'ದುನಿಯಾ' ವಿಜಯ್ ನಟನೆಯ 'ಲ್ಯಾಂಡ್‌ಲಾರ್ಡ್' ಸಿನಿಮಾವು ಜನವರಿ 23 ರಂದು ತೆರೆಗೆ ಬರುತ್ತಿದೆ. ಬಹಳ ನಿರೀಕ್ಷೆ ಹುಟ್ಟುಹಾಕಿರುವ ಈ ಸಿನಿಮಾದಲ್ಲಿ ರಾಜ್ ಬಿ ಶೆಟ್ಟಿ ಕೂಡ ನಟಿಸುತ್ತಿರುವುದು ಈಗ ನಿರೀಕ್ಷೆ ಡಬಲ್ ಆಗಲು ಕಾರಣವಾಗಿದೆ. ಹೌದು, 'ಲ್ಯಾಂಡ್‌ಲಾರ್ಡ್' ಸಿನಿಮಾದಲ್ಲಿ ರೂಲರ್ ಆಗಿ ರಾಜ್ ಬಿ ಶೆಟ್ಟಿ ವಿಲನ್ ಪಾತ್ರದಲ್ಲಿ ಮಿಂಚಲಿದ್ದಾರೆ. ಈಚೆಗೆ ರಾಜ್ ಬಿ ಶೆಟ್ಟಿ ಅವರ ಪಾತ್ರದ ಟೀಸರ್ ರಿಲೀಸ್ ಆಗಿದೆ. ಈ ಬಾರಿ ವಿಗ್ ಧರಿಸಿ, ಹೊಸ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ ರಾಜ್ ಬಿ ಶೆಟ್ಟಿ.
ರಾಜ್ ಬಿ ಶೆಟ್ಟಿ ಹೇಳಿದ್ದೇನು?
"ನಾನು ಈ ಚಿತ್ರ ಒಪ್ಪಿಕೊಳ್ಳಲು ಮೊದಲ ಕಾರಣ ನಿರ್ದೇಶಕ ಜಡೇಶ್. ಒಬ್ಬ ನಿರ್ದೇಶಕ ಗೆಲ್ಲಲ್ಲೇಬೇಕು ಎಂದು ಬಯಸುವವನು ನಾನು. ಈ ಚಿತ್ರದಲ್ಲಿ ನನ್ನದು ಶೋಷಕ ವರ್ಗದಲ್ಲಿರುವಂತಹ, ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡುವಂತಹ ವ್ಯಕ್ತಿಯ ಪಾತ್ರ. ಈ ಪಾತ್ರಕ್ಕೆ ತಲೆಯಲ್ಲಿ ಕೂದಲು ಇರಬೇಕು ಎಂದು ನಿರ್ದೇಶಕರು ಹೇಳಿದರು. ನಾನು "ಬೇಕಾ" ಎಂದು ಕೇಳಿದೆ. ಏಕೆಂದರೆ ಕೆಲವು ವಿಗ್‌ಗಳು ನನಗೆ ಸೆಟ್ ಆಗುವುದಿಲ್ಲ. ನಾನೊಂದು ಕಡೆ, ಅದೊಂದು ಕಡೆ ಆಗುತ್ತದೆ. ನಾನು ಹಾಗೂ ವಿಗ್ ಇಬ್ಬರೂ ಒಟ್ಟಿಗೆ ನಟಿಸಬೇಕು. ಆ ರೀತಿಯ ವಿಗ್ ಬೇಕು ಅಂತ ಹೇಳಿದೆ. ಟೀಸರ್ ನೋಡಿದಾಗ ನನ್ನ ತಲೆಗೆ ವಿಗ್ ಸರಿ ಹೊಂದಿದೆ ಎನಿಸಿತು. ಕೋಲಾರ ಭಾಷೆಯಲ್ಲಿ ನನ್ನ ಸಂಭಾಷಣೆ ಇರುತ್ತದೆ. ದುನಿಯಾ ವಿಜಯ್ ಅವರ ಜೊತೆಗೆ ಮೊದಲ ಬಾರಿಗೆ ನಟಿಸಿದ್ದೇನೆ. ಬಹಳ ಖುಷಿಯಾಗಿದೆ. ನಿರ್ಮಾಪಕರಿಗೆ ಒಳ್ಳೆಯದಾಗಲಿ" ಅಂತಾರೆ ರಾಜ್ ಬಿ ಶೆಟ್ಟಿ.
