ಕನ್ನಡದ ಮೊದಲ ಪ್ರಚಾರ ಸಂಸ್ಥೆ ರಾಘವೇಂದ್ರ ಚಿತ್ರವಾಣಿಗೆ (Raghavendra Chitravani) ಈಗ 50ರ ಸಡಗರ. 1976 ರಲ್ಲಿ ದಿ.ಡಿ.ವಿ.ಸುಧೀಂದ್ರ ಅವರು ರಾಘವೇಂದ್ರ ಚಿತ್ರವಾಣಿ ಸಂಸ್ಥೆಯನ್ನು ಪ್ರಾರಂಭಿಸಿದರು. ಈವರೆಗೂ ಸುಮಾರು 3000ಕ್ಕೂ ಅಧಿಕ ಚಿತ್ರಗಳಿಗೆ (Cinema) ಪ್ರಚಾರ ಕಾರ್ಯ ನೀಡಿರುವ ಏಕ ಮಾತ್ರ ಸಂಸ್ಥೆ ಇದಾಗಿದೆ. ಈವರೆಗೂ ಭಾರತ ಚಿತ್ರರಂಗದ ಇತಿಹಾಸದಲ್ಲೇ ಯಾವ ಪ್ರಚಾರ ಸಂಸ್ಥೆ(ಪಿ.ಆರ್.ಓ) ಕೂಡ ಐವತ್ತು ವರ್ಷಗಳ ಕಾಲ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿರುವ ಉದಾಹರಣೆ ಇಲ್ಲ.
ಏಪ್ರಿಲ್ ತಿಂಗಳಲ್ಲಿ ವಿಶೇಷ ಆಚರಣೆ
ಪ್ರಸ್ತುತ ಈ ರಾಘವೇಂದ್ರ ಚಿತ್ರವಾಣಿ ಸಂಸ್ಥೆಯನ್ನು ಸುಧೀಂದ್ರ ವೆಂಕಟೇಶ್ ಮುನ್ನಡೆಸುತ್ತಿದ್ದಾರೆ. ಸುಧೀಂದ್ರ ಅವರ ಪುತ್ರ ಸುನೀಲ್ ಸುಧೀಂದ್ರ, ಡಿ.ಜಿ.ವಾಸುದೇವ್, ಪವನ್ ವೆಂಕಟೇಶ್ ಸಾಥ್ ನೀಡುತ್ತಿದ್ದಾರೆ. ಐವತ್ತರ ಸಂಭ್ರಮವನ್ನು ಏಪ್ರಿಲ್ ತಿಂಗಳಲ್ಲಿ ವಿಶೇಷವಾಗಿ ಆಚರಿಸಲು ರಾಘವೇಂದ್ರ ಚಿತ್ರವಾಣಿ ಸಂಸ್ಥೆ ಮುಂದಾಗಿದೆ.
ಇದನ್ನೂ ಓದಿ: ಕನ್ನಡಿಗ ಶತಾವಧಾನಿ ಡಾ. ಆರ್. ಗಣೇಶ್‌ಗೆ ಪದ್ಮ ಭೂಷಣ; ಧರ್ಮೇಂದ್ರಗೆ ಪದ್ಮ ವಿಭೂಷಣ ಪ್ರಶಸ್ತಿ ಘೋಷಣೆ
ಇದರ ಪೂರ್ವಭಾವಿಯಾಗಿ ಸುವರ್ಣ ಸಂಭ್ರಮದ ಲೋಗೊ ಅನಾವರಣ ಸಮಾರಂಭ ಇತ್ತೀಚೆಗೆ ನೆರವೇರಿತು. ಹಿರಿಯ ನಟರಾದ ಜೆ.ಕೆ.ಶ್ರೀನಿವಾಸಮೂರ್ತಿ, ನಟ ಕೋಮಲ್ ಕುಮಾರ್ ಹಾಗೂ ನಟಿ ಅನು ಪ್ರಭಾಕರ್ ಮುಖರ್ಜಿ ರಾಘವೇಂದ್ರ ಚಿತ್ರವಾಣಿ ಸಂಸ್ಥೆಯ ಸುವರ್ಣ ಸಂಭ್ರಮದ ಲೋಗೊ ಅನಾವರಣ ಮಾಡಿದರು. ಡಿ.ವಿ.ಸುಧೀಂದ್ರ ಅವರ ಪತ್ನಿ ಶ್ರೀಮತಿ ಪದ್ಮ ಸುಧೀಂದ್ರ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ನಂತರ ಗಣ್ಯರು ಕನ್ನಡದ ಮೊದಲ ಪಿ.ಆರ್.ಓ ಸುಧೀಂದ್ರ ಅವರ ಬಗ್ಗೆ ಹಾಗೂ ರಾಘವೇಂದ್ರ ಚಿತ್ರವಾಣಿ ಸಂಸ್ಥೆಯ ಕುರಿತು ಮಾತನಾಡಿದರು.
ನೂರು ವರ್ಷಗಳ ಸಂಭ್ರಮ
ರಾಘವೇಂದ್ರ ಚಿತ್ರವಾಣಿ ಸಂಸ್ಥೆಗೂ 50 ವರ್ಷ. ನಾನು ಸಿನಿಮಾರಂಗಕ್ಕೆ ಬಂದು 50 ವರ್ಷ ಎಂದು ಮಾತನಾಡಿದ ಹಿರಿಯ ನಟ ಜೆ.ಕೆ ಶ್ರೀನಿವಾಸಮೂರ್ತಿ, ಆಗಿನಿಂದಲೂ ನನಗೆ ಸುಧೀಂದ್ರ ಅವರ ಜೊತೆ ಒಡನಾಟ. ಪ್ರಚಾರ ಸಂಸ್ಥೆಯೊಂದು ಈ ರೀತಿ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿರುವುದು ನಿಜಕ್ಕೂ ಖುಷಿಯಾಗಿದೆ. ರಾಘವೇಂದ್ರ ಚಿತ್ರವಾಣಿ ನೂರು ವರ್ಷಗಳ ಸಂಭ್ರಮವನ್ನು ಕಾಣುವಂತಾಗಲಿ ಎಂದು ಹಾರೈಸಿದರು.
