ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಪ್ರತಿದಿನ ಹೊಸ ಹೊಸ ದಾಖಲೆ ಬರೆಯುತ್ತಿರುವ ʻರಾಮಾಯಣʼ; ಅಲ್ಲು ಅರ್ಜುನ್‌ ನಟನೆಯ ʻಪುಷ್ಪ 2ʼ ರೆಕಾರ್ಡ್‌ ಬ್ರೇಕ್‌ ಮಾಡಲು ಇನ್ನೆಷ್ಟು ಕೋಟಿ ಬೇಕು?

ರಣಬೀರ್ ಕಪೂರ್, ಯಶ್, ಸಾಯಿ ಪಲ್ಲವಿ, ರವಿ ದುಬೆ ಅಭಿನಯದ 'ರಾಮಾಯಣ: ಭಾಗ 1' ಸಿನಿಮಾ ಬಿಡುಗಡೆಯಾದ ಕೇವಲ 20 ದಿನಗಳಲ್ಲಿ ವಿಶ್ವದಾದ್ಯಂತ 1,735.15 ಕೋಟಿ ಗಳಿಸುವ ಮೂಲಕ ಭಾರತೀಯ ಚಿತ್ರರಂಗದಲ್ಲಿ ಹೊಸ ಇತಿಹಾಸ ಸೃಷ್ಟಿಸಿದೆ.

ಬಾಲಿವುಡ್ ನಟ ರಣಬೀರ್ ಕಪೂರ್, ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಪೌರಾಣಿಕ ಸಿನಿಮಾ ‘ರಾಮಾಯಣ: ಭಾಗ 1’ ಬಾಕ್ಸ್ ಆಫೀಸ್‌ನಲ್ಲಿ ಪ್ರತಿದಿನ ಹೊಸ ಹೊಸ ದಾಖಲೆಗಳನ್ನು ಬರೆಯುತ್ತಾ ಮುನ್ನುಗ್ಗುತ್ತಿದೆ. ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಮೊದಲ 20 ದಿನಗಳಲ್ಲೇ ಈ ಚಿತ್ರವು ವಿಶ್ವದಾದ್ಯಂತ ಬರೋಬ್ಬರಿ 1,735.15 ಕೋಟಿ ರೂಪಾಯಿ ಗಳಿಸುವ ಮೂಲಕ ಸಿನಿರಂಗದಲ್ಲಿ ಹೊಸ ಇತಿಹಾಸ ಸೃಷ್ಟಿಸಿದೆ.

ಈ ಭರ್ಜರಿ ಗಳಿಕೆಯೊಂದಿಗೆ ಸಾರ್ವಕಾಲಿಕ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಭಾರತೀಯ ಸಿನಿಮಾಗಳ ಪಟ್ಟಿಯಲ್ಲಿ ಟಾಪ್ 4ನೇ ಸ್ಥಾನಕ್ಕೇರಲು ಸಜ್ಜಾಗಿರುವ ‘ರಾಮಾಯಣ’, ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2’ ಚಿತ್ರದ ದಾಖಲೆಯನ್ನು ಮುರಿಯಲು ಸಜ್ಜಾಗಿದೆ.

5ನೇ ಸ್ಥಾನದಲ್ಲಿರುವ ʻರಾಮಾಯಣʼ

ವಿಶ್ವದಾದ್ಯಂತ 1,742 ಕೋಟಿ ರೂಪಾಯಿ ಗಳಿಸಿ ಪ್ರಸ್ತುತ 4ನೇ ಸ್ಥಾನದಲ್ಲಿರುವ ‘ಪುಷ್ಪ 2’ ಚಿತ್ರವನ್ನು ಹಿಂದಿಕ್ಕಲು ‘ರಾಮಾಯಣ’ಕ್ಕೆ ಇನ್ನು ಕೇವಲ 6.85 ಕೋಟಿ ರೂಪಾಯಿಗಳ ಅಗತ್ಯವಿದೆ. ಬಿಡುಗಡೆಯಾದ 19ನೇ ದಿನ 12.70 ಕೋಟಿ ರೂಪಾಯಿ ಗಳಿಸಿದ್ದ ಈ ಸಿನಿಮಾ, 20ನೇ ದಿನ ಭಾರತದಲ್ಲಿ ಬರೋಬ್ಬರಿ 17.50 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಮೂಲಕ ಗಳಿಕೆಯಲ್ಲಿ ಶೇ. 37.8 ರಷ್ಟು ಭಾರಿ ಏರಿಕೆ ಕಂಡಿದೆ. ಪ್ರದರ್ಶನ ಕಂಡ ಮೊದಲ 20 ದಿನಗಳಲ್ಲಿ ಭಾರತದಾದ್ಯಂತ ಒಟ್ಟು 4,28,377 ಪ್ರದರ್ಶನಗಳನ್ನು ಕಂಡಿರುವ ಈ ಚಿತ್ರ, ಸದ್ಯ ವಿಶ್ವದಾದ್ಯಂತ ಅತಿ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ.

‌Yash: ಬಾಕ್ಸ್‌ ಆಫೀಸ್‌ನಲ್ಲಿ ನಿಲ್ಲದ ʻರಾಮಾಯಣʼ ಚಿತ್ರದ ಅಬ್ಬರ; 1000 ಕೋಟಿ ಕ್ಲಬ್‌ ಸೇರಲು ಇನ್ನೆಷ್ಟು ಹಣ ಬೇಕು?

ಹಿಂದಿ ವರ್ಷನ್‌ನಿಂದ ಹೆಚ್ಚು ಗಳಿಕೆ

‘ರಾಮಾಯಣ’ ಚಿತ್ರದ ಒಟ್ಟು ಗಳಿಕೆಯಲ್ಲಿ ಭಾರತದಿಂದಲೇ 1,162.15 ಕೋಟಿ ರೂಪಾಯಿ ಹರಿದುಬಂದಿದ್ದರೆ, ವಿದೇಶಿ ಮಾರುಕಟ್ಟೆಯಿಂದ 573 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ದೇಶೀಯ ಮಾರುಕಟ್ಟೆಯ ಗಳಿಕೆಯಲ್ಲಿ ಹಿಂದಿ ಆವೃತ್ತಿಯು 739.25 ಕೋಟಿ ರೂಪಾಯಿ ಗಳಿಸುವ ಮೂಲಕ ಸಿಂಹಪಾಲು ನೀಡಿದೆ. ಇನ್ನು ದಕ್ಷಿಣ ಭಾರತದ ಭಾಷೆಗಳಲ್ಲೂ ಉತ್ತಮ ಪ್ರದರ್ಶನ ಕಾಣುತ್ತಿರುವ ಈ ಸಿನಿಮಾ, ಕನ್ನಡ ಆವೃತ್ತಿಯಲ್ಲಿ 77.05 ಕೋಟಿ, ತೆಲುಗಿನಲ್ಲಿ 57.30 ಕೋಟಿ, ಮಲಯಾಳಂನಲ್ಲಿ 51.20 ಕೋಟಿ ಹಾಗೂ ತಮಿಳು ಆವೃತ್ತಿಯಲ್ಲಿ 48.15 ಕೋಟಿ ರೂಪಾಯಿಗಳನ್ನು ಬಾಚಿಕೊಂಡಿದೆ.

ಭಾರತೀಯ ಚಿತ್ರರಂಗದಲ್ಲಿ ಅತಿ ಹೆಚ್ಚು ಗಳಿಕೆ ಕಂಡ ಟಾಪ್ 10 ಸಿನಿಮಾಗಳ ಪಟ್ಟಿ

  1. ದಂಗಲ್ – 2,070 ಕೋಟಿ ರೂಪಾಯಿ
  2. ಧುರಂಧರ್ 2 – 1,813.40 ಕೋಟಿ ರೂಪಾಯಿ
  3. ಬಾಹುಬಲಿ 2 – 1,788 ಕೋಟಿ ರೂಪಾಯಿ
  4. ಪುಷ್ಪ 2 – 1,742 ಕೋಟಿ ರೂಪಾಯಿ
  5. ರಾಮಾಯಣ: ಭಾಗ 1 – 1,735.15 ಕೋಟಿ ರೂಪಾಯಿ
  6. ಧುರಂಧರ್ – 1,307.35 ಕೋಟಿ ರೂಪಾಯಿ
  7. ಆರ್‌ಆರ್‌ಆರ್ – 1,230 ಕೋಟಿ ರೂಪಾಯಿ
  8. ಕೆಜಿಎಫ್: ಚಾಪ್ಟರ್ 2 – 1,215 ಕೋಟಿ ರೂಪಾಯಿ
  9. ಜವಾನ್ – 1,160 ಕೋಟಿ ರೂಪಾಯಿ
  10. ಪಠಾಣ್ – 1,055 ಕೋಟಿ ರೂಪಾಯಿ

2028ರಲ್ಲಿ ಎರಡನೇ ಭಾಗ ರಿಲೀಸ್‌

ಖ್ಯಾತ ನಿರ್ದೇಶಕ ನಿತೇಶ್ ತಿವಾರಿ ನಿರ್ದೇಶನದಲ್ಲಿ ಮೂಡಿಬಂದಿರುವ ‘ರಾಮಾಯಣ: ಭಾಗ 1’ ಚಿತ್ರದಲ್ಲಿ ಶ್ರೀರಾಮನಾಗಿ ರಣಬೀರ್ ಕಪೂರ್, ರಾವಣನಾಗಿ ಯಶ್, ಸೀತಾದೇವಿಯಾಗಿ ಸಾಯಿ ಪಲ್ಲವಿ ಮತ್ತು ಲಕ್ಷ್ಮಣನಾಗಿ ರವಿ ದುಬೆ ಅದ್ಭುತವಾಗಿ ಅಭಿನಯಿಸಿದ್ದಾರೆ. ಎರಡು ಭಾಗಗಳಲ್ಲಿ ತಯಾರಾಗುತ್ತಿರುವ ಈ ಬೃಹತ್ ಸಿನಿಮಾವನ್ನು ನಮಿತ್ ಮಲ್ಹೋತ್ರಾ ಅವರ ‘ಪ್ರೈಮ್ ಫೋಕಸ್ ಸ್ಟುಡಿಯೋಸ್’ ಮತ್ತು ಯಶ್ ಅವರ ‘ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್’ ಜಂಟಿಯಾಗಿ ನಿರ್ಮಿಸಿವೆ.

ಮೊದಲ ಭಾಗದ ಅಭೂತಪೂರ್ವ ಯಶಸ್ಸಿನ ಬೆನ್ನಲ್ಲೇ, ಚಿತ್ರದ ಎರಡನೇ ಭಾಗವು 2028ರ ದೀಪಾವಳಿಯಂದು ತೆರೆಗೆ ಬರಲಿದ್ದು, ಅದರಲ್ಲಿ ಹನುಮಂತನ ಪ್ರಮುಖ ಪಾತ್ರದಲ್ಲಿ ಬಾಲಿವುಡ್ ನಟ ಸನ್ನಿ ಡಿಯೋಲ್ ಕಾಣಿಸಿಕೊಳ್ಳಲಿದ್ದಾರೆ.