ʻಸೂಪರ್‌ಸ್ಟಾರ್ʼ ರಜನಿಕಾಂತ್ ಅವರ ಹೊಸ ಸಿನಿಮಾಗಾಗಿ ಅಭಿಮಾನಿಗಳು ಎಷ್ಟು ಕಾತರದಿಂದ ಕಾಯುತ್ತಿರುತ್ತಾರೋ, ಅಷ್ಟೇ ಕುತೂಹಲದಿಂದ ಆ ಸಿನಿಮಾಗಳ ಆಡಿಯೋ ಲಾಂಚ್ ಕಾರ್ಯಕ್ರಮಕ್ಕೂ ಕಾಯುತ್ತಿರುತ್ತಾರೆ. ಏಕೆಂದರೆ, ಅಂದು ರಜನಿಕಾಂತ್ ಅವರ ಭಾಷಣ ಹೇಗಿರುತ್ತದೋ ಎಂಬ ಕುತೂಹಲ ಎಲ್ಲರಲ್ಲೂ ಇರುತ್ತದೆ. ಸದ್ಯ 'ಜೈಲರ್ 2' ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಅಕ್ಟೋಬರ್ 15ರಂದು ತೆರೆಗೆ ಬರಲಿರುವ ಈ ಚಿತ್ರಕ್ಕೆ ಯಾವುದೇ ಅದ್ಧೂರಿ ಆಡಿಯೋ ರಿಲೀಸ್ ಸಮಾರಂಭ ಇರುವುದಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.
ಸಾಮಾನ್ಯವಾಗಿ ಅದ್ಧೂರಿ ಆಡಿಯೋ ರಿಲೀಸ್ ಕಾರ್ಯಕ್ರಮ ಆಯೋಜಿಸುತ್ತಿದ್ದ ಚಿತ್ರತಂಡ, ಈ ಬಾರಿ ಈಗಾಗಲೇ ಸರಳವಾಗಿ ಆಲ್ಬಂ ಬಿಡುಗಡೆ ಮಾಡಿದೆ. ಹಾಗಂತ, ಅಭಿಮಾನಿಗಳು ಬೇಸರ ಮಾಡಿಕೊಳ್ಳಬೇಕಿಲ್ಲ. ಏಕೆಂದರೆ, 'ಜೈಲರ್ 2' ಸಿನಿಮಾ ಚಿತ್ರಮಂದಿರಗಳಿಗೆ ಬರುವ ಕೆಲವೇ ದಿನಗಳ ಮುನ್ನ ರಜನಿಕಾಂತ್ ಅವರ ಅಪರೂಪದ 3 ಗಂಟೆಗಳ ಸುದೀರ್ಘ ಸಂದರ್ಶನವನ್ನು ಪ್ರಸಾರ ಮಾಡಲು ಚಿತ್ರತಂಡ ನಿರ್ಧರಿಸಿದೆ.
ಅಕ್ಟೋಬರ್ 11ರಂದು ಸಂದರ್ಶನ ಪ್ರಸಾರ
ಈ ವಿಶೇಷ ಸಂದರ್ಶನ ಅಕ್ಟೋಬರ್ 11ರಂದು ನಿಗದಿಯಾಗಿದ್ದು, ಸನ್ ಟಿವಿಯಲ್ಲಿ ಸಂಜೆ 6.30ರಿಂದ ರಾತ್ರಿ 9.30ರವರೆಗೆ ಪ್ರಸಾರವಾಗಲಿದೆ. ಅಕ್ಟೋಬರ್ 15ರಂದು 'ಜೈಲರ್ 2' ವಿಶ್ವಾದ್ಯಂತ ಬಿಡುಗಡೆಯಾಗುವುದಕ್ಕೆ ಕೇವಲ ನಾಲ್ಕು ದಿನಗಳ ಮುಂಚಿತವಾಗಿ ಮೂಡಿಬರಲಿರುವ ಈ ಮೂರು ಗಂಟೆಗಳ ಸಂದರ್ಶನವು, ಚಿತ್ರಕ್ಕೆ ಭಾರಿ ಪ್ರಚಾರ ತಂದುಕೊಡುವ ನಿರೀಕ್ಷೆಯಿದೆ.
ಸಾಮಾನ್ಯವಾಗಿ ರಜನಿಕಾಂತ್ ಅವರ ಆಡಿಯೋ ಲಾಂಚ್ ಕೇವಲ ಸಂಗೀತ ಬಿಡುಗಡೆಗೆ ಸೀಮಿತವಾಗಿರದೆ, ಅದಕ್ಕಿಂತ ಮಿಗಿಲಾದ ಮಹತ್ವ ಪಡೆದುಕೊಂಡಿರುತ್ತದೆ. ಅವರ ಭಾಷಣಗಳು, ಅವರು ಹಂಚಿಕೊಳ್ಳುವ ಕಥೆಗಳು, ಜೀವನಾನುಭವಗಳು ಹಾಗೂ ಸಂಗೀತ ನಿರ್ದೇಶಕ ಅನಿರುದ್ಧ್ ಅವರ ಲೈವ್ ಪರ್ಫಾರ್ಮೆನ್ಸ್ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿ, ಸಿನಿಮಾದ ಪ್ರಚಾರಕ್ಕೆ ಪ್ರಮುಖ ಬಲ ತುಂಬುತ್ತಿದ್ದವು. ಆದರೆ 'ಜೈಲರ್ 2' ಚಿತ್ರತಂಡ ಈ ಬಾರಿ ಆ ಸಂಪ್ರದಾಯವನ್ನು ಬ್ರೇಕ್ ಮಾಡಿದೆ.
ಶಂಕರ್ ನಿರ್ದೇಶನದ '2.0' ಚಿತ್ರದ ಪ್ರಚಾರದ ವೇಳೆ ರಜನಿಕಾಂತ್ ನೀಡಿದ್ದ ಸಂದರ್ಶನ ಸಾಕಷ್ಟು ಗಮನ ಸೆಳೆದಿತ್ತು. ಇದೀಗ ಅವರ ಈ 3 ಗಂಟೆಗಳ ಸಂದರ್ಶನದಲ್ಲಿ ಏನೆಲ್ಲಾ ಇರಬಹುದು ಎಂಬ ಕುತೂಹಲ ಅಭಿಮಾನಿಗಳಲ್ಲಿ ಮನೆಮಾಡಿದೆ. ಆದ್ದರಿಂದ, 'ಜೈಲರ್ 2' ಸಂದರ್ಶನವು ಕೇವಲ ಮೂರು ಗಂಟೆಗಳ ಸುದೀರ್ಘ ಅವಧಿಗೆ ಮಾತ್ರವಲ್ಲದೆ, ಪ್ರಸಾರವಾಗುವ ಸಮಯದ ದೃಷ್ಟಿಯಿಂದಲೂ ಮಹತ್ವ ಪಡೆದಿದೆ. ಚಿತ್ರ ತೆರೆಕಾಣಲು ಕೇವಲ ನಾಲ್ಕು ದಿನಗಳಿರುವಾಗ ಪ್ರಸಾರವಾಗುತ್ತಿರುವುದು, ಸಿನಿಮಾ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಲು ರಜನಿಕಾಂತ್ ಹಾಗೂ ಚಿತ್ರತಂಡಕ್ಕೆ ಸಿಕ್ಕ ಪ್ರಮುಖ ಅವಕಾಶವಾಗಿದೆ.
Rajinikanth: ಬರೋಬ್ಬರಿ 34 ವರ್ಷಗಳ ಬಳಿಕ ಒಂದಾಗಲಿದ್ದಾರೆ ರಜನಿಕಾಂತ್-ಮಣಿರತ್ನಂ
ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ 'ಜೈಲರ್ 2', 2023ರ ಬ್ಲಾಕ್‌ಬಸ್ಟರ್ 'ಜೈಲರ್' ಯಶಸ್ಸಿನ ನಂತರ ಮತ್ತೊಮ್ಮೆ ರಜನಿಕಾಂತ್ ಅವರನ್ನು 'ಟೈಗರ್ ಮುತ್ತುವೇಲ್ ಪಾಂಡಿಯನ್' ಆಗಿ ತೆರೆಗೆ ತರುತ್ತಿದೆ. ಈ ಸೀಕ್ವೆಲ್‌ನಲ್ಲಿ ಮೋಹನ್‌ಲಾಲ್, ಶಿವರಾಜ್‌ಕುಮಾರ್, ಮಿಥುನ್ ಚಕ್ರವರ್ತಿ, ವಿದ್ಯಾ ಬಾಲನ್, ಎಸ್.ಜೆ. ಸೂರ್ಯ, ಸೂರಜ್ ವೆಂಜಾರಮೂಡು ಮತ್ತು ರಮ್ಯಾ ಕೃಷ್ಣನ್ ಸೇರಿದಂತೆ ಬೃಹತ್ ತಾರಾಗಣವಿದೆ. ವಿಜಯ್ ಸೇತುಪತಿ ಕೂಡ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜಿಸಿದ್ದು, ಸನ್ ಪಿಕ್ಚರ್ಸ್ ಸಂಸ್ಥೆ ನಿರ್ಮಾಣ ಮಾಡಿದೆ.