ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Director Suri: ಸೆಟ್ಟೇರಿತು ಸೂರಿ-ಯುವ ಸಿನಿಮಾ; ದೊಡ್ಮನೆ ಕುಡಿಗೆ ದುನಿಯಾ ವಿಜಯ್‌ ಪುತ್ರಿ ನಾಯಕಿ

Yuva Rajkumar: 2007ರಲ್ಲಿ ತೆರೆಕಂಡ ದುನಿಯಾ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ನ ಗಮನ ಸೆಳೆದ ನಿರ್ದೇಶಕ ಸೂರಿ ಇದೀಗ ಹೊಸ ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಅವರ ಪಿಆರ್‌ಕೆ, ಕಾರ್ತಿಕ್‌ ಗೌಡ ಹಾಗೂ ಯೋಗಿ ಜಿ. ರಾಜ್‌ ಒಡೆತನದ ಕೆಆರ್‌ಜಿ ಹಾಗೂ ಜಯಣ್ಣ-ಭೋಗಣ್ಣ ಅವರ ಜಯಣ್ಣ ಫಿಲ್ಮಂಸ್‌ ಬ್ಯಾನರ್‌ನಡಿ ಈ ಚಿತ್ರ ತಯಾರಾಗಲಿದ್ದು, ಯುವ ರಾಜ್‌ಕುಮಾರ್‌ ಮತ್ತು ರಿತನ್ಯಾ ಮುಖ್ಯ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.

ಸೆಟ್ಟೇರಿತು ಸೂರಿ-ಯುವ ಸಿನಿಮಾ

-

Ramesh Ballamoole
Ramesh Ballamoole Apr 30, 2025 6:16 PM

ಬೆಂಗಳೂರು: 2007ರಲ್ಲಿ ತೆರೆಕಂಡ ದುನಿಯಾ (Duniya) ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ನ ಗಮನ ಸೆಳೆದ ನಿರ್ದೇಶಕ ಸೂರಿ (Director Suri) ಇದೀಗ ಹೊಸ ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಅವರ ಪಿಆರ್‌ಕೆ, ಕಾರ್ತಿಕ್‌ ಗೌಡ ಹಾಗೂ ಯೋಗಿ ಜಿ. ರಾಜ್‌ ಒಡೆತನದ ಕೆಆರ್‌ಜಿ ಹಾಗೂ ಜಯಣ್ಣ-ಭೋಗಣ್ಣ ಅವರ ಜಯಣ್ಣ ಫಿಲ್ಮಂಸ್‌ ಬ್ಯಾನರ್‌ನಡಿ ʼಎಕ್ಕʼ ಸಿನಿಮಾ ಅದ್ಧೂರಿಯಾಗಿ ತಯಾರಾಗುತ್ತಿದೆ. ಈ ಚಿತ್ರ ಬಿಡುಗಡೆಗೂ ಮುನ್ನವೇ ಈ ಪ್ರೊಡಕ್ಷನ್ಸ್‌ನಡಿ ಹೊಸ ಸಿನಿಮಾ ಘೋಷಣೆಯಾಗಿದ್ದು, ಸೂರಿ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ.

ಬಹಳ ದಿನಗಳಿಂದ ಕೇಳಿ ಬರುತ್ತಿದ್ದ ಯುವ ರಾಜ್‌ಕುಮಾರ್‌ ಹಾಗೂ ಸೂರಿ ಸಿನಿಮಾಕ್ಕೆ ಅಧಿಕೃತ ಚಾಲನೆ ಸಿಕ್ಕಿದೆ. ಅಕ್ಷಯ ತೃತೀಯ ದಿನವಾದ ಏ. 30ರಂದು ಬೆಂಗಳೂರಿನ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸರಳವಾಗಿ ಮುಹೂರ್ತ ನೆರವೇರಿದೆ. ಸ್ಯಾಂಡಲ್‌ವುಡ್‌ ಸಲಗ ದುನಿಯಾ ವಿಜಯ್‌ ಕುಮಾರ್‌ ಕ್ಲ್ಯಾಪ್‌ ಮಾಡಿದ್ದು, ಅಪ್ಪು ಅವರ ಮಗಳು ಧೃತಿ ಪುನೀತ್ ರಾಜ್‌ಕುಮಾರ್‌ ಕ್ಯಾಮೆರಾ ಚಾಲನೆ ಮಾಡಿ ಇಡೀ ತಂಡಕ್ಕೆ ಶುಭ ಹಾರೈಸಿದರು. ಯುವ ಅವರ ಕುಟುಂಬ ಸದಸ್ಯರು, ಅಶ್ವಿನಿ ಪುನೀತ್‌ ರಾಜ್‌ಕುಮಾರ್‌, ಕಾರ್ತಿಕ್‌ ಗೌಡ, ಯೋಗಿ ಜಿ. ರಾಜ್‌, ನಿರ್ದೇಶಕ ಸೂರಿ ಸೇರಿದಂತೆ ಇಡೀ ಚಿತ್ರತಂಡ ಹಾಜರಿತ್ತು.

