ಹಿರಿಯ ಪತ್ರಕರ್ತ ಕೆ. ಜೆ. ಕುಮಾರ್ (74) ಅವರು ಬುಧವಾರ ಸಂಜೆ ಹೃದಯಾಘಾತದಿಂದ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಐದು ದಶಕಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯವಾಗಿದ್ದ ಅವರ ನಿಧನಕ್ಕೆ ಅನೇಕರು ಸಂತಾಪ ಸೂಚಿಸಿತ್ತಿದ್ದಾರೆ. ಸೂಪರ್ ಸ್ಟಾರ್ ರಜನಿಕಾಂತ್ ಅವರ ಜೊತೆಗೆ ಕೆ ಜೆ ಕುಮಾರ್ ಅವರು ಆತ್ಮೀಯ ಒಡನಾಟವನ್ನು ಹೊಂದಿದ್ದರು. ರಜನಿಕಾಂತ್ ಜೊತೆಗೆ ಅಷ್ಟೊಂದು ಆತ್ಮೀಯ ಒಡನಾಟ ಹೊಂದಿದ್ದ ಕನ್ನಡದ ಏಕೈಕ ಪತ್ರಕರ್ತರೆಂದರೆ, ಅದು ಕೆ. ಜೆ. ಕುಮಾರ್ ಎನ್ನಲಾಗುತ್ತಿತ್ತು. ಇದೀಗ ಕುಮಾರ್ ಅವರ ನಿಧನಕ್ಕೆ ರಜನಿಕಾಂತ್ ಕಂಬನಿ ಮಿಡಿದಿದ್ದಾರೆ.
ಕನ್ನಡದಲ್ಲಿ ಟ್ವೀಟ್ ಮಾಡಿದ ರಜನಿಕಾಂತ್
ಕೆ ಜೆ ಕುಮಾರ್ ಅವರ ನಿಧನ ಸುದ್ದಿ ತಿಳಿಯುತ್ತಿದ್ದಂತೆಯೇ, ಕನ್ನಡದಲ್ಲಿಯೇ ಟ್ವೀಟ್ ಮಾಡಿ, ರಜನಿಕಾಂತ್ ಸಂತಾಪ ಸೂಚಿಸಿದ್ದಾರೆ. "ದಿವಂಗತ ಕೆ. ಜೆ. ಕುಮಾರ್ ಅವರು.. ನನ್ನ ಆತ್ಮೀಯ ಸ್ನೇಹಿತರು.. ಆರಂಭಕಾಲದಿಂದಲೂ ನನ್ನ ನಟನೆಯನ್ನು ಮೆಚ್ಚಿ ಪ್ರೋತ್ಸಾಹಿಸಿದವರು. ಬಹಳ ಸರಳವಾಗಿ ಯಾವಾಗಲೂ ಹಸನ್ಮುಖಿಯಾಗಿ ಎಲ್ಲರ ಜೊತೆಯಲ್ಲಿದ್ದರು. ಅವರ ಅಗಲಿಕೆ ನನ್ನ ಮನಸ್ಸಿಗೆ ತುಂಬಾ ನೋವು ಉಂಟುಮಾಡಿದೆ. ಅವರ ಕುಟುಂಬಸ್ಥರಿಗೆ ನನ್ನ ಸಂತಾಪಗಳು" ಎಂದು ಬರೆದು, ಟ್ವೀಟ್ ಮಾಡಿದ್ದಾರೆ ರಜನಿಕಾಂತ್.
Rajinikanth-Kamal Haasan: ಬರೋಬ್ಬರಿ 4 ದಶಕಗಳ ಬಳಿಕ ತೆರೆಮೇಲೆ ಒಂದಾಗಲಿದ್ದಾರೆ ರಜನಿಕಾಂತ್-ಕಮಲ್ ಹಾಸನ್
ರಜನಿಕಾಂತ್ ಅವರ ಆರಂಭ ದಿನಗಳಲ್ಲಿ ಕೆ ಜೆ ಕುಮಾರ್ ಅವರು ಸಾಕಷ್ಟು ಸಪೋರ್ಟ್ ಮಾಡಿದ್ದರು. ರಜನಿಕಾಂತ್‌ಗೆ ಬೆನ್ನುತಟ್ಟಿ ಪ್ರೊತ್ಸಾಹಿಸಿದ್ದರು. ರಜನಿಕಾಂತ್ ಮಾತ್ರವಲ್ಲದೆ, ಕನ್ನಡ ಚಿತ್ರೋದ್ಯಮದ ದಿಗ್ಗಜರಾದ ಡಾ. ರಾಜ್‌ಕುಮಾರ್, ಡಾ. ವಿಷ್ಣುವರ್ಧನ್, ಡಾ. ಅಂಬರೀಷ್, ಶಶಿಕುಮಾರ್, ನಿರ್ಮಾಪಕರಾದ ದ್ವಾರಕೀಶ್, ಎನ್. ವೀರಸ್ವಾಮಿ, ನಿರ್ದೇಶಕರಾದ ಪುಟ್ಟಣ್ಣ ಕಣಗಾಲ್, ಸಿದ್ದಲಿಂಗಯ್ಯ, ಎಸ್. ವಿ. ರಾಜೇಂದ್ರ ಸಿಂಗ್ ಬಾಬು ಮುಂತಾದವರೊಂದಿಗೆ ಆತ್ಮೀಯ ಒಡನಾಟವನ್ನು ಹೊಂದಿದ್ದರು.
ರಜನಿಕಾಂತ್ ಅವರ ಟ್ವೀಟ್
ಕೆ. ಜೆ. ಕುಮಾರ್ ಬಗ್ಗೆ...
ಉಡುಪಿಯ ಕೊರಂಗ್ರಪಾಡಿಯವರಾದ ಕೆ ಜೆ ಕುಮಾರ್, ರಘುರಾಮ್ ಶೆಟ್ಟಿ ಮತ್ತು ಶಾರದಾ ಅವರ ಜ್ಯೇಷ್ಠ ಪುತ್ರರಾಗಿ 1952ರ ನವೆಂಬರ್ 6 ರಂದು ಜನಿಸಿದರು. ಸುಮಾರು 56 ವರ್ಷಗಳಿಂದ ಮೈಸೂರಿನ ಪ್ರಮುಖ ಪತ್ರಿಕಾ ವಿತರಕರಾಗಿ ಹಾಗೂ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದರು. 1969ರಲ್ಲಿ ಅವರ ಸೋದರ ಮಾವ, ವಿಧಾನಪರಿಷತ್ ಮಾಜಿ ಸದಸ್ಯ, ಸ್ವಾತಂತ್ರ್ಯ ಹೋರಾಟಗಾರರಾದ ಎ. ರಾಮಣ್ಣ ಸಂಪಾದಕತ್ವದ 'ವಿಜಯ' ದಿನಪತ್ರಿಕೆಯಲ್ಲಿ ಪತ್ರಕರ್ತರಾಗಿ ವೃತ್ತಿ ಬದುಕು ಆರಂಭಿಸಿದರು.
ನಂತರ ಅದೇ ಪತ್ರಿಕೆಯ ಪ್ರಕಾಶಕ ಮತ್ತು ಮುದ್ರಕರಾಗಿ ಕುಮಾರ್ ಕೆಲಸ ಮಾಡಿದರು. ಸಿನಿಮಾ ಪತ್ರಕರ್ತರಾಗಿ 'ಸುಧಾ' ವಾರಪತ್ರಿಕೆ, 'ವಿಜಯ ಚಿತ್ರ' ಸಿನಿಮಾ ಮಾಸಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ್ದರು. 1978ರಿಂದ 'ರೂಪಾತಾರ' ಮಾಸಪತ್ರಿಕೆಗೆ ಮೂರು ದಶಕ ಕೆಲಸ ಮಾಡಿದ್ದರು. 1993ರಿಂದ 'ಉದಯವಾಣಿ' ಮೈಸೂರು ಪ್ರತಿನಿಧಿಯಾಗಿ ಒಂದೂವರೆ ದಶಕದವರೆಗೆ ಕಾರ್ಯನಿರ್ವಹಿಸಿದ್ದರು. ಪ್ರಸ್ತುತ 'ಹೊಸದಿಗಂತ'ದ ಸಿನಿಮಾ ವಿಭಾಗ ನೋಡಿಕೊಳ್ಳುತ್ತಿದ್ದರು. ಹೋಟೆಲ್ ಉದ್ಯಮದಲ್ಲೂ ತೊಡಗಿಸಿಕೊಂಡಿದ್ದ ಕುಮಾರ್ ಮೈಸೂರಿನ ಸರಸ್ವತಿಪುರದಲ್ಲಿ 'ಕುಠೀರ ಮನೆ' ಎಂಬ ಹೋಟೆಲ್ ಶುರು ಮಾಡಿದ್ದರು.