ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Raghu Dixit: ಗ್ರ್ಯಾಮಿ ನಾಮನಿರ್ದೇಶಿತ ಗಾಯಕಿ ಜತೆ 2ನೇ ವಿವಾಹಕ್ಕೆ ಗಾಯಕ ರಘು ದೀಕ್ಷಿತ್ ಸಜ್ಜು

'ನಿನ್ನ ಪೂಜೆಗೆ ಬಂದೆ ಮಹಾದೇಶ್ವರ' ಎಂಬ ಹಾಡಿನ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಖ್ಯಾತರಾದ ಗಾಯಕ ರಘು ದೀಕ್ಷಿತ್ ಅವರ ಮದುವೆ ವಿಚಾರ ಭಾರಿ ಸುದ್ದಿಯಲ್ಲಿದೆ. ಅವರು ಗಾಯಕಿ ಮತ್ತು ಕೊಳಲು ವಾದಕಿ ವಾರಿಜಶ್ರೀ ವೇಣುಗೋಪಾಲ್‌ ಅವರನ್ನು ಮದುವೆಯಾಗಲಿದ್ದಾರೆ. ತಮ್ಮ ವೈಯಕ್ತಿಕ ಜೀವನದಲ್ಲಿ ಅನೇಕ ಏಳು ಬೀಳನ್ನು ಕಂಡ ರಘು ದೀಕ್ಷಿತ್ ಇದೀಗ ಎರಡನೇ ಬಾರಿ ವಿವಾಹವಾಗಲು ರೆಡಿಯಾಗಿದ್ದಾರೆ.

2ನೇ ಮದುವೆ ಸಜ್ಜಾದ ಖ್ಯಾತ ಗಾಯಕ ರಘು ದೀಕ್ಷಿತ್

Raghu Dixit -

Profile Pushpa Kumari Oct 15, 2025 7:06 PM

ಬೆಂಗಳೂರು: ಸ್ಯಾಂಡಲ್‌ವುಡ್‌ ಜತೆಗೆ ವಿವಿಧ ಭಾಷೆಗಳ ಚಿತ್ರಗಳಲ್ಲಿ ಹಾಡಿರುವ ಗಾಯಕ ರಘು ದೀಕ್ಷಿತ್ (Raghu Dixit) ಇದೀಗ 2ನೇ ಮದುವೆಗೆ ಸಜ್ಜಾಗಿದ್ದಾರೆ. ದಿ ರಘು ದೀಕ್ಷಿತ್‌ ಪ್ರಾಜೆಕ್ಟ್‌ ಎಂಬ ಬ್ಯಾಂಡ್ ಸಂಸ್ಥೆ ಹೊಂದಿರುವ 50 ವರ್ಷದ ರಘು ದೀಕ್ಷಿತ್‌ ಖ್ಯಾತ ಕೊಳಲುವಾದಕಿ, ಗಾಯಕಿ, ಪ್ರತಿಷ್ಠಿತ ಗ್ರ್ಯಾಮಿ ಪ್ರಶಸ್ತಿಗೆ ನಾಮ ನಿರ್ದೇಶಿತರಾಗಿದ್ದ ವಾರಿಜಶ್ರೀ ವೇಣುಗೋಪಾಲ್‌ (Varijashree Venugopal) ಅವರೊಂದಿಗೆ ವೈವಾಹಿಕ ಜೀವನಕ್ಲೆ ಕಾಲಿಡಲು ನಿರ್ಧರಿಸಿದ್ದಾರೆ ಎಂದು ವರದಿಯೊಂದು ತಿಳಿಸಿದೆ. ಇದೀಗ ರಘು ದೀಕ್ಷಿತ್‌ ಮದುವೆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಜಾನಪದ, ಸಿನಿಮಾ ಹಾಡಗಳ ಮೂಲಕ ದೇಶ ವಿದೇಶಗಳಲ್ಲಿ ಜನಪ್ರಿಯರಾಗಿರುವ ರಘು ದೀಕ್ಷಿತ್‌ ಎರಡನೇ ವಿವಾಹವಾಗುತ್ತಿದ್ದಾರೆ ಎಂಬ ಸುದ್ದಿ ಸದ್ಯ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ‌. ವೈಯಕ್ತಿಕ ಜೀವನದ ಅನೇಕ ಏಳು ಬೀಳನ್ನು ಕಂಡ ರಘು ದೀಕ್ಷಿತ್ ಇದೀಗ ಎರಡನೇ ಬಾರೀ ವಿವಾಹವಾಗಲು ಮುಂದಾಗಿರುವುದು ಅವರ ಅಭಿಮಾನಿಗಳಿಗೆ ಸಂತಸ ತಂದಿದೆ.



ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿದ್ದ ಅವರು, ʼʼನನ್ನ ಜೀವನದ ಭಾಗವನ್ನ ಒಂಟಿ ಯಾಗಿ, ಏಕಾಂಗಿಯಾಗಿ ಕಳೆಯಲು ಸಿದ್ಧನಾಗಿದ್ದೆ. ಜೀವನಕ್ಕೆ ಬೇರೆ ಯೋಜನೆಗಳಿದ್ದವು. ನಿಜ ವಾಗಿಯೂ ನನ್ನ ಬದುಕಲ್ಲಿ ಇದನ್ನು ನಿರೀಕ್ಷಿಸಿರಲಿಲ್ಲ. ನಮ್ಮಿಬ್ಬರ ಸಹಜ ಪರಿಚಯ ಬಲವಾದ ಸ್ನೇಹದಿಂದ ಆರಂಭವಾಗಿದೆ‌‌. ಅದು ಸಹಜವಾಗಿಯೇ ಪ್ರೀತಿ ಬಂಧ ಬೆಸೆಯಿತು. ಬಳಿಕ ಅದೇ ಸಂಬಂಧ ಉತ್ತಮ ಒಡನಾಟದಿಂದ ಪರಸ್ಪರ ಅರ್ಥೈಸಿಕೊಳ್ಳಲ್ಪಟ್ಟಿತ್ತು. ವಾರಿಜಶ್ರೀ ಅವರ ಪೋಷಕರ ಆಶೀರ್ವಾದದೊಂದಿಗೆ ನಾವು ನಮ್ಮ ಜೀವನದ ಈ ಹೊಸ ಅಧ್ಯಾಯವನ್ನು ಒಟ್ಟಿಗೆ ಪ್ರಾರಂಭಿಸಲು ಬಹಳ ಉತ್ಸುಕರಾಗಿದ್ದೇವೆʼʼ ಎಂದು ಹೇಳಿದ್ದರು. ರಘು ದೀಕ್ಷಿತ್ ಹಾಗೂ ವಾರಿಜಶ್ರೀ ವೇಣುಗೋಪಾಲ್ ಸಾಕಷ್ಟು ಆಲ್ಬಂಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ ಎನ್ನುವುದು ವಿಶೇಷ.

Raghu Dixit (1)

ರಘು ದೀಕ್ಷಿತ್‌ ಈ ಹಿಂದೆ ಖ್ಯಾತ ಡ್ಯಾನ್ಸರ್‌ ಮಯೂರಿ ಉಪಾಧ್ಯ (Mayuri Upadhya) ಅವರನ್ನು ವಿವಾಹವಾಗಿದ್ದರು. ಬಳಿಕ ಇಬ್ಬರ ನಡುವೆ ವೈಮನಸ್ಸು ಮೂಡಿ 2019ರಲ್ಲಿ ಡಿವೋರ್ಸ್‌ ಪಡೆದು ಬೇರ್ಪಟ್ಟರು. ಇದೀಗ ಸಂಗೀತ ಕುಟುಂಬ ಹಿನ್ನೆಲೆಯಿಂದ ಬಂದ ಗಾಯಕಿ ವಾರಿಜಶ್ರೀ ಅವರನ್ನು ವಿವಾಹವಾಗುತ್ತಿದ್ದಾರೆ. 2008ರಲ್ಲಿ ತೆರೆಕಂಡ ಸೈಕೋ (Psycho) ಕನ್ನಡ ಚಿತ್ರದ ʼನಿನ್ನ ಪೂಜೆಗೆ ಬಂದೆ ಮಹಾದೇಶ್ವರʼ ಎಂಬ ಹಾಡಿನ ಮೂಲಕ ರಘು ದೀಕ್ಷಿತ್‌ ಗಮನ ಸೆಳೆದರು.



ಇದನ್ನು ಓದಿ:Pathashala Movie: ನವೆಂಬರ್ 14ರಂದು ಮಕ್ಕಳ ದಿನಾಚರಣೆಯ ದಿನ ತೆರೆಗೆ ಬರಲಿದೆ ʼಪಾಠಶಾಲಾʼ

ಕನ್ನಡ ಜತೆಗೆ ಹಿಂದಿ, ತಮಿಳು, ತೆಲುಗು, ಮಲಯಾಳಂ ಚಿತ್ರಗಳಲ್ಲೂ ಹಾಡಿದ್ದಾರೆ. ಗಾಯನದ ಜತೆಗೆ ಸಂಗೀತ ನಿರ್ದೇಶನವನ್ನೂ ಮಾಡಿದ್ದಾರೆ. ರಘು ದೀಕ್ಷಿತ್ ಅಮೆರಿಕ, ಇಂಗ್ಲೆಂಡ್‌, ಕೊರಿಯಾ , ಜಪಾನ್, ರಷ್ಯಾ, ಹಾಂಗ್‌ಕಾಂಗ್ ಸೇರಿದಂತೆ ಪ್ರಪಂಚದಾದ್ಯಂತ ಸಂಗೀತ ಕಛೇರಿ ನೀಡಿದ್ದಾರೆ.

ಮೈಸೂರು ಮೂಲದ ರಘು ದೀಕ್ಷಿತ್‌ ತಮ್ಮ ವಿಶಿಷ್ಟ ಕಂಠಸಿರಿಯಿಂದಲೇ ಅಭಿಮಾನಿಗಳ ಗಮನ ಸೆಳೆದ ಅಪರೂಪದ ಗಾಯಕ. ಜಾನಪದ ಸಂಗೀತಕ್ಕೆ ಹೊಸ ರೂಪ ಕೊಟ್ಟ, ಇನ್ನಷ್ಟು ಜನಪ್ರಿಯಗೊಳಿಸಿದ ಖ್ಯಾತಿ ಇವರಿಗೆ ಸಲ್ಲುತ್ತದೆ.

