ರಣವೀರ್ ಸಿಂಗ್ ನಟನೆಯ ʻಧುರಂಧರ್ʼ ಸಿನಿಮಾವು ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸುತ್ತಿದೆ, ಈ ಚಿತ್ರಕ್ಕೆ ಹಲವರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ನಡುವೆ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ಕೂಡ ಸಿನಿಮಾ ನೋಡಿದ್ದು, ಮನಸಾರೆ ಮೆಚ್ಚುಗೆ ತಿಳಿಸಿದ್ದಾರೆ. "ನಿರ್ದೇಶಕ ಆದಿತ್ಯ ಧರ್ (Aditya Dhar) ಅವರು ಭಾರತೀಯ ಚಿತ್ರರಂಗದ ಭವಿಷ್ಯವನ್ನೇ ಏಕಾಂಗಿಯಾಗಿ ಬದಲಿಸಿದ್ದಾರೆ ಅಂತ ನಾನು ನಂಬುತ್ತೇನೆ. ಏಕೆಂದರೆ 'ಧುರಂಧರ್' ಕೇವಲ ಸಿನಿಮಾ ಅಲ್ಲ, ಅದೊಂದು ಕ್ರಾಂತಿಕಾರಿ ಬದಲಾವಣೆ. 'ಧುರಂಧರ್' ಒಂದು ಕ್ವಾಂಟಮ್ ಲೀಪ್ (ದೈತ್ಯ ಜಿಗಿತ)" ಎಂದು ಆರ್‌ಜಿವಿ ಹೇಳಿದ್ದಾರೆ.
"ಧುರಂಧರ್ ಸಿನಿಮಾ ಹಿಂದೆಂದೂ ಅನುಭವಿಸದ ದೃಷ್ಟಿಕೋನವನ್ನು ನಮ್ಮ ಕಣ್ಣು ಮತ್ತು ಮನಸ್ಸು ಎರಡಕ್ಕೂ ನೀಡಿದೆ. ಆದಿತ್ಯ ಧರ್ ಇಲ್ಲಿ ದೃಶ್ಯಗಳನ್ನು ಕೇವಲ ನಿರ್ದೇಶಿಸಿಲ್ಲ... ಬದಲಿಗೆ ಪಾತ್ರಗಳ ಮತ್ತು ಪ್ರೇಕ್ಷಕರ ಮನಸ್ಥಿತಿಯನ್ನೇ ಅವರು ಎಂಜಿನಿಯರಿಂಗ್ ಮಾಡಿದ್ದಾರೆ. ಈ ಸಿನಿಮಾ ನಿಮ್ಮ ಗಮನವನ್ನು ಬೇಡುವುದಿಲ್ಲ; ಬದಲಿಗೆ ಅದನ್ನು ಆಜ್ಞಾಪಿಸಿ ಕಿತ್ತುಕೊಳ್ಳುತ್ತದೆ. ಮೊದಲ ದೃಶ್ಯದಿಂದಲೇ ಇಲ್ಲಿ ಯಾವುದೋ ಹಿಂತಿರುಗಿಸಲಾಗದ ಪ್ರಕ್ರಿಯೆ ಆರಂಭವಾಗಿದೆ ಎಂಬ ಭಾವನೆ ಮೂಡುತ್ತದೆ. ನೋಡುಗ ಇಲ್ಲಿ ಕೇವಲ ಪ್ರೇಕ್ಷಕನಾಗಿ ಉಳಿಯುವುದಿಲ್ಲ, ಬದಲಿಗೆ ಪರದೆಯ ಮೇಲೆ ನಡೆಯುವ ಘಟನೆಗಳಿಗೆ ತಾನೂ ಒಬ್ಬ ಪಾಲುದಾರನಾಗುತ್ತಾನೆ" ಎಂದು ರಾಮ್ ಗೋಪಾಲ್ ವರ್ಮಾ ಹೇಳಿದ್ದಾರೆ.
