್ಗೆಯೇ ಯೋಚಿಸುತ್ತಾಳೆ ರಾಣಿ
ಶಾಪ್‌ನಲ್ಲಿ ಎಲ್ಲರ ಜೊತೆಗೂ ಚಿನಕುರುಳಿ ರಾಣಿ ಬೆರೆಯುತ್ತಾಳೆ. ಅಷ್ಟೇ ಅಲ್ಲ ಎಷ್ಟೇ ನೋವಿದ್ದರೂ ಸಖತ್ ತುಂಟಿ ರಾಣಿ. ಎಲ್ಲಿ ನಿದ್ದೆ ಮಾಡುವಾಗ ಬಿದ್ದು ಹೋಗಿ ಬಿಡ್ತಿನೋ ಅಂತ ಜಡೆಯನ್ನ ಕಟ್ಟಿ ಮಜವಾಗಿ ಮಲಗಿದ್ದಾಳೆ ರಾಣಿ. ಅಷ್ಟೇ ಅಲ್ಲ ಅಂಗಡಿ ಬರೋ ಗಿರಾಕಿಗಳು ಲೆಕ್ಕ ತಪ್ಪು ಹೇಳಿದ್ರೂ ತಾನೇ ಅದನ್ನು ಕಂಡು ಹಿಡಿದು ಸರಿಯಾದ ಲೆಕ್ಕ ಹೇಳಿದ್ದಾಳೆ.
ಪ್ರತಿ ಕ್ಷಣವೂ ತಾಯಿಯ ಬಗ್ಗೆಯೇ ಯೋಚಿಸುತ್ತಾಳೆ ರಾಣಿ. ನಿನ್ನೆಯ ಎಪಿಸೋಡ್‌ನಲ್ಲಿ ಮಾವನಿಗೆ "ನಿಮಗೆ ಕೃಷ್ಣ-ಕಂಸನ ಕಥೆ ಗೊತ್ತಾ?" ಎಂದು ಕೇಳುತ್ತಾಳೆ. ಅದಕ್ಕೆ ಆತ, "ಗೊತ್ತಿದೆಯಲ್ಲಮ್ಮ, ಕೃಷ್ಣ ಪರಮಾತ್ಮ ಹುಟ್ಟಿ ಕಂಸನನ್ನು ಸಂಹರಿಸಿ, ತನ್ನ ತಂದೆ ತಾಯಿಯಾದ ದೇವಕಿ-ವಸುದೇವರನ್ನು ಜೈಲಿನಿಂದ ಬಿಡಿಸಿದ ಕಥೆ ಎಲ್ಲರಿಗೂ ಗೊತ್ತು" ಎಂದು ವಿವರಿಸುತ್ತಾನೆ.
ಇದನ್ನೂ ಓದಿ: Jr NTR: ತೂಕ ಇಳಿಸಿಕೊಂಡ ಜೂನಿಯರ್ ಎನ್‌ಟಿಆರ್; ಫ್ಯಾನ್ಸ್ ಶಾಕ್
ಆಗ ರಾಣಿ, ತಾನು ಕೂಡ ಕೃಷ್ಣ ಜನ್ಮಾಷ್ಟಮಿಯಂದೇ ಹುಟ್ಟಿದ್ದು ತನ್ನ ತಾಯಿ ಸದ್ಯ ಜೈಲಿನಲ್ಲಿದ್ದು, ಅವಳನ್ನು ಬಿಡಿಸಿಕೊಂಡು ಬಂದೇ ಬರುವೆ ಎನ್ನುತ್ತಾಳೆ. ಈ ರಾಣಿ ತನ್ನ ಗುರಿಯನ್ನು ತಲುಪುತ್ತಾಳಾ? ಜೈಲಿನಲ್ಲಿರುವ ಅವಳ ತಾಯಿ ಯಾರು? ಅವರು ಜೈಲಿಗೆ ಹೋಗಲು ಕಾರಣವೇನು? ಎಂಬ ಪ್ರಶ್ನೆಗಳು ವೀಕ್ಷಕರಲ್ಲಿದೆ.
ಎದೆತುಂಬಿ ಬರುವ ಕತೆ
ʻರಾಣಿʼ ಕೇವಲ ಅಪರಾಧ ಅಥವಾ ಜೈಲಿನ ಕಥೆಯಲ್ಲ; ಬದಲಾಗಿ ವಿಧಿಯಾಟದಿಂದಾಗಿ ಸೆರೆಮನೆಯ ಕಂಬಿಗಳ ನಡುವೆಯೇ ಹುಟ್ಟಿ, ಹೊರಗಿನ ಜಗತ್ತನ್ನೇ ಕಾಣದ ಮುಗ್ಧ ಮಗು ರಾಣಿ ಮತ್ತು ಮಗಳಿಗಾಗಿ ಹಂಬಲಿಸುವ ತಾಯಿಯ ಎದೆತುಂಬಿ ಬರುವ ಕತೆ. ರಾಣಿಯಾಗಿ ಬಾಲ ನಟಿ ಧನ್ವಿ ನಾಯಕನಾಗಿ ಆರವ್ ಸೂರ್ಯ ಮತ್ತು ನಾಯಕಿಯಾಗಿ ಐಶ್ವರ್ಯಾ ಅವರು ಗಟ್ಟಿ ಕಥೆಗೆ ಜೀವ ತುಂಬಿದ್ದಾರೆ.
ಸಮಾಜವು ಜೈಲನ್ನು ಮತ್ತು ಅಲ್ಲಿನವರನ್ನು ನೋಡುವ ದೃಷ್ಟಿಕೋನಕ್ಕೂ, ರಾಣಿಯ ಮುಗ್ಧ ಕಣ್ಣುಗಳು ಕಾಣುವ ಪ್ರಪಂಚಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಹಗೆತನ ಅಥವಾ ಸೇಡಿನ ಬದಲು ಪ್ರೀತಿಯೇ ಜೈಲಿನ ಕಂಬಿಗಳಿಗಿಂತಲೂ ಶಕ್ತಿಶಾಲಿ ಎಂಬುದನ್ನು ಈ ಧಾರಾವಾಹಿ ಸಾರುತ್ತದೆ. ರಾಣಿಯ ಪ್ರತಿಯೊಂದು ಪ್ರಶ್ನೆಯೂ ಸಮಾಜದ ಕಟ್ಟುಪಾಡುಗಳನ್ನು ಪ್ರಶ್ನಿಸುವಂತಿದ್ದು, ವೀಕ್ಷಕರಲ್ಲಿ ಚಿಂತನೆ ಮೂಡಿಸುತ್ತದೆ.
ಇದನ್ನೂ ಓದಿ: Amruthadhaare Serial: ಮಲ್ಲಿ ಸಪೋರ್ಟ್‌ಗೆ ನಿಂತ ಗೌತಮ್ ದಿವಾನ್! ಜೈದೇವ್ ಕಥೆ ಏನು?
ಒಟ್ಟಾರೆಯಾಗಿ, ‘ರಾಣಿ’ ಕೇವಲ ಒಂದು ಧಾರಾವಾಹಿಯಲ್ಲ, ಅದು ಪ್ರೀತಿ, ಆಶಾವಾದ ಮತ್ತು ಮಗಳೊಬ್ಬಳ ಹಠದ ಹೋರಾಟದ ಪಯಣ. ಕಲರ್ಸ್ ಕನ್ನಡ ವಾಹಿನಿಲ್ಲಿ ಸಂಜೆ 6 ಗಂಟೆಗೆ ಪ್ರಸಾರ ಕಾಣುತ್ತಿದೆ.