ವೆಂಕಟೇಶ್ ಸಂಸ್ಥೆಯ ಜವಾಬ್ದಾರಿ
"ನೀವು ಕನ್ನಡ ಚಿತ್ರರಂಗದಲ್ಲಿ ದೊಡ್ಡ ನಟರಾಗಿ ಬೆಳೆಯುತ್ತೀರಾ" ಎಂದು ನನಗೆ ಹಾರೈಸಿದವರು ಸುಧೀಂದ್ರ ಅವರು. ಸುಧೀಂದ್ರ ಅವರ ತುಂಬು ಕುಟುಂಬ ನೋಡಿದರೆ ನನಗೆ ಸಂತೋಷ ಆಗುತ್ತದೆ. ಸುಧೀಂದ್ರ ಅವರ ನಿಧನದ ನಂತರ ವೆಂಕಟೇಶ್ ಸಂಸ್ಥೆಯ ಜವಾಬ್ದಾರಿಯನ್ನು ಹೊತ್ತು ಸಮರ್ಪಕವಾಗಿ ನಿಭಾಯಿಸುತ್ತಿದ್ದಾರೆ. ಕುಟುಂಬದ ಎಲ್ಲರೂ ಅವರಿಗೆ ಜೊತೆಯಾಗಿ ನಿಂತಿದ್ದಾರೆ. ರಾಘವೇಂದ್ರ ಚಿತ್ರವಾಣಿ ಸಂಸ್ಥೆ ರಾಯರ ದಯೆಯಿಂದ ಇನ್ನಷ್ಟು ಹೆಸರು ಮಾಡಲಿ ಎಂದು ನಟ ಕೋಮಲ್ ಕುಮಾರ್ ಹಾರೈಸಿದರು.
ನಾನು ಬಾಲ ನಟಿಯಾದಗಿನಿಂದಲೂ ಸುಧೀಂದ್ರ ಸರ್ ಅವರನ್ನು ನೋಡಿಕೊಂಡು ಬೆಳೆದವಳು. ನಮ್ಮ ಕುಟುಂಬಕ್ಕೂ ಹಾಗೂ ಅವರ ಕುಟುಂಬಕ್ಕೂ ಬಹಳ ಆತ್ಮೀಯತೆ. ಎಲ್ಲರೂ ಹೇಳಿದ ಹಾಗೆ ಪ್ರಚಾರ ಸಂಸ್ಥೆಯೊಂದು 50 ವರ್ಷಗಳ ಕಾಲ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿರುವುದು ನಿಜಕ್ಕೂ ಹೆಮ್ಮೆ ಎಂದು ನಟಿ ಅನು ಪ್ರಭಾಕರ್ ಮುಖರ್ಜಿ ಹೇಳಿದರು.
ರಾಘವೇಂದ್ರ ಚಿತ್ರವಾಣಿ ಸಾಗಿ ಬಂದ ಬಗ್ಗೆ ಮಾತನಾಡಿದ ಸಂಸ್ಥೆಯ ರುವಾರಿ ಸುಧೀಂದ್ರ ವೆಂಕಟೇಶ್, ಲೋಗೊ ಅನಾವರಣ ಮಾಡಿಕೊಟ್ಟ ಗಣ್ಯರಿಗೆ ಧನ್ಯವಾದ ತಿಳಿಸಿದರು. ಏಪ್ರಿಲ್ ನಲ್ಲಿ ರಾಘವೇಂದ್ರ ಚಿತ್ರವಾಣಿ ಸಂಸ್ಥೆಯ 50 ನೇ ವರ್ಷದ ಸಮಾರಂಭವನ್ನು ಅದ್ದೂರಿಯಾಗಿ ಆಚರಿಸಲು ಸಿದ್ದತೆ ನಡೆಯುತ್ತಿದೆ.
ಇದನ್ನೂ ಓದಿ: R Madhavan: ಇದು ಪ್ರಶಸ್ತಿಯಲ್ಲ, ನನ್ನ ಜವಾಬ್ದಾರಿ; ಪದ್ಮಶ್ರೀ ಪ್ರಶಸ್ತಿ ಬಗ್ಗೆ ನಟ ಆರ್ ಮಾಧವನ್ ಸಂತಸ
ಆಗಿನಿಂದಲೂ ನಮಗೆ ಪ್ರೋತ್ಸಾಹ ನೀಡುತಾ ಬಂದಿರುವ ಚಿತ್ರರಂಗ ಹಾಗೂ ಮಾಧ್ಯಮರಂಗಕ್ಕೆ ನಾವು ಆಬಾರಿ ಎಂದರು. ಡಿ.ವಿ.ಸುಧೀಂದ್ರ ಅವರ ಪುತ್ರ ಸುನೀಲ್ ಸುಧೀಂದ್ರ, ಡಿ.ಜಿ.ವೆಂಕಟೇಶ್ , ಪವನ್ ವೆಂಕಟೇಶ್ ಹಾಗೂ ಸುಧೀಂದ್ರ ಅವರ ಕುಟುಂಬದ ಸದಸ್ಯರು ಸಮಾರಂದಲ್ಲಿ ಉಪಸ್ಥಿತರಿದ್ದರು.