ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Rajinikanth: ʻಜೈಲರ್‌ 2ʼ ಚಿತ್ರದ OTT ರಿಲೀಸ್‌ ಡೇಟ್‌ ಘೋಷಣೆ; ಅಭಿಮಾನಿಗಳಿಗೆ ಸಿಗಲಿದೆಯಾ ಆ ಒಂದು ಸರ್ಪ್ರೈಸ್‌?

Jailer 2 OTT Release Date: ʻಸೂಪರ್‌ ಸ್ಟಾರ್‌ʼ ರಜನಿಕಾಂತ್‌ ನಟನೆಯ ʻಜೈಲರ್‌ 2ʼ ಸಿನಿಮಾದ ಒಟಿಟಿ ಬಿಡುಗಡೆಯ ದಿನಾಂಕ ಅಂತಿಮಗೊಂಡಿದ್ದು, ನವೆಂಬರ್ 12 ರಿಂದ ಅಮೆಜಾನ್ ಪ್ರೈಮ್‌ನಲ್ಲಿ ಸ್ಟ್ರೀಮಿಂಗ್ ಆರಂಭಿಸಲಿದೆ. ಬಾಕ್ಸ್ ಆಫೀಸ್‌ನಲ್ಲಿ 820+ ಕೋಟಿ ರೂ. ಕಲೆಹಾಕಿ ತಮಿಳು ಚಿತ್ರರಂಗದ ಸಾರ್ವಕಾಲಿಕ ಗರಿಷ್ಠ ಗಳಿಕೆಯ ಹೊಸ ಮೈಲಿಗಲ್ಲು ಸ್ಥಾಪಿಸಿದೆ.

ʻಜೈಲರ್ 2ʼ OTT ರಿಲೀಸ್ ಡೇಟ್‌ ಫಿಕ್ಸ್; ರಜನಿ ಫ್ಯಾನ್ಸ್‌ಗೆ ಸರ್ಪ್ರೈಸ್‌?

-

Avinash GR
Avinash GR Nov 5, 2026 4:50 PM

ತಮಿಳು ಚಿತ್ರರಂಗದ ಇತಿಹಾಸದಲ್ಲೇ ಸಾರ್ವಕಾಲಿಕ ಅತಿ ಹೆಚ್ಚು ಗಳಿಕೆ ಕಂಡ ಹೆಗ್ಗಳಿಕೆಗೆ ಪಾತ್ರವಾಗಿರುವ ʻಸೂಪರ್‌ಸ್ಟಾರ್ʼ ರಜನಿಕಾಂತ್ ಅಭಿನಯದ 'ಜೈಲರ್ 2' ಸಿನಿಮಾ ಈಗ ಒಟಿಟಿಗೆ ಎಂಟ್ರಿ ನೀಡಲು ಸಜ್ಜಾಗಿದೆ. ಅಕ್ಟೋಬರ್ 15 ರಂದು ಅದ್ಧೂರಿಯಾಗಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದ ಈ ಚಿತ್ರ, ಸರಿಯಾಗಿ 28 ದಿನಗಳ ನಂತರ ಅಂದರೆ ನವೆಂಬರ್ 12 ರಿಂದ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಪ್ರಸಾರವಾಗಲಿದೆ. ತಮಿಳು, ತೆಲುಗು, ಕನ್ನಡ ಹಾಗೂ ಹಿಂದಿ ಭಾಷೆಗಳಲ್ಲಿ ಏಕಕಾಲಕ್ಕೆ ಸ್ಟ್ರೀಮಿಂಗ್ ಆರಂಭವಾಗಲಿದೆ.

ಈವರೆಗೂ ಎಷ್ಟು ಕಲೆಕ್ಷನ್‌ ಆಗಿದೆ?

'ಜೈಲರ್ 2' ಸಿನಿಮಾ ವಿಶ್ವಾದ್ಯಂತ ಬರೋಬ್ಬರಿ 820+ ಕೋಟಿ ರೂಪಾಯಿಗಳನ್ನು ಕಲೆಹಾಕಿ ದಾಖಲೆ ಬರೆದಿದೆ. ಭಾರತದಲ್ಲಿ ಚಿತ್ರದ ಒಟ್ಟು ಗಳಿಕೆ 545 ಕೋಟಿ ರೂ. ಆಗಿದ್ದರೆ, ವಿದೇಶಿ ಮಾರುಕಟ್ಟೆಯಿಂದ 276 ಕೋಟಿ ಸಂಗ್ರಹವಾಗಿದೆ. ಈ ಮೂಲಕ ಈ ಹಿಂದೆ 691 ಕೋಟಿ ರೂ. ಗಳಿಸಿ ತಮಿಳು ಚಿತ್ರರಂಗದ ಗರಿಷ್ಠ ಗಳಿಕೆಯ ಚಿತ್ರವಾಗಿದ್ದ ರಜನಿಕಾಂತ್ ಅವರದ್ದೇ '2.0' ಸಿನಿಮಾದ ಸಾರ್ವಕಾಲಿಕ ದಾಖಲೆಯನ್ನು 'ಜೈಲರ್ 2' ಸಿನಿಮಾ ಧೂಳೀಪಟ ಮಾಡಿದೆ. ಅಲ್ಲದೆ, ಆದಿತ್ಯ ಧರ್ ನಿರ್ದೇಶನದ 'ಧುರಂಧರ್: ದಿ ರಿವೆಂಜ್' ನಂತರ 2026 ರ ಎರಡನೇ ಅತಿ ಹೆಚ್ಚು ಗಳಿಕೆಯ ಭಾರತೀಯ ಚಿತ್ರವಾಗಿಯೂ ಹೊರಹೊಮ್ಮಿದೆ.

ಇಷ್ಟು ಬೇಗ ಒಟಿಟಿಗೆ ಬಂದಿದ್ದೇಕೆ?

ಈ ಚಿತ್ರವು ಥಿಯೇಟರ್‌ಗಳಲ್ಲಿ ಯಶಸ್ವಿಯಾಗಿ ಈಗಲೂ ಮುನ್ನುಗ್ಗುತ್ತಿದ್ದರೂ, ಇಷ್ಟು ಬೇಗ ಒಟಿಟಿಗೆ ಲಗ್ಗೆ ಇಡುತ್ತಿರುವುದಕ್ಕೆ ಪ್ರಮುಖ ಕಾರಣ ಪ್ರೀ-ರಿಲೀಸ್ ಒಪ್ಪಂದ. ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ನಾಲ್ಕು ವಾರಗಳ ಬಳಿಕವೇ ಒಟಿಟಿಯಲ್ಲಿ ಬಿಡುಗಡೆ ಮಾಡಬೇಕೆಂಬ ಷರತ್ತನ್ನು ಸಿನಿಮಾ ಬಿಡುಗಡೆಗೂ ಮುನ್ನವೇ ನಿರ್ಮಾಪಕರು ಹಾಗೂ ಸ್ಟ್ರೀಮಿಂಗ್ ಸಂಸ್ಥೆ ಅಂತಿಮಗೊಳಿಸಿದ್ದವು.

Rajinikanth-Kamal Haasan: ಬರೋಬ್ಬರಿ 4 ದಶಕಗಳ ಬಳಿಕ ತೆರೆಮೇಲೆ ಒಂದಾಗಲಿದ್ದಾರೆ ರಜನಿಕಾಂತ್‌-ಕಮಲ್‌ ಹಾಸನ್‌

30 ನಿಮಿಷಗಳ ಹೆಚ್ಚುವರಿ ದೃಶ್ಯಗಳು

ಇನ್ನು ಒಟಿಟಿ ವೀಕ್ಷಕರಿಗೆ ಮತ್ತೊಂದು ಅಚ್ಚರಿಯ ಸುದ್ದಿಯಿದ್ದು, ಸ್ಟ್ರೀಮಿಂಗ್ ಆವೃತ್ತಿಯಲ್ಲಿ ಚಿತ್ರಮಂದಿರಗಳಲ್ಲಿ ಕತ್ತರಿಸಲಾಗಿದ್ದ ಸುಮಾರು 30 ನಿಮಿಷಗಳ ಹೆಚ್ಚುವರಿ ದೃಶ್ಯಗಳು ಒಳಗೊಂಡ 'ಅನ್‌ಕಟ್ ವರ್ಷನ್' ಲಭ್ಯವಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಥಿಯೇಟರ್ ಆವೃತ್ತಿಯಿಂದ ಕೈಬಿಡಲಾಗಿತ್ತು ಎನ್ನಲಾದ ನಟ ಸಂತಾನಂ ಅವರ ಅತಿಥಿ ಪಾತ್ರ ಮತ್ತು ಮೋಹನ್‌ಲಾಲ್, ವಿಜಯ್ ಸೇತುಪತಿ ಹಾಗೂ ಹೃತಿಕ್ ರೋಷನ್ ಕಾಣಿಸಿಕೊಂಡಿರುವ ವಿಸ್ತೃತ ದೃಶ್ಯಗಳು ಇದರಲ್ಲಿ ಇರಲಿವೆಯಂತೆ. ಆದರೆ, ಈ ಬಗ್ಗೆ ಚಿತ್ರತಂಡದಿಂದ ಇನ್ನಷ್ಟೇ ಅಧಿಕೃತ ಪ್ರಕಟಣೆ ಹೊರಬೀಳಬೇಕಿದೆ.

ನೆಲ್ಸನ್ ದಿಲೀಪ್‌ಕುಮಾರ್ ಕಥೆ ಬರೆದು ನಿರ್ದೇಶಿಸಿರುವ ಹಾಗೂ ಸನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಕಲಾನಿಧಿ ಮಾರನ್ ನಿರ್ಮಿಸಿರುವ ಈ ಚಿತ್ರ, 2023ರಲ್ಲಿ 605 ಕೋಟಿ ಗಳಿಸಿದ್ದ 'ಜೈಲರ್' ಮೊದಲ ಭಾಗದ ಮುಂದುವರಿದ ಭಾಗವಾಗಿದೆ.