ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ʻಧುರಂಧರ್‌ 2 ಚಿತ್ರವನ್ನ ಗಂಭೀರವಾಗಿ ಪರಿಗಣಿಸಿ, ಇಲ್ಲವಾದರೆ...ʼ; ಚಿತ್ರರಂಗಕ್ಕೆ ಎಚ್ಚರಿಕೆ ನೀಡಿದ ರಾಮ್‌ ಗೋಪಾಲ್‌ ವರ್ಮಾ!

Ranveer Singh: ಧುರಂಧರ್‌ 2 ಚಿತ್ರವು 10 ದಿನಗಳಲ್ಲಿ 1200 ಕೋಟಿ ರೂ. ಗಳಿಕೆಯತ್ತ ಸಾಗುತ್ತಿದ್ದು, ಚಿತ್ರರಂಗದಲ್ಲಿ ಸಂಚಲನ ಮೂಡಿಸಿದೆ. ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಈ ಚಿತ್ರವನ್ನು 'ಪರಮಾಣು ಬಾಂಬ್'ಗೆ ಹೋಲಿಸಿದ್ದು, ಚಿತ್ರರಂಗದ ಮೌನವನ್ನು ಪ್ರಶ್ನಿಸಿದ್ದಾರೆ.

ರಣವೀರ್‌ ಸಿಂಗ್‌ ನಟನೆಯ ʻಧುರಂಧರ್‌ 2ʼ ಸಿನಿಮಾವು ಬಾಕ್ಸ್‌ ಆಫೀಸ್‌ನಲ್ಲಿ ಅಬ್ಬರಿಸಿ ಬೊಬ್ಬಿರಿಯುತ್ತಿದೆ. ತೆರೆಕಂಡು 10 ದಿನ ಕಳೆಯುವುದರೊಳಗೆ ಈ ಚಿತ್ರದ ಗಳಿಕೆಯು 1200 ಕೋಟಿ ರೂ. ದಾಟುವತ್ತ ದಾಪುಗಾಲಿಟ್ಟಿದೆ. ಈ ನಡುವೆ ಈ ಚಿತ್ರದ ಕಥಾವಸ್ತುವಿನ ಬಗ್ಗೆ ಪರ-ವಿರೋಧ ಚರ್ಚೆಗಳು ಆರಂಭವಾಗಿವೆ. "ಇದೊಂದು ಪ್ರೊಪಗಂಡ ಸಿನಿಮಾ" ಎಂದೆಲ್ಲಾ ಕೆಲವರು ಕರೆಯುತ್ತಿದ್ದಾರೆ. ಈ ಮಧ್ಯೆ ನಿರ್ದೇಶಕ ರಾಮ್‌ ಗೋಪಾಲ್‌ ವರ್ಮಾ ಅವರು ಚಿತ್ರರಂಗಕ್ಕೆ ಒಂದು ಎಚ್ಚರಿಕೆಯನ್ನು ನೀಡಿದ್ದಾರೆ.

'ಪರಮಾಣು ಬಾಂಬ್ ಸ್ಫೋಟಿಸಿದ ಆದಿತ್ಯ ಧರ್‌

ʻಧುರಂಧರ್‌ 2ʼ ಸಿನಿಮಾದ ನಿರ್ದೇಶಕ ಆದಿತ್ಯ ಧರ್‌ ಅವರನ್ನು ಹೊಗಳುತ್ತಾ ಒಂದು ಟ್ವೀಟ್‌ ಮಾಡಿರುವ ನಿರ್ದೇಶಕ ರಾಮ್‌ ಗೋಪಾಲ್‌ ವರ್ಮಾ, "ಆದಿತ್ಯ ಧರ್ ಅವರು ಇಡೀ ಚಿತ್ರರಂಗದ ಅಡಿಯಲ್ಲಿ ಒಂದು 'ಪರಮಾಣು ಬಾಂಬ್' ಅನ್ನೇ ಸ್ಫೋಟಿಸಿದ್ದಾರೆ. ಆದರೆ, ಅಚ್ಚರಿಯ ವಿಷಯವೆಂದರೆ ಇಡೀ ಚಿತ್ರರಂಗ ಈ ಬಗ್ಗೆ ವಹಿಸಿರುವ ನಿಗೂಢ ಮೌನ. ಈ ಮೌನಕ್ಕೆ ಕಾರಣವೇನಿರಬಹುದು" ಎಂದು ಪ್ರಶ್ನೆ ಮಾಡಿದ್ದಾರೆ.

ʻಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಗ್ಯಾರಂಟಿʼ; ʻಧುರಂಧರ್‌ 2ʼ ಡೈರೆಕ್ಟರ್‌ ಆದಿತ್ಯ ಧರ್‌ ಇದ್ದಕ್ಕಿದ್ದಂತೆಯೇ ಗರಂ ಆಗಿದ್ದೇಕೆ?

ಬಿಲದೊಳಗೆ ಅವಿತು ಕುಳಿತಿದ್ದಾರೆಯೇ?

"ಬಹುಶಃ ಧುರಂಧರ್‌ 2 ಚಿತ್ರ ಉಂಟು ಮಾಡಿರುವ ಆ ಭೀಕರ ಸ್ಫೋಟವು ಚಿತ್ರರಂಗದಲ್ಲಿ ಉಳಿದವರನ್ನು ಬಾಹ್ಯಾಕಾಶದ ಅಂಚಿಗೆ ತಳ್ಳಿರಬಹುದು, ಹಾಗಾಗಿ ಅಲ್ಲಿಂದ ಅವರು ಹಾಕುವ ಚಪ್ಪಾಳೆ ನಮಗೆ ಕೇಳಿಸುತ್ತಿಲ್ಲವೇ? ಅಥವಾ 'ಇದು ಬರೀ ಪ್ರೊಪಗಾಂಡಾ... ಅತಿ ಶೀಘ್ರದಲ್ಲೇ ಇದು ಮರೆಯಾಗುತ್ತದೆ' ಎಂದು ಒಬ್ಬರಿಗೊಬ್ಬರು ಪಿಸುಗುಟ್ಟುತ್ತಾ, ಮತ್ತೆ ಅದೇ ಹಳೆಯ ಸವಕಲು ಮಾದರಿಯ ಸಿನಿಮಾಗಳನ್ನು ಮಾಡಲು ತಮ್ಮ ಬಿಲದೊಳಗೆ ಅವಿತು ಕುಳಿತಿದ್ದಾರೆಯೇ" ಎಂದು ಚಿತ್ರರಂಗದವರನ್ನು ಪ್ರಶ್ನೆ ಮಾಡಿದ್ದಾರೆ ಆರ್‌ಜಿವಿ.

ನಿರ್ದೇಶಕರಿಗೆ ಆ ಸತ್ಯ ಅರಿವಾಗಿದೆಯಾ?

"ಈ ಚಿತ್ರದ ಅದ್ಭುತ ಮೇಕಿಂಗ್ ಕಂಡು ಆ ಚಿತ್ರಕರ್ಮಿಗಳು ಪಾರ್ಶ್ವವಾಯು ಪೀಡಿತರಂತೆ ಸ್ತಬ್ಧವಾಗಿದ್ದಾರೆಯೇ? ತಾವು ಮಾಡುತ್ತಿರುವ ಅಥವಾ ಮಾಡಲು ಯೋಜಿಸಿರುವ ಸಿನಿಮಾಗಳು ಧುರಂಧರ್‌ 2 ಚಿತ್ರಕ್ಕೆ ಸರಿಸಾಟಿಯಾಗಲು ಸಾಧ್ಯವೇ ಇಲ್ಲ ಎಂಬ ಸತ್ಯ ಅವರಿಗೆ ಈಗ ಮನವರಿಕೆಯಾಗಿದೆಯೇ? ಧುರಂಧರ್‌ 2 ಎಂಬ ಬೆಂಕಿ ಉಗುಳುವ ಡೈನೋಸಾರ್ ನಿಮ್ಮ ಕಣ್ಣೆದುರೇ ನಿಂತು, ಬಾಕ್ಸ್ ಆಫೀಸ್ ಘರ್ಜನೆಯ ಮೂಲಕ ನಿಮ್ಮ ಪಾದದ ಅಡಿಯಲ್ಲಿರುವ ನೆಲವನ್ನೇ ನಡುಗಿಸುತ್ತಿರುವಾಗ, ಅದನ್ನು ನಿರ್ಲಕ್ಷಿಸುವಷ್ಟು ಮೂರ್ಖರಾಗಲು ಹೇಗೆ ಸಾಧ್ಯ" ಎಂದು ರಾಮ್‌ ಗೋಪಾಲ್‌ ವರ್ಮಾ ಕೇಳಿದ್ದಾರೆ.

ಆರ್‌ಜಿವಿ ಮಾಡಿದ ಟ್ವೀಟ್‌ ಇಲ್ಲಿದೆ



ಸ್ಮಶಾನದಲ್ಲಿ ಹೂತುಹೋಗುವ ಅಪಾಯವಿದೆ

"ಚಿತ್ರರಂಗದ ನನ್ನೆಲ್ಲಾ ಸಹೋದ್ಯೋಗಿಗಳಿಗೆ ನನ್ನ ಪ್ರಾಮಾಣಿಕ ಸಲಹೆಯೆಂದರೆ, ದಯವಿಟ್ಟು ಧುರಂಧರ್‌ 2 ಚಿತ್ರವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ. ಸಿನಿಮಾ ಮೇಕಿಂಗ್‌ನ ಒಂದು ಹೊಸ ಪಾಠವೆಂದು ಭಾವಿಸಿ ಅದನ್ನು ಅಭ್ಯಾಸ ಮಾಡಿ. ನಿಮ್ಮನ್ನು ನೀವು ಎಚ್ಚೆತ್ತುಕೊಳ್ಳಿ. ಇಲ್ಲವಾದರೆ, 2026ರ ಮಾರ್ಚ್ 19 ಮುಂಚಿನ ಸಿನಿಮಾಗಳ ಸ್ಮಶಾನದಲ್ಲಿ ನೀವು ಶಾಶ್ವತವಾಗಿ ಹೂತುಹೋಗುವ ಅಪಾಯವಿದೆ" ಎಂದು ಎಚ್ಚರಿಕೆ ನೀಡಿದ್ದಾರೆ.