ಟಮೋಟೊ ನೆನಪು ಮಾಡ್ಕೊಂಡ ವಿಜಯ್
"ನಾನು ಇಪ್ಪತ್ತು ವರ್ಷಗಳ ಹಿಂದೆ ʻನನ್ತಾವ ಇರೋದು ಎರಡೇ ಎರಡು ಟಮೋಟೊ, 15 ರೂಪಾಯಿ ಕಣಣ್ಣʼ ಅಂತ ಹೇಳ್ಕೊಂಡು ಬಂದೆ. ರಾಜ್ ಬಿ ಶೆಟ್ಟಿ ಅವರು ಒಂದು ಮೊಟ್ಟೆ ಇಟ್ಟುಕೊಂಡು ಬಂದವರು. ಆಗ ನಮ್ಮನ್ನು ಎಷ್ಟು ಜನ ಆಡಿಕೊಂಡಿದ್ದಾರೆ. ಕೊನೆಗೆ ನಾನೇ "ಸರ್ವೈವರ್", ಅವರೇ "ರೂಲರ್" ಆದರು. ಆಡಿಕೊಂಡವರಿಗೆಲ್ಲಾ ತುಂಬು ಹೃದಯದ ಧನ್ಯವಾದ. ಈ ಚಿತ್ರದಲ್ಲಿ ನಟಿಸಿರುವ ಪ್ರತಿಯೊಬ್ಬ ಕಲಾವಿದರು ಉತ್ತಮವಾಗಿ ನಟಿಸಿದ್ದಾರೆ. ಜಡೇಶ್ ಅವರ ಕಥೆ ಕೇಳಿ ನಿರ್ಮಾಪಕರು ಯಾವುದೇ ಕೊರತೆ ಬಾರದ ಹಾಗೆ ನಿರ್ಮಾಣ ಮಾಡಿದ್ದಾರೆ. ತಂತ್ರಜ್ಞರ ಕಾರ್ಯವೈಖರಿ ಕೂಡ ಚೆನ್ನಾಗಿದೆ. ಜನವರಿ 23 ರಂದು ನಮ್ಮ ಚಿತ್ರ ಬಿಡುಗಡೆಯಾಗುತ್ತಿದೆ. ಅದಕ್ಕೂ ಮುನ್ನ ಮೂರು ಹಾಡುಗಳು ಹಾಗೂ ಟ್ರೇಲರ್ ಅನಾವರಣವಾಗಲಿದೆ" ಎಂದು ದುನಿಯಾ ವಿಜಯ್ ಹೇಳಿದ್ದಾರೆ.
ʻಲ್ಯಾಂಡ್‌ಲಾರ್ಡ್ʼ ಬಗ್ಗೆ ದುನಿಯಾ ವಿಜಯ್ ಮಾತು
ವಿಭಿನ್ನ ಪಾತ್ರಗಳಲ್ಲಿ ಕಲಾವಿದರ ನಟನೆ
"ಮೊದಲು ಈ ಚಿತ್ರದ ಕಥೆ ಇಷ್ಟಪಟ್ಟು ನಿರ್ಮಾಣಕ್ಕೆ ಮುಂದಾದ ನಿರ್ಮಾಪಕರಿಗೆ ಧನ್ಯವಾದ. ಇನ್ನೂ ಈ ಚಿತ್ರದಲ್ಲಿ ನಟಿಸಿರುವ ದುನಿಯಾ ವಿಜಯ್ ಅವರು 50 ವರ್ಷ ವಯಸ್ಸಾದ ವ್ಯಕ್ತಿಯ ಪಾತ್ರದಲ್ಲಿ, ರಚಿತಾ ರಾಮ್ ಅವರು ಒಂದು ಹೆಣ್ಣು ಮಗುವಿನ ತಾಯಿಯ ಪಾತ್ರದಲ್ಲಿ, ರಾಜ್ ಬಿ ಶೆಟ್ಟಿ ಅವರು ದಿ ರೂಲರ್ ಪಾತ್ರದಲ್ಲಿ.. ಹೀಗೆ ಅವರೆಲ್ಲರೂ ಈವರೆಗೂ ಮಾಡಿರದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಿರ್ಮಾಪರಾಗಲಿ ಹಾಗೂ ಕಲಾವಿದರಾಗಲಿ ನನಗೆ ಪೂರ್ಣ ಸ್ವತಂತ್ರ ಕೊಟ್ಟಿದ್ದಾರೆ. ಯಾರು ಕೂಡ ಯಾವುದನ್ನು ಪ್ರಶ್ನೆ ಮಾಡಲಿಲ್ಲ. ಅದರಿಂದ ನಾನು ಅಂದಕೊಂಡ ಹಾಗೆ ಈ ಚಿತ್ರ ಬರಲು ಸಾಧ್ಯವಾಯಿತು" ಎನ್ನುತ್ತಾರೆ ನಿರ್ದೇಶಕ ಜಡೇಶ್ ಕೆ ಹಂಪಿ.
Director Suri: ಸೆಟ್ಟೇರಿತು ಸೂರಿ-ಯುವ ಸಿನಿಮಾ; ದೊಡ್ಮನೆ ಕುಡಿಗೆ ದುನಿಯಾ ವಿಜಯ್ ಪುತ್ರಿ ನಾಯಕಿ
ಸಾರಥಿ ಫಿಲಂಸ್ ಲಾಂಛನದಲ್ಲಿ ಕೆ ವಿ ಸತ್ಯಪ್ರಕಾಶ್ - ಹೇಮಂತ್ ಗೌಡ ಕೆ ಎಸ್ ನಿರ್ಮಿಸಿರುವ 'ಲ್ಯಾಂಡ್ ಲಾರ್ಡ್' ಚಿತ್ರಕ್ಕೆ ಮಾಸ್ತಿ, ಶ್ರೀಕಾಂತ್, ಮಂಜುನಾಥ್ ಸಂಭಾಷಣೆ ಬರೆದಿದ್ದಾರೆ. ರಾಕೇಶ್ ಅಡಿಗ, ಶಿಶಿರ್, ಮಿತ್ರ, ಅಭಿಷೇಕ್ ದಾಸ್, ಮಹಾಂತೇಶ್ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದು, ಸ್ವಾಮಿ ಜೆ ಗೌಡ ಛಾಯಾಗ್ರಹಣ ಮಾಡಿದ್ಧಾರೆ. ಪದ್ಮ ಎಂಬ ಪಾತ್ರದಲ್ಲಿ ನಟಿ ಭಾವನಾ ರಾವ್ ಕಾಣಿಸಿಕೊಂಡಿದ್ದಾರೆ.