ಮೆಗಾ ಸ್ಟಾರ್ ಚಿರಂಜೀವಿ ಅವರು ಮತ್ತಿಬ್ಬರು ಮೊಮ್ಮಕ್ಕಳಿಗೆ ತಾತ ಆಗಿದ್ದಾರೆ. ಚಿರು ಪುತ್ರ ರಾಮ್ ಚರಣ್ ಮತ್ತು ಉಪಾಸನಾ ದಂಪತಿ ಈಚೆಗಷ್ಟೇ ಅವಳಿ ಮಕ್ಕಳಿಗೆ ಪೋಷಕರಾಗಿದ್ದಾರೆ. ಈ ಮಕ್ಕಳಿಗೆ ಈಗ ಅನ್ವೀರಾ ದೇವಿ ಕೊನಿಡೆಲ ಮತ್ತು ಶಿವ ರಾಮ್ ಕೊನಿಡೆಲ ಎಂದು ಹೆಸರಿಡಲಾಗಿದೆ. ಆ ಹಿನ್ನೆಲೆಯಲ್ಲಿ ಉಪಾಸನಾ ಅವರು ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದು, "ಶಿವ ರಾಮ್, ಅನ್ವೀರಾ ದೇವಿ ಮತ್ತು ಕ್ಲಿನ್ ಕಾರ.. ಈ ಹೆಸರುಗಳು ಶಕ್ತಿ, ಲಾವಣ್ಯ, ಶಿಸ್ತು, ಕರುಣೆ, ಹಾಗೂ ಸ್ತ್ರೀ-ಪುರುಷ ಶಕ್ತಿಗಳ ಸುಮಧುರ ಸಮ್ಮಿಲನವನ್ನು ಪ್ರತಿಬಿಂಬಿಸುತ್ತವೆ" ಎಂದು ಹೇಳಿಕೊಂಡಿದ್ದಾರೆ.
"ವಿನಯ, ಧೈರ್ಯ ಮತ್ತು ಸಾರ್ಥಕ ಬದುಕಿಗೆ ಬುನಾದಿಯಾಗಲಿ ಎಂಬ ಉದ್ದೇಶದಿಂದ, ಆಶೀರ್ವಾದಗಳು, ಪ್ರಾರ್ಥನೆಗಳು ಮತ್ತು ಜೀವನದ ದಾರಿದೀಪವಾಗಬಲ್ಲ ತತ್ವಗಳಾಗಿ ಈ ಹೆಸರುಗಳನ್ನು ಆಯ್ಕೆ ಮಾಡಲಾಗಿದೆ" ಎಂದಿರುವ ಉಪಾಸನಾ, ತಮ್ಮ ಮೂರು ಮಕ್ಕಳ ಹೆಸರಿನ ಅರ್ಥ ಮತ್ತು ಈ ಹೆಸರುಗಳನ್ನೇ ಏಕೆ ನಾಮಕರಣ ಮಾಡಿದೆವು ಎಂಬುದರ ಬಗ್ಗೆ ವಿವರವಾಗಿ ಬರೆದು, ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
ಅನ್ವೀರಾ ದೇವಿ ಕೊನಿಡೆಲ
ಅನ್ವೀರಾ ದೇವಿ ಎಂಬುದು ದೈವಿಕ ಸ್ತ್ರೀಶಕ್ತಿಯ ಒಂದು ಅಪರೂಪದ ಮತ್ತು ಪ್ರಬಲವಾದ ಅಭಿವ್ಯಕ್ತಿಯಾಗಿದೆ. ಅನ್ವೀರಾ ಎಂದರೆ ನಿರ್ಭೀತೆ, ಧೈರ್ಯವಂತೆ ಮತ್ತು ದೈವ ರಕ್ಷಣೆ ಇರುವವಳು ಎಂದು ಅರ್ಥ. ಇದು ಶಕ್ತಿ, ರಕ್ಷಣೆ ಮತ್ತು ಧರ್ಮಬದ್ಧ ಶಕ್ತಿಯ ಸಾಕಾರಮೂರ್ತಿಯಾದ ದುರ್ಗಾ ದೇವಿಗೆ ಸಮಾನವಾದ ಚೈತನ್ಯವನ್ನು ಸೂಚಿಸುತ್ತದೆ. ಈ ಹೆಸರು ದೃಢತೆ, ಲಾವಣ್ಯ ಮತ್ತು ಅಚಲವಾದ ಧೈರ್ಯವನ್ನು ಪ್ರತಿಬಿಂಬಿಸುತ್ತದೆ.
