ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ʻಸರ್..‌ ಪ್ಲೀಸ್‌ ಆಕ್ಟಿಂಗ್‌ ಮಾಡೋದು ನಿಲ್ಲಿಸಬೇಡಿ..ʼ; ನಟ ಧನುಷ್‌ ರಾಜಕೀಯ ಎಂಟ್ರಿ ಬಗ್ಗೆ ನಟಿ ಸಾಯಿ ಪಲ್ಲವಿ ಅಚ್ಚರಿಯ ಹೇಳಿಕೆ!

ನಟ ಧನುಷ್‌ ಅವರ ರಾಜಕೀಯ ಎಂಟ್ರಿ ಕುರಿತು ತಮಿಳು ಚಿತ್ರರಂಗದಲ್ಲಿ ಚರ್ಚೆಗಳು ತೀವ್ರವಾಗಿರುವ ಬೆನ್ನಲ್ಲೇ, ನಟಿ ಸಾಯಿ ಪಲ್ಲವಿ ಸಾವಿರಾರು ಜನರ ಎದುರು ಧನುಷ್‌ಗೆ ವಿಶೇಷ ಮನವಿಯೊಂದನ್ನು ಮಾಡಿದ್ದಾರೆ. ಸದ್ಯ ಈ ವಿಡಿಯೋ ಸಖತ್‌ ವೈರಲ್‌ ಆಗುತ್ತಿದೆ.

ತಮಿಳು ಚಿತ್ರರಂಗದ ಸ್ಟಾರ್ ನಟ ಧನುಷ್ ಅವರ ರಾಜಕೀಯ ಪ್ರವೇಶದ ಕುರಿತು ಚರ್ಚೆಗಳು ಜೋರಾಗಿರುವ ಬೆನ್ನಲ್ಲೇ, ನಟಿ ಸಾಯಿ ಪಲ್ಲವಿ ಅವರು ವೇದಿಕೆಯ ಮೇಲೆಯೇ ಧನುಷ್ ಮುಂದೆ ವಿಶೇಷ ಮನವಿಯೊಂದನ್ನು ಇಟ್ಟಿದ್ದಾರೆ. ‘ರಾಮಾಯಣ’ ಚಿತ್ರದ ಯಶಸ್ಸಿನ ನಂತರ ಸಾಯಿ ಪಲ್ಲವಿ ಹಾಗೂ ಧನುಷ್ ಜೊತೆಯಾಗಿ ನಟಿಸಿರುವ ಬಹುನಿರೀಕ್ಷಿತ ‘ಓ.ಎಂ – ಆಪರೇಷನ್ ಮೋಲ್’ (OM – Operation Mole) ತೆರೆಗೆ ಬರುತ್ತಿದೆ.

ಸದ್ಯ ಈ ಚಿತ್ರದ ಪ್ರೀ-ರಿಲೀಸ್ ಕಾರ್ಯಕ್ರಮ ಇತ್ತೀಚೆಗೆ ಅದ್ಧೂರಿಯಾಗಿ ನಡೆಯಿತು. ಈ ಸಮಾರಂಭದಲ್ಲಿ ಮಾತನಾಡಿದ ಸಾಯಿ ಪಲ್ಲವಿ, ಧನುಷ್ ಅವರು ಜೀವನದಲ್ಲಿ ಯಾವ ಕ್ಷೇತ್ರವನ್ನೇ ಆಯ್ಕೆ ಮಾಡಿಕೊಂಡರೂ ಒಳ್ಳೆಯದಾಗಲಿ ಎಂದು ಹಾರೈಸುತ್ತಲೇ, ಯಾವುದೇ ಕಾರಣಕ್ಕೂ ನಟನೆಯನ್ನು ಬಿಡಬೇಡಿ ಎಂದು ಕಳಕಳಿಯಿಂದ ಕೇಳಿಕೊಂಡರು.

ಇದು ರಾಜಕೀಯ ಸಮಾವೇಶವಾ?

ಕಾರ್ಯಕ್ರಮದ ವೇದಿಕೆಯಲ್ಲಿ ತಮ್ಮ ಮನದಾಳದ ಆತಂಕವನ್ನು ಹಂಚಿಕೊಂಡ ಸಾಯಿ ಪಲ್ಲವಿ, "ಈ ಕಾರ್ಯಕ್ರಮಕ್ಕೆ ಬರುವ ದಾರಿಯುದ್ದಕ್ಕೂ ಹಾಕಲಾಗಿದ್ದ ಧ್ವಜಗಳು ಮತ್ತು ಬ್ಯಾನರ್‌ಗಳನ್ನು ನೋಡಿ ನನಗೆ ಒಂದು ಕ್ಷಣ ಆಶ್ಚರ್ಯವಾಯಿತು. ‘ಇದೇನಾದರೂ ರಾಜಕೀಯ ಸಮಾವೇಶವಾ? ಏನಿದು ಸರ್?’ ಎಂದು ನನಗನ್ನಿಸಿತು. ನೀವು ಜೀವನದಲ್ಲಿ ಏನೇ ನಿರ್ಧಾರ ತೆಗೆದುಕೊಂಡರೂ ನಾನು ನಿಮಗೆ ಒಳ್ಳೆಯದನ್ನೇ ಬಯಸುತ್ತೇನೆ, ನಿಮಗೆ ಖಂಡಿತವಾಗಿಯೂ ಒಳ್ಳೆಯದೇ ಆಗಲಿ. ಆದರೆ, ನನ್ನೊಳಗಿನ ಒಬ್ಬ ಕಲಾವಿದೆಗೆ ಒಂದು ಸಣ್ಣ ಆತಂಕ ಕಾಡುತ್ತಿದೆ, ದಳಪತಿ ವಿಜಯ್ ಸರ್ ನೋಡಿ, ಅವರು ರಾಜಕೀಯ ಪ್ರವೇಶಿಸಿದ ಬಳಿಕ ನಟನೆಯನ್ನು ನಿಲ್ಲಿಸಿದ್ದಾರೆ. ಹಾಗಾಗಿ, ಧನುಷ್ ಸರ್ ತಮ್ಮ ನಟನೆಯನ್ನು ಮುಂದುವರಿಸಬೇಕು ಎಂದು ನಾನು ಮನಃಪೂರ್ವಕವಾಗಿ ಆಶಿಸುತ್ತೇನೆ ಮತ್ತು ಪ್ರಾರ್ಥಿಸುತ್ತೇನೆ" ಎಂದು ಭಾವುಕರಾಗಿ ನುಡಿದರು.

ಧನುಷ್‌ ಥರದ ಅದ್ಭುತ ನಟರು ತುಂಬಾ ಕಮ್ಮಿ

ಧನುಷ್ ಅವರ ಅಭಿನಯ ಸಾಮರ್ಥ್ಯವನ್ನು ಕೊಂಡಾಡಿದ ಸಾಯಿ ಪಲ್ಲವಿ, "ನಾನು ಈ ಮಾತನ್ನು ಏಕೆ ಹೇಳುತ್ತಿದ್ದೇನೆ ಎಂದರೆ, ಅವರಂತಹ ನೈಜ ಮತ್ತು ಸಹಜ ಅಭಿನಯ ನೀಡಲು ಹಾಗೂ ಅವರು ಆಯ್ಕೆ ಮಾಡಿಕೊಳ್ಳುವಂತಹ ವಿಭಿನ್ನ ಕಥೆಗಳನ್ನು ಪ್ರೇಕ್ಷಕರಿಗೆ ತಲುಪಿಸಲು ನಿಜವಾದ ಕಲಾವಿದರ ಅಗತ್ಯ ಚಿತ್ರರಂಗಕ್ಕಿದೆ. ಆದ್ದರಿಂದ, ದಯವಿಟ್ಟು ನಟನೆಯನ್ನು ಮುಂದುವರಿಸಿ ಸರ್. ಇಲ್ಲದಿದ್ದರೆ ಭಾರತೀಯ ಚಿತ್ರರಂಗ ಮತ್ತು ನಾವೆಲ್ಲರೂ ಒಬ್ಬ ಶ್ರೇಷ್ಠ ನಟನನ್ನು ಕಳೆದುಕೊಂಡಂತಾಗುತ್ತದೆ" ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಸಾಯಿ ಪಲ್ಲವಿ ಅವರ ಈ ಮಾತಿಗೆ ಅಭಿಮಾನಿಗಳಿಂದಲೂ ಭರ್ಜರಿ ಚಪ್ಪಾಳೆ ವ್ಯಕ್ತವಾಯಿತು.

Trance Of Kuberaa: ಧನುಷ್‌-ರಶ್ಮಿಕಾ ಜೋಡಿಯ ʼಕುಬೇರʼ ಟೀಸರ್‌ ಔಟ್‌; ಪ್ರತಿಷ್ಠೆಯ ಹೋರಾಟದಲ್ಲಿ ಗೆಲುವು ಯಾರಿಗೆ?

ಧನುಷ್‌ ನಟನೆ ನೋಡುವುದೇ ದೊಡ್ಡ ಖುಷಿ

ಇದೇ ಸಂದರ್ಭದಲ್ಲಿ ‘ಓ.ಎಂ – ಆಪರೇಷನ್ ಮೋಲ್’ ಚಿತ್ರದಲ್ಲಿ ಧನುಷ್ ಅವರೊಂದಿಗಿನ ಕೆಲಸದ ಅನುಭವವನ್ನೂ ಸಾಯಿ ಪಲ್ಲವಿ ಸ್ಮರಿಸಿಕೊಂಡರು. ಈ ಮಹತ್ವದ ಪ್ರಾಜೆಕ್ಟ್‌ನ ಭಾಗವಾಗಲು ತಾನು ಅದೃಷ್ಟ ಮಾಡಿದ್ದೆ ಎಂದು ಹೇಳಿದ ಅವರು, ನಟನಾಗಿ ಮಾತ್ರವಲ್ಲದೆ ನಿರ್ಮಾಪಕರಾಗಿಯೂ ಧನುಷ್ ಅವರ ಕಾರ್ಯವೈಖರಿ ಅದ್ಭುತವಾಗಿದೆ ಎಂದು ಶ್ಲಾಘಿಸಿದರು. ಚಿತ್ರೀಕರಣದ ಸೆಟ್‌ನಲ್ಲಿ ಅವರೊಂದಿಗೆ ಹೆಚ್ಚು ಸಮಯ ಕಳೆಯಲು ಅವಕಾಶ ಸಿಗದಿದ್ದರೂ, ಅವರು ಕೆಲಸ ಮಾಡುವ ಶ್ರದ್ಧೆ ಮತ್ತು ರೀತಿಯನ್ನು ನೋಡುವುದೇ ಒಂದು ದೊಡ್ಡ ಖುಷಿಯಾಗಿತ್ತು ಎಂದರು. ಅಲ್ಲದೆ, ಇಂತಹ ಉತ್ತಮ ಚಿತ್ರದಲ್ಲಿ ನಟಿಸಲು ಅವಕಾಶ ನೀಡಿದ್ದಕ್ಕಾಗಿ ಧನುಷ್ ಅವರಿಗೆ ಕೃತಜ್ಞತೆ ಸಲ್ಲಿಸಿದರು.

‘ಅಮರನ್’ ಖ್ಯಾತಿಯ ರಾಜ್‌ಕುಮಾರ್ ಪೆರಿಯಸಾಮಿ ನಿರ್ದೇಶನದ ‘ಓ.ಎಂ – ಆಪರೇಷನ್ ಮೋಲ್’ ಚಿತ್ರವು ನವೆಂಬರ್ 20ರಂದು ವಿಶ್ವಾದ್ಯಂತ ತೆರೆಗೆ ಬರಲು ಸಜ್ಜಾಗಿದೆ. ಈ ಚಿತ್ರದಲ್ಲಿ ಧನುಷ್ ಮತ್ತು ಸಾಯಿ ಪಲ್ಲವಿ ಜೊತೆಗೆ ಮಲಯಾಳಂ ಮೆಗಾಸ್ಟಾರ್ ಮಮ್ಮುಟ್ಟಿ ಹಾಗೂ ನಟಿ ಶ್ರೀಲೀಲಾ ಕೂಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು, ಸಿನಿಪ್ರಿಯರಲ್ಲಿ ಭಾರೀ ಕುತೂಹಲ ಮೂಡಿಸಿದೆ.