ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ರಜನಿಕಾಂತ್‌ ಸಹೋದರನ ತಲೆಗೆ ಗಂಭೀರ ಪೆಟ್ಟು, ಆಸ್ಪತ್ರೆಗೆ ದಾಖಲು! ಅಣ್ಣನ ಯೋಗಕ್ಷೇಮ ವಿಚಾರಿಸಲು ಬೆಂಗಳೂರಿಗೆ ದೌಡಾಯಿಸಿದ ʻತಲೈವಾʼ!

ಸಹೋದರ ಸತ್ಯನಾರಾಯಣ ರಾವ್ ಗಾಯಕ್ವಾಡ್ ಅವರು ಆಸ್ಪತ್ರೆಗೆ ದಾಖಲಾಗಿರುವ ಸುದ್ದಿ ತಿಳಿಯುತ್ತಿದ್ದಂತೆಯೇ ನಟ ರಜನಿಕಾಂತ್ ಅವರು ಚೆನ್ನೈನಿಂದ ತಕ್ಷಣವೇ ಬೆಂಗಳೂರಿಗೆ ಧಾವಿಸಿದ್ದಾರೆ. ಮೆಟ್ಟಿಲಿನಿಂದ ಆಯತಪ್ಪಿ ಬಿದ್ದು ತಲೆಗೆ ಬಲವಾದ ಪೆಟ್ಟು ಮಾಡಿಕೊಂಡಿದ್ದರಿಂದ ಸತ್ಯನಾರಾಯಣ ರಾವ್ ಅವರಿಗೆ ಮೆದುಳಿನಲ್ಲಿ ರಕ್ತಸ್ರಾವವಾಗಿದೆ.

ಸೂಪರ್‌ಸ್ಟಾರ್ ರಜನಿಕಾಂತ್ ಅವರ ಹಿರಿಯ ಸಹೋದರ ಸತ್ಯನಾರಾಯಣ ರಾವ್ ಗಾಯಕ್ವಾಡ್ ಅವರು ಮನೆಯಲ್ಲಿ ಮೆಟ್ಟಿಲಿನಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಹೋದರನ ಆರೋಗ್ಯ ಸ್ಥಿತಿ ಗಂಭೀರವಾಗಿರುವ ಸುದ್ದಿ ತಿಳಿಯುತ್ತಿದ್ದಂತೆಯೇ ರಜನಿಕಾಂತ್ ಅವರು ಚೆನ್ನೈನಿಂದ ಬೆಂಗಳೂರಿಗೆ ದಿಢೀರ್ ಭೇಟಿ ನೀಡಿ ಅಣ್ಣನ ಯೋಗಕ್ಷೇಮ ವಿಚಾರಿಸಿದ್ದಾರೆ.

ಮೆದುಳಿಗೆ ಪೆಟ್ಟಾಗಿ ರಕ್ತಸ್ರಾವ

4 ದಿನಗಳ ಹಿಂದೆ ಸತ್ಯನಾರಾಯಣ ರಾವ್ ಅವರು ಮನೆಯಲ್ಲಿ ಮೆಟ್ಟಿಲು ಹತ್ತುವಾಗ ಆಯತಪ್ಪಿ ಕೆಳಗೆ ಬಿದ್ದಿದ್ದರು. ಘಟನೆಯಲ್ಲಿ ಅವರ ತಲೆಗೆ ಬಲವಾದ ಪೆಟ್ಟು ಬಿದ್ದ ಪರಿಣಾಮ ತಕ್ಷಣವೇ ಅವರನ್ನು ರಾಜರಾಜೇಶ್ವರಿ ನಗರದಲ್ಲಿರುವ ಜಯದೇವ್ ಮೆಮೋರಿಯಲ್ ರಾಷ್ಟ್ರೋತ್ಥಾನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯಕೀಯ ತಪಾಸಣೆಯ ವೇಳೆ ಮೆದುಳಿಗೆ ಪೆಟ್ಟಾಗಿ ರಕ್ತಸ್ರಾವ ಹಾಗೂ ರಕ್ತ ಹೆಪ್ಪುಗಟ್ಟಿರುವುದು ಪತ್ತೆಯಾಗಿತ್ತು. ಪರಿಸ್ಥಿತಿಯ ಗಂಭೀರತೆಯನ್ನು ಗಮನಿಸಿದ ನುರಿತ ವೈದ್ಯರ ತಂಡವು ಸೋಮವಾರ (ನ.2) ಅವರಿಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನೆರವೇರಿಸಿದೆ. ಸದ್ಯ ಅವರು ವೈದ್ಯರ ನಿಗಾದಲ್ಲಿದ್ದು, ಚಿಕಿತ್ಸೆ ಮುಂದುವರಿದಿದೆ.

