Trance Of Kuberaa: ಧನುಷ್-ರಶ್ಮಿಕಾ ಜೋಡಿಯ ʼಕುಬೇರʼ ಟೀಸರ್ ಔಟ್; ಪ್ರತಿಷ್ಠೆಯ ಹೋರಾಟದಲ್ಲಿ ಗೆಲುವು ಯಾರಿಗೆ?
Rashmika Mandanna: ಸದ್ಯ ಪ್ಯಾನ್ ಇಂಡಿಯಾ ಮಟ್ಟದಲ್ಲಿ ನಿರೀಕ್ಷೆ ಮೂಡಿಸಿರುವ ಚಿತ್ರ ಕುಬೇರ. ತಮಿಳು-ತೆಲುಗು-ಹಿಂದಿಯಲ್ಲಿ ಏಕಕಾಲಕ್ಕೆ ತಯಾರಾಗುತ್ತಿರುವ ಈ ಸಿನಿಮಾದಲ್ಲಿ ಧನುಷ್-ರಶ್ಮಿಕಾ ಮಂದಣ್ಣ-ನಾಗಾರ್ಜುನ ಮೊದಲ ಬಾರಿಗೆ ಜತೆಯಾಗಿ ನಟಿಸುತ್ತಿದ್ದಾರೆ. ಇದೀಗ ಟೀಸರ್ ರಿಲೀಸ್ ಆಗಿದ್ದು, ನಿರೀಕ್ಷೆ ಇನ್ನಷ್ಟು ಹೆಚ್ಚಾಗಿದೆ.


ಚೆನ್ನೈ: ಸದ್ಯ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ (Rashmika Mandanna) ಇದೀಗ ಮತ್ತೊಮ್ಮೆ ಮಿಂಚಲು ಸಜ್ಜಾಗಿದ್ದಾರೆ. ತಮಿಳು-ಹಿಂದಿ-ತೆಲುಗಿನಲ್ಲಿ ತಯಾರಾಗುತ್ತಿರುವ ʼಕುಬೇರʼ (Kubera Movie) ಚಿತ್ರದಲ್ಲಿ ಧನುಷ್ (Dhanush) ಜತೆ ರಶ್ಮಿಕಾ ಮಂದಣ್ಣ ಮೊದಲ ಬಾರಿ ತೆರೆ ಹಂಚಿಕೊಳ್ಳುತ್ತಿದ್ದಾರೆ. ಇದೇ ಕಾರಣಕ್ಕೆ ʼಕುಬೇರʼ ಚಿತ್ರ ನಿರೀಕ್ಷೆ ಮೂಡಿಸಿದ್ದು, ಇದೀಗ ಟೀಸರ್ ರಿಲೀಸ್ ಆಗಿದೆ. ಆ ಮೂಲಕ ಮತ್ತೊಮ್ಮೆ ರಶ್ಮಿಕಾ ಗಮನ ಸೆಳೆದಿದ್ದಾರೆ. ಟಾಲಿವುಡ್‌ನ ಪ್ರತಿಭಾವಂತ ನಿರ್ದೇಶಕ ಶೇಖರ್ ಕಮ್ಮುಲ (Sekhar Kammula) ಆ್ಯಕ್ಷನ್ ಕಟ್ ಹೇಳುತ್ತಿರುವ ಈ ಸಿನಿಮಾದಲ್ಲಿ ತೆಲುಗಿನ ಹಿರಿಯ ನಟ ನಾಗಾರ್ಜುನ (Nagarjuna) ಕೂಡ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ʼಟ್ರಾನ್ಸ್ ಆಫ್ ಕುಬೇರʼ (Trance Of Kuberaa) ಹೆಸರಿನಲ್ಲಿ ಇದೀಗ ಹೊರ ಬಂದಿರುವ ಟೀಸರ್‌ನಲ್ಲಿ ಧನಷ್ ಮತ್ತು ನಾಗಾರ್ಜುನ ಜತೆ ರಶ್ಮಿಕಾ ಪಾತ್ರವೂ ಹೈಲೈಟ್ ಆಗಿದೆ. ಆ ಮೂಲಕ ರಶ್ಮಿಕಾ ಬಾಲಿವುಡ್‌ನ ʼಸಿಕಂದರ್ʼ ಸೋಲಿನಿಂದ ಹೊರ ಬರುವ ಸೂಚನೆ ನೀಡಿದ್ದಾರೆ.
ʼಈ ಜಗತ್ತೇ ನನ್ನದುʼ ಎನ್ನುವ ಹಾಡಿನ ಹಿನ್ನೆಲೆಯಲ್ಲಿ ಇಡೀ ಟೀಸರ್ ಕಟ್ಟಿಕೊಡಲಾಗಿದೆ. ಶ್ರೀಮಂತ ಉದ್ಯಮಿಗಳಾದ ನಾಗಾರ್ಜುನ ಮತ್ತು ವಿಲನ್ ಜಿಮ್ ಸರ್ಭ್ ನಡುವಿನ ಗುದ್ದಾಟಕ್ಕೆ ಬಡ ಯುವಕ ಧನುಷ್ ಎಂಟ್ರಿ ಕೊಡುವುದು ಮತ್ತು ಮಧ್ಯಮ ವರ್ಗದ ಯುವತಿ ರಶ್ಮಿಕಾ ಹೋರಾಟ ಟೀಸರ್‌ನಲ್ಲಿ ಕಂಡು ಬಂದಿದೆ. ಹಣ, ಅಧಿಕಾರದ ಮದದ ಸುತ್ತವೇ ಚಿತ್ರ ಸಾಗಲಿದೆ. ಈಗಾಗಲೇ ಕುತೂಹಲ ಕೆರಳಿಸಿರುವ ಚಿತ್ರ ಟೀಸರ್ ಮೂಲಕ ನಿರೀಕ್ಷೆಯನ್ನು ಇನ್ನಷ್ಟು ಹೆಚ್ಚಿಸಿದೆ.
ʼಕುಬೇರʼ ಚಿತ್ರದ ಟೀಸರ್ ಇಲ್ಲಿದೆ:
ಈ ಸುದ್ದಿಯನ್ನೂ ಓದಿ: Shiva Rajakumar: ಕಮಲ್ ಹಾಸನ್ ತಬ್ಬಿಕೊಂಡ ಕಾರಣಕ್ಕೆ 3 ದಿನ ಸ್ನಾನ ಮಾಡದ ಶಿವಣ್ಣ; ಏನಿದು ಫ್ಯಾನ್ ಬಾಯ್ ಮೂಮೆಂಟ್?
ಗಮನ ಸೆಳೆದ ನಾಗಾರ್ಜುನ-ಧನುಷ್-ರಶ್ಮಿಕಾ
ಇದೀಗ ಹೊರ ಬಂದಿರುವ ಟೀಸರ್‌ನಲ್ಲಿ ಯಾವುದೇ ಸಂಭಾಷಣೆ ಇರದಿದ್ದರೂ ಪ್ರತಿಷ್ಠೆಯ ಕುರಿತಾದ ಈ ಹೋರಾಟದ ಕಥಾನಕದಲ್ಲಿ ನಾಗಾರ್ಜುನ್-ಧನುಷ್-ರಶ್ಮಿಕಾ ಗಮನ ಸೆಳೆದಿದ್ದಾರೆ. ಶ್ರೀಮಂತ ಉದ್ಯಮಿಯಾಗಿ ನಾರ್ಗಾಜುನ ಗಮನ ಸೆಳೆದರೆ,
ಮೊದಲು ಬೀದಿಯಲ್ಲಿ ಅಲೆದಾಡುವ ಯುವಕನಾಗಿ ಕಾಣಿಸಿಕೊಂಡು, ಬಳಿಕ ಪ್ರತಿಷ್ಠೆಯ ಹೋರಾಟಕ್ಕೆ ಧುಮುಕುವ ಮೂಲಕ ಧನುಷ್ ಮತ್ತೊಮ್ಮೆ ತಮ್ಮ ನಟನಾ ಸಾಮರ್ಥ್ಯ ಒರೆಗೆ ಹಚ್ಚಿದ್ದಾರೆ. ಇನ್ನು ಮಧ್ಯಮ ವರ್ಗದ ಯುವತಿಯಾಗಿ ರಶ್ಮಿಕಾ ಸರಳವಾಗಿ ಕಾಣಿಸಿಕೊಂಡು ಮೋಡಿ ಮಾಡಿದ್ದಾರೆ.
ರಾಷ್ಟ್ರ ಪ್ರಶಸ್ತಿ ವಿಜೇತರ ಸಂಗಮ
ವಿಶೇಷ ಎಂದರೆ ʼಕುಬೇರʼ ಮೂವರು ರಾಷ್ಟ್ರ ಪ್ರಶಸ್ತಿ ವಿಜೇತರ ಸಂಗಮ ಎನಿಸಿಕೊಂಡಿದೆ. ನಿರ್ದೇಶಕ ಶೇಖರ್ ಕಮ್ಮುಲ, ಸಂಗೀತ ನಿರ್ದೇಶಕ ದೇವಿಶ್ರೀ ಪ್ರಸಾದ್ ಮತ್ತು ನಟ ಧನುಷ್ ಈ ಹಿಂದೆ ರಾಷ್ಟ್ರ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಇದೀಗ ಈ ಮೂವರು ಪ್ರತಿಭಾವಂತರು ಒಂದೇ ಚಿತ್ರಕ್ಕಾಗಿ ಮೊದಲ ಬಾರಿಗೆ ಒಟ್ಟಿಗೆ ಸೇರಿದ್ದು ಕುತೂಹಲ ಮೂಡಿಸಿದೆ. ತಮಿಳು, ತೆಲುಗು ಮತ್ತು ಹಿಂದಿಯಲ್ಲಿ ಏಕಕಾಲಕ್ಕೆ ಚಿತ್ರೀಕರಣವಾಗಿರುವ ಸಿನಿಮಾ ಕನ್ನಡ, ಮಲಯಾಳಂಗೂ ಡಬ್ ಆಗಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರಲಿದೆ. ಜೂ. 20ರಂದು ಈ ಚಿತ್ರದ ವಿಶ್ವಾದ್ಯಂತ ರಿಲೀಸ್ ಆಗಲಿದೆ.