ಬಾಲಿವುಡ್ ನಟ ರಾಜ್‌ಪಾಲ್ ಯಾದವ್ ಅವರು ಸದ್ದು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಕಳೆದ ಕೆಲವು ದಿನಗಳಿಂದ ಅವರು 9 ಕೋಟಿ ರೂ. ಚೆಕ್ ಬೌನ್ಸ್ ಪ್ರಕರಣದಲ್ಲಿ ಸಿಲುಕಿ ತಿಹಾರ್ ಜೈಲಿನಲ್ಲಿದ್ದರು. ಇಂದು (ಫೆ.16) ಅವರಿಗೆ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ. ಹಾಗಾಗಿ, ಅವರು ಜೈಲಿನಿಂದ ಹೊರಬಂದಿದ್ದಾರೆ. ಈ ಪ್ರಕರಣದ ವಿಚಾರಣೆಯು ಮಾ.18ಕ್ಕೆ ನಿಗದಿಯಾಗಿದ್ದು, ಅಲ್ಲಿವರೆಗೂ ಅವರು ನಿರಾಳರಾಗಿ ಇರಬಹುದು.
2.50 ಕೋಟಿ ರೂ. ಠೇವಣಿ ಇರಿಸಿದ ನಟ
ರಾಜ್ ಪಾಲ್ ಯಾದವ್ ಅವರು 2.50 ಕೋಟಿ ರೂ. ಹಣವನ್ನು ಠೇವಣಿಯಾಗಿ ಪಾವತಿ ಮಾಡಬೇಕಿತ್ತು. ಈಗಾಗಲೇ ಅವರು 75 ಲಕ್ಷ ರೂ. ಗಳನ್ನು ನೀಡಿದ್ದರು. ಇಂದು ಬಾಕಿ 1.75 ಕೋಟಿ ರೂ. ಹಣವನ್ನು ಕಟ್ಟಿ, ಜಾಮೀನು ಪಡೆದುಕೊಂಡಿದ್ದಾರೆ. ಮಾರ್ಚ್ 18 ರಂದು ನಡೆಯಲಿರುವ ಮುಂದಿನ ವಿಚಾರಣೆಗೆ ಖುದ್ದಾಗಿ ಅಥವಾ ಆನ್‌ಲೈನ್ ಮೂಲಕ ಹಾಜರಿರುವಂತೆ ದೆಹಲಿ ಹೈಕೋರ್ಟ್ ರಾಜ್‌ಪಾಲ್ ಯಾದವ್ ಅವರಿಗೆ ಸೂಚಿಸಿದೆ. ಅಲ್ಲದೆ, ಪಾಸ್‌ಪೋರ್ಟ್ ಅನ್ನು ಒಪ್ಪಿಸುವಂತೆ ಮತ್ತು ಅನುಮತಿಯಿಲ್ಲದೆ ದೇಶವನ್ನು ಬಿಟ್ಟು ಹೋಗದಂತೆ ನಿರ್ದೇಶಿಸಲಾಗಿದೆ.