Rajinikanth: ʻಜೈಲರ್‌ 2ʼ ಚಿತ್ರದ OTT ರಿಲೀಸ್‌ ಡೇಟ್‌ ಘೋಷಣೆ; ಅಭಿಮಾನಿಗಳಿಗೆ ಸಿಗಲಿದೆಯಾ ಆ ಒಂದು ಸರ್ಪ್ರೈಸ್‌?

ವೈದ್ಯರ ಜೊತೆ ರಜನಿ ಚರ್ಚೆ

ವಿಷಯ ತಿಳಿಯುತ್ತಿದ್ದಂತೆಯೇ ರಜನಿಕಾಂತ್ ಅವರು ತಮ್ಮ ಸಿನಿಮಾ ಕಾರ್ಯಗಳ ನಡುವೆಯೂ ಸಮಯ ಮಾಡಿಕೊಂಡು ಗುರುವಾರ (ನ.5) ಬೆಂಗಳೂರಿಗೆ ಆಗಮಿಸಿದರು. ಆಸ್ಪತ್ರೆಗೆ ಭೇಟಿ ನೀಡಿದ ಅವರು, ಸಹೋದರನನ್ನು ಕಂಡು ಧೈರ್ಯ ತುಂಬಿದ್ದಲ್ಲದೆ, ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರ ತಂಡದೊಂದಿಗೆ ಸುದೀರ್ಘವಾಗಿ ಮಾತನಾಡಿ ಆರೋಗ್ಯ ಸ್ಥಿತಿ ಹಾಗೂ ಚಿಕಿತ್ಸೆಯ ಪ್ರಗತಿಯ ಕುರಿತು ಸಮಗ್ರ ಮಾಹಿತಿ ಪಡೆದುಕೊಂಡರು.

ಅಣ್ಣ ಎಂದರೆ, ರಜನಿಕಾಂತ್‌ಗೆ ತಂದೆ ಸಮಾನ

ಅಣ್ಣ ಎಂದರೆ ಅಪಾರ ಪ್ರೀತಿ ಹಾಗೂ ಗೌರವ ಹೊಂದಿರುವ ರಜನಿಕಾಂತ್, ಆಗಾಗ ಬೆಂಗಳೂರಿಗೆ ಭೇಟಿ ನೀಡಿ ಸಹೋದರನೊಂದಿಗೆ ಸಮಯ ಕಳೆಯುತ್ತಿರುತ್ತಾರೆ. ಇತ್ತೀಚೆಗಷ್ಟೇ ಅವರ ಬಹುನಿರೀಕ್ಷಿತ ಚಿತ್ರ 'ಜೈಲರ್ 2' ಅಭೂತಪೂರ್ವ ಯಶಸ್ಸು ಕಂಡಿದ್ದು, ಚಿತ್ರೀಕರಣದ ನಿರಂತರ ಒತ್ತಡದ ನಡುವೆಯೂ ಕುಟುಂಬಕ್ಕೆ ಮೊದಲ ಆದ್ಯತೆ ನೀಡಿ ಅಣ್ಣನ ಕಷ್ಟದ ಸಮಯದಲ್ಲಿ ಜೊತೆಯಾಗಿ ನಿಂತು ಶಕ್ತಿ ತುಂಬಿದ್ದಾರೆ ತಲೈವಾ.