ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮೈಸೂರಿನಲ್ಲಿ ಆಟೋರಿಕ್ಷಾದಲ್ಲಿ ಕಂಡʻಸೂಪರ್‌ ಸ್ಟಾರ್ʼ ರಜನಿಕಾಂತ್: 'ಧರ್ಮನ್' ಶೂಟಿಂಗ್ ಸೆಟ್‌ನಲ್ಲಿ ಶ್ರೀಲೀಲಾಗೆ ಏನ್‌ ಕೆಲಸ?

Superstar Rajinikanth: ʻಧರ್ಮನ್‌ʼ ಸಿನಿಮಾದ ಚಿತ್ರೀಕರಣಕ್ಕಾಗಿ ನಟ ರಜನಿಕಾಂತ್‌ ಅವರು ಸಾಂಸ್ಕೃತಿಕ ನಗರಿ ಮೈಸೂರಿಗೆ ಭೇಟಿ ನೀಡಿದ್ದು, ಶೂಟಿಂಗ್ ಸೆಟ್‌ಗೆ ಆಟೋರಿಕ್ಷಾದಲ್ಲಿ ಆಗಮಿಸಿ ಸರಳತೆಯನ್ನು ಮೆರೆದಿದ್ದಾರೆ. ಅಲ್ಲದೆ ಚಾಮುಂಡಿ ಬೆಟ್ಟಕ್ಕೆ ತೆರಳಿ ದೇವಿಯ ಆಶೀರ್ವಾದ ಪಡೆದರು. ಮತ್ತೊಂದೆಡೆ ಸೆಟ್‌ನಲ್ಲಿ ನಟಿ ಶ್ರೀಲೀಲಾ ಕಾಣಿಸಿಕೊಂಡಿದ್ದು, ಆ ಬಗ್ಗೆಯೂ ಚರ್ಚೆ ಶುರುವಾಗಿದೆ.

ಬಹುನಿರೀಕ್ಷಿತ 'ಧರ್ಮನ್' ಸಿನಿಮಾದ ಚಿತ್ರೀಕರಣಕ್ಕಾಗಿ ಮೈಸೂರಿನಲ್ಲಿ ಬೀಡುಬಿಟ್ಟಿರುವ ʻಸೂಪರ್‌ ಸ್ಟಾರ್ʼ ರಜನಿಕಾಂತ್, ಶೂಟಿಂಗ್ ಸ್ಥಳಕ್ಕೆ ಯಾವುದೇ ಐಷಾರಾಮಿ ಕಾರಿನಲ್ಲಿ ಬಾರದೆ ಸಾಮಾನ್ಯ ಆಟೋರಿಕ್ಷಾದಲ್ಲಿ ಆಗಮಿಸುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ. ಭದ್ರತಾ ಸಿಬ್ಬಂದಿಯ ಬೆಂಗಾವಲಿನಲ್ಲಿ ಆಟೋದಲ್ಲಿ ಬಂದಿಳಿದ ರಜನಿಕಾಂತ್ ಅವರನ್ನು ಕಂಡ ಅಭಿಮಾನಿಗಳ ಹರ್ಷೋದ್ಗಾರ ಮುಗಿಲುಮುಟ್ಟಿತ್ತು. ಅಭಿಮಾನಿಗಳಿಗೆ ಪ್ರೀತಿಯಿಂದ ಕೈಬೀಸಿದ ರಜನಿ, ನಂತರ ಜನರ ನಿಯಂತ್ರಣಕ್ಕಾಗಿ ಭದ್ರತಾ ಸಿಬ್ಬಂದಿ ಗೇಟ್ ಹಾಕಲು ಯತ್ನಿಸಿದಾಗ ಸ್ವತಃ ತಾವೇ ಮತ್ತೆ ಹೊರಬಂದು ಜನಸ್ತೋಮಕ್ಕೆ ಕೈಮುಗಿದು ಧನ್ಯವಾದ ಅರ್ಪಿಸಿದರು.

ಚಾಮುಂಡಿ ಬೆಟ್ಟದಲ್ಲಿ ತಲೈವಾ

ಬಿಡುವಿಲ್ಲದ ಚಿತ್ರೀಕರಣದ ನಡುವೆಯೂ ರಜನಿಕಾಂತ್ ಬುಧವಾರ (ಸೆ.30) ಮುಂಜಾನೆ ಮೈಸೂರಿನ ಅಧಿದೇವತೆ ಶ್ರೀ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಎಂದಿನ ಸರಳ ಬಿಳಿ ಉಡುಪಿನಲ್ಲಿ ದೇವಸ್ಥಾನಕ್ಕೆ ಆಗಮಿಸಿದ ತಲೈವಾ, ನಾಡದೇವತೆಯ ದರ್ಶನ ಪಡೆದು ಆಶೀರ್ವಾದ ಪಡೆದುಕೊಂಡರು. ದೇವಾಲಯದ ಆವರಣದಲ್ಲಿದ್ದ ಸಾರ್ವಜನಿಕರು ಹಾಗೂ ಭಕ್ತರು ರಜನಿಕಾಂತ್ ಅವರ ಸರಳತೆಯನ್ನು ಕಣ್ತುಂಬಿಕೊಂಡು ಸಂಭ್ರಮಿಸಿದರು.

ಆಟೋದಲ್ಲಿ ಬಂದ ತಲೈವಾ



ತಲೈವಾ ಜೊತೆಗೆ ಶ್ರೀಲೀಲಾ ನಟನೆ

ಮತ್ತೊಂದೆಡೆ, ಅಶ್ವತ್ ಮಾರಿಮುತ್ತು ನಿರ್ದೇಶನದ ಈ ಚಿತ್ರದ ತಾರಾಗಣದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆ ಶುರುವಾಗಿದೆ. ಚಿತ್ರದಲ್ಲಿ ರಜನಿಕಾಂತ್ ಜೊತೆಗೆ ಸಿಮ್ರಾನ್, ರಾಶಿ ಖನ್ನಾ ಮತ್ತು ಯೋಗಿ ಬಾಬು ನಟಿಸುತ್ತಿರುವುದು ಈಗಾಗಲೇ ತಿಳಿದಿರುವ ವಿಚಾರ. ಆದರೆ, ಮೈಸೂರು ಶೆಡ್ಯೂಲ್‌ನ ಫೋಟೋಗಳು ಮತ್ತು ವಿಡಿಯೋಗಳು ಲೀಕ್ ಆಗಿದ್ದು, ನಟಿ ಶ್ರೀಲೀಲಾ ಕೂಡ ಚಿತ್ರತಂಡವನ್ನು ಸೇರಿಕೊಂಡಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ. ಸೆಟ್‌ನಿಂದ ಸೋರಿಕೆಯಾದ ವಿಡಿಯೋವೊಂದರಲ್ಲಿ ಶ್ರೀಲೀಲಾ ಗುಲಾಬಿ ಮತ್ತು ನೀಲಿ ಬಣ್ಣದ ಲಂಗ-ದಾವಣಿ ತೊಟ್ಟು ಸಾಂಪ್ರದಾಯಿಕ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ನಟಿ ಶ್ರೀಲೀಲಾ ನಟಿಸುತ್ತಿರುವುದು ಪಕ್ಕಾ ಎನ್ನಲಾಗಿದೆ.

Rajinikanth-Kamal Haasan: ಬರೋಬ್ಬರಿ 4 ದಶಕಗಳ ಬಳಿಕ ತೆರೆಮೇಲೆ ಒಂದಾಗಲಿದ್ದಾರೆ ರಜನಿಕಾಂತ್‌-ಕಮಲ್‌ ಹಾಸನ್‌

ಧರ್ಮನ್‌ ಚಿತ್ರದಲ್ಲಿ ರಾಮ್‌ ಪೋತಿನೇನಿ?

ಇನ್ನು, ನಟಿ ರಾಶಿ ಖನ್ನಾ ಅವರು ಈಚೆಗೆ ರಾಮ್ ಪೋತಿನೇನಿ ಮತ್ತು ರಜನಿಕಾಂತ್ ಅವರೊಂದಿಗೆ ಸೆಟ್‌ನಲ್ಲಿ ತೆಗೆಸಿಕೊಂಡಿದ್ದ ಫೋಟೋವೊಂದನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದರು. ಆದರೆ ರಾಮ್ ಪೋತಿನೇನಿ ಅವರ ಆಯ್ಕೆಯನ್ನು ಚಿತ್ರತಂಡ ಇನ್ನೂ ಅಧಿಕೃತವಾಗಿ ಪ್ರಕಟಿಸದಿರುವುದು ಗೊತ್ತಾಗುತ್ತಿದ್ದಂತೆಯೇ, ರಾಶಿ ಖನ್ನಾ ತಕ್ಷಣವೇ ಆ ಫೋಟೋವನ್ನು ಡಿಲೀಟ್ ಮಾಡಿದ್ದಾರೆ. ಸದ್ಯ ರಾಮ್ ಮತ್ತು ಶ್ರೀಲೀಲಾ ಎಂಟ್ರಿ ಬಗ್ಗೆ ಚಿತ್ರತಂಡ ಇನ್ನಷ್ಟೇ ಅಧಿಕೃತ ಮಾಹಿತಿ ನೀಡಬೇಕಿದೆ.

ಧರ್ಮನ್‌ ಸೆಟ್‌ನಲ್ಲಿ ಶ್ರೀಲೀಲಾ



2027ರ ಸಂಕ್ರಾಂತಿ ಹಬ್ಬಕ್ಕೆ ಈ ಸಿನಿಮಾ ರಿಲೀಸ್

ಕಮಲ್ ಹಾಸನ್ ಅವರ ಪ್ರತಿಷ್ಠಿತ 'ರಾಜ್‌ಕಮಲ್ ಫಿಲ್ಮ್ಸ್ ಇಂಟರ್‌ನ್ಯಾಷನಲ್' ಸಂಸ್ಥೆಯಡಿ ನಿರ್ಮಾಣವಾಗುತ್ತಿರುವ 'ಧರ್ಮನ್' ಚಿತ್ರದಲ್ಲಿ ರಜನಿಕಾಂತ್ ವೈದ್ಯನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜನೆ ಮತ್ತು ರೆಡ್ ಜೈಂಟ್ ಮೂವೀಸ್ ವಿತರಣೆ ಹೊಂದಿರುವ ಈ ಸಿನಿಮಾವನ್ನು 2027ರ ಸಂಕ್ರಾಂತಿ ಹಬ್ಬದ ವೇಳೆಗೆ ಜಗತ್ತಿನಾದ್ಯಂತ ತೆರೆಗೆ ತರಲು ಚಿತ್ರತಂಡ ಸಿದ್ಧತೆ ನಡೆಸುತ್ತಿದೆ.