ಕುಟುಂಬದಲ್ಲಿ ಸಂತಸ
ಸದ್ಯ ರಾಜ್‌ಪಾಲ್ ಯಾದವ್ ಅವರ ಕುಟುಂಬದಲ್ಲಿ ಸಂಬಂಧಿಕರ ಮದುವೆ ಇದೆ. ಸದ್ಯ ಜಾಮೀನು ಸಿಕ್ಕಿರುವುದಕ್ಕೆ ಕುಟುಂಬದಲ್ಲಿ ಸಂತಸ ಮನೆ ಮಾಡಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಾಜ್ ಪಾಲ್ ಯಾದವ್ ಅವರ ಸಹೋದರ ಶ್ರೀಪಾಲ್ ಯಾದವ್, "ಮಾರ್ಚ್ ತಿಂಗಳಿನಲ್ಲಿ ಉತ್ತರ ಪ್ರದೇಶದ ಶಹಜಹಾನ್‌ಪುರ ಬಳಿ ತಮ್ಮ ಕುಟುಂಬದವರ ಮದುವೆ ಇದೆ. ಅದರಲ್ಲಿ ರಾಜ್‌ಪಾಲ್ ಯಾದವ್ ಭಾಗವಹಿಸಲು ಸಾಧ್ಯವಾಗುತ್ತಿರುವುದಕ್ಕೆ ನಮಗೆಲ್ಲಾ ಖುಷಿಯಾಗಿದೆ. ದೇವರು ದೊಡ್ಡವನು. ಇದು ಇಡೀ ಕುಟುಂಬ ಸಂತೋಷಕ್ಕೆ ಕಾರಣವಾಗಿದೆ. ಇದು ನಮಗೆ ದೊಡ್ಡ ನಿರಾಳತೆಯನ್ನು ತಂದಿದೆ. ಒಂದು ವೇಳೆ, ರಾಜ್ ಪಾಲ್ ಮದುವೆಗೆ ಬರಲು ಆಗದೇ ಇದಿದ್ದರೆ, ಮದುವೆಯಲ್ಲಿ ಯಾವುದೇ ಸಂಭ್ರಮ ಖಂಡಿತ ಇರುತ್ತಿರಲಿಲ್ಲ" ಎಂದಿದ್ದಾರೆ.
ಏನಿದು ಚೆಕ್ ಬೌನ್ಸ್ ಕೇಸ್?
2012ರಲ್ಲಿ ರಾಜ್ ಪಾಲ್ ಯಾದವ್ 'ಅತಾ ಪತಾ ಲಾಫತಾ' ಚಿತ್ರವನ್ನು ನಿರ್ದೇಶಿಸಿದ್ದರು. ಅವರ ಪತ್ನಿ ಹಣ ಹಾಕಿದ್ದರು. ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಹೀನಾಯವಾಗಿ ಸೋತಿದ್ದರಿಂದ ಪಡೆದಿದ್ದ 5 ಕೋಟಿ ರೂ. ಸಾಲವನ್ನು ಮರುಪಾವತಿ ಮಾಡಲು ಆಗಲಿಲ್ಲ. ಅದು ಬಡ್ಡಿ ಸೇರಿ 9 ಕೋಟಿ ರೂ. ಆಗಿದೆ. ಈ ಸಂಬಂಧ ಅವರು ನೀಡಿದ್ದ ಚೆಕ್‌ಬೌನ್ಸ್ ಆಗಿದ್ದವು. ಆದ್ದರಿಂದ ಕಾನೂನು ಸಂಕಷ್ಟಕ್ಕೆ ರಾಜ್‌ಪಾಲ್ ಸಿಲುಕಿದರು.
ಸದ್ಯ ಕಷ್ಟದಲ್ಲಿರುವ ರಾಜ್‌ಪಾಲ್‌ಗೆ ಬಾಲಿವುಡ್ ನಟರಾದ ಸಲ್ಮಾನ್ ಖಾನ್, ಅಜಯ್ ದೇವಗನ್, ಸೋನು ಸೂದ್, ವರುಣ್ ಧವನ್ ನಿರ್ದೇಶಕ ಪ್ರಿಯದರ್ಶನ್, ನಿರ್ಮಾಪಕ ಡೇವಿಡ್ ಧವನ್, ಗಾಯಕ ಮಿಕಾ, ಗುರು ರಂಧವಾ ಮತ್ತು ಅನೂಪ್ ಜಲೋಟಾ, ರಾಜಕಾರಣಿ ತೇಜ್ ಪ್ರತಾಪ್ ಯಾದವ್ ಮತ್ತು ಬಾಕ್ಸರ್ ವಿಜೇಂದರ್ ಸಿಂಗ್ ಸೇರಿದಂತೆ ಅನೇಕರು ಸಹಾಯ ಮಾಡಲು ಮುಂದಾಗಿದ್ದಾರೆ ಎನ್ನಲಾಗಿದೆ.