Ram Charan: ಮಗಳೊಂದಿಗೆ ಆಸ್ಪತ್ರೆಗೆ ಹೋಗಲು ಹರಸಾಹಸ ಪಟ್ಟ ರಾಮ್ ಚರಣ್; ವಿಡಿಯೋ ಕಂಡು ನೆಟ್ಟಿಗರು ಛೀಮಾರಿ
ನಮ್ಮ ಅತ್ತೆ ಸುರೇಖಾ (ರಾಮ್ ಚರಣ್ ತಾಯಿ) ಅವರು ಅಪಾರ ಭಕ್ತಿಯಿಂದ ನಂಬಿರುವ ವಿಜಯವಾಡದ ಕನಕ ದುರ್ಗಾ ದೇವಾಲಯದ ಆಶೀರ್ವಾದದಿಂದ ಪ್ರೇರಿತವಾಗಿ ಈ ಹೆಸರನ್ನು ಆಯ್ಕೆ ಮಾಡಲಾಗಿದೆ. ಅಲ್ಲಿ ದೇವಿಯನ್ನು ರಕ್ಷಕಿ ಮತ್ತು ಕರುಣಾಮಯಿ ಮಾರ್ಗದರ್ಶಕಿಯಾಗಿ ಆರಾಧಿಸಲಾಗುತ್ತದೆ.
ʻಮೆಗಾ ಪವರ್ ಸ್ಟಾರ್ʼ ರಾಮ್ ಚರಣ್ ಹುಟ್ಟುಹಬ್ಬದಂದು ಫ್ಯಾನ್ಸ್‌ಗೆ ಸಿಗಲಿದೆ ಡಬಲ್ ಧಮಾಕ; ಏನದು?
ಶಿವ ರಾಮ್ ಕೊನಿಡೆಲ
'ಶಿವ ರಾಮ್' ಎನ್ನುವುದು ಎರಡು ಶಾಶ್ವತ ಆದರ್ಶಗಳ ಒಂದು ಅಪೂರ್ವ ಸಂಗಮವಾಗಿದೆ. ಶಿವ ಎಂಬುದು ನಮ್ಮ ಮಾವ ಚಿರಂಜೀವಿ ಅವರ ಮೂಲ ಹೆಸರಾದ 'ಶಿವ ಶಂಕರ ವರ ಪ್ರಸಾದ್' ನಿಂದ ಬಂದಿದೆ. ಇದು ವೈರಾಗ್ಯ, ಆಂತರಿಕ ಶಕ್ತಿ, ನಿಶ್ಚಲತೆ ಮತ್ತು ಆಧ್ಯಾತ್ಮಿಕ ಶಿಸ್ತಿನ ಸಂಕೇತವಾಗಿದೆ. ರಾಮ್ ಎಂಬುದು ನನ್ನ ಪತಿ ರಾಮ್ ಚರಣ್ ಅವರ ಹೆಸರಿನಿಂದ ಬಂದಿದ್ದು, ಧರ್ಮ, ಕರುಣೆ ಮತ್ತು ನೈತಿಕ ನಾಯಕತ್ವವನ್ನು ಪ್ರತಿನಿಧಿಸುತ್ತದೆ. ಒಟ್ಟಾಗಿ, ಈ ಹೆಸರು ನಿರ್ಲಿಪ್ತತೆ ಮತ್ತು ಜವಾಬ್ದಾರಿಗಳ ನಡುವಿನ ಸಮತೋಲನವನ್ನು, ಅಂದರೆ ಆಂತರಿಕ ಶಕ್ತಿ ಮತ್ತು ಬಾಹ್ಯ ಕ್ರಿಯೆಗಳೆರಡನ್ನೂ ಸೂಚಿಸುತ್ತದೆ.
ತೆಲಂಗಾಣದ ದೋಮಕೊಂಡ ಸಂಸ್ಥಾನದ ರಾಜವಂಶಸ್ಥರಾದ ನಮ್ಮ ತಂದೆ ಅನಿಲ್ ಕಾಮಿನೇನಿ ಅವರ ಪೂರ್ವಜರು ನಿರ್ಮಿಸಿದ, ಶಿವ ಮತ್ತು ರಾಮ ಇಬ್ಬರಿಗೂ ಸಂಬಂಧಿಸಿದ ಪುರಾತನ 'ಶಿವ ರಾಮ್ ದೇವಾಲಯ'ದ ಆಶೀರ್ವಾದವನ್ನೂ ಈ ಹೆಸರು ಒಳಗೊಂಡಿದೆ.
ಕ್ಲಿನ್ ಕಾರ ಕೊನಿಡೆಲ
ಇದೇ ವೇಳೆ ತಮ್ಮ ಮೊದಲ ಮಗಳು ಕ್ಲಿನ್ ಕಾರ ಕೊನಿಡೆಲ ಹೆಸರಿನ ಕುರಿತಾಗಿಯೂ ಉಪಾಸನಾ ಅವರು ಬರೆದುಕೊಂಡಿದ್ದಾರೆ. "ಕ್ಲಿನ್ ಕಾರ ಎಂಬುದು ಲಲಿತಾ ತ್ರಿಪುರ ಸುಂದರಿ ದೇವಿಯಿಂದ ಪ್ರೇರಿತವಾದ ಹೆಸರಾಗಿದೆ. ದೇವಿ ಲಲಿತೆಯು ಸೌಂದರ್ಯ, ಜ್ಞಾನ ಮತ್ತು ವಿಶ್ವ ಚೈತನ್ಯದ ಪರಮೋಚ್ಚ ರೂಪವಾಗಿದ್ದಾಳೆ. ಕ್ಲಿನ್ ಎಂಬುದು ದೈವಿಕ ಆಕರ್ಷಣೆ ಮತ್ತು ಸಾಮರಸ್ಯವನ್ನು ಸಂಕೇತಿಸುವ ಪವಿತ್ರವಾದ ಬೀಜ ಮಂತ್ರವಾಗಿದೆ. ಕಾರ ಎಂಬುದು ಸೃಷ್ಟಿ ಮತ್ತು ಅಭಿವ್ಯಕ್ತಿಯನ್ನು ಸೂಚಿಸುತ್ತದೆ.
ಚಿರಂಜೀವಿ ಬರೆದುಕೊಂಡಿರುವ ಪೋಸ್ಟ್
ಈ ಹೆಸರು ನಮ್ಮ ತಾಯಿ ಶೋಭನಾ ಕಾಮಿನೇನಿ ಅವರಿಗೆ ಅತ್ಯಂತ ಹತ್ತಿರವಾಗಿದೆ. ಅವರು 'ಲಲಿತಾ ಸಹಸ್ರನಾಮ'ದ ಪರಮ ಭಕ್ತರಾಗಿದ್ದಾರೆ. ಈ ಹೆಸರು ಶ್ರೀಶೈಲಂ ಸಮೀಪದ ನಲ್ಲಮಲ ಅರಣ್ಯದಲ್ಲಿರುವ 'ಚೆಂಚು ಲಕ್ಷ್ಮಿ ದೇವಿ' ದೇವಸ್ಥಾನದ ಆಶೀರ್ವಾದವನ್ನು ಹೊಂದಿದೆ. ಇಲ್ಲಿ ಚೆಂಚು ದೇವಿಯು ಪ್ರಕೃತಿ ಮತ್ತು ಮಲ್ಲಿಕಾರ್ಜುನ ಸ್ವಾಮಿಯೊಂದಿಗೆ ಆಳವಾಗಿ ಬೆಸೆದುಕೊಂಡಿರುವ, ಶಕ್ತಿಯ ಕರುಣಾಮಯಿ ಸ್ವರೂಪವನ್ನು ಪ್ರತಿನಿಧಿಸುತ್ತಾಳೆ.