ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಮನೋಜ್ ಕುಮಾರ್ ನಿರ್ದೇಶನದ ‘ಪ್ರೇಮದ ಊರಲಿ’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಜಾದೂ ಮಾಡುತ್ತಿದೆ. ರಂಗಾಯಣ ರಘು, ಶ್ರೀರಾಮ್, ರಮಿಕಾ ಶಿವು ಹಾಗೂ ತಪಸ್ವಿನಿ ಪೂಣಚ್ಚ ಮುಖ್ಯಭೂಮಿಕೆಯಲ್ಲಿರುವ ಈ ಚಿತ್ರವು ಸ್ಯಾಂಡಲ್‌ವುಡ್‌ನಲ್ಲಿ ಸರ್ಪ್ರೈಸ್ ಹಿಟ್ ಎನಿಸಿಕೊಂಡಿದೆ. 2026ರಲ್ಲಿ ಕನ್ನಡ ಚಿತ್ರರಂಗವು ಸೊರಗಿದ್ದಂತೆ ಕಂಡರೂ, ಆ ಕೊರಗನ್ನು ‘ಪ್ರೇಮದ ಊರಲಿ’ ಸಿನಿಮಾ ನೀಗಿಸಿದೆ. ಗಳಿಕೆಯಲ್ಲಿ ಹೊಸ ದಾಖಲೆ ಬರೆಯುವುದರ ಜೊತೆಗೆ ಚಿತ್ರದ ಶೋಗಳ ಸಂಖ್ಯೆಯೂ ಹೆಚ್ಚುತ್ತಿದೆ.
ಆರು ದಿನಗಳಿಗೆ 5.37 ಕೋಟಿ ರೂ. ಗಳಿಕೆ
ಸ್ಯಾಕ್ನಿಲ್ಕ್ ವರದಿಯ ಪ್ರಕಾರ, ‘ಪ್ರೇಮದ ಊರಲಿ’ ಸಿನಿಮಾ ಮೊದಲ ಆರು ದಿನಗಳಲ್ಲಿ ಒಟ್ಟು 5.37 ಕೋಟಿ ರೂ. ಗಳಿಕೆ ಮಾಡಿದೆ. ವಿಶೇಷವೆಂದರೆ, ಮೊದಲ ದಿನ ಕೇವಲ 13 ಲಕ್ಷ ರೂ. ಗಳಿಸಿದ್ದ ಈ ಸಿನಿಮಾ, ಆರನೇ ದಿನಕ್ಕೆ ಭರ್ತಿ 1.74 ಕೋಟಿ ರೂ. ಬಾಚಿಕೊಂಡಿದೆ. ಈ ಮೂಲಕ ಚಿತ್ರದ ಒಟ್ಟು ಗಳಿಕೆ 5.37 ಕೋಟಿ ರೂ. ದಾಟಿದೆ. ಇಂದು (ಅ.1) ಕೂಡ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಮೊದಲ ವಾರದ ಅಂತ್ಯಕ್ಕೆ ಒಟ್ಟು 7 ಕೋಟಿ ರೂ. ಗಳಿಕೆಯಾಗುವ ನಿರೀಕ್ಷೆಯಿದೆ. ಸ್ಯಾಂಡಲ್‌ವುಡ್‌ನ ಸದ್ಯದ ಪರಿಸ್ಥಿತಿಯಲ್ಲಿ ಇದು ಗಮನಾರ್ಹ ಸಾಧನೆಯೇ ಸರಿ.
ಶೋಗಳ ಸಂಖ್ಯೆಯಲ್ಲಿ ಭಾರಿ ಹೆಚ್ಚಳ
ಆರಂಭದಲ್ಲಿ ಈ ಸಿನಿಮಾಗೆ ಬೆಂಗಳೂರಿನಲ್ಲಿ ಕೇವಲ 60 ಶೋಗಳು ಮಾತ್ರ ಸಿಕ್ಕಿದ್ದವು. ಆದರೆ ಈಗ ಆ ಸಂಖ್ಯೆ ಬರೋಬ್ಬರಿ 400ರ ಗಡಿ ತಲುಪಿದೆ. "ಚಿತ್ರಮಂದಿರಗಳಿಗೆ ಪ್ರೇಕ್ಷಕರು ಬರುತ್ತಿಲ್ಲ" ಎಂಬ ಮಾತುಗಳ ನಡುವೆಯೇ, ಅಪ್ಪಟ ಕೌಟುಂಬಿಕ ಕಥಾಹಂದರ ಹೊಂದಿರುವ ‘ಪ್ರೇಮದ ಊರಲಿ’ ಸಿನಿಮಾ ರಾಜ್ಯಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಬಿಡುಗಡೆಯಾದ ದಿನದಿಂದ ದಿನಕ್ಕೆ ಪ್ರೇಕ್ಷಕರ ಸಂಖ್ಯೆ ಹೆಚ್ಚುತ್ತಿದ್ದು, ಚಿತ್ರಕ್ಕೆ ಸಿಗುತ್ತಿರುವ ಅಭೂತಪೂರ್ವ ಸ್ಪಂದನೆಯಿಂದಾಗಿ ಚಿತ್ರಮಂದಿರಗಳಲ್ಲಿ ಶೋಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ.
Premada Oorali Review: ಅಬ್ಬರವಿಲ್ಲದ ಹಳ್ಳಿ ಸೊಗಡಿನ ಮನಮುಟ್ಟುವ ಅಪ್ಪ- ಮಗನ ಬಾಂಧವ್ಯದ ಕಥೆ
ತೆಲುಗಿಗೂ ಡಬ್ ಆದ ಸಿನಿಮಾ
‘ಪ್ರೇಮದ ಊರಲಿ’ ಚಿತ್ರವನ್ನು ‘ಪ್ರೇಮನೆ ಊರಿಲೋ’ ಹೆಸರಿನಲ್ಲಿ ತೆಲುಗಿಗೂ ಡಬ್ ಮಾಡಲಾಗಿದ್ದು, ಅಕ್ಟೋಬರ್ 2ರಿಂದ ಆಂಧ್ರ ಹಾಗೂ ತೆಲಂಗಾಣದಲ್ಲೂ ಬಿಡುಗಡೆಯಾಗಲಿದೆ. ಈಗಾಗಲೇ ಕರ್ನಾಟಕದಲ್ಲಿ ದೊರೆತ ಭರ್ಜರಿ ಯಶಸ್ಸಿನಿಂದಾಗಿ ತೆಲುಗು ಪ್ರೇಕ್ಷಕರೂ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.
‘ಪ್ರೇಮದ ಊರಲಿ’ ಒಂದು ಸರಳ, ಸುಂದರ ಹಾಗೂ ಭಾವನಾತ್ಮಕ ಹಳ್ಳಿಯ ಕಥೆ. ಹಚ್ಚಹಸಿರಿನ ಗ್ರಾಮೀಣ ಪರಿಸರದಲ್ಲಿ ಸಾಗುವ ಈ ಸಿನಿಮಾ ಸಂಕೀರ್ಣ ಕೌಟುಂಬಿಕ ಸಂಬಂಧಗಳು, ಮಾನವೀಯತೆ, ದಾಂಪತ್ಯದಲ್ಲಿನ ಹೊಂದಾಣಿಕೆ ಮತ್ತು ಮುಗ್ಧ ಪ್ರೀತಿಯ ಸೂಕ್ಷ್ಮ ಎಳೆಗಳನ್ನು ಅದ್ಭುತವಾಗಿ ತೆರೆದಿಟ್ಟಿದೆ. ಇಂದಿನ ಅಬ್ಬರದ ಆ್ಯಕ್ಷನ್ ಸಿನಿಮಾಗಳ ನಡುವೆ, ಪ್ರೇಕ್ಷಕರ ಮನಸ್ಸಿಗೆ ಆಪ್ತವಾಗುವ ಪರಿಪೂರ್ಣ ‘ಫೀಲ್ ಗುಡ್’ ಚಿತ್ರವಾಗಿ ಇದು ಗಮನ ಸೆಳೆಯುತ್ತಿದೆ.
ಹಿರಿಯ ನಟ ರಂಗಾಯಣ ರಘು ಅವರ ಅತ್ಯಂತ ಪ್ರಬುದ್ಧವಾದ ಅಭಿನಯಕ್ಕೆ ಭಾರಿ ಮೆಚ್ಚುಗೆ ಸಿಗುತ್ತಿದೆ. ಸುನಾದ್ ಗೌತಮ್ ಅವರ ಸುಮಧುರ ಹಾಡುಗಳು ಹಾಗೂ ಹಿನ್ನೆಲೆ ಸಂಗೀತ ಚಿತ್ರದ ಜೀವಾಳವಾಗಿದ್ದು, ರಾಜ್‌ಕಾಂತ್ ಅವರ ಛಾಯಾಗ್ರಹಣದಲ್ಲಿ ‘ಪ್ರೇಮದ ಊರಲಿ’ ಸಿನಿಮಾ ಕಣ್ಮನ ಸೆಳೆಯುವಂತೆ ಮೂಡಿಬಂದಿದೆ.