ʼಸೈಕೋʼ ಚಿತ್ರದ ಮೂಲಕ ಸಂಗೀತ ನಿರ್ದೇಶಕ, ಗಾಯಕನಾಗಿ ಚಿತ್ರರಂಗಕ್ಕೆ ಕಾಲಿಟ್ಟರು. ಅದಾದ ಬಳಿಕ 2009ರಲ್ಲಿ ʼಕ್ವಿಕ್‌ ಗನ್‌ ಮುರುಗನ್‌ʼ ಸಿನಿಮಾ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದರು. 2010ರಲ್ಲಿ ರಿಲೀಸ್‌ ಆದ ಸುದೀಪ್‌-ರಮ್ಯಾ ನಟನೆಯ ʼಜಸ್ಟ್‌ ಮಾತ್‌ ಮಾತಲ್ಲಿʼ ಚಿತ್ರ ಅವರ ಜನಪ್ರಿಯತೆಯನ್ನು ಮತ್ತಷ್ಟು ಹೆಚ್ಚಿಸಿತು. ಅವರು ಸಂಗೀತ ನೀಡಿ, ಧ್ವನಿ ನೀಡಿರುವ ʼಮುಂಜಾನೆ ಮಂಜಲ್ಲಿʼ ಹಾಡು ಇಂದಿಗೂ ಹಲವರ ಫೆವರೇಟ್‌ ಎನಿಸಿಕೊಂಡಿದೆ. 2016ರಲ್ಲಿ ರಿಲೀಸ್‌ ಆದ ʼಅವಿಯಾಲ್‌ʼ ರಘು ದೀಕ್ಷಿತ್‌ ಅವರ ಮೊದಲ ತಮಿಳು ಚಿತ್ರ. ʼಕೂಡೆʼ ಮೂಲಕ 2018ರಲ್ಲಿ ಮಾಲಿವುಡ್‌ಗೆ ಪ್ರವೇಶಿಸಿದ ಅವರು ಅದೇ ವರ್ಷ ʼಬಿ.ಟೆಕ್‌ʼ ತೆಲುಗು ವೆಬ್‌ ಸೀರೀಸ್‌ನಲ್ಲೂ ಕೆಲಸ ಮಾಡಿದರು. ʼಲವ್‌ ಮಾಕ್ಟೇಲ್‌ʼ ಚಿತ್ರದ ಹಾಡಿಗಾಗಿ 2019ನೇ ಸಾಲಿನ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನೂ ಪಡೆದಿದ್ದಾರೆ.

ವಾರಿಜಶ್ರೀ ವೇಣುಗೋಪಾಲ್‌ ಹಿನ್ನೆಲೆ

Varijashree Venugopal

ಕಿರುತೆರೆಯಲ್ಲಿ ಸಾಕಷ್ಟು ಸದ್ದು ಮಾಡಿದ್ದ ಟಿ.ಎನ್.​ ಸೀತಾರಾಮ ನಿರ್ದೇಶನದ ‘ಮಗಳು ಜಾನಕಿ’ ಧಾರಾವಾಹಿಯ ಟೈಟಲ್ ಸಾಂಗ್ ಮೂಲಕ ಗಮನ ಸೆಳೆದ ಗಾಯಕಿ ವಾರಿಜಶ್ರೀ ವೇಣುಗೋಪಾಲ್‌. ಬೆಂಗಳೂರಿನ ಮೂಲದವರಾದ ಇವರು 2025ನೇ ಸಾಲಿನ ಪ್ರತಿಷ್ಠಿತ ಗ್ರ್ಯಾಮಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದರು. ವಾರಿಜಶ್ರೀ ಸಂಗೀತ ಹಿನ್ನೆಲೆಯ ಕುಟುಂಬದಿಂದ ಬಂದವರು. ಅವರ ತಂದೆ ಎಚ್​.ಎಸ್. ವೇಣುಗೋಪಾಲ್ ಹಾಗೂ ತಾಯಿ ಟಿ.ವಿ. ರಮಾ ಸಂಗೀತ ಲೋಕದಲ್ಲಿ ಚಿರಪರಿಚಿತ ಹೆಸರು. ವಾರಿಜಶ್ರೀ ಕನ್ನಡದ ʼಪ್ರಿಯೆʼ, ʼಕಡಲ ತೀರದ ಭಾರ್ಗವʼ, ʼಟಗರುʼ ಸಿನಿಮಾಗಳಲ್ಲಿ ಹಾಡಿದ್ದಾರೆ. ಕನ್ನಡ ಜತೆಗೆ ತಮಿಳು, ತೆಲುಗು ಸಿನಿಮಾರಂಗದಲ್ಲಿ ಅವರು ಕೆಲಸ ಮಾಡಿದ್ದಾರೆ.