ʻಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಗ್ಯಾರಂಟಿʼ; ʻಧುರಂಧರ್ 2ʼ ಡೈರೆಕ್ಟರ್ ಆದಿತ್ಯ ಧರ್ ಇದ್ದಕ್ಕಿದ್ದಂತೆಯೇ ಗರಂ ಆಗಿದ್ದೇಕೆ?
Dhurandhar 2 AI Controversy: ರಣವೀರ್ ಸಿಂಗ್ ನಟನೆಯ 'ಧುರಂಧರ್ 2' ಚಿತ್ರದ ಅಧಿಕೃತ ದೃಶ್ಯಗಳನ್ನು ಎಐ ಬಳಸಿ ತಿರುಚಲಾಗುತ್ತಿದೆ ಎಂದು ನಿರ್ದೇಶಕ ಆದಿತ್ಯ ಧರ್ ಕಿಡಿಕಾರಿದ್ದಾರೆ. ವಿಶೇಷವಾಗಿ ರಣವೀರ್ ಸಿಂಗ್ ಪೇಟ ಧರಿಸಿ ಧೂಮಪಾನ ಮಾಡುತ್ತಿರುವಂತೆ ಸೃಷ್ಟಿಸಲಾದ ನಕಲಿ ಚಿತ್ರದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
-
ಇದು ಎಐ ಕಾಲ. ಯಾವುದು ನಿಜ? ಯಾವುದು ಸುಳ್ಳು? ತಕ್ಷಣಕ್ಕೆ ಹೇಳುವುದು ಕಷ್ಟ. ಸದ್ಯ ʻಧುರಂಧರ್ 2ʼ ಸಿನಿಮಾಗೂ ಈಗ ಎಐ ಕಾಟ ಶುರುವಾಗಿದೆ. ಅದು ನಿರ್ದೇಶಕ ಆದಿತ್ಯ ಧರ್ ಗಮನಕ್ಕೂ ಬಂದಿದೆ. ಹಾಗಾಗಿ, ಅವರು ತಕ್ಷಣವೇ ಒಂದು ಅಧಿಕೃತ ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ ಮತ್ತು "ಇಂತಹ ಕಿಡಿಗೇಡಿ ಕೃತ್ಯಗಳನ್ನು ಎಸಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು" ಎಂದು ಎಚ್ಚರಿಸಿದ್ದಾರೆ. ಅಷ್ಟಕ್ಕೂ ಆಗಿರುವ ಕಿಡಿಗೇಡಿ ಕೃತ್ಯವೇನು? ಮುಂದೆ ಓದಿ.
ಆದಿತ್ಯ ಧರ್ ಹಂಚಿಕೊಂಡ ಪೋಸ್ಟ್‌ನಲ್ಲಿ ಏನಿದೆ?
"ನನ್ನ 'ಧುರಂಧರ್: ದಿ ರಿವೆಂಜ್' ಚಿತ್ರಕ್ಕೆ ದೇಶಾದ್ಯಂತ ಮತ್ತು ವಿಶ್ವದಾದ್ಯಂತ ಪ್ರೇಕ್ಷಕರಿಂದ ಸಿಗುತ್ತಿರುವ ಅಪಾರ ಪ್ರೀತಿ ಹಾಗೂ ಬೆಂಬಲಕ್ಕೆ ನಾನು ಆಭಾರಿಯಾಗಿದ್ದೇನೆ. ಆದರೆ, ಕೆಲವು ವ್ಯಕ್ತಿಗಳು ಕೃತಕ ಬುದ್ಧಿಮತ್ತೆ (AI) ಬಳಸಿ ಚಿತ್ರದ ಅಧಿಕೃತ ಪ್ರಚಾರದ ದೃಶ್ಯಗಳನ್ನು ತಿರುಚುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಈ ರೀತಿ ಮಾರ್ಫಿಂಗ್ ಮಾಡಿದ ದೃಶ್ಯಗಳ ಮೂಲಕ ಸಮಾಜದಲ್ಲಿ ತಪ್ಪು ಕಲ್ಪನೆಗಳನ್ನು ಹರಡಲಾಗುತ್ತಿದೆ" ಎಂದು ಆದಿತ್ಯ ಧರ್ ಹೇಳಿದ್ದಾರೆ.
Rajinikanth: ಪ್ರತಿಯೊಬ್ಬ ಭಾರತೀಯ ನೋಡಬೇಕಾದ ಸಿನಿಮಾ! ಧುರಂಧರ್ ಸಿನಿಮಾ ಬಗ್ಗೆ ರಜನಿಕಾಂತ್ ಹೇಳಿದ್ದೇನು?
ಇದು ಬೇಕೆಂದೇ ಮಾಡಲಾದ ಕೃತ್ಯವಾಗಿದೆ
"ಇದಕ್ಕೆ ಒಂದು ಉದಾಹರಣೆಯೆಂದರೆ, ಚಿತ್ರದ 'ಹಮ್ಜಾ/ಜಸ್ಕಿರತ್' ಎಂಬ ಪಾತ್ರವು ಪೇಟ (Turban) ಧರಿಸಿ ಧೂಮಪಾನ ಮಾಡುತ್ತಿರುವಂತೆ ಒಂದು ನಕಲಿ ಚಿತ್ರವನ್ನು ಹರಿಬಿಡಲಾಗಿದೆ. ಇದು ಸಂಪೂರ್ಣವಾಗಿ ಸುಳ್ಳು. ನಮ್ಮ ಚಿತ್ರದಲ್ಲಾಗಲಿ ಅಥವಾ ನಾವು ಬಿಡುಗಡೆ ಮಾಡಿದ ಯಾವುದೇ ಅಧಿಕೃತ ಪ್ರಚಾರ ಸಾಮಗ್ರಿಗಳಲ್ಲಾಗಲಿ ಅಂತಹ ದೃಶ್ಯಗಳಿಲ್ಲ. ಇದು ಜನರ ಭಾವನೆಗಳನ್ನು ಕೆರಳಿಸಲು ಮತ್ತು ಕಿಡಿಗೇಡಿತನ ಮಾಡಲು ಬೇಕೆಂದೇ ಮಾಡಲಾದ ಕೃತ್ಯವಾಗಿದೆ" ಎಂದು ಆದಿತ್ಯ ಗರಂ ಆಗಿದ್ದಾರೆ.
Dhurandhar 2 : 'ಧುರಂಧರ್ 2' ವಿರುದ್ಧ ಸಿಖ್ ಸಂಘಟನೆಯಿಂದ FIR; ಮಾಧವನ್ ಕೊಟ್ಟ ಸ್ಪಷ್ಟನೆ ಇದು
ಘನತೆ ಮತ್ತು ಜವಾಬ್ದಾರಿಯಿಂದ ನಿರ್ವಹಿಸಲಾಗಿದೆ
"ನನಗೆ ಸಿಖ್ ಸಮುದಾಯದ ಮೇಲೆ ಅಪಾರ ಗೌರವವಿದೆ ಎಂದು ನಾನು ಅತ್ಯಂತ ಸ್ಪಷ್ಟವಾಗಿ ಹೇಳಬಯಸುತ್ತೇನೆ. ಚಿತ್ರದಲ್ಲಿನ ಪ್ರತಿಯೊಂದು ಪಾತ್ರದ ಚಿತ್ರಣವನ್ನು ಅತ್ಯಂತ ಸಂವೇದನಾಶೀಲತೆ, ಘನತೆ ಮತ್ತು ಜವಾಬ್ದಾರಿಯಿಂದ ನಿರ್ವಹಿಸಲಾಗಿದೆ. ತಿರುಚಿದ ದೃಶ್ಯಗಳ ಮೂಲಕ ಇದಕ್ಕೆ ವಿರುದ್ಧವಾಗಿ ಬಿಂಬಿಸಲು ಮಾಡುವ ಯಾವುದೇ ಪ್ರಯತ್ನವು ದುರುದ್ದೇಶಪೂರಿತ ಮತ್ತು ಅಪ್ರಾಮಾಣಿಕವಾದುದು. ನಾನು ಪ್ರೇಕ್ಷಕರಲ್ಲಿ ವಿನಂತಿಸಿಕೊಳ್ಳುವುದೇನೆಂದರೆ, ದಯವಿಟ್ಟು ಕೇವಲ ಅಧಿಕೃತ ಮೂಲಗಳಿಂದ ಬಂದ ಮಾಹಿತಿಯನ್ನು ಮಾತ್ರ ನಂಬಿ. ದುರುದ್ದೇಶದಿಂದ ಹರಡಲಾಗುತ್ತಿರುವ ಇಂತಹ AI-ಚಾಲಿತ ಸುಳ್ಳು ಸುದ್ದಿಗಳಿಗೆ ಬಲಿಯಾಗಬೇಡಿ. ಇಂತಹ ಕಿಡಿಗೇಡಿ ಕೃತ್ಯಗಳನ್ನು ಎಸಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು" ಎಂದು ಆದಿತ್ಯ ಧರ್ ವಾರ್ನಿಂಗ್ ನೀಡಿದ್ದಾರೆ.
ಆದಿತ್ಯ ಧರ್ ಹಂಚಿಕೊಂಡ ಟ್ವೀಟ್
🙏@RanveerOfficial @rampalarjun @duttsanjay @ActorMadhavan #AkshayeKhanna #SaraArjun @bolbedibol @AdityaDharFilms #JyotiDeshpande @LokeshDharB62 @jiostudios @B62Studios @TSeries @JioHotstar @StarGoldIndia pic.twitter.com/VMCS4ImdG4
— Aditya Dhar (@AdityaDharFilms) March 26, 2026
ರಣವೀರ್ ಸಿಂಗ್ ನಟನೆಯ ʻಧುರಂಧರ್: ದಿ ರಿವೆಂಜ್ʼ ಸಿನಿಮಾವು ಬಾಕ್ಸ್ ಆಫೀಸ್‌ನಲ್ಲಿ ತನ್ನ ನಾಗಾಲೋಟವನ್ನು ಮುಂದುವರಿಸಿದ್ದು, ಆಗಲೇ ಚಿತ್ರದ ಗಳಿಕೆಯು 1000 ಕೋಟಿ ರೂ. ಸಮೀಪವಿದೆ.