ಬಾಲಿವುಡ್‌ನ ದಿಗ್ಗಜ ನಿರ್ದೇಶಕ ರಾಜ್‌ಕುಮಾರ್ ಹಿರಾನಿ ಅವರು ಮೊದಲ ಬಾರಿಗೆ ಒಟಿಟಿ ಜಗತ್ತಿಗೆ ಕಾಲಿಟ್ಟಿದ್ದು, ಅವರ ಕಲ್ಪನೆಯಲ್ಲಿ ಮೂಡಿಬಂದಿರುವ ಬಹುನಿರೀಕ್ಷಿತ ವೆಬ್ ಸರಣಿ ‘ಪ್ರೀತಂ & ಪೆಡ್ರೋ’ (Pritam & Pedro) ಅಧಿಕೃತ ಟ್ರೇಲರ್ ಇತ್ತೀಚೆಗಷ್ಟೇ ಬಿಡುಗಡೆಯಾಗಿದೆ. ಹಾಸ್ಯ, ರಹಸ್ಯ ಮತ್ತು ರೋಮಾಂಚನಕಾರಿ ಸಾಹಸಗಳ ವಿಶಿಷ್ಟ ಸಂಗಮವಾಗಿರುವ ಈ ಸರಣಿಯು ಜುಲೈ 3 ರಿಂದ ‘ಜಿಯೋಹಾಟ್‌ಸ್ಟಾರ್’ನಲ್ಲಿ ಪ್ರಸಾರವಾಗಲಿದೆ.
ಅವಿನಾಶ್ ಅರುಣ್ ನಿರ್ದೇಶಿಸಿರುವ ಈ ಸರಣಿಯಲ್ಲಿ ಬಾಲಿವುಡ್‌ನ ಪ್ರತಿಭಾನ್ವಿತ ನಟರಾದ ಅರ್ಷದ್ ವಾರ್ಸಿ, ವಿಕ್ರಾಂತ್ ಮಾಸ್ಸಿ, ಮೋನಾ ಸಿಂಗ್, ಬೋಮನ್ ಇರಾನಿ ಹಾಗೂ ರಾಜ್‌ಕುಮಾರ್ ಹಿರಾನಿ ಅವರ ಪುತ್ರ ವಿರ್ ಹಿರಾನಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
Vikrant Massey: ತೆರೆಮೇಲೆ ಬರಲಿದೆ ಶ್ರೀ ಶ್ರೀ ರವಿ ಶಂಕರ್ ಜೀವನ ಚರಿತ್ರೆ; ವಿಕ್ರಾಂತ್ ಮೆಸ್ಸಿಗೊಲಿದ ನಾಯಕ ಪಟ್ಟ
‘ಪ್ರೀತಂ & ಪೆಡ್ರೋ’ ಕಥೆ ಏನು?
ಗೋವಾದ ಸುಂದರ ಪರಿಸರದ ಹಿನ್ನೆಲೆಯಲ್ಲಿ ಈ ಕಥೆ ಸಾಗುತ್ತದೆ. ಸಂಪೂರ್ಣ ವಿಭಿನ್ನ ಹಿನ್ನೆಲೆಯ ಇಬ್ಬರು ವ್ಯಕ್ತಿಗಳು ವಿಚಿತ್ರ ಪರಿಸ್ಥಿತಿಯಲ್ಲಿ ಮುಖಾಮುಖಿಯಾಗುವ ಕಥೆ ಇಲ್ಲಿದೆಯಂತೆ. ಇದರ ಕೇಂದ್ರಬಿಂದುಗಳಾದ ‘ಪೆಡ್ರೋ’ (ಅರ್ಷದ್ ವಾರ್ಸಿ) ತನ್ನ ಅಂತಃಪ್ರಜ್ಞೆಯನ್ನೇ ನಂಬಿ ನಡೆಯುವ ಹಳೆಯ ಶೈಲಿಯ ಪೊಲೀಸ್ ಅಧಿಕಾರಿಯಾಗಿದ್ದರೆ, ‘ಪ್ರೀತಂ’ (ವಿಕ್ರಾಂತ್ ಮಾಸ್ಸಿ) ಅತ್ಯಂತ ಚುರುಕು ಬುದ್ಧಿಯ ಇಂದಿನ ಜನರೇಷನ್‌ನ ಐಟಿ ಯುವಕನಾಗಿರುತ್ತಾನೆ. ಸಂಪೂರ್ಣ ವಿರುದ್ಧ ಸ್ವಭಾವದ ಇವರಿಬ್ಬರೂ ತಮ್ಮ ಕಲ್ಪನೆಗೂ ಮೀರಿದ ಒಂದು ವಿಚಿತ್ರವಾದ ನಿಗೂಢ ರಹಸ್ಯದಲ್ಲಿ ಸಿಲುಕಿಕೊಳ್ಳುತ್ತಾರೆ. ಅಲ್ಲಿಂದ ಮುಂದೆ ಅವರ ಪ್ರಯಾಣ ಹೇಗೆ ಸಾಗುತ್ತದೆ, ಅವರ ನಡುವಿನ ಬಾಂಧವ್ಯ ಹೇಗೆ ಬದಲಾಗುತ್ತದೆ ಎಂಬುದೇ ಸರಣಿಯ ಮುಖ್ಯ ತಿರುಳು.
ರಾಜ್‌ಕುಮಾರ್ ಹಿರಾನಿ ಏನಂದ್ರು?
ಈ ಸರಣಿಯ ಬಗ್ಗೆ ಮಾತನಾಡಿದ ನಿರ್ಮಾಪಕ ರಾಜ್‌ಕುಮಾರ್ ಹಿರಾನಿ, "ಈ ಕಥೆಯಲ್ಲಿ ಪ್ರೀತಂ ಮತ್ತು ಪೆಡ್ರೋ ಎಂಬ ಸಂಪೂರ್ಣ ಭಿನ್ನ ಜಗತ್ತಿನ ಇಬ್ಬರು ವ್ಯಕ್ತಿಗಳ ನಡುವಿನ ಅಪರೂಪದ ಸಂಬಂಧ ನನ್ನನ್ನು ಹೆಚ್ಚು ಆಕರ್ಷಿಸಿತು. ಮನುಷ್ಯನ ಸ್ವಭಾವಗಳು, ದುರ್ಬಲತೆಗಳು ಮತ್ತು ಅನಿರೀಕ್ಷಿತವಾಗಿ ಹುಟ್ಟುವ ಸಂಬಂಧಗಳ ಸುತ್ತ ಈ ಸರಣಿಯನ್ನು ಹೆಣೆಯಲಾಗಿದ್ದು, ವೀಕ್ಷಕರು ಇದನ್ನು ಖಂಡಿತಾ ಎಂಜಾಯ್ ಮಾಡಲಿದ್ದಾರೆ" ಎಂಬ ಭರವಸೆ ವ್ಯಕ್ತಪಡಿಸುತ್ತಾರೆ.
Vikrant Massey: ನಟನೆಯಿಂದ ಬ್ರೇಕ್... ದಿಢೀರ್ ನಿರ್ಧಾರಕ್ಕೆ ಕಾರಣ ಬಿಚ್ಚಿಟ್ಟ ನಟ ವಿಕ್ರಾಂತ್ ಮಾಸ್ಸೆ
ಅರ್ಷದ್ ವಾರ್ಸಿ & ವಿಕ್ರಾಂತ್ ಏನಂದ್ರು?
ನಟ ಅರ್ಷದ್ ವಾರ್ಸಿ ಮಾತನಾಡಿ, "ತನ್ನ ಮನಸ್ಸಿಗೆ ತೋಚಿದ್ದನ್ನು ಮಾಡುವ, ಯೋಚಿಸದೆ ಅಪಾಯಕಾರಿ ಪರಿಸ್ಥಿತಿಗಳಿಗೆ ಸಿಲುಕುವ ಪೆಡ್ರೋ ಪಾತ್ರ ನನಗೆ ತುಂಬಾ ಇಷ್ಟವಾಯಿತು" ಎಂದಿದ್ದಾರೆ. "ಸಾಕಷ್ಟು ಅನಿರೀಕ್ಷಿತ ತಿರುವುಗಳನ್ನು ಹೊಂದಿರುವ ಇಂತಹ ಒಂದು ವಿಭಿನ್ನ ಪ್ರಾಜೆಕ್ಟ್‌ನ ಭಾಗವಾಗಿರುವುದು ಹೆಮ್ಮೆ ತಂದಿದೆ" ಎಂದು ನಟ ವಿಕ್ರಾಂತ್ ಮಾಸ್ಸಿ ಸಂತಸ ಹಂಚಿಕೊಂಡಿದ್ದಾರೆ.
ಜಿಮೋಹಾಟ್‌ಸ್ಟಾರ್‌ನ ಹಿಂದಿ ಮತ್ತು ಇಂಗ್ಲಿಷ್ ಎಂಟರ್‌ಟೈನ್‌ಮೆಂಟ್ ವಿಭಾಗದ ಮುಖ್ಯಸ್ಥ ಆಲೋಕ್ ಜೈನ್ ಮಾತನಾಡಿ, "ಜನರ ದಿನನಿತ್ಯದ ಜೀವನದ ಭಾಗವಾಗುವಂತಹ, ಸದಾ ನೆನಪಿನಲ್ಲಿ ಉಳಿಯುವಂತಹ ಕಥೆಗಳನ್ನು ನೀಡುವುದು ನಮ್ಮ ಗುರಿ. ರಾಜ್‌ಕುಮಾರ್ ಹಿರಾನಿ ಅವರಂತಹ ಶ್ರೇಷ್ಠ ಕಥೆಗಾರರನ್ನು ಡಿಜಿಟಲ್ ಜಗತ್ತಿಗೆ ಸ್ವಾಗತಿಸಲು ನಾವು ಹೆಮ್ಮೆಪಡುತ್ತೇವೆ" ಎಂದು ತಿಳಿಸಿದ್ದಾರೆ.