Yash: ಬಾಕ್ಸ್ ಆಫೀಸ್ನಲ್ಲಿ ನಿಲ್ಲದ ʻರಾಮಾಯಣʼ ಚಿತ್ರದ ಅಬ್ಬರ; 1000 ಕೋಟಿ ಕ್ಲಬ್ ಸೇರಲು ಇನ್ನೆಷ್ಟು ಹಣ ಬೇಕು?
ʻರಾಮಾಯಣʼ ಸಿನಿಮಾವು ಬಾಕ್ಸ್ ಆಫೀಸ್ನಲ್ಲಿ ದಾಖಲೆಗಳನ್ನು ಧೂಳಿಪಟ ಮಾಡುತ್ತಿದೆ. ನಿತೇಶ್ ತಿವಾರಿ ನಿರ್ದೇಶನದ ಈ ಸಿನಿಮಾ ಬಿಡುಗಡೆಯಾದ ಕೇವಲ ಆರೇ ದಿನಗಳಲ್ಲಿ ವಿಶ್ವಾದ್ಯಂತ ಬರೋಬ್ಬರಿ 823.50 ಕೋಟಿ ರೂಪಾಯಿ ಗಳಿಸಿದೆ. ಅಮೆರಿಕ ಮಾರುಕಟ್ಟೆಯಲ್ಲಿ ಹಾಲಿವುಡ್ ಚಿತ್ರಗಳಿಗೆ ತೀವ್ರ ಪೈಪೋಟಿ ನೀಡಿ ಮುನ್ನುಗ್ಗುತ್ತಿರುವುದು ವಿಶೇಷ.
-
ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಹಿಂದೆಂದೂ ಕಾಣದ ರೀತಿಯ ಹೊಸ ದಾಖಲೆಯನ್ನು ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ: ರೈಸ್ ಆಫ್ ಎ ಲೆಜೆಂಡ್’ ಸಿನಿಮಾ ಬರೆದಿದೆ. ನವೆಂಬರ್ 5ರಂದು ವಿಶ್ವಾದ್ಯಂತ ಬಿಡುಗಡೆಯಾದ ಈ ಚಿತ್ರವು ಚಿತ್ರಮಂದಿರಗಳಿಗೆ ಲಗ್ಗೆಯಿಟ್ಟ ಕೇವಲ ಆರೇ ದಿನಗಳಲ್ಲಿ 800 ಕೋಟಿ ರೂ. ಗಡಿ ದಾಟಿ, ಒಟ್ಟು 823.50 ಕೋಟಿ ರೂ. ಕಲೆಕ್ಷನ್ ಮಾಡುವ ಮೂಲಕ ಬಾಕ್ಸ್ ಆಫೀಸ್ನಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ.
ಚಿತ್ರಮಂದಿರಗಳು ಹೌಸ್ಫುಲ್ ಪ್ರದರ್ಶನ
ಆರನೇ ದಿನದಂದು ಭಾರತದಲ್ಲಿ ಚಿತ್ರವು 94.10 ಕೋಟಿ ಗಳಿಕೆ ಕಂಡಿದ್ದು, ಇದರೊಂದಿಗೆ ದೇಶೀಯ ಮಾರುಕಟ್ಟೆಯಲ್ಲಿನ ಒಟ್ಟು ಮೊತ್ತ 526.50 ಕೋಟಿಯಾಗಿದ್ದರೆ, ವಿದೇಶಿ ಮಾರುಕಟ್ಟೆಗಳಿಂದ 297 ಕೋಟಿ ಹರಿದುಬಂದಿದೆ. ಮೊದಲ ಸೋಮವಾರ ಸಾರ್ವಕಾಲಿಕ ದಾಖಲೆಯ 126 ಕೋಟಿ ಗಳಿಸಿದ್ದ ಚಿತ್ರವು ಮಂಗಳವಾರವೂ ಭರ್ಜರಿ ಪ್ರದರ್ಶನ ಮುಂದುವರಿಸಿದೆ. ಹಬ್ಬದ ರಜೆಗಳು, ವಾರದ ದಿನಗಳಲ್ಲಿ ಟಿಕೆಟ್ ದರಗಳ ರಿಯಾಯಿತಿ ಮತ್ತು ಪ್ರೇಕ್ಷಕರ ಅದ್ಭುತ ಪ್ರತಿಕ್ರಿಯೆಯಿಂದಾಗಿ ಚಿತ್ರಮಂದಿರಗಳು ಕಿಕ್ಕಿರಿದು ತುಂಬುತ್ತಿವೆ.
ಹಲವು ಸಿನಿಮಾಗಳ ದಾಖಲೆಗಳು ಉಡೀಸ್
ಕೇವಲ ಭಾರತದಲ್ಲಷ್ಟೇ ಅಲ್ಲದೆ, ವಿದೇಶದಲ್ಲೂ ‘ರಾಮಾಯಣ’ ಸದ್ದು ಮಾಡುತ್ತಿದೆ. ಉತ್ತರ ಅಮೆರಿಕಾದಲ್ಲಿ ಮೊದಲ ಸೋಮವಾರದಂದು 1.37 ಮಿಲಿಯನ್ ಡಾಲರ್ ಗಳಿಸುವ ಮೂಲಕ ಭಾರತೀಯ ಚಿತ್ರವೊಂದು ಕಂಡ ಅತ್ಯಧಿಕ ಗಳಿಕೆಯ ಸಾರ್ವಕಾಲಿಕ ದಾಖಲೆ ಬರೆದಿದೆ. ಈ ಹಿಂದೆ 'ಧುರಂಧರ್ 2' ಹೆಸರಿನಲ್ಲಿದ್ದ ದಾಖಲೆಯನ್ನು ಇದು ಸುಮಾರು ಶೇ. 20.2 ರಷ್ಟು ಅಂತರದಿಂದ ಮುರಿದಿದೆ. ಉತ್ತರ ಅಮೆರಿಕಾದ ಬಹುತೇಕ ಪ್ರೀಮಿಯಂ ಸ್ಕ್ರೀನ್ಗಳನ್ನು ಆಕ್ರಮಿಸಿಕೊಂಡಿದ್ದ ಹಾಲಿವುಡ್ನ 'ಗಾಡ್ಜಿಲ್ಲಾ ಮೈನಸ್ ಝೀರೋ' ಚಿತ್ರದ ತೀವ್ರ ಪೈಪೋಟಿಯ ನಡುವೆಯೂ ಈ ಸಾಧನೆ ಮಾಡಿರುವುದು ಗಮನಾರ್ಹ. 'ದಂಗಲ್', 'ಡಂಕಿ' ಚಿತ್ರಗಳ ಮೊದಲ ಸೋಮವಾರದ ಕಲೆಕ್ಷನ್ಗಿಂತಲೂ ಇದು ಅಧಿಕವಾಗಿದೆ.
Ramayana Movie: ಸ್ವೀಡನ್ನಲ್ಲೂ ಸದ್ದು ಮಾಡಿದ 'ರಾಮಾಯಣ': ಅನುಪಮ್ ಖೇರ್ ಭಾವುಕ ಪೋಸ್ಟ್!
1000 ಕೋಟಿ ಯಾವಾಗ ಸೇರಲಿದೆ?
ಅಲ್ಲದೆ, ‘ಧುರಂಧರ್: ದಿ ರಿವೆಂಜ್’ ತನ್ನ ಆರನೇ ದಿನದ ವೇಳೆಗೆ ವಿಶ್ವಾದ್ಯಂತ ಸುಮಾರು 935 ಕೋಟಿ ಗಳಿಸಿದ್ದರೂ, ಅದರ ಆರನೇ ದಿನದ ಗಳಿಕೆ ಕೇವಲ 67 ಕೋಟಿಯಷ್ಟಿತ್ತು, ಆದರೆ ‘ರಾಮಾಯಣ’ ಭಾರತದಲ್ಲೇ 110 ಕೋಟಿಗೂ ಅಧಿಕ ಹಣ ಗಳಿಸಿ ಮೇಲುಗೈ ಸಾಧಿಸಿದೆ. ಸದ್ಯ ಈ ಸಿನಿಮಾವು 1000 ಕೋಟಿ ರೂ. ಕ್ಲಬ್ಗೆ ಯಾವಾಗ ಸೇರಲಿದೆ ಎಂಬುದು ಎಲ್ಲರ ಕುತೂಹಲವಾಗಿದೆ. ಸದ್ಯ ಆರನೇ ದಿನಕ್ಕೆ 823 ಕೋಟಿ ರೂ. ಗಳಿಸಿರುವ ಈ ಸಿನಿಮಾ 180 ಕೋಟಿ ಗಳಿಸಿದರೆ, ಸಾವಿರ ಕೋಟಿ ಕ್ಲಬ್ಗೆ ಸೇರಲಿದೆ. ಈಗಿನ ಟ್ರೆಂಡ್ ಗಮನಿಸಿದರೆ, ಈ ಸಿನಿಮಾವು 1500 ಕೋಟಿ ರೂ. ಕ್ಲಬ್ ಸೇರೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಮೊದಲ ವಾರಕ್ಕೆ 900+ ಕೋಟಿ ರೂ. ಗಳಿಕೆ ಆಗಲಿದೆ.
ಬುಕ್ ಮೈ ಶೋ ಆಪ್ನಲ್ಲಿ ʻರಾಮಾಯಣʼ ಹವಾ
ಸ್ವದೇಶದಲ್ಲಿ ಟಿಕೆಟ್ ಬುಕಿಂಗ್ ವೇಗವೂ ಬೆರಗುಗೊಳಿಸುವಂತಿದೆ. ಸೋಮವಾರ ಮಧ್ಯಾಹ್ನದ ವೇಳೆಗೆ ‘ಬುಕ್ಮೈಶೋ’ ಪ್ಲಾಟ್ಫಾರ್ಮ್ನಲ್ಲಿ ಪ್ರತಿ ಗಂಟೆಗೆ ಬರೋಬ್ಬರಿ 1.40 ಲಕ್ಷ ಟಿಕೆಟ್ಗಳು ಮಾರಾಟವಾಗಿದ್ದು, ಇದು ಕೋವಿಡ್ ನಂತರ ದಾಖಲಾದ ಗರಿಷ್ಠ ಪ್ರಮಾಣವಾಗಿದೆ. ಮಂಗಳವಾರ ಮಧ್ಯಾಹ್ನವೂ ಪ್ರತಿ ಗಂಟೆಗೆ ಸುಮಾರು 95 ಸಾವಿರ ಟಿಕೆಟ್ಗಳು ಮಾರಾಟವಾಗಿವೆ. ನಮಿತ್ ಮಲ್ಹೋತ್ರಾ ಅವರ 'ಪ್ರೈಮ್ ಫೋಕಸ್ ಸ್ಟುಡಿಯೋಸ್', 'ಡಿಎನ್ಇಜಿ' ಮತ್ತು ಯಶ್ ಅವರ 'ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್' ಜಂಟಿಯಾಗಿ ನಿರ್ಮಿಸಿರುವ ಈ ಚಿತ್ರದಲ್ಲಿ ರಣಬೀರ್ ಕಪೂರ್ ಶ್ರೀರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ, ಯಶ್ ರಾವಣನಾಗಿ ಹಾಗೂ ರವಿ ದುಬೆ ಲಕ್ಷ್ಮಣನಾಗಿ ಅಭಿನಯಿಸಿದ್ದಾರೆ.