ಪ್ರತಿ ದೃಶ್ಯವು ಬಿಗಿದಿಟ್ಟ ಸ್ಪ್ರಿಂಗ್‌ನಂತೆ ಭಾಸವಾಗುತ್ತದೆ
"ಇದೊಂದು ಸಭ್ಯವಾಗಿರಲು ನಿರಾಕರಿಸುವ ಸಿನಿಮಾ. ಇಲ್ಲಿನ ಬರಹವು ಅತೀ ತೀಕ್ಷ್ಣವಾಗಿದೆ, ದೃಶ್ಯ ಸಂಯೋಜನೆಯಲ್ಲಿ ಒಂದು ಬಗೆಯ ಅಪಾಯದ ಎಚ್ಚರಿಕೆಯಿದೆ ಮತ್ತು ಇಲ್ಲಿನ ಮೌನವು ಅಬ್ಬರದ ಶಬ್ದದಷ್ಟೇ ಮಾರಕವಾದ ಅಸ್ತ್ರದಂತೆ ಕೆಲಸ ಮಾಡುತ್ತದೆ. ಕಥೆ ಹೇಳುವಿಕೆಯಲ್ಲಿ ಶಕ್ತಿ ಎಂದರೆ ಕೇವಲ ಶಬ್ದ ಮಾಡುವುದಲ್ಲ, ಅದು ಒತ್ತಡವನ್ನು ನಿರ್ಮಿಸುವುದು ಎಂಬುದು ಆದಿತ್ಯ ಧರ್ ಅವರಿಗೆ ಚೆನ್ನಾಗಿ ತಿಳಿದಿದೆ. ಪ್ರತಿ ದೃಶ್ಯವು ಬಿಗಿದಿಟ್ಟ ಸ್ಪ್ರಿಂಗ್‌ನಂತೆ ಭಾಸವಾಗುತ್ತದೆ, ಅದು ಯಾವಾಗ ಸಿಡಿಯುತ್ತದೆ ಎಂಬುದು ನಮಗೆ ತಿಳಿಯುವುದೇ ಇಲ್ಲ. ಅದು ಸಿಡಿದಾಗ ಉಂಟಾಗುವ ಪರಿಣಾಮ ಕೇವಲ ಭೀಕರವಾಗಿರುವುದಿಲ್ಲ, ಬದಲಿಗೆ ಅದೊಂದು ಸುಂದರವಾದ ಸಂಗೀತದ ಲಯದಂತೆ ಆವರಿಸಿಕೊಳ್ಳುತ್ತದೆ" ಎಂದು ರಾಮ್ ಗೋಪಾಲ್ ವರ್ಮಾ ಹೇಳಿದ್ದಾರೆ.
Dhurandhar Box Office Collection: ಭಾನುವಾರ ‘ಧುರಂಧರ್’ ಭರ್ಜರಿ ಕಲೆಕ್ಷನ್! 350 ಕೋಟಿಗೂ ಹೆಚ್ಚು ಬಾಚಿದ ಮೂವಿ
ಪ್ರೇಕ್ಷಕರು ಬುದ್ಧಿವಂತರು ಎಂದು ನಂಬಿದ್ದಾರೆ
"ಚಿತ್ರದಲ್ಲಿನ ನಟನೆಗಳು ನಾವು ಇಷ್ಟಪಡಲಿ ಎಂದು ವಿನ್ಯಾಸಗೊಳಿಸಿದವುಗಳಲ್ಲ, ಬದಲಿಗೆ ನಾವು ಚಿತ್ರಮಂದಿರದಿಂದ ಹೊರಬಂದ ಮೇಲೂ ನಮ್ಮ ಮನಸ್ಸಿನಲ್ಲಿ ಉಳಿಯಲಿ ಎಂದು ರೂಪಿಸಿದವುಗಳು. ಪಾತ್ರಗಳು ತಮ್ಮ ಹೆಗಲ ಮೇಲೆ ದೊಡ್ಡ ಇತಿಹಾಸವನ್ನೇ ಹೊತ್ತು ಬರುತ್ತವೆ. ಪ್ರೇಕ್ಷಕರಿಗೆ ಪ್ರತಿಯೊಂದು ಹಿನ್ನೆಲೆಯನ್ನೂ ವಿವರವಾಗಿ ಹೇಳುವ ಬದಲು, ಪಾತ್ರಗಳ ಮೇಲಿರುವ ಗಾಯದ ಗುರುತುಗಳನ್ನು ನೋಡಿ ಅರ್ಥಮಾಡಿಕೊಳ್ಳುವಷ್ಟು ಬುದ್ಧಿವಂತಿಕೆ ಪ್ರೇಕ್ಷಕರಿಗಿದೆ ಎಂದು ಸಿನಿಮಾ ನಂಬುತ್ತದೆ. ಈ ಅತಿಯಾದ ಆತ್ಮವಿಶ್ವಾಸವನ್ನೇ ಕೆಲವರು ಅಹಂಕಾರ ಎಂದು ತಪ್ಪಾಗಿ ಭಾವಿಸಬಹುದು, ಆದರೆ ಇದೇ ಅಂಶ 'ಧುರಂಧರ್' ಚಿತ್ರವನ್ನು ಭಾರತೀಯ ಚಿತ್ರರಂಗದ ತಿರುವು ಎಂದು ಗುರುತಿಸುವಂತೆ ಮಾಡುತ್ತದೆ. ಪ್ರೇಕ್ಷಕರನ್ನು ದಡ್ಡರೆಂದು ಭಾವಿಸಿ ಸಿನಿಮಾ ಮಾಡುವವರ ನಡುವೆ, ಪ್ರೇಕ್ಷಕರು ಬುದ್ಧಿವಂತರು ಎಂದು ನಂಬಿ ಗೌರವ ಕೊಡುವ ನಿರ್ದೇಶಕ ಆದಿತ್ಯ ಧರ್" ಎಂದು ರಾಮ್ ಗೋಪಾಲ್ ವರ್ಮಾ ಹೇಳಿದ್ದಾರೆ.
