ಈಚೆಗಷ್ಟೇ ತಮಿಳು ನಟ ವಿಜಯ್ ಅವರ ಜನ ನಾಯಗನ್ ಸಿನಿಮಾವು ಆನ್‌ಲೈನ್‌ನಲ್ಲಿ ಸೋರಿಕೆ ಆಗಿತ್ತು. ತೆರೆಗೆ ಬರುವುದಕ್ಕೂ ಮುನ್ನವೇ ಚಿತ್ರದ ಪ್ರಮುಖ ದಶ್ಯಗಳನ್ನು ಕಿಡಿಗೇಡಿಗಳು ವೈರಲ್ ಮಾಡಿ, ಚಿತ್ರತಂಡಕ್ಕೆ ದೊಡ್ಡ ಹೊಡೆತ ನೀಡಿದ್ದರು. ಇದೀಗ ಆ ಪ್ರಕರಣಕ್ಕೆ ಸಂಬಂಧಿಸಿದಂತೆ 9 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ ಈಗ ಜೈಲರ್ 2 ತಂಡಕ್ಕೂ ಈ ಸಮಸ್ಯೆ ಎದುರಾಗಿದೆ. ಇದನ್ನು ಸನ್ ಪಿಕ್ಚರ್ಸ್ ಗಂಭೀರವಾಗಿ ತೆಗೆದುಕೊಂಡಿದೆ.
ಶೂಟಿಂಗ್ ಸೆಟ್‌ನ ವಿಡಿಯೋ ಲೀಕ್
ಜೈಲರ್ 2 ಚಿತ್ರೀಕರಣದ ಸೆಟ್‌ನಲ್ಲಿ ಸೆರೆಹಿಡಿಯಲಾದ ಬಿಟಿಎಸ್ (Behind the Scenes) ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಭಿಮಾನಿಗಳು ಸೇರಿದಂತೆ ಅನೇಕರು ಇದನ್ನು ಹಂಚಿಕೊಂಡ ನಂತರ ಸನ್ ಪಿಕ್ಚರ್ಸ್ ಸಂಸ್ಥೆಯು ಎಚ್ಚೆತ್ತುಕೊಂಡಿದೆ. ಈ ಬಗ್ಗೆ ಪ್ರತಿಕ್ರಿಯಿಸಿ, "ಜೈಲರ್ 2 ಶೂಟಿಂಗ್ ಸೆಟ್‌ನ ವಿಡಿಯೋ ತುಣುಕೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಈ ವಿಡಿಯೋಗಳನ್ನು ಹಂಚಿಕೊಳ್ಳುವ ಅಥವಾ ಪ್ರಚಾರ ಮಾಡುವ ಅಕೌಂಟ್‌ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಅಂತಹ ವಿಷಯಗಳನ್ನು ತೆಗೆದುಹಾಕಲು ನಮ್ಮ ತಂಡ ನಿರಂತರವಾಗಿ ನಿಗಾ ವಹಿಸುತ್ತಿದೆ" ಎಂದು ತಿಳಿಸಿದೆ.
ಈ ಸಿನಿಮಾದ ಪೈರಸಿ ವಿರೋಧಿ ತಂಡವು (Anti-piracy team) ಈಗಾಗಲೇ ಕಾರ್ಯಪ್ರವೃತ್ತವಾಗಿದ್ದು, ಅಂತಹ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಿಂದ ತೆರವುಗೊಳಿಸುತ್ತಿದೆ. ಈ ಮಧ್ಯೆ ನಿರ್ಮಾಣ ಸಂಸ್ಥೆಯು ಮಾಧ್ಯಮಗಳು ಮತ್ತು ಅಭಿಮಾನಿ ಸಂಘಗಳಿಗೆ ಈ ವಿಡಿಯೋವನ್ನು ವೈರಲ್ ಮಾಡದಂತೆ ವಿನಂತಿಸಿದೆ. "ಈ ರೀತಿ ವಿಡಿಯೋವನ್ನು ಹಂಚಿಕೊಂಡು, ನಂತರ ಯಾವುದೇ ಅಕೌಂಟ್ ಸಸ್ಪೆಂಡ್ ಅಥವಾ ನಿರ್ಬಂಧಕ್ಕೊಳಗಾದರೆ ಅದಕ್ಕೆ ಸಂಸ್ಥೆ ಜವಾಬ್ದಾರಿಯಲ್ಲ. ಅಂತಹ ಅಕೌಂಟ್‌ಗಳನ್ನು ಮರುಪಡೆಯಲು ಸಂಸ್ಥೆಯು ಯಾವುದೇ ಸಹಾಯ ಮಾಡುವುದಿಲ್ಲ" ಎಂದು ಸನ್ ಪಿಕ್ಚರ್ಸ್ ಸ್ಪಷ್ಟನೆ ನೀಡಿದೆ.
Jailer 2 Movie: ರಜನಿಕಾಂತ್ ಅಭಿನಯದ ʼಜೈಲರ್ 2ʼ ಚಿತ್ರಕ್ಕೆ ಸ್ಟಾರ್ ನಟಿ ಎಂಟ್ರಿ
ಈ ವರ್ಷದ ಬಹುನಿರೀಕ್ಷಿತ ಸಿನಿಮಾ ಜೈಲರ್ 2
2023ರ ಸೂಪರ್ ಹಿಟ್ 'ಜೈಲರ್' ಚಿತ್ರದ ಸೀಕ್ವೆಲ್ ಆಗಿ ಜೈಲರ್ 2 ಬರುತ್ತಿದ್ದು, ರಜನಿಕಾಂತ್ ಮತ್ತೆ 'ಟೈಗರ್ ಮುತ್ತುವೇಲ್ ಪಾಂಡಿಯನ್' ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮೊದಲ ಭಾಗವು ವಿಶ್ವದಾದ್ಯಂತ 600 ಕೋಟಿ ರೂ.ಗೂ ಅಧಿಕ ಗಳಿಕೆ ಮಾಡಿತ್ತು. ವಿಶೇಷವೆಂದರೆ, ಮೊದಲ ಭಾಗದಲ್ಲಿ ಅತಿಥಿ ಪಾತ್ರಗಳಲ್ಲಿ ಮಿಂಚಿದ್ದ ಶಿವರಾಜ್‌ಕುಮಾರ್ ಮತ್ತು ಮೋಹನ್ ಲಾಲ್ ಈ ಭಾಗದಲ್ಲೂ ಮುಂದುವರಿಯಲಿದ್ದಾರೆ. ಬಾಲಿವುಡ್ ನಟ ಮಿಥುನ್ ಚಕ್ರವರ್ತಿ ಈ ಬಾರಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಬಿಡುಗಡೆ ದಿನಾಂಕ ಇನ್ನಷ್ಟೇ ಘೋಷಣೆ ಆಗಬೇಕಿದೆ.