ಯುವ ರಾಜ್‌ಕುಮಾರ್‌ ಅವರ ಇನ್‌ಸ್ಟಾಗ್ರಾಮ್‌ ಪೋಸ್ಟ್‌:

Suri - Yuva movie 2

ದುನಿಯಾ ಸೂರಿ ರಾ ಸ್ಟೈಲ್‌ ಮೇಕಿಂಗ್‌ಗೆ ಫೇಮಸ್. ಹೀಗಾಗಿ ಯುವ ಅವರ ಗರಡಿಯಲ್ಲಿ ಯಾವ ರೀತಿ ಕಾಣಿಸಲಿದ್ದಾರೆ ಎಂಬ ಕುತೂಹಲವಿದೆ. ಇನ್ನೂ ದುನಿಯಾ ವಿಜಯ್‌ ಮೊದಲ ಪುತ್ರಿ ರಿತನ್ಯಾ ಈ ಚಿತ್ರದ ನಾಯಕಿ. ಈಗಾಗಲೇ ಅಪ್ಪನ ಜತೆ ʼಲ್ಯಾಂಡ್‌ ಲಾರ್ಡ್‌ʼ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಬಲಗಾಲಿಟ್ಟು ಆಗಮಿಸಿರುವ ರಿತನ್ಯಾಗೆ ಇದು 2ನೇ ಸಿನಿಮಾ. ಇತ್ತ ಯುವ ರಾಜ್‌ಕುಮಾರ್‌ಗೆ ಇದು 3ನೇ ಚಿತ್ರ.

ಸೂರಿ ಗರಡಿಯಲ್ಲಿ ಖಾಯಂ ಆಗಿ ಕೆಲಸ ಮಾಡುವ ದೀಪು ಎಸ್‌. ಕುಮಾರ್‌ ಸಂಕಲನ, ಚರಣ್‌ ರಾಜ್‌ ಸಂಗೀತ ನಿರ್ದೇಶನ, ಸಂತೋಷ್‌ ಕಲಾ ನಿರ್ದೇಶನ, ಶೇಖರ್‌ ಕ್ಯಾಮೆರಾ ವರ್ಕ್‌ ಈ ಚಿತ್ರಕ್ಕೆ ಇರಲಿದೆ. ಮೇ ಅಂತ್ಯಕ್ಕೆ ಚಿತ್ರತಂಡ ಶೂಟಿಂಗ್‌ ಅಖಾಡಕ್ಕೆ ಇಳಿಯಲಿದೆ. ಪ್ರತಿಷ್ಠಿತ ಮೂರು ನಿರ್ಮಾಣ ಸಂಸ್ಥೆಯಡಿ ಬರುತ್ತಿರುವ ಈ ಸಿನಿಮಾ ಬಹಳ ದೊಡ್ಡಮಟ್ಟದಲ್ಲಿ ತಯಾರಾಗಲಿದೆ.

ಜೂನ್‌ಗೆ ʼಎಕ್ಕʼ

ಪಿಆರ್‌ಕೆ-ಕೆಆರ್‌ಜಿ-ಜಯಣ್ಣ ಫಿಲ್ಮಂ ಬ್ಯಾನರ್‌ನಡಿ ನಿರ್ಮಾಣವಾಗುತ್ತಿರುವ ಯುವ ರಾಜ್‌ಕುಮಾರ್‌ ನಾಯಕನಾಗಿ ಹಾಗೂ ರೋಹಿತ್‌ ಪದಕಿ ನಿರ್ದೇಶನದ ʼಎಕ್ಕʼ ಸಿನಿಮಾ ಜೂನ್‌ನಲ್ಲಿ ತೆರೆಗೆ ಬರಲಿದೆ. ಸದ್ಯ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಈಗಾಗಲೇ ರಿಲೀಸ್‌ ಆಗಿರುವ ಟೀಸರ್‌ ಹಾಗೂ ಟೈಟಲ್‌ ಟ್ರ್ಯಾಕ್‌ ದೊಡ್ಡ ಮಟ್ಟದ ಹಿಟ್‌ ಆಗಿದೆ. ಇತ್ತ ರಿತನ್ಯಾ ʼಲ್ಯಾಂಡ್‌ ಲಾರ್ಡ್‌ʼ ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಸಿನಿಮಾವನ್ನು ʼಕಾಟೇರʼ ಖ್ಯಾತಿಯ ಜಡೇಶ್ ಕುಮಾರ್ ನಿರ್ದೇಶಿಸುತ್ತಿದ್ದಾರೆ. ʼಲ್ಯಾಂಡ್‌ ಲಾರ್ಡ್ʼ ಚಿತ್ರದ ಪೋಸ್ಟರ್ ಅನ್ನು ಇತ್ತೀಚೆಗೆ ರಿಲೀಸ್‌ ಮಾಡಲಾಗಿತ್ತು. ಪೋಸ್ಟರ್‌ನಲ್ಲಿ ಒಂದು ಕಡೆಗೆ ಕಪ್ಪು ಬೇಟೆ ನಾಯಿ, ಮತ್ತೊಂದು ಕಡೆ ಹುಲಿ ಕಂಡು ಬಂದಿತ್ತು. ಜತೆಗೆ ಇದು ಆಳಿದವರ ಕಥೆಯಲ್ಲ, ಅಳಿದು ಉಳಿದವರ ಕಥೆ ಅಂತ ಬರೆಯಲಾಗಿತ್ತು. ಆ ಮೂಲಕ ಕುತೂಹಲ ಮೂಡಿಸಿತ್ತು.