"ತಾಂತ್ರಿಕವಾಗಿ, ಈ ಸಿನಿಮಾ ಮುಖ್ಯವಾಹಿನಿ ಭಾರತೀಯ ಚಿತ್ರರಂಗದ ವ್ಯಾಕರಣವನ್ನೇ ಬದಲಿಸಿದೆ. ಇಲ್ಲಿನ ಸೌಂಡ್ ಡಿಸೈನ್ ದೃಶ್ಯಗಳನ್ನು ಅಲಂಕರಿಸುವುದಿಲ್ಲ, ಬದಲಿಗೆ ಅವುಗಳನ್ನು ಬೇಟೆಯಾಡುತ್ತದೆ. ಕ್ಯಾಮೆರಾ ಇಲ್ಲಿ ಕೇವಲ ವೀಕ್ಷಕನಲ್ಲ, ಅದು ಹಸಿದ ಪ್ರಾಣಿಯಂತೆ ಸುತ್ತುವರಿಯುತ್ತದೆ. ಇಲ್ಲಿನ ಸಾಹಸ ದೃಶ್ಯಗಳು ಕೇವಲ ಚಪ್ಪಾಳೆ ಗಿಟ್ಟಿಸುವ ನೃತ್ಯಗಳಲ್ಲ; ಅವು ನೈಜ ಹಿಂಸಾಚಾರ ಎಷ್ಟು ವಿಕಾರವಾಗಿರುತ್ತದೆಯೋ ಹಾಗೆಯೇ ಇವೆ" ಎಂದು ರಾಮ್ ಗೋಪಾಲ್ ವರ್ಮಾ ಹೇಳಿದ್ದಾರೆ.
ಆರ್‌ಜಿವಿ ಟ್ವೀಟ್
"ಈ ಕಲೆಗಿಂತಲೂ ಮೀರಿ 'ಧುರಂಧರ್' ಅನ್ನು ಎತ್ತರಕ್ಕೆ ಕೊಂಡೊಯ್ಯುವುದು ಅದರ ಉದ್ದೇಶ. ಈ ಸಿನಿಮಾ ಯಾವುದೇ ಟ್ರೆಂಡ್ ಅಥವಾ ಮೆಚ್ಚುಗೆಯ ಬೆನ್ನತ್ತಿ ಹೋಗಿಲ್ಲ. ಭಾರತೀಯ ಸಿನಿಮಾ ಯಶಸ್ವಿಯಾಗಲು ತನ್ನತನವನ್ನು ಬಿಟ್ಟುಕೊಡಬೇಕಿಲ್ಲ ಮತ್ತು ಹಾಲಿವುಡ್ ಅನ್ನು ಕುರುಡಾಗಿ ಅನುಕರಿಸುವ ಅಗತ್ಯವಿಲ್ಲ ಎಂಬ ಘನವಾದ ಘೋಷಣೆ ಇದು. ಸಿನಿಮಾ ಸ್ಥಳೀಯವಾಗಿದ್ದರೂ ಅಂತರಾಷ್ಟ್ರೀಯ ಮಟ್ಟದ ಸಿನಿಮಾ ಗುಣಮಟ್ಟವನ್ನು ಹೊಂದಿರಬಹುದು ಎಂಬುದನ್ನು ಆದಿತ್ಯ ಧರ್ ಸಾಬೀತುಪಡಿಸಿದ್ದಾರೆ. ಸಿನಿಮಾ ಮುಗಿದು ಎಂಡ್ ಕ್ರೆಡಿಟ್ಸ್ ಬರುವಾಗ, ನೀವು ಕೇವಲ ಮನರಂಜನೆ ಪಡೆದಿರುವುದಿಲ್ಲ, ನಿಮ್ಮೊಳಗಿನ ದೃಷ್ಟಿಕೋನವೇ ಬದಲಾದಂತೆ ಭಾಸವಾಗುತ್ತದೆ. ಒಬ್ಬ ಸಿನಿಮಾ ನಿರ್ಮಾಪಕ ಕೇವಲ ಸಿನಿಮಾ ಮಾಡುವುದಲ್ಲದೆ, ನಮ್ಮೆಲ್ಲಾ ಚಿತ್ರಕರ್ಮಿಗಳು ನಿಂತಿರುವ ನೆಲೆಯನ್ನೇ ಮರುರೂಪಿಸಿದಾಗ ಮಾತ್ರ ಇಂತಹ ಅನುಭವ ಸಾಧ್ಯ" ಎಂದು ಆರ್‌ಜಿವಿ ಹೇಳಿದ್ದಾರೆ.
ನನ್ನ ನೆಚ್ಚಿನ ನಿರ್ದೇಶಕರಲ್ಲಿ ನೀವೂ ಒಬ್ಬರು
ರಾಮ್ ಗೋಪಾಲ್ ವರ್ಮಾ ಮಾಡಿದ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿರುವ ಆದಿತ್ಯ ಧರ್, "ಭಾರತೀಯ ಚಿತ್ರರಂಗಕ್ಕೆ ಭಯವಿಲ್ಲದ, ಸಭ್ಯತೆಯ ಹಂಗಿಲ್ಲದ ಮತ್ತು ಜೀವಂತಿಕೆಯ ಕಳೆಯನ್ನು ನೀಡಿದ ನನ್ನ ನೆಚ್ಚಿನ ನಿರ್ದೇಶಕರಲ್ಲಿ ನೀವೂ ಒಬ್ಬರು. ಒಂದು ವೇಳೆ 'ಧುರಂಧರ್' ಸಿನಿಮಾದಲ್ಲಿ ಅಂತಹ ಗುಣದ ಒಂದು ಸಣ್ಣ ಅಂಶವಿದ್ದರೂ, ಅದಕ್ಕೆ ಕಾರಣ ನಾನು ಸ್ಕ್ರಿಪ್ಟ್ ಬರೆಯುವಾಗ ಮತ್ತು ನಿರ್ದೇಶಿಸುವಾಗ ನಿಮ್ಮ ಸಿನಿಮಾಗಳು ನನ್ನ ತಲೆಯಲ್ಲಿ ಇದ್ದಿದ್ದು. 'ಧುರಂಧರ್' ಒಂದು ಕ್ವಾಂಟಮ್ ಲೀಪ್ (ದೈತ್ಯ ಜಿಗಿತ) ಎಂದು ನೀವು ಹೇಳಿರುವುದಕ್ಕೆ ನಾನು ಭಾವುಕನಾಗಿದ್ದೇನೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ ಇದು ಸ್ವಲ್ಪ ಅನ್ಯಾಯವೆನಿಸುತ್ತಿದೆ. ಏಕೆಂದರೆ, ಇನ್ನು ಮುಂದೆ ನಾನು ಏನೇ ಮಾಡಿದರೂ ಅದು ನಿಮ್ಮ ಈ ಟ್ವೀಟ್‌ಗೆ ನೀಡುವ ಗೌರವಕ್ಕೆ ತಕ್ಕಂತಿರಬೇಕು" ಎಂದು ಹೇಳಿದ್ದಾರೆ.
ಧನ್ಯವಾದ ಹೇಳಿದ ಆದಿತ್ಯ ಧರ್
"ನಾನು ಪ್ರೇಕ್ಷಕರನ್ನು ಬುದ್ಧಿವಂತರು ಎಂದು ಪರಿಗಣಿಸಿದ್ದರೆ, ಅದಕ್ಕೆ ಕಾರಣ ಸಿನಿಮಾವು ತನ್ನ ಮಹತ್ವಾಕಾಂಕ್ಷೆಯ ಬಗ್ಗೆ ಎಂದಿಗೂ ಕ್ಷಮೆ ಕೇಳಬಾರದು ಎಂದು ನೀವು ಇಡೀ ತಲೆಮಾರಿಗೆ ಕಲಿಸಿಕೊಟ್ಟ ಪಾಠ. ನಿಮ್ಮ ಈ ಔದಾರ್ಯಕ್ಕೆ, ಈ ಹುಚ್ಚುತನಕ್ಕೆ ಮತ್ತು ಈ ಮೆಚ್ಚುಗೆಗೆ ಧನ್ಯವಾದಗಳು. ನನ್ನೊಳಗಿನ ಅಭಿಮಾನಿ ಈಗ ಮೈಮರೆತಿದ್ದಾನೆ. ನನ್ನೊಳಗಿನ ಚಿತ್ರಕರ್ಮಿ ಈಗ ಸವಾಲನ್ನು ಎದುರಿಸಲು ಸಜ್ಜಾಗಿದ್ದಾನೆ. ರಾಮ್ ಗೋಪಾಲ್ ವರ್ಮಾ ಅವರ ಬಳಿ ಕೆಲಸ ಮಾಡಬೇಕೆಂದು ಮುಂಬೈಗೆ ಬಂದ ಆ ಹುಡುಗನಿಗೆ ಇಂದು ಕೊನೆಗೂ ತನ್ನ ಅಸ್ತಿತ್ವಕ್ಕೆ ಬೆಲೆ ಸಿಕ್ಕಂತಾಗಿದೆ" ಎಂದು ಆದಿತ್ಯ ಧರ್ ಹೇಳಿದ್ದಾರೆ.