Premada Oorali Review: ಅಬ್ಬರವಿಲ್ಲದ ಹಳ್ಳಿ ಸೊಗಡಿನ ಮನಮುಟ್ಟುವ ಅಪ್ಪ- ಮಗನ ಬಾಂಧವ್ಯದ ಕಥೆ
Premada Oorali Movie Review: ನಿರ್ದೇಶಕ ಮನೋಜ್ ಕುಮಾರ್ ಅವರು ಈ ಹಿಂದೆ ‘ಅಕ್ಷಿ’ ಸಿನಿಮಾ ಮಾಡಿ ರಾಷ್ಟ್ರಪ್ರಶಸ್ತಿ ಪಡೆದುಕೊಂಡಿದ್ದರು. ಈ ಬಾರಿ ಅವರು ‘ಪ್ರೇಮದ ಊರಲಿ’ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಈ ಮೂಲಕ ಒಂದು ಪಕ್ಕಾ ಕೌಟುಂಬಿಕ ಕಥೆಯನ್ನು ತೆರೆಗೆ ತಂದಿದ್ದಾರೆ. ಸೂಕ್ತವಾದ ಪಾತ್ರವರ್ಗ ಹಾಗೂ ತಾಂತ್ರಿಕ ಬಳಗ ಅವರಿಗೆ ಸಾಥ್ ನೀಡಿದೆ.
-
ಸಿನಿಮಾ: ಪ್ರೇಮದ ಊರಲಿ
ತಾರಾಗಣ: ರಂಗಾಯಣ ರಘು, ಶ್ರೀ ರಾಮ್, ತಪಸ್ವಿನಿ ಪೂಣಚ್ಚ, ರಮಿಕಾ ಶಿವು, ಗೋವಿಂದೇಗೌಡ, ಅಭಿ ಮಹೇಶ್, ಅಭಿಷೇಕ್ ಕಲ್ಮನಿ
ನಿರ್ದೇಶನ: ಮನೋಜ್ ಕುಮಾರ್
ನಿರ್ಮಾಣ: ಮಮತಾ ದೇವೇಂದ್ರ, ಪ್ರಶಾಂತ ಡಿಎಸ್, ರಮೇಶ್ ಎನ್.
ಸಂಗೀತ: ಸುನಾದ್ ಗೌತಮ್
ಅವಧಿ: 2 ಗಂಟೆ 35 ನಿಮಿಷ
ರೇಟಿಂಗ್: 3.5/5
ಸ್ಯಾಂಡಲ್‌ವುಡ್‌ನಲ್ಲಿ ಈಚೆಗೆ ಕೌಟುಂಬಿಕ ಕಥಾಹಂದರಗಳ ಸಿನಿಮಾಗಳು ಕೊಂಚ ಕಮ್ಮಿ ಆಗಿದ್ದವು. ಜೊತೆಗೆ ಹಳ್ಳಿ ಸೊಗಡಿನ ಸಿನಿಮಾಗಳಂತೂ ಅಷ್ಟಾಗಿ ಸದ್ದು ಮಾಡುತ್ತಲೂ ಇಲ್ಲ. ಇಂತಹ ಹೊತ್ತಿನಲ್ಲಿ ನಿರ್ದೇಶಕ ಮನೋಜ್ ಕುಮಾರ್ ಅವರು ಹಳ್ಳಿ ಸೊಗಡಿನಲ್ಲಿ ಒಂದು ಅಪ್ಪ -ಮಗನ ಫ್ಯಾಮಿಲಿ ಸ್ಟೋರಿಯನ್ನ ʻಪ್ರೇಮದ ಊರಲಿʼ ಸಿನಿಮಾ ಮೂಲಕ ಹೇಳಿದ್ದಾರೆ. ಅಬ್ಬರದ ಆಕ್ಷನ್ ಬದಲಿಗೆ, ಗ್ರಾಮೀಣ ಪರಿಸರ, ಕುಟುಂಬಗಳ ನಡುವಿನ ಸೂಕ್ಷ್ಮ ನೋವು-ನಲಿವುಗಳು ಮತ್ತು ರೈತರ ಆತ್ಮಗೌರವವನ್ನು ಪ್ರಾಮಾಣಿಕವಾಗಿ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ.
ʻಪ್ರೇಮದ ಊರಲಿʼ ಸಿನಿಮಾದ ಕಥೆ ಏನು?
ಕೃಷಿಯನ್ನೇ ಉಸಿರಾಗಿಸಿಕೊಂಡ ಹಳ್ಳಿ ಯುವಕ ಸಂತು (ಶ್ರೀ ರಾಮ್). ಅವನಿಗೆ ತಂದೆ ನಾಗಣ್ಣನೇ (ರಂಗಾಯಣ ರಘು) ಪ್ರಪಂಚ. ಅಮ್ಮ ಇಲ್ಲದ ಕೊರಗು ಬಾರದಂತೆ ಮಗ ಸಂತುನನ್ನು ಬೆಳಸಿರುವ ನಾಗಣ್ಣನಿಗೆ ಒಂದೇ ಒಂದು ಆಸೆ. ಸರಿಯಾಗಿ ವಿದ್ಯಾಭ್ಯಾಸ ಪಡೆಯದ ಮಗನಿಗೆ ಡಬಲ್ ಡಿಗ್ರಿ ಓದಿರುವ ಓರ್ವ ವಿದ್ಯಾವಂತೆಯನ್ನೇ ಮದುವೆ ಮಾಡಬೇಕು ಎಂಬುದು. ಆದರೆ ರೈತ ಎಂಬ ಕಾರಣಕ್ಕಾಗಿ ಸಂತುಗೆ ಯಾರೂ ಹೆಣ್ಣು ಕೊಡುತ್ತಿಲ್ಲ.
ಈ ಮಧ್ಯೆ ಮನೆಯಲ್ಲೇ ಇರುವ ಮಾವನ ಮಗಳು ವಸಂತಳಿಗೆ (ರಮಿಕಾ) ಸಂತುವನ್ನು ಕಂಡರೆ ಪ್ರೀತಿ. ಆದರೆ ಆಕೆ ಕೂಡ ಸರಿಯಾಗಿ ವಿದ್ಯಾಭ್ಯಾಸ ಮಾಡಿಲ್ಲ. ಈ ಮಧ್ಯೆ ಅಮೆರಿಕದಿಂದ ವಾಪಸಾಗುವ ರುಕ್ಮಿಣಿ (ತಪಸ್ವಿನಿ ಪೂಣಚ್ಚ) ಈ ಕುಟುಂಬಕ್ಕೆ ಎಂಟ್ರಿ ಆಗುತ್ತಾಳೆ. ಆನಂತರ ಕಥೆಗೆ ಗಟ್ಟಿಯಾದ ತಿರುವು ಸಿಗುತ್ತಾ ಸಾಗುತ್ತದೆ. ಅಂತಿಮವಾಗಿ ಸಂತು ಯಾರನ್ನು ಮದುವೆ ಆಗುತ್ತಾನೆ? ಈ ರುಕ್ಮಿಣಿ ಯಾರು? ಅನ್ನೋದನ್ನು ಸೊಗಸಾಗಿ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ಮನೋಜ್ ಕುಮಾರ್.
ಗಮನಸೆಳೆಯುವ ಮನೋಜ್
ಸಹಜವಾದ ಹಳ್ಳಿ ಪರಿಸರ, ಸಂಭಾಷಣೆಗಳಲ್ಲಿನ ಮಣ್ಣಿನ ಸೊಗಡು, ಕಲಾವಿದರ ಅತ್ಯದ್ಭುತ ಅಭಿನಯ, ರೈತರ ಸ್ವಾಭಿಮಾನ ಹಾಗೂ ಮಹಿಳೆಯ ಘನತೆಯನ್ನು ಈ ಸಿನಿಮಾದಲ್ಲಿ ಎತ್ತಿಹಿಡಿದಿರುವ ರೀತಿ ಇಷ್ಟವಾಗುತ್ತದೆ. ಮನೋಜ್ ಕುಮಾರ್ ಈ ಹಿಂದೆ ʻಅಕ್ಷಿʼ ಸಿನಿಮಾಕ್ಕೆ ರಾಷ್ಟ್ರ ಪ್ರಶಸ್ತಿ ಪಡೆದ ಪ್ರತಿಭಾವಂತ. ಈ ಬಾರಿ ಒಂದು ಕಮರ್ಷಿಯಲ್ ಸಿನಿಮಾವನ್ನು ಯಾವುದೇ ಮುಜುಗರವಿಲ್ಲದಂತೆ, ಇಡೀ ಕುಟುಂಬ ಒಟ್ಟಿಗೆ ಕುಳಿತು ನೋಡಲು ಸಹ್ಯವಾಗುವಂತೆ ʻಪ್ರೇಮದ ಊರಲಿʼ ಸಿನಿಮಾವನ್ನು ಮಾಡಿದ್ದಾರೆ. ರಾಜ್‌ಕಾಂತ್ ಎಸ್.ಕೆ. ಅವರ ಛಾಯಾಗ್ರಹಣ ಹಳ್ಳಿಯ ಹಸಿರು ಮತ್ತು ಗದ್ದೆಗಳ ಸೊಬಗನ್ನು ನೈಜವಾಗಿ ಸೆರೆಹಿಡಿದಿದೆ. ಸಿನಿಮಾದ ಸೊಗಸು ಹೆಚ್ಚಿಸುವಲ್ಲಿ ಸಹಾಯಕವಾಗಿದೆ. ಸುನಾದ್ ಗೌತಮ್ ಅವರ ಸುಮಧುರ ಹಾಡುಗಳು ಮತ್ತು ಸನ್ನಿವೇಶಗಳಿಗೆ ಪೂರಕವಾದ ಹಿನ್ನೆಲೆ ಸಂಗೀತ ಚಿತ್ರದ ಆಪ್ತತೆಯನ್ನು ಹೆಚ್ಚಿಸಿವೆ.
ಕ್ಲೈಮ್ಯಾಕ್ಸ್ ಹಂತದಲ್ಲಿ ಮೆಲೋಡ್ರಾಮಾ ತುಸು ಜಾಸ್ತಿ ಏನೋ ಎಂದು ಅನಿಸುತ್ತದೆ. ವಸಂತಾಳ ಪಾತ್ರಕ್ಕೆ ಸೆಕೆಂಡ್ ಹಾಫ್‌ನಲ್ಲಿ ಇನ್ನಷ್ಟು ಜಾಗವಿದ್ದಿದ್ದರೆ ಚೆನ್ನಾಗಿರುತಿತ್ತು. ಪ್ರಥಮಾರ್ಧ ಕೊಂಚ ಎಳೆದಂತಾಗಿದೆ. ಹಾಗಾಗಿ, ಸಿನಿಮಾದ ಅವಧಿ ತುಸು ಜಾಸ್ತಿ ಆಗಿದೆ. ಅಲ್ಲದೆ, ಸಿನಿಮಾದ ಅವಧಿಯನ್ನು ಕೊಂಚ ತಗ್ಗಿಸುವ ಅವಕಾಶವೂ ಇತ್ತು.
ಮನಮುಟ್ಟುವ ರಂಗಾಯಣ ರಘು ನಟನೆ
ನಟ ರಂಗಾಯಣ ರಘು ಅವರು ಎಂದಿನಂತೆ ತಮ್ಮ ಅನುಭವಿ ನಟನೆಯಿಂದ ಚಿತ್ರದ ಬೆನ್ನೆಲುಬಾಗಿ ನಿಲ್ಲುತ್ತಾರೆ. ಹಾಸ್ಯ, ತಂದೆಯ ಹಠ ಮತ್ತು ಬಿಕ್ಕಟ್ಟಿನ ಸಮಯದ ನೋವನ್ನು ಲೀಲಾಜಾಲವಾಗಿ ತೆರೆಮೇಲೆ ತಂದಿದ್ದಾರೆ. ಆರಂಭದಿಂದ ಅಂತ್ಯದವರೆಗೂ ಸಿನಿಮಾವನ್ನು ತಮ್ಮ ಹೆಗಲಮೇಲೆ ಹೊತ್ತು ಸಾಗಿದ್ದಾರೆ ರಂಗಾಯಣ ರಘು. ಎಮೋಷನಲ್ ದೃಶ್ಯಗಳಲ್ಲಿ ಕಣ್ಣೀರು ಹಾಕಿಸುತ್ತಾರೆ. ನಟ ಶ್ರೀರಾಮ್‌ಗೆ ಇದು ವೃತ್ತಿ ಜೀವನದಲ್ಲೇ ದೊಡ್ಡ ಅವಕಾಶ ಎನ್ನಬಹುದು. ಅನಗತ್ಯ ಬಿಲ್ಡಪ್ ಇಲ್ಲದೇ ತಂದೆಗೆ ಗೌರವ ಕೊಡುವ ಮಗನಾಗಿ ಶ್ರೀರಾಮ್ ಸೊಗಸಾದ ಅಭಿನಯ ನೀಡಿದ್ದಾರೆ.
ನಟಿ ರಮಿಕಾ ಶಿವು ಮೊದಲ ಸಿನಿಮಾದಲ್ಲೇ ಅತ್ಯದ್ಭುತವಾಗಿ ನಟಿಸಿ, ಗಮನಸೆಳೆಯುತ್ತಾರೆ. ತುಂಟ ಹುಡುಗಿಯಾಗಿ ಜೊತೆಗೆ ಅಷ್ಟೇ ಎಮೋಷನಲ್ ಆಗಿ, ಪ್ರೀತಿಯನ್ನು ಹೇಳಿಕೊಳ್ಳಲಾಗದ ಅಸಹಾಯಕತೆ ಹುಡುಗಿಯಾಗಿ ಕಾಣಿಸಿಕೊಂಡಿರುವ ರಮಿಕಾ ನಟನೆಗೆ ಫುಲ್ ಮಾರ್ಕ್ಸ್. ರುಕ್ಮಿಣಿ ಪಾತ್ರದಲ್ಲಿ ನಟಿಸಿರುವ ತಪಸ್ವಿನಿ, ಮಾನಸಿಕ ತೊಳಲಾಟವನ್ನು ಸೂಕ್ಷ್ಮವಾಗಿ ನಿಭಾಯಿಸಿದ್ದಾರೆ. ನಟಿ ಇಳಾ ವಿಟ್ಲಾ ವಯಸ್ಸಿಗೂ ಮೀರಿದ ಪಾತ್ರದಲ್ಲಿ ಇಷ್ಟವಾಗುತ್ತಾರೆ. ಗೋವಿಂದೇಗೌಡ, ಅಭಿ ಮಹೇಶ್ ಚಿತ್ರಕ್ಕೆ ಜೀವ ತುಂಬಿದ್ದಾರೆ. ಅಬ್ಬರದ ಸ್ಪೆಷಲ್ ಎಫೆಕ್ಟ್ಸ್ ಇಲ್ಲದಿದ್ದರೂ, ಇಡೀ ಕುಟುಂಬ ಒಟ್ಟಾಗಿ ಕುಳಿತು ನೋಡಬಹುದಾದ ಪ್ರಾಮಾಣಿಕ, ಭಾವನಾತ್ಮಕ ಗ್ರಾಮೀಣ ಭಾಗದ ಸಿನಿಮಾವಾಗಿ ‘ಪ್ರೇಮದ ಊರಲಿ’ ಗಮನಸೆಳೆಯುತ